ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಗೆಲುವಿನ ಓಟ, ಕಾಂಗ್ರೆಸ್‌ಗೆ ಹೆಚ್ಚಿದ ಬಲ

Last Updated 19 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಅಹಮದಾಬಾದ್‌: ಗುಜರಾತ್‌ ವಿಧಾನಸಭೆ ಚುನಾವಣೆಯ ಫಲಿತಾಂಶದ ರೀತಿಯಲ್ಲಿಯೇ ನಗರ‍ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿಯೂ ಬಿಜೆಪಿ ತನ್ನ ಗೆಲುವಿನ ಓಟವನ್ನು ಮುಂದುವರಿಸಿದೆ. ರಾಜ್ಯದ 33 ಜಿಲ್ಲೆಗಳ ಪೈಕಿ 22 ಜಿಲ್ಲೆಗಳ 75 ನಗರಸಭೆಗಳಿಗೆ ಚುನಾವಣೆ ನಡೆದಿತ್ತು. 44 ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಗೆದ್ದಿದೆ.

ಹಾಗಿದ್ದರೂ ಬಿಜೆಪಿಯ ಬೆಂಬಲ ನೆಲೆ ಸ್ವಲ್ಪ ಮಟ್ಟಿಗೆ ಕುಸಿದಿದೆ. 2013ರ ಚುನಾವಣೆಯಲ್ಲಿ 59 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಗೆದ್ದಿತ್ತು. ಈ ಬಾರಿ 15 ನಗರಸಭೆಗಳನ್ನು ಕಳೆದುಕೊಂಡಿದೆ. ಹಾಗಿದ್ದರೂ 2017ರಲ್ಲಿ ನಡೆದ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಬಿಜೆಪಿಯ ಸ್ಥಿತಿ ಸ್ವಲ್ಪ ಉತ್ತಮಗೊಂಡಿದೆ.

ಕಾಂಗ್ರೆಸ್‌ ಪಕ್ಷ ತನ್ನ ಬಲವನ್ನು ಹೆಚ್ಚಿಸಿಕೊಂಡಿದೆ. 16 ಕಡೆ ಕಾಂಗ್ರೆಸ್‌ ಗೆದ್ದಿದೆ. ಕಳೆದ ಬಾರಿ ಆರು ಪಟ್ಟಣಗಳಲ್ಲಿ ಮಾತ್ರ ಕಾಂಗ್ರೆಸ್‌ ಅಧಿಕಾರದಲ್ಲಿತ್ತು. ಮೂರು ಪಟ್ಟಣಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಸಮಾನ ಸಂಖ್ಯೆಯ ಸ್ಥಾನಗಳನ್ನು ಪಡೆದುಕೊಂಡಿವೆ. ಆರು ಪಟ್ಟಣಗಳಲ್ಲಿ ಪಕ್ಷೇತರರು ಮತ್ತು ಇತರರು ಮೇಲುಗೈ ಸಾಧಿಸಿದ್ದಾರೆ.

ಇದೇ 17ರಂದು ಮತದಾನ ನಡೆದಿತ್ತು. ಒಂದು ದಶಕದ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಪಕ್ಷಗಳು ತಮ್ಮ ಚಿಹ್ನೆಯ ಅಡಿಯಲ್ಲಿ ಸ್ಪರ್ಧಿಸಿದ್ದವು.

ಮೆಹ್ಸಾನಾ ಜಿಲ್ಲೆಯ ಎಲ್ಲ ನಗರಸಭೆಗಳಲ್ಲಿ ಕಾಂಗ್ರೆಸ್‌ ಸೋತಿದೆ. ಭಾರತದ ಆಟೊಮೊಬೈಲ್‌ ಕೇಂದ್ರ ಎಂದೇ ಕರೆಸಿಕೊಳ್ಳುವ ಸನಂದ್‌ನ 24 ವಾರ್ಡ್‌ಗಳಲ್ಲಿ 20ರಲ್ಲಿ ಬಿಜೆಪಿ ಗೆದ್ದಿದೆ. ಕಳೆದ ಬಾರಿ ಎಂಟು ವಾರ್ಡ್‌ಗಳಲ್ಲಿ ಗೆದ್ದಿದ್ದ ಕಾಂಗ್ರೆಸ್‌ ಈ ಬಾರಿ ನಾಲ್ಕು ಕಡೆ ಮಾತ್ರ ಗೆಲ್ಲಲು ಶಕ್ತವಾಗಿದೆ.

ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಪರೇಶ್‌ ಧನಾನಿ ಅವರ ತವರು ಜಿಲ್ಲೆ ಅಮ್ರೇಲಿಯಲ್ಲಿ ಕಾಂಗ್ರೆಸ್‌ಗೆ ಒಳ್ಳೆಯ ಸುದ್ದಿ ಸಿಕ್ಕಿಲ್ಲ. ಈ ಜಿಲ್ಲೆಯ ನಾಲ್ಕು ನಗರಸಭೆಗಳು ಕಾಂಗ್ರೆಸ್‌ ವಶದಲ್ಲಿದ್ದವು. ಅದರಲ್ಲಿ ಮೂರನ್ನು ಬಿಜೆಪಿ ಈ ಬಾರಿ ಕಸಿದುಕೊಂಡಿದೆ. ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು.

ಕಾಂಗ್ರೆಸ್‌ನ ಇನ್ನೊಬ್ಬ ಹಿರಿಯ ಮುಖಂಡ ಅರ್ಜುನ್‌ ಮೊದ್ವಾಡಿಯಾ ಅವರ ತವರು ಜಿಲ್ಲೆಯ ಮೂರು ನಗರಸಭೆಗಳಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿತ್ತು. ಆದರೆ ಈ ಬಾರಿ ಈ ಎಲ್ಲವನ್ನೂ ಕಳೆದುಕೊಂಡಿದೆ. ಎರಡು ಕಡೆ ಬಿಜೆಪಿ ಗೆದ್ದರೆ ಒಂದೆಡೆ ಎನ್‌ಸಿಪಿ ಗೆಲುವು ದಾಖಲಿಸಿದೆ.

ಗೆಲುವಿನ ಪ್ರಮಾಣ

2,060 - ಮತದಾನ ನಡೆದ ಒಟ್ಟು ವಾರ್ಡ್‌ಗಳು

1,167 - ಬಿಜೆಪಿ

630 - ಕಾಂಗ್ರೆಸ್‌

28 - ಎನ್‌ಸಿಪಿ

15 - ಬಿಎಸ್‌ಪಿ

202 - ಪಕ್ಷೇತರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT