ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗಕ್ಕೆ ಪಿಡಬ್ಲ್ಯುಡಿ ‘ಕೇಂದ್ರ’ ವಲಯ!

ತವರು ಜಿಲ್ಲೆಯ ಪ್ರೇಮ ಮೆರೆದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ
Last Updated 22 ಮಾರ್ಚ್ 2020, 20:45 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮತ್ತೆ ತವರು ಜಿಲ್ಲಾ ಪ್ರೇಮ ಮೆರೆದಿದ್ದಾರೆ. ಲೋಕೋಪಯೋಗಿ ಇಲಾಖೆಯಲ್ಲಿ ಹೊಸದಾಗಿ ಸಂಪರ್ಕ ಮತ್ತು ಕಟ್ಟಡ ವಿಭಾಗದ ಕೇಂದ್ರ ವಲಯದ ಕಚೇರಿಯನ್ನು ಶಿವಮೊಗ್ಗದಲ್ಲಿ ಸೃಜಿಸುವಂತೆ ನಿರ್ದೇಶನ ನೀಡಿದ್ದಾರೆ. ‌

ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಅವರಿಗೆ ಇದೇ 20ರಂದು ಟಿಪ್ಪಣಿ (ಮುಮಂ/ಗೃಕ/ 313/2020) ಕಳುಹಿಸಿರುವ ಮುಖ್ಯಮಂತ್ರಿ, ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ‌

ಲೋಕೋಪಯೋಗಿ ಇಲಾಖೆಯಿಂದ ಸರ್ಕಾರಿ ಕಟ್ಟಡಗಳ ನಿರ್ಮಾಣ, ರಸ್ತೆಗಳ ನಿರ್ಮಾಣ, ನಿರ್ವಹಣೆ ಮತ್ತು ಅಭಿವೃದ್ಧಿ ಸೇರಿದಂತೆ ಇನ್ನಿತರ ಪ್ರಮುಖ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಈ ಕಾಮಗಾರಿಗಳ ಉಸ್ತುವಾರಿಗೆ ಬೆಂಗಳೂರಿನಲ್ಲಿ ಮುಖ್ಯ ಎಂಜಿನಿಯರ್‌ (ದಕ್ಷಿಣ), ಧಾರವಾಡದಲ್ಲಿ ಮುಖ್ಯ ಎಂಜಿನಿಯರ್‌ (ಉತ್ತರ) ಹಾಗೂ ಕಲಬುರ್ಗಿಯಲ್ಲಿ ಮುಖ್ಯ ಎಂಜಿನಿಯರ್‌ (ಈಶಾನ್ಯ) ವಲಯಗಳಿವೆ.

ಈ ಮೂರು ವಲಯಗಳ ಕಾರ್ಯದೊತ್ತಡ ಹೆಚ್ಚಾಗಿದೆ. ಆಡಳಿತ ಸುಗಮಗೊಳಿಸುವ ಉದ್ದೇಶದಿಂದ ಇನ್ನೊಂದು ವಿಭಾಗ ಆರಂಭಿಸಬೇಕಿದೆ. ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳ ಸಾರ್ವಜನಿಕರಿಗೆ ಮತ್ತು ನೌಕರರಿಗೆ ಬೆಂಗಳೂರು ಹಾಗೂ ಧಾರವಾಡ ಕಚೇರಿಗಳು ದೂರ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಮುಖ್ಯ ಎಂಜಿನಿಯರ್‌ ಕೇಂದ್ರ ವಲಯ ಆರಂಭಿಸಬೇಕು ಎಂದು ಸೂಚಿಸಿದ್ದಾರೆ.

ಚಿತ್ರದುರ್ಗದ ಕಚೇರಿ ಶಿವಮೊಗ್ಗಕ್ಕೆ: ಮುಖ್ಯಮಂತ್ರಿಯವರ ತವರು ಜಿಲ್ಲಾ ಪ್ರೀತಿಇಷ್ಟಕ್ಕೇ ಮುಗಿದಿಲ್ಲ. ಚಿತ್ರದುರ್ಗದಲ್ಲಿರುವ ರಾಷ್ಟ್ರೀಯ ಹೆದ್ದಾರಿ ವಿಭಾಗ ಕಚೇರಿಯನ್ನು ಶಿವಮೊಗ್ಗಕ್ಕೆ ಸ್ಥಳಾಂತರಿಸಬೇಕು ಎಂದೂ ಅವರು ನಿರ್ದೇಶನ ನೀಡಿದ್ದಾರೆ.

ಚಿತ್ರದುರ್ಗ ವಿಭಾಗದಲ್ಲಿ ಐದು ಉಪವಿಭಾಗ ಕಚೇರಿಗಳಿದ್ದು, ಈ ಪೈಕಿ ಎರಡು ಕಚೇರಿಗಳು ಶಿವಮೊಗ್ಗದಲ್ಲಿ ಕಾರ್ಯನಿರ್ವಹಿಸುತ್ತಿವೆ. ಸಿಗಂಧೂರಿನ ಶರಾವತಿ ಹಿನ್ನೀರು ಸೇತುವೆ, ರಾಷ್ಟ್ರೀಯ ಹೆದ್ದಾರಿ–206 ಮತ್ತು ರಾಷ್ಟ್ರೀಯ ಹೆದ್ದಾರಿ 13ರ ಕಾಮಗಾರಿಗಳು
ತ್ವರಿತಗತಿಯಲ್ಲಿ ಸಾಗುತ್ತಿವೆ. ಈ ಕಾಮಗಾರಿಗಳನ್ನು ಗಡುವಿನ ಒಳಗೆ ಪೂರ್ಣಗೊಳಿಸಲು ಶಿವಮೊಗ್ಗದಲ್ಲಿ ಕೇಂದ್ರ ಕಚೇರಿ ಅಗತ್ಯ ಇದೆ ಎಂದೂ ಪ್ರತಿಪಾದಿಸಿದ್ದಾರೆ.

’ಜೆಡಿಎಸ್–ಕಾಂಗ್ರೆಸ್‌ ಮೈತ್ರಿ ಸರ್ಕಾರದ ಅವಧಿಯಲ್ಲಿ ಹಾಸನ ಜಿಲ್ಲೆಗೆ ಭರಪೂರ ಯೋಜನೆಗಳ ಘೋಷಣೆ ಮಾಡಲಾಗಿತ್ತು. ಮಂಡ್ಯ ಹಾಗೂ ರಾಮನಗರ ಜಿಲ್ಲೆಗಳಿಗೂ ಸಾವಿರಾರು ಕೋಟಿಗಳ ಅನುದಾನ ಘೋಷಣೆ ಮಾಡಲಾಗಿತ್ತು. ಬೆಳಗಾವಿಯಲ್ಲಿದ್ದ
ಕೆ–ಶಿಪ್‌ ಕಚೇರಿಯನ್ನು ಹಾಸನಕ್ಕೆ ಸ್ಥಳಾಂತರ ಮಾಡಲಾಗಿತ್ತು. ಐದು ಜಿಲ್ಲೆಗಳಿಗೆ ಸೀಮಿತವಾದ ಸರ್ಕಾರ ಎಂದು ಯಡಿಯೂರಪ್ಪ ಹಾಗೂಬಿಜೆಪಿ ನಾಯಕರು ಸಮ್ಮಿಶ್ರ ಸರ್ಕಾರವನ್ನು ಟೀಕಿಸಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಮೊದಲ ಸಚಿವ ಸಂಪುಟ ಸಭೆಯಲ್ಲಿ ಶಿವಮೊಗ್ಗ ಜಿಲ್ಲೆಗೆ ₹500 ಕೋಟಿಗೂ ಅಧಿಕ ಅನುದಾನ ಘೋಷಣೆ ಮಾಡಲಾಗಿತ್ತು. ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೂ ದೊಡ್ಡ ಮೊತ್ತದ ಅನುದಾನ ಪ್ರಕಟಿಸಲಾಗಿತ್ತು. ಇದೀಗ ಆ ಪಟ್ಟಿಗೆ ಇನ್ನೊಂದು ಕೊಡುಗೆ ಸೇರ್ಪಡೆಯಾಗಿದೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT