ಶುಕ್ರವಾರ, ನವೆಂಬರ್ 22, 2019
22 °C
ಲೋಕೋಪಯೋಗಿ ಇಲಾಖೆಗೆ 870 ಎಂಜಿನಿಯರ್‌ಗಳ ನೇಮಕ l ಆಕಾಂಕ್ಷಿಗಳಲ್ಲಿ ಹೆಚ್ಚಿದ ಆತಂಕ

ಫಲಿತಾಂಶ ಪ್ರಕಟಣೆಗೆ ಸರ್ಕಾರ ತಡೆ

Published:
Updated:

ಧಾರವಾಡ: ಲೋಕೋಪಯೋಗಿ ಇಲಾಖೆಯಲ್ಲಿ ಎಂಜಿನಿಯರ್‌ಗಳ ನೇಮಕಾತಿ ತಡೆಹಿಡಿಯಲಾಗಿದೆ ಎಂದು ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಅವರು ಹೇಳಿದ್ದಾರೆ.

ಇದರಿಂದ ಪರೀಕ್ಷೆ ಬರೆದು ಫಲಿತಾಂಶದ ನಿರೀಕ್ಷೆಯಲ್ಲಿರುವ ಆಕಾಂಕ್ಷಿಗಳು ಆತಂಕದಲ್ಲಿದ್ದಾರೆ.

ಲೋಕೋಪಯೋಗಿ ಇಲಾಖೆಯಲ್ಲಿ 300 ಕಿರಿಯ ಹಾಗೂ 570 ಸಹಾಯಕ ಎಂಜಿನಿಯರ್‌ಗಳ ಹುದ್ದೆಗಳಿಗೆ ಕಳೆದ ಮಾರ್ಚ್‌ನಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿತ್ತು. ಇದಕ್ಕೆ ಸಂಬಂಧಿಸಿ
ದಂತೆ ಜೂನ್ 22 ಹಾಗೂ 23ರಂದು ನೇಮಕಾತಿ ಪರೀಕ್ಷೆ ನಡೆಯಿತು. ಆದರೆ ಫಲಿತಾಂಶ ಇನ್ನು ಪ್ರಕಟಗೊಂಡಿಲ್ಲ. 

ಆತಂಕಗೊಂಡ ಆಕಾಂಕ್ಷಿಗಳು ಲೋಕೋಪಯೋಗಿ ಸಚಿವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ನೇಮಕಾತಿ ತಡೆಹಿಡಿಯಲಾಗಿದೆ ಎಂಬ ಹೇಳಿಕೆ ನೀಡಿದ್ದು ಇವರನ್ನು ಆಘಾತಕ್ಕೀಡು ಮಾಡಿದೆ. 

ಈ ಬಗ್ಗೆ ಪ್ರತಿಕ್ರಿಯಿ ಸಿದ ಉದ್ಯೋಗಾಕಾಂಕ್ಷಿಗಳು, ‘ಪರೀಕ್ಷೆ ಎದುರಿಸಿ ಮೂರು ತಿಂಗಳು ಕಳೆದರೂ ಕೀ ಉತ್ತರ ಮತ್ತು ಫಲಿತಾಂಶ ಪ್ರಕಟಗೊಂಡಿಲ್ಲ. ಸಚಿವರೇ ಫಲಿತಾಂಶ ತಡೆಹಿಡಿಯಲಾಗಿದೆ ಎಂದಿದ್ದಾರೆ. ಈ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನೂ ಭೇಟಿ ಮಾಡಿ ನಮ್ಮ ಅಳಲು ತೋಡಿಕೊಂಡಿದ್ದೇವೆ. ಅವರು ಪಲಿತಾಂಶ ಪ್ರಕಟಿಸುವ ಭರವಸೆ ನೀಡಿದರು. ಆದರೆ ಈವರೆಗೂ ಅದು ನೆರವೇರಿಲ್ಲ’ ಎಂದರು.

‘ಈ ಹುದ್ದೆಗಳನ್ನು ಪಡೆಯುವ ಸಲುವಾಗಿ ಹಗಲುರಾತ್ರಿ ಓದಿದ್ದೇವೆ. ಪರೀಕ್ಷೆಗಾಗಿ ಪಟ್ಟ ಶ್ರಮ ಹಾಗೂ ವ್ಯಯಿಸಿದ ಕಾಲ ಎರಡೂ ವ್ಯರ್ಥವಾಯಿತೇನೋ ಎಂಬ ಆತಂಕ ನಮ್ಮೆಲ್ಲರನ್ನೂ ಕಾಡುತ್ತಿದೆ. ನೇಮಕಾತಿಗಾಗಿ ವರ್ಷಗಟ್ಟಲೆ ಕಾದು, ನಂತರ ಪರೀಕ್ಷೆ ಬರೆದರೂ ಫಲಿತಾಂಶ ತಡೆಹಿಡಿದಿರುವುದು ಆಕಾಂಕ್ಷಿಗಳಿಗೆ ವಿಷಪ್ರಾಶನ ಮಾಡಿದಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕಡುಬಡತನದಲ್ಲೂ ಓದಿ, ಪರೀಕ್ಷೆ ಬರೆದು ಉದ್ಯೋಗದ ನಿರೀಕ್ಷೆಯಲ್ಲಿದ್ದೇವೆ. ಈ ನೇಮಕಾತಿ ಮೂಲಕ ಬದುಕು ಕಟ್ಟಿಕೊಳ್ಳಬೇಕೆಂದಿದ್ದೇವೆ. ಕಳೆದ ಸರ್ಕಾರದ ಅವಧಿಯಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ಈಗಿನ ಸರ್ಕಾರ ಅದನ್ನು ತಡೆ ಹಿಡಿದಿದೆ. ರಾಜಕೀಯ ವೈಷಮ್ಯಕ್ಕೆ ನಮ್ಮ ಉದ್ಯೋಗಗಳನ್ನು ಕಸಿದುಕೊಳ್ಳುವುದು ಯಾವ ನ್ಯಾಯ’ ಎಂದು ಪ್ರಶ್ನಿಸಿದ ಉದ್ಯೋಗಾಕಾಂಕ್ಷಿಗಳು ತಮ್ಮ ಹೆಸರು ಬಹಿರಂಗಪಡಿಸಲು ಇಚ್ಛಿಸಲಿಲ್ಲ.

ಈ ಕುರಿತಂತೆ ಸರ್ಕಾರದ ಗಮನ ಸೆಳೆಯಲು ಮುಖ್ಯಮಂತ್ರಿ ಭೇಟಿ, ಟ್ವಿಟರ್ ಮತ್ತಿತರ ಸಾಮಾಜಿಕ ಜಾಲತಾಣಗಳ ಮೂಲಕ ಸರ್ಕಾರದ ಮತ್ತು ಇಲಾಖೆಯ ಗಮನ ಸೆಳೆಯುವ ಕೆಲಸವನ್ನು ಇವರು ಕೈಗೊಂಡಿದ್ದಾರೆ. ಜತೆಗೆ ರಾಜ್ಯವ್ಯಾಪಿ ಇರುವ ಆಕಾಂಕ್ಷಿಗಳನ್ನು ಒಗ್ಗೂಡಿಸುವ ಪ್ರಯತ್ನವನ್ನೂ ನಡೆಸಿದ್ದಾರೆ. 

***

ಫಲಿತಾಂಶ ತಡೆ ಹಿಡಿದಿದ್ದರೆ ಕಾರಣ ನೀಡಲಿ, ಇಲ್ಲವೇ ಬೇಗನೆ ಫಲಿತಾಂಶ ಪ್ರಕಟಿಸಿ ಸಂದರ್ಶನಕ್ಕೆ ಆಹ್ವಾನಿಸಲಿ. ಉದ್ಯೋಗ ಆಕಾಂಕ್ಷಿಗಳಿಗೆ ತೊಂದರೆ ಮಾಡದಿರಲಿ. - ನೊಂದ ಅಭ್ಯರ್ಥಿಗಳು, ಧಾರವಾಡ

ಪ್ರತಿಕ್ರಿಯಿಸಿ (+)