ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯೋಜಿತ ಅಧಿಕಾರಿಗಳಿಗೆ ಮಣೆ

ಪಿಡಬ್ಲ್ಯುಡಿಯ 158 ಎಂಜಿನಿಯರ್‌ಗಳಿಗೆ ಹುದ್ದೆ ಇಲ್ಲ
Last Updated 28 ಜುಲೈ 2019, 19:54 IST
ಅಕ್ಷರ ಗಾತ್ರ

ಬೆಂಗಳೂರು: ಬೇರೆ ಇಲಾಖೆಗಳಿಂದ ಬಂದಿರುವ 30 ಕಾರ್ಯಪಾಲಕ ಎಂಜಿನಿಯರ್‌ಗಳು ಲೋಕೋಪಯೋಗಿ ಇಲಾಖೆಯಲ್ಲಿ ಹಲವು ವರ್ಷಗಳಿಂದ ಠಿಕಾಣಿ ಹೂಡಿದ್ದಾರೆ. ಇದರಿಂದಾಗಿ, ಇಲಾಖೆಯ 158 ಕಾರ್ಯಪಾಲಕ ಎಂಜಿನಿಯರ್‌ಗಳಿಗೆ ಹುದ್ದೆಗಳೇ ಇಲ್ಲದಂತಾಗಿದೆ.

ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಲೋಕೋಪಯೋಗಿ, ಜಲಸಂ‍ಪನ್ಮೂಲ ಹಾಗೂ ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿಗಳಿಗೆ ಕರ್ನಾಟಕ ಎಂಜಿನಿಯರ್‌ಗಳ ಸಂಘ ಪತ್ರ ಬರೆದಿದೆ.

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ (ಕೆಎಫ್‌ಎಸ್‌ಸಿ) ಎಂಜಿನಿಯರ್ ಆಗಿರುವ ರಾಜು ಅವರು 20 ವರ್ಷಗಳಿಂದ ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಸಣ್ಣ ನೀರಾವರಿ ಇಲಾಖೆಯ ಕಲಬುರ್ಗಿ ವಲಯದ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಆಗಿರುವ ಅವರು ಒಂದು ವರ್ಷದಿಂದ ಮುಖ್ಯ ಎಂಜಿನಿಯರ್‌ ಹುದ್ದೆಯ ಹೆಚ್ಚುವರಿ ಹೊಣೆಯನ್ನೂ ಹೊತ್ತಿದ್ದಾರೆ.

ಕೆಎಸ್‌ಎಫ್‌ಸಿಯಿಂದ ಬಂದಿರುವ ವೇಣುಗೋಪಾಲ್‌ ಅವರು ಕರ್ನಾಟಕ ನೀರಾವರಿ ನಿಗಮದ ಭದ್ರಾ ವಿಭಾಗದಲ್ಲಿ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಆಗಿದ್ದಾರೆ. ಕೆಎಸ್‌ಎಫ್‌ಸಿ ಹಾಗೂ ಪೌರಾಡಳಿತ ನಿರ್ದೇಶನಾಲಯದ 10 ಕಾರ್ಯಪಾಲಕ ಎಂಜಿನಿಯರ್‌ಗಳು ಐದಾರು ವರ್ಷಗಳಿಂದ ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕಾರ್ಯಪಾಲಕ ಎಂಜಿನಿಯರ್‌ಗಳಾದ ಚಂದನ್‌ ಅವರು ಸಣ್ಣ ನೀರಾವರಿ ಇಲಾಖೆಯ ಬೆಂಗಳೂರು ಗುಣ ನಿಯಂತ್ರಣ ವಿಭಾಗದಲ್ಲಿ, ಬಸವರಾಜೇಗೌಡ ಅವರು ಸಣ್ಣ ನೀರಾವರಿ ಇಲಾಖೆಯ ಮಂಡ್ಯ ವಿಶೇಷ ವಿಭಾಗದಲ್ಲಿ, ಐ.ಎ.ವೀರಪ್ಪ ಅವರು ಸಣ್ಣ ನೀರಾವರಿ ಇಲಾಖೆಯ ಮೈಸೂರು ವಿಶೇಷ ವಿಭಾಗದಲ್ಲಿ, ಗುರುದತ್‌ ಅವರು ವಿಶ್ವೇಶ್ವರಯ್ಯ ಜಲ ನಿಗಮದ ಅರಸೀಕೆರೆ ವಿಭಾಗದಲ್ಲಿ (ಎತ್ತಿನಹೊಳೆ ಯೋಜನೆ), ಟಾಟಾ ಶಿವನ್‌ ಅವರು ವಿಜೆಎನ್‌ಎಲ್‌ ಹೊಸದುರ್ಗ, ಪೂರ್ಣಚಂದ್ರ ಅವರು ಮೈಸೂರು ಎಪಿಸಿಎಂಸಿಯಲ್ಲಿ, ಸುಂದರೇಶ್‌ ಅವರು ಸಣ್ಣ ನೀರಾವರಿ ವಿಭಾಗದಲ್ಲಿ (ಉತ್ತರ) ಹಲವು ವರ್ಷಗಳಿಂದ ಇದ್ದಾರೆ. ಇವರೆಲ್ಲ ಕೆಎಸ್‌ಎಫ್‌ಸಿಯಿಂದ ಎರವಲು ಸೇವೆಗೆ ಬಂದವರು.

ಪೌರಾಡಳಿತ ನಿರ್ದೇಶನಾಲಯದ ಅವರು ಬಿಡಿಎ ಕೆಂಪೇಗೌಡ ಬಡಾವಣೆಯ, ಕರ್ನಾಟಕ ವಿದ್ಯುತ್‌ ನಿಗಮದ ವೆಂಕಟೇಶ ಪ್ರಸಾದ್‌ ಅವರು ಕರ್ನಾಟಕ ನೀರಾವರಿ ನಿಗಮದ ಬೆಂಗಳೂರು ವೃತ್ತದ ಕಾರ್ಯಪಾಲಕ ಎಂಜಿನಿಯರ್‌ ಆಗಿದ್ದಾರೆ. ಇವೆಲ್ಲ ಆಯಕಟ್ಟಿನ ಜಾಗಗಳು. ಇಲ್ಲಿಗೆ ತಾಂತ್ರಿಕ ಜ್ಞಾನ ಇಲ್ಲದ ಅಧಿಕಾರಿ ಗಳನ್ನು ನಿಯೋಜಿಸುವ ಅಗತ್ಯ ಏನಿದೆ ಎಂಬುದು ಸಂಘದ ಆಕ್ಷೇಪ.

ನಿಯೋಜನೆ ಅವಧಿ ಮೂರು ವರ್ಷ!
ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೌಕರಿ ಭರ್ತಿ) ನಿಯಮಗಳು 1977ರ ನಿಯಮ 16ರ ಅಡಿಯಲ್ಲಿ ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ಸಮಾನ ವೇತನ ಶ್ರೇಣಿಗೆ ನೇಮಕ ಮಾಡಲು ಅವಕಾಶ ಇದೆ. ಕರ್ನಾಟಕ ನಾಗರಿಕ ಸೇವಾ ನಿಯಮ 50 (3) ಹಾಗೂ 419 (ಬಿ) ಪ್ರಕಾರ ನಿಯೋಜನಾ ಅವಧಿಯನ್ನು ಮೂರು ವರ್ಷಕ್ಕೆ ಮಿತಿಗೊಳಿಸಲಾಗಿದೆ.

ಅನಿವಾರ್ಯ ಸಂದರ್ಭಗಳಲ್ಲಿ ಈ ಅವಧಿಯನ್ನು ಒಂದು ವರ್ಷ ವಿಸ್ತರಿಸಬಹುದು. ಆದರೆ, ಈ ಎಂಜಿನಿಯರ್‌ಗಳು ನಿಯಮಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಅಧಿಕಾರಿಗಳನ್ನು ಮಾತೃ ಇಲಾಖೆಗೆ ಕಳುಹಿಸಿ ಈ ಜಾಗಕ್ಕೆ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳನ್ನೇ ನಿಯೋಜಿಸಬೇಕು ಎಂದು ಸಂಘ ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT