ಶುಕ್ರವಾರ, ಫೆಬ್ರವರಿ 26, 2021
19 °C
ಸಚಿವ ಸಂಪುಟ ಸಭೆ ಒಪ್ಪಿಗೆ: ಏಜೆನ್ಸಿ ನೇಮಕಕ್ಕೆ ಮಾರ್ಗಸೂಚಿ ರೂಪಿಸಲು ನಿರ್ಧಾರ

ಕುಡಿಯುವ ನೀರಿನ ಘಟಕ ನಿರ್ವಹಣೆ ಹೊಣೆ ಖಾಸಗಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯನ್ನು ಖಾಸಗಿ ಏಜೆನ್ಸಿಗೆ ವಹಿಸಲು ಸಚಿವ ಸಂಪುಟ ಸಭೆ ಗುರುವಾರ ಒಪ್ಪಿಗೆ ನೀಡಿದೆ.

ಗ್ರಾಮ ಪಂಚಾಯ್ತಿಗಳು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸರಿಯಾಗಿ ನಿರ್ವಹಿಸದೇ ಕೆಟ್ಟು ಹೋಗುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬರುತ್ತಿವೆ. ಈ ಸಂಬಂಧ 7– 8 ತಿಂಗಳು ಅಧ್ಯಯನ ನಡೆಸಿದ ಬಳಿಕ ಏಜೆನ್ಸಿ ನೇಮಿಸುವ ಸಂಬಂಧ ಮಾರ್ಗಸೂಚಿ ರೂಪಿಸಲು ನಿರ್ಧರಿಸಲಾಯಿತು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೃಷ್ಣ ಬೈರೇಗೌಡ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾವುದೇ ರಾಜ್ಯದಲ್ಲೂ ನೀತಿ ರೂಪಿಸಿಲ್ಲ. ನಾವೇ ಮೊದಲ ಬಾರಿಗೆ ನೀತಿ ರೂಪಿಸುತ್ತಿದ್ದೇವೆ. ತಾಲ್ಲೂಕನ್ನು ಘಟಕವನ್ನಾಗಿ ಮಾಡಿ ನಿರ್ವಹಣೆಯ ಏಜೆನ್ಸಿಗಳನ್ನು ಟೆಂಡರ್‌ ಮೂಲಕ ನಿಗದಿ ಮಾಡಲಾಗುವುದು. ಘಟಕಗಳು ಕೆಟ್ಟು ಹೋದರೆ ರಿಪೇರಿ ಮಾಡುವುದೂ ಸೇರಿದಂತೆ ಎಲ್ಲ ಜವಾಬ್ದಾರಿಯೂ ಏಜೆನ್ಸಿಗಿರುತ್ತದೆ’ ಎಂದು ಸಚಿವರು ತಿಳಿಸಿದರು.

‘ಪ್ರತಿ ತಾಲೂಕಿಗೆ ಒಂದರಂತೆ ನಿರ್ವಹಣಾ ಪ್ಯಾಕೇಜ್‌ ಅನ್ನು ಟೆಂಡರ್‌ ಮೂಲಕ ಅರ್ಹ ಸಂಸ್ಥೆಗಳಿಗೆ ಒದಗಿಸಲು ಗ್ರಾಮ ಪಂಚಾಯತ್‌ಗೆ ಅಧಿಕಾರ ನೀಡಲಾಗುವುದು. ಒಂದು ವೇಳೆ ಗ್ರಾಮ ಪಂಚಾಯ್ತಿಗಳು ಏಜೆನ್ಸಿ ಬದಲಿಗೆ ತಾವೇ ನಿರ್ವಹಣೆ ಮಾಡುತ್ತೇವೆ ಎಂದು ಹೇಳಿದರೆ, ಅದಕ್ಕೂ ಅವಕಾಶ ನೀಡುತ್ತೇವೆ. ಏಜೆನ್ಸಿಯನ್ನೇ ನೇಮಿಸಿಕೊಳ್ಳಬೇಕು ಎಂಬ ಒತ್ತಡ ಹೇರುವುದಿಲ್ಲ’ ಎಂದರು.

ರಾಜ್ಯದಲ್ಲಿ ಈಗಾಗಲೇ ಕೆಟ್ಟು ನಿಂತಿರುವ ಘಟಕಗಳನ್ನು ಒಂದು ಬಾರಿಗೆ ದುರಸ್ತಿ ಮಾಡಿಸಲು ಸರಾಸರಿ ₹ 3 ಸಾವಿರ ನೀಡಲಾಗುವುದು. ಒಂದು ವೇಳೆ ದುರಸ್ತಿ ವೆಚ್ಚ ಹೆಚ್ಚಾದರೆ ಅದನ್ನು ನಾವೇ ಭರಿಸುತ್ತೇವೆ.  1 ಲೀಟರ್‌ ನೀರಿನ ನಿರ್ವಹಣೆಗೆ 35 ಪೈಸೆ ವೆಚ್ಚವಾಗುತ್ತದೆ. ಏಜೆನ್ಸಿಗಳಿಗೆ ಪ್ರತಿ ಲೀಟರ್‌ ನಿರ್ವಹಣೆಗೆ 25 ಪೈಸೆ ನೀಡಲು ನಾವು ತೀರ್ಮಾನಿಸಿದ್ದೇವೆ. 10 ಪೈಸೆಗಳ ವ್ಯತ್ಯಾಸವನ್ನು ಸರ್ಕಾರವೇ ಭರಿಸಲಿದೆ ಎಂದು ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಮುಖ್ಯಾಂಶಗಳು

– ರಾಜ್ಯದಲ್ಲಿ 18,582 ಘಟಕ

–16,00 ಘಟಕಗಳ ನಿರ್ವಹಣಾ ಅವಧಿ ಮುಕ್ತಾಯ

–100 ಕ್ಕಿಂತ ಹೆಚ್ಚು ಘಟಕಗಳಿಗೆ ಹೆಚ್ಚುವರಿ ಪ್ಯಾಕೇಜ್

ನಾಣ್ಯದ ಬದಲಿಗೆ ಸ್ಮಾರ್ಟ್‌ ಕಾರ್ಡ್‌

ರಾಜ್ಯದ ಎಲ್ಲ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಈಗ ಇರುವ ನಾಣ್ಯದ ಬೂತ್‌ಗಳ ಬದಲಿಗೆ ಸ್ಮಾರ್ಟ್‌ಕಾರ್ಡ್‌ ಬೂತ್‌ಗಳನ್ನು ಅಳವಡಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಕಾಯಿನ್‌ ಬೂತ್‌ಗಳನ್ನು ಸ್ಮಾರ್ಟ್‌ ಕಾರ್ಡ್‌ ಬೂತ್‌ಗಳನ್ನಾಗಿ ಪರಿವರ್ತಿಸುವುದಕ್ಕೆ ಅಗತ್ಯವಿರುವ ತಲಾ ₹15 ಸಾವಿರವನ್ನು ಸರ್ಕಾರವೇ ಭರಿಸುತ್ತದೆ. ನಾಣ್ಯದ ಕೊರತೆಯ ಸಮಸ್ಯೆ ಒಂದಾದರೆ, ನಾಣ್ಯದಂತಹ ದುಂಡಗಿನ ಲೋಹವನ್ನು ಹಾಕಿ ಘಟಕಗಳನ್ನು ಕೆಡಿಸುತ್ತಿರುವ ಸಾಕಷ್ಟು ಪ್ರಕರಣಗಳು ವರದಿಯಾಗಿವೆ. ಸ್ಮಾರ್ಟ್‌ ಕಾರ್ಡ್‌ಗಳನ್ನು ಅತ್ಯಂತ ಸುಲಭವಾಗಿ ಬಳಸಬಹುದಾಗಿದೆ ಎಂದರು.

ಇತರ ಪ್ರಮುಖ ನಿರ್ಣಯಗಳು

– ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ಬೆಂಗಳೂರಿನ ತ್ಯಾಜ್ಯ ನೀರನ್ನು ಶುದ್ಧೀಕರಿಸಿ ತುಂಬಿಸುವ 2 ನೇ ಹಂತದ ಯೋಜನೆಗೆ ₹455 ಕೋಟಿ ನೀಡಲು ಒಪ್ಪಿಗೆ. 250 ಕೆರೆಗಳಿಗೆ ನೀರು ತುಂಬಿಸಲಾಗುವುದು.

– ಮೈಸೂರು ವೈದ್ಯಕೀಯ ಕಾಲೇಜಿನ ಗ್ರಂಥಾಲಯ, ಉಪನ್ಯಾಸ ಕೊಠಡಿ, ಪುರುಷರು ಮತ್ತು ಮಹಿಳೆಯರ ಹಾಸ್ಟೆಲ್‌ ಕಾಮಗಾರಿಗೆ ₹120 ಕೋಟಿ ನೀಡಲು ಒಪ್ಪಿಗೆ.

– ಕೊಪ್ಪಳ ವೈದ್ಯಕೀಯ ಕಾಲೇಜನ್ನು 450 ಹಾಸಿಗೆಗಳ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸುವುದು ಸೇರಿದಂತೆ ವಿವಿಧ ಕಾಮಗಾರಿಗಳಿಗೆ ₹104 ಕೋಟಿ ನೀಡಲು ಅನುಮತಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು