ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನಿಸುವುದೇ ದೇಶದ್ರೋಹವಲ್ಲ: ಮಾಹಿತಿ ಹಕ್ಕು ಕಾರ್ಯಕರ್ತೆ ಅರುಣಾ ರಾಯ್‌

Last Updated 17 ಸೆಪ್ಟೆಂಬರ್ 2019, 13:41 IST
ಅಕ್ಷರ ಗಾತ್ರ

ಮಂಗಳೂರು: ‘ಪ್ರಶ್ನಿಸುವುದನ್ನೇ ದೇಶದ್ರೋಹ ಎಂದು ಬಿಂಬಿಸುವ ಮನಸ್ಥಿತಿಯು ದೇಶಕ್ಕೆ ಅಪಾಯಕಾರಿ’ ಎಂದು ಮಾಹಿತಿ ಹಕ್ಕು ಕಾರ್ಯಕರ್ತೆ ಅರುಣಾ ರಾಯ್‌ ಹೇಳಿದರು.

ನಗರದ ಅಲೋಷಿಯಸ್ ಕಾಲೇಜಿನಲ್ಲಿ ಮಂಗಳವಾರ ‘ಹಕ್ಕುಗಳು ಆಧಾರಿತ ಸಾಮಾಜಿಕ ಚಳವಳಿಗಳ ವಿಧಾನ’ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

‘ಆಡಳಿತಕ್ಕೆ ವಿರುದ್ಧವಾದ ದನಿಯು ದೇಶದ್ರೋಹವಲ್ಲ. ಅದು ಪ್ರಜಾಪ್ರಭುತ್ವದಲ್ಲಿನ ಕಲಿಕೆಯ ಆರಂಭ. ಆದರೆ, ಜನಪರ ಹೋರಾಟ ಮತ್ತು ಪ್ರಶ್ನಿಸುವವರನ್ನೇ ‘ದೇಶದ್ರೋಹಿ’ ಎಂದು ಬಿಂಬಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಚರ್ಚೆ ಇಲ್ಲದೇ ಅಂಗೀಕಾರಗೊಳ್ಳುತ್ತಿರುವ ಮಸೂದೆಗಳೇ (ಕಾಯಿದೆ) ದೊಡ್ಡ ಆಪತ್ತು’ ಎಂದು ವಿಶ್ಲೇಷಿಸಿದರು.

‘ಭಾರತದಲ್ಲಿ ಅಸಮಾನತೆಗೂ ಹಲವಾರು ಆಯಾಮಗಳಿವೆ. ಪ್ರಜಾಪ್ರಭುತ್ವದ ಉಳಿವಿನಿಂದ ಮಾತ್ರ ಯಾವುದೇ ಅಸಮಾನತೆ ವಿರುದ್ಧ ಹೋರಾಡಲು ಸಾಧ್ಯ. ಆದರೆ, ಕೆಲ ವರ್ಷಗಳಲ್ಲಿ ಮಾಹಿತಿ ಹಕ್ಕು ಕಾಯಿದೆಯನ್ನೂ ಕ್ಷೀಣಗೊಳಿಸಿದರೆ, ಮಾಧ್ಯಮ ಸೇರಿದಂತೆ ಪ್ರಜಾಪ್ರಭತ್ವದ ಸ್ವಾಯತ್ತ ಸಂಸ್ಥೆಗಳೇ ಸ್ವಾತಂತ್ರ್ಯ ಕಳೆದುಕೊಳ್ಳುತ್ತಿವೆ’ ಎಂದು ಖೇದ ವ್ಯಕ್ತಪಡಿಸಿದರು.

‘ದೇಶದ ಜನರ ಹಕ್ಕು ಮತ್ತು ಬದುಕನ್ನು ಸಂವಿಧಾನವು ರಕ್ಷಿಸಿದ್ದು, ಅದರ ಯಥಾಸ್ಥಿತಿಯ ಉಳಿವಿಗಾಗಿ ಜನತೆ ಭಯಮುಕ್ತರಾಗಿ ಮೌನ ಮುರಿಯಬೇಕು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘370ನೇ ಕಲಂ ರದ್ಧತಿ ಸಂದರ್ಭದ ಬೆಳವಣಿಗೆಯನ್ನು ಕೋರ್ಟ್ ಆಗಾಗ್ಗೆ ಪ್ರಶ್ನಿಸಬೇಕಿತ್ತು. ಆದರೆ, ನ್ಯಾಯಾಂಗ ವ್ಯವಸ್ಥೆಯೂ ಆಡಳಿತಕ್ಕೆ ಹೊಂದಾಣಿಕೆಯಾಗುತ್ತಿದೆಯೇ? ಎಂಬ ಅನುಮಾನವೂ ಮೂಡುತ್ತಿದೆ’ ಎಂದು ಸಾಮಾಜಿಕ ಕಾರ್ಯಕರ್ತ ನಿಖಿಲ್ ಡೇ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT