ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾಧಿಕಾರಿಗಳು‌ ದೇಶಕ್ಕೆ ದ್ರೋಹ ಮಾಡುವುದಿಲ್ಲ: ಸಿಎಂಗೆ ಆರ್‌.ಅಶೋಕ್‌ ತಿರುಗೇಟು 

Last Updated 6 ಏಪ್ರಿಲ್ 2019, 9:11 IST
ಅಕ್ಷರ ಗಾತ್ರ

ಮಂಗಳೂರು: ದೇಶದ ರಕ್ಷಣಾ ಇಲಾಖೆಯಲ್ಲಿರುವ ಯಾವುದೇ ಅಧಿಕಾರಿ ನಮ್ಮ ದೇಶಕ್ಕೆ ದ್ರೋಹ ಬಗೆಯುವಂತಹ ಕೆಲಸ ಮಾಡುವುದಿಲ್ಲ ಎನ್ನುವುದನ್ನು ಮೊದಲು ಮುಖ್ಯಮಂತ್ರಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಹೇಳಿದರು.

ಭಾರತ ಮತ್ತು ಪಾಕಿಸ್ತಾನದ ನಡುವೆ ಲೋಕಸಭೆ ಚುನಾವಣೆಗೆ ಮುನ್ನ ಸಂಘರ್ಷ ನಡೆಯುತ್ತದೆ ಎಂಬ ಸಂಗತಿ ಎರಡು ವರ್ಷ ಮೊದಲೇ ತಮಗೆ ಗೊತ್ತಿತ್ತು ಎಂಬ ಮುಖ್ಯಮಂತ್ರಿ ಕುಮಾರಸ್ವಾಮಿಯ ಹೇಳಿಕೆಗೆ ಅವರು‌ ಈ ರೀತಿ ಪ್ರತಿಕ್ರಿಯಿಸಿದರು.

ಮಂಗಳವಾರ ನಗರದಲ್ಲಿ‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸ್ತ್ರ, ಜೋತಿಷ್ಯ, ರೇವಣ್ಣ ಅವರ ನಿಂಬೆ ಕಾಯಿ, ಜಾತಕ ಇವೆಲ್ಲಾ ನಡೆಯಲ್ಲ ಅಂತ ಗೊತ್ತಾಗಿರಬೇಕು. ಹೀಗಾಗಿ ಚುನಾವಣಾ ತಂತ್ರಗಾರಿಕೆಗಾಗಿ ಈ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಸುಮಾರು 20 ವರ್ಷದ ಹಿಂದೆ ಒಬ್ಬ ಸೇನಾಧಿಕಾರಿ ಹೇಳಿದ್ರು ಪುಲ್ವಾಮ‌ ದಾಳಿ ಆಗುತ್ತದೆ ಎಂದು ನನಗೂ ಹೇಳಿದ್ದರು ಎಂದು ಹಾಸ್ಯ ಚಟಾಕಿ ಹಾರಿಸಿದ ಅವರು, ಮುಖ್ಯಮಂತ್ರಿ ಸುಳ್ಳು ಹೇಳಿಕೆ ನೀಡುವ ಮೂಲಕ ಸೈನಿಕರಿಗೆ ಅಪಮಾನ ಮಾಡುತ್ತಿದ್ದಾರೆ. ರಕ್ಷಣಾ ಇಲಾಖೆ ಯಾವತ್ತೂ ನಾವು ದಾಳಿ ಮಾಡ್ತಿವಿ ಅಂತ ಬಹಿರಂಗ‌ ಮಾಡುವುದಿಲ್ಲ ಎಂಬುದನ್ನು‌ ಮುಖ್ಯಮಂತ್ರಿ‌ ಅರಿತುಕೊಳ್ಳಬೇಕು ಎಂದು ತಿಳಿಸಿದರು.

ಅಭಿನಂದನ್‌ಗೆ ಪಾಕಿಸ್ತಾನ ಚಿತ್ರಹಿಂಸೆ ಕೊಟ್ಟರೂ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಅಷ್ಟು ಧೈರ್ಯದ ಸೈನಿಕರ ಬಗ್ಗೆ ಮುಖ್ಯಮಂತ್ರಿ ಈ ರೀತಿಯ ಮಾತನಾಡುತ್ತಿರುವುದು‌ ಸರಿಯಲ್ಲ. ನಾವು ಮುಖ್ಯಮಂತ್ರಿಯ ಈ ಹೇಳಿಕೆ ನಂಬಬೇಕೆ ? ಅಥವಾ ಸೈನಿಕರನ್ನು ನಂಬಬೇಕೇ? ಎಂಬುದನ್ನು ಜನಗಳೆ ತೀರ್ಮಾನ ಮಾಡಲಿ ಎಂದು ಹೇಳಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಒಡಕು ಬಯಲಿಗೆ ಬಂದಿದ್ದು, ಬೀದಿ ಬೀದಿಗಳಲ್ಲಿ ಜಗಳ‌ ನಡೀತಿದೆ. ಸಂಧಾನ ಮಾತುಕತೆ ವಿಫಲ ಆಗಿದೆ. ಸಿದ್ಧರಾಮಯ್ಯ ಬಂದು ಪ್ರಚಾರ ಮಾಡಿದರೂ ಮಂಡ್ಯದಲ್ಲಿ ಇನ್ನು ಏನೂ ಪ್ರಯೋಜನ ಇಲ್ಲ ಎಂದು ಎಚ್.ಡಿ. ದೇವೇಗೌಡರೇ ಹೇಳಿದ್ದಾರೆ. ಸಿದ್ದರಾಮಯ್ಯ ಕೆಲಸಕ್ಕೆ ಬಾರದವರು ಎಂಬರ್ಥದಲ್ಲಿ ಮಾತನಾಡಿದ್ದಾರೆ. ಮೇ 23 ರಂದು ಕಾಂಗ್ರೆಸ್ಸಿಗರಿಗೆ ಏನು ಮಾಡುತ್ತೇವೆ ನೋಡಿ ಎಂದು ಕುಮಾರಸ್ವಾಮಿ ಅವಾಜ್ ಹಾಕಿದ್ದಾರೆ. ಇದೆಲ್ಲ ನೋಡೋವಾಗ ಕಾಂಗ್ರೆಸ್-ಜೆಡಿಎಸ್ ಗೊಂದಲದ ಗೂಡಾಗಿದೆ ಎನ್ನುವುದು ಎಲ್ಲರಿಗೂ ಅರ್ಥವಾಗುತ್ತದೆ. ಕಾಂಗ್ರೆಸ್-ಜೆಡಿಎಸ್ ನ‌ ಮಾಡೆಲ್ ಈ ರಾಜ್ಯಕ್ಕೆ ಮತ್ತೆ ಬರಬಾರದು ಎಂದು ಈ ರಾಜ್ಯದ ಜನ ತೀರ್ಮಾನ ಮಾಡ್ತಾರೆ. ದೇಶದಲ್ಲಿ ಮತ್ತೆ ಪ್ರಧಾನಿಯಾಗೋದು ನರೇಂದ್ರ ಮೋದಿಯೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಾಸನದಲ್ಲಿ, ಮಂಡ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಕಾರ್ಯಕರ್ತರೇ ಮೋದಿ ಅವರಿಗೆ ಜೈ ಎನ್ನುತ್ತಿದ್ದಾರೆ ಎಂದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT