ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಬಿಸಿಯೂಟಕ್ಕೆ ಶುದ್ಧ ನೀರು ಪೂರೈಕೆ

ಮಂಗಳವಾರ, ಮಾರ್ಚ್ 19, 2019
21 °C
ವಿನೂತನ ವ್ಯವಸ್ಥೆ

ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಬಿಸಿಯೂಟಕ್ಕೆ ಶುದ್ಧ ನೀರು ಪೂರೈಕೆ

Published:
Updated:
Prajavani

ಚಿತ್ರದುರ್ಗ: ಶಾಲಾ ಮಕ್ಕಳಿಗೆ ನಿತ್ಯ ಮಧ್ಯಾಹ್ನ ನೀಡುವ ಬಿಸಿಯೂಟದೊಂದಿಗೆ ಶುದ್ಧ ಕುಡಿಯುವ ನೀರು ಒದಗಿಸಲಾಗುತ್ತಿದೆ. ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಇಂತಹದೊಂದು ವಿನೂತನ ವ್ಯವಸ್ಥೆಯನ್ನು ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಜಾರಿಗೊಳಿಸಿದೆ.

ಭೀಕರ ಬರ ಪರಿಸ್ಥಿತಿ ಎದುರಿಸುತ್ತಿರುವ ಚಳ್ಳಕೆರೆ ಹಾಗೂ ಮೊಳಕಾಲ್ಮುರು ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ಪ್ರಯೋಗಿಕವಾಗಿ ಈ ವ್ಯವಸ್ಥೆ ಅನುಷ್ಠಾನಗೊಂಡಿದೆ. ಶಾಲಾ ಮಕ್ಕಳಿಗೆ ಪ್ರಯೋಜನವಾಗುತ್ತಿರುವುದನ್ನು ಮನಗಂಡು ಎಲ್ಲ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಇದನ್ನು ವಿಸ್ತರಿಸಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ಇರುವ ಹಳ್ಳಿಯಲ್ಲಿ ಶಾಲೆಗೆ ನೀರು ಒದಗಿಸುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ಸೂಚನೆ ನೀಡಲಾಗಿದೆ.

ಮಳೆಯ ಕೊರತೆಯಿಂದ ಜಿಲ್ಲೆಯಲ್ಲಿ ಅಂತರ್ಜಲಮಟ್ಟ ಗಣನೀಯವಾಗಿ ಕುಸಿದಿದೆ. ಕೊಳವೆಬಾವಿಗಳು ಬತ್ತಿದ್ದು, ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ. ಬಿಸಿಯೂಟ ತಯಾರಿಕೆಗೂ ಸಮಸ್ಯೆ ಉಂಟಾಗುತ್ತಿದೆ. ಅಶುದ್ಧ ನೀರು ಸೇವಿಸಿ ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಕರಣಗಳು ಬೆಳಕಿಗೆ ಬಂದಿದ್ದರಿಂದ ಈ ವ್ಯವಸ್ಥೆ ರೂಪಿಸಲಾಗಿದೆ.

ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ 2,039 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿವೆ. 1ನೇ ತರಗತಿಯಿಂದ ಎಸ್‌ಎಸ್‌ಎಲ್‌ಸಿ ವರೆಗಿನ 1.71 ಲಕ್ಷ ಮಕ್ಕಳು ನಿತ್ಯ ಬಿಸಿಯೂಟ ಸೇವಿಸುತ್ತಿದ್ದಾರೆ. ಪ್ರತಿ ವಿದ್ಯಾರ್ಥಿಗೆ ನಿತ್ಯ 2 ಲೀಟರ್‌ ನೀರು ಒದಗಿಸುವ ಹೊಣೆಯನ್ನು ಶಾಲಾ ಶಿಕ್ಷಕರಿಗೆ ನೀಡಲಾಗಿದೆ.

ಕುಡಿಯುವ ನೀರಿಗೆ ಶಾಲೆಗಳಲ್ಲಿ ಫಿಲ್ಟರ್‌ಗಳ ವ್ಯವಸ್ಥೆ ಅಳವಡಿಸಲಾಗಿತ್ತು. ಇವು ಆಗಾಗ ದುರಸ್ತಿಗೆ ಬರುತ್ತಿದ್ದರಿಂದ ತೊಂದರೆ ಉಂಟಾಗುತ್ತಿತ್ತು. ಮಕ್ಕಳು ಮನೆಯಿಂದ ಶಾಲೆಗೆ ನೀರು ಕೊಂಡೊಯ್ಯುತ್ತಿದ್ದರು. ಇದು ಎಲ್ಲ ಮಕ್ಕಳಿಗೂ ಸಾಧ್ಯವಾಗುತ್ತಿರಲಿಲ್ಲ. ಬಿಸಿಯೂಟ ಸೇವಿಸಿ ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ಬರಪೀಡಿತ ಹಳ್ಳಿಗಳಲ್ಲಿ ಸಾಮಾನ್ಯವಾಗಿತ್ತು.

ಗ್ರಾಮೀಣ ಪ್ರದೇಶದ ಹಲವೆಡೆ ಫ್ಲೋರೈಡ್‌ ಸಮಸ್ಯೆ ವಿಪರೀತವಾಗಿದೆ. ನೀರು ಸೇವಿಸಿದ ಜನರು ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಬಹುತೇಕ ಎಲ್ಲ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ₹ 2ಕ್ಕೆ 20 ಲೀಟರ್‌ ನೀರು ನೀಡಲಾಗುತ್ತಿದೆ. ಶಾಲಾ ಮಕ್ಕಳಿಗೆ ಮಾತ್ರ ಉಚಿತವಾಗಿ ಪೂರೈಕೆ ಮಾಡಲಾಗುತ್ತಿದೆ. ಇದೇ ವ್ಯವಸ್ಥೆಯನ್ನು ಅಂಗನವಾಡಿ ಹಾಗೂ ಕಾಲೇಜುಗಳಿಗೂ ವಿಸ್ತರಿಸಲಾಗುತ್ತಿದೆ.

**

ಶಾಲೆ ಮತ್ತು ಅಂಗನವಾಡಿ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಸೂಚನೆ ನೀಡಲಾಗಿದೆ. ಎಲ್ಲ ಶಾಲೆಗಳಿಗೂ ನೀರು ಸರಬರಾಜು ಮಾಡಲಾಗುವುದು.
–ಪಿ.ಎನ್‌.ರವೀಂದ್ರ, ಜಿಲ್ಲಾ ಪಂಚಾಯಿತಿ ಸಿಇಒ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !