ಮಂಗಳವಾರ, ಮಾರ್ಚ್ 9, 2021
31 °C

ಅಷ್ಟೊಂದು ಹಣ ಇದ್ದರೆ ಪ್ರತಿಯೊಬ್ಬರಿಗೂ ₹20 ಸಾವಿರ ವಿತರಿಸಿ: ಡಿಕೆಶಿಗೆ ಅಶೋಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ದೌಲತ್ತಿನ ಮಾತನಾಡುವುದು ಬೇಡ. ಸರ್ಕಾರ ಕೇಳಿದರೆ ಹಣ ನೀಡುತ್ತೇನೆ ಎಂದಿದ್ದಾರೆ. ಸರ್ಕಾರಕ್ಕೆ ನಿಮ್ಮ ಹಣ ಬೇಕಿಲ್ಲ. ನಿಮ್ಮ ಬಳಿ ಅಷ್ಟೊಂದು ಹಣ ಇದ್ದರೆ, ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ₹ 20 ಸಾವಿರ ವಿತರಿಸಿ’ ಎಂದು ಕಂದಾಯ ಸಚಿವ ಅಶೋಕ ಸವಾಲು ಹಾಕಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್‌ ವಿರುದ್ಧ ಕಿಡಿಕಾರಿದರು. 

‘ನೀವು (ಡಿಕೆಶಿ) ಸ್ಮಾರ್ಟ್‌ ಆಗಿ, ಓವರ್‌ ಸ್ಮಾರ್ಟ್‌ ಆಗುವುದು ಬೇಡ. ಹಣ ಇದೆ ಎಂದು ಬೀಗುವುದು ಬೇಡ. ಸರ್ಕಾರಕ್ಕೆ ನಿಮ್ಮ ಹಣ ಬೇಕಿಲ್ಲ. ಕಾಂಗ್ರೆಸ್‌ ಕೊಟ್ಟ ಚೆಕ್‌ ನಮಗೆ ಬೇಕಿಲ್ಲ. ನಾನು, ನನ್ನಿಂದಲೇ ಎಲ್ಲವೂ ನಡೆಯುತ್ತದೆ ಎಂಬ ಅಹಂ ಉಳ್ಳವರಿಗೆ ನಾವು ಕವಡೆಕಾಸಿನ ಕಿಮ್ಮತ್ತೂ ನೀಡುವುದಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

ಶಿವಕುಮಾರ್‌ ತಾವು ಕಾಂಗ್ರೆಸ್‌ ಅಧ್ಯಕ್ಷ ಎನ್ನುತ್ತಾರೆ. ಚೆಕ್‌ನಲ್ಲಿ ದಿನೇಶ್‌ ಗುಂಡೂರಾವ್‌ ಸಹಿ ಇದೆ. ಯಾರನ್ನು ಮೂರ್ಖರನ್ನಾಗಿ ಮಾಡಲು ಹೊರಟಿದ್ದಾರೆ ಎಂದೂ ಪ್ರಶ್ನಿಸಿದರು.

10,823 ಕನ್ನಡಿಗರು ತಾಯ್ನಾಡಿಗೆ ಮರಳಲು ನೋಂದಣಿ
ವಿವಿಧ ದೇಶಗಳಲ್ಲಿ ಕೋವಿಡ್‌–19ನಿಂದಾಗಿ ಸಿಕ್ಕಿ ಹಾಕಿಕೊಂಡಿರುವ 10,823 ಮಂದಿ ಕನ್ನಡಿಗರು ವಾಪಸ್‌ ಬರಲು ಹೆಸರುಗಳನ್ನು ನೋಂದಾಯಿಸಿದ್ದು, ಅವರಿಗೆ ವಿಮಾನ ನಿಲ್ದಾಣದ ಸಮೀಪವೇ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಲಾಗಿದೆ ಎಂದು ಆರ್‌.ಅಶೋಕ ತಿಳಿಸಿದರು.

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಇರುವ ಹೊಟೇಲ್‌ಗಳಲ್ಲಿ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಿದ್ದು, ಇನ್ನೂ ಹೆಚ್ಚಿನ ಸೌಲಭ್ಯ ಇರುವ ಹೊಟೇಲ್‌ಗಳಲ್ಲಿ ಕ್ವಾರಂಟೈನ್‌ ಆಗುವ ಇಚ್ಛೆ ಇದ್ದರೆ. ಅವರೇ ಹಣ ಕಟ್ಟಿಕೊಂಡು ಇರಬಹುದು. ಒಟ್ಟು 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಲೇ ಬೇಕು ಎಂದು ಸಚಿವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಕಾರ್ಮಿಕರ ಮನವೊಲಿಕೆ: ರಾಜ್ಯದಿಂದ ಬಿಹಾರಕ್ಕೆ ಹೊರಡಲು ಸಿದ್ಧರಾಗಿದ್ದ 6,000 ಕಾರ್ಮಿಕರ ಮನವೊಲಿಸಿ ಇಲ್ಲೇ ಇರಿಸಿಕೊಳ್ಳಲಾಗಿದೆ. ಅಲ್ಲದೇ, ಅವರು ಕೆಲಸ ಮಾಡುತ್ತಿದ್ದ ಸ್ಥಳಗಳಿಗೆ ವಾಹನಗಳಲ್ಲಿ ತೆರಳುವ ವ್ಯವಸ್ಥೆ ಮಾಡಲಾಯಿತು. ಮಂಗಳವಾರ ರಾತ್ರಿ 8.00 ಕ್ಕೆ ನಾನೇ ಖುದ್ದಾಗಿ ಹೋಗಿ ಕಾರ್ಮಿಕರ ಮನವೊಲಿಸಿದೆ ಎಂದು ಅಶೋಕ ಹೇಳಿದರು.

ಹಿಂದಿರುಗಿದ ಕಾರ್ಮಿಕರಿಗೆ 15 ದಿನಗಳಿಗೆ ಬೇಕಾಗುವಷ್ಟು ಆಹಾರ ಸಾಮಗ್ರಿಯನ್ನು ನೀಡಲಾಗಿದೆ. ಬಿಸಿಲಲ್ಲಿ ಸುತ್ತಾಡಿ ಜ್ವರ ಬಂದವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿಸಿದರು.

ಶೂಟಿಂಗ್‌ ಇದೇ 18 ರಿಂದ: ಧಾರಾವಾಹಿಗಳ ಶೂಟಿಂಗ್‌ಗೆ ಅನುಮತಿ ನೀಡಿದ್ದರೂ, ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡು ಚಟುವಟಿಕೆ ಆರಂಭಿಸಲು ಕೆಲವು ದಿನಗಳು ಬೇಕಾಗುತ್ತವೆ. ಆದ್ದರಿಂದ ಇದೇ 18 ರಿಂದ ಶೂಟಿಂಗ್‌ ಪ್ರಕ್ರಿಯೆ ಆರಂಭಿಸಲು ನಿರ್ಮಾಪಕರು ಒಪ್ಪಿಕೊಂಡಿದ್ದಾರೆ ಎಂದು ಅಶೋಕ ತಿಳಿಸಿದರು.

ಮನೆಯೊಳಗೆ ಶೂಟಿಂಗ್‌ಗೆ ಅವಕಾಶ ನೀಡಲಾಗುವುದು. ಯಾವುದೇ ಕಾರಣಕ್ಕೂ ಹೊರಾಂಗಣ ಶೂಟಿಂಗ್‌ಗೆ ಅವಕಾಶವಿಲ್ಲ. ಕೊರೊನಾ ಸಂಬಂಧ ಸರ್ಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದೂ ಅವರು ಹೇಳಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು