ಸರ್ಕಾರದ ಪ್ರಸ್ತಾವನೆಗೆ ‘ಫಿಮಿ’ ಆಕ್ಷೇಪ

7
ಅಂತಿಮಗೊಳ್ಳದ ಗಣಿಗಾರಿಕೆ ಬಾಧಿತ ಪ್ರದೇಶದ ಪುನಶ್ಚೇತನ ಯೋಜನೆ: ಸೆ. 20ರಂದು ಮತ್ತೆ ಸಭೆ

ಸರ್ಕಾರದ ಪ್ರಸ್ತಾವನೆಗೆ ‘ಫಿಮಿ’ ಆಕ್ಷೇಪ

Published:
Updated:

ಬೆಂಗಳೂರು: ಅತಿಯಾದ ಗಣಿಗಾರಿಕೆಯಿಂದ ನಲುಗಿರುವ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜನರ ಬದುಕನ್ನು ಮರಳಿ ಕಟ್ಟುವ; ನಾಶವಾಗಿರುವ ಪರಿಸರವನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ರೂಪಿಸಲಾಗುತ್ತಿರುವ ಯೋಜನೆ ವಿಷಯದಲ್ಲಿ ರಾಜ್ಯ ಸರ್ಕಾರ ಮತ್ತು ‘ಭಾರತೀಯ ಖನಿಜ ಉದ್ಯಮಗಳ ಒಕ್ಕೂಟ’(ಫಿಮಿ) ವಿಭಿನ್ನ ನಿಲುವು ತಳೆದಿವೆ.

ಇದರಿಂದಾಗಿ ಸುಪ್ರೀಂ ಕೋರ್ಟ್‌ ನೇತೃತ್ವದ ‘ಕೇಂದ್ರ ಉನ್ನತಾಧಿಕಾರ ಸಮಿತಿ’ಗೆ (ಸಿಇಸಿ) ಎರಡೆರಡು ಪ್ರಸ್ತಾವನೆಗಳು ಸಲ್ಲಿಕೆಯಾಗುವ ಸಾಧ್ಯತೆಯಿದೆ. ಸಿಇಸಿ ಉಸ್ತುವಾರಿಯಲ್ಲಿ ಯೋಜನೆ ರೂಪುಗೊಳ್ಳುತ್ತಿದ್ದು, ಸರ್ಕಾರ ಮತ್ತು ಫಿಮಿ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿವೆ.

ಸಿಇಸಿ ಅಧ್ಯಕ್ಷ ಪಿ.ವಿ. ಜಯಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಸೇರಿದ್ದ ಸಭೆಯಲ್ಲಿ ಸರ್ಕಾರ ಮತ್ತು ಫಿಮಿ ಪ್ರತಿನಿಧಿಗಳು ಭಾಗವಹಿಸಿದ್ದರು. ಆದರೆ, ಯೋಜನೆ ಅಂತಿಮಗೊಳ್ಳಲಿಲ್ಲ. ಅಪೂರ್ಣಗೊಂಡಿರುವ ಚರ್ಚೆ ಮುಂದುವರಿಸಲು ಈ ತಿಂಗಳ 20ರಂದು ಮತ್ತೆ ಸಭೆ ನಡೆಯಲಿದೆ.  

ಮೂರೂ ಜಿಲ್ಲೆಗಳ ಪುನರ್ವಸತಿ, ಪುನಶ್ಚೇತನಕ್ಕೆ ₹ 35 ಸಾವಿರ ಕೋಟಿ ಮೊತ್ತದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಸಿದ್ಧ‍ಪಡಿಸಿದೆ. ಇದಕ್ಕೆ ಫಿಮಿ ಆಕ್ಷೇಪ ಎತ್ತಿದೆ. ಈ ಕಾರಣಕ್ಕೆ ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆಯಿಂದಾಗಿರುವ ಹಾನಿ; ಅದನ್ನು ಸರಿಪಡಿಸಲು ಬೇಕಾಗುವ ಹಣಕಾಸು ಕುರಿತಂತೆ ಸ್ವತಂತ್ರ ಸಂಸ್ಥೆಯಿಂದ ಸಮೀಕ್ಷೆ ಮಾಡಿಸುತ್ತಿದೆ. ವರದಿ ಬಂದ ಬಳಿಕ ಪ್ರಸ್ತಾವನೆ ಸಿದ್ಧಪಡಿಸಲಿದೆ ಎಂದು ಮೂಲಗಳು ತಿಳಿಸಿವೆ.

‘ಅಕ್ರಮ ಗಣಿಗಾರಿಕೆಯಿಂದ ಬಳ್ಳಾರಿ ಜಿಲ್ಲೆ ಸಂಪೂರ್ಣವಾಗಿ ಹಾಳಾಗಿರುವುದರಿಂದ ಇಡೀ ಜಿಲ್ಲೆಗ ಯೋಜನೆ ಜಾರಿಯಾಗಬೇಕು’ ಎಂಬುದು ಸರ್ಕಾರದ ನಿಲುವು. ‘ಸಂಡೂರು, ಹೊಸಪೇಟೆ ಮತ್ತು ಬಳ್ಳಾರಿಗೆ ಮಾತ್ರ ಗಣಿಗಾರಿಕೆಯಿಂದ ಸಮಸ್ಯೆಯಾಗಿದ್ದು, ಈ ಪ್ರದೇಶಗಳಿಗೆ ಅನ್ವಯವಾದರೆ ಸಾಕು’ ಎಂದು ಫಿಮಿ ಪಟ್ಟು ಹಿಡಿದಿದೆ.

ಅ.10 ರೊಳಗೆ ಯೋಜನೆ ಅಂತಿಮಗೊಳ್ಳಬೇಕು. ಅದನ್ನು ‘ಕರ್ನಾಟಕ ಗಣಿ ಪರಿಸರ ಪುನರುಜ್ಜೀವನ ನಿಗಮ’ದ (ಕೆಎಂಇಆರ್‌ಸಿ) ಮುಖಾಂತರ ಜಾರಿಗೊಳಿಸಬೇಕು. ಮೂರೂ ಜಿಲ್ಲೆಗಳನ್ನು ಮೊದಲಿನ ಸ್ಥಿತಿಗೆ ತರುವ ನಿಟ್ಟಿನಲ್ಲಿ ಯೋಜನೆ ರೂಪಿಸುವಂತೆ ಕೋರ್ಟ್‌ 2012 ಫೆಬ್ರುವರಿ 10ರಂದು ಆದೇಶಿಸಿದೆ. ಇದಕ್ಕಾಗಿ ‘ಎ’ ಹಾಗೂ ‘ಬಿ’ ವರ್ಗದ ಗಣಿಗಳ ಅದಿರು ಹರಾಜಿನ ಶೇ 10ರಷ್ಟು, ‘ಸಿ’ ವರ್ಗದ ಗಣಿಗಳ ಅದಿರು ಹರಾಜಿನ ಶೇ 25ರಷ್ಟು ಹಣ ಬಳಸುವಂತೆ ಸೂಚಿಸಿದೆ.

ಗಣಿ ಉದ್ಯಮಿಗಳಿಂದ ಈವರೆಗೆ ₹12,175 ಕೋಟಿ ಸಂಗ್ರಹಿಸಲಾಗಿದೆ. ಆರೋಗ್ಯ, ಶಿಕ್ಷಣ, ಗುಣಮಟ್ಟದ ಗಾಳಿ, ಉತ್ತಮ ರಸ್ತೆ, ರೈಲು ಸಂಪರ್ಕ, ಕೃಷಿ, ಪರಿಸರ ಸಂರಕ್ಷಣೆ, ಶುದ್ಧ ಕುಡಿಯುವ ನೀರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕ್ಷೇತ್ರಗಳಿಗೆ ಈ ಹಣ ಬಳಸಬೇಕು ಎಂಬ ವಿಸ್ತೃತ ಮಾರ್ಗಸೂಚಿ ಇದೆ. ಇದನ್ನು ಮೂಲವಾಗಿಟ್ಟುಕೊಂಡು ಸಮಗ್ರ ಯೋಜನೆ ರೂಪಿಸಬೇಕಿದೆ.

ರಾಜ್ಯ ಸರ್ಕಾರ ಅಥವಾ ಫಿಮಿ ಪ್ರತ್ಯೇಕ ‍ಪ್ರಸ್ತಾವನೆ ಸಲ್ಲಿಸಿದರೂ ಸಿಇಸಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಆನಂತರ ಅದಕ್ಕೆ ಸುಪ್ರೀಂ ಕೋರ್ಟ್‌ ಒಪ್ಪಿಗೆ ಪಡೆಯಲಿದೆ.

‘ಹಣ ಸಂಗ್ರಹ ಸ್ಥಗಿತಕ್ಕೆ ಮನವಿ’
ಅದಿರು ಹರಾಜಿನಿಂದ ಬರುವ ಭಾಗಶಃ ಹಣವನ್ನು ಆರ್‌ ಅಂಡ್‌ ಆರ್‌ ಯೋಜನೆಗೆ ಸಂಗ್ರಹಿಸುವುದನ್ನು ಸದ್ಯಕ್ಕೆ ನಿಲ್ಲಿಸುವಂತೆ ಫಿಮಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಇದುವರೆಗೆ ಸಂಗ್ರಹಿಸಿರುವ ಹಣದಲ್ಲಿ ನಯಾಪೈಸೆಯೂ ಖರ್ಚಾಗಿಲ್ಲ. ಈ ಹಣ ಬಳಕೆಯಾಗುವವರೆಗೂ ಸಂಗ್ರಹ ‍ಪ್ರಕ್ರಿಯೆ ಸ್ಥಗಿತಗೊಳಿಸಬೇಕು ಎಂದು ಮನವಿ ಮಾಡಿದೆ. ಅರ್ಜಿ ವಿಚಾರಣೆಗೆ ಬಂದ ಬಳಿಕ ರಾಜ್ಯ ಸರ್ಕಾರ ಆಕ್ಷೇಪ ಸಲ್ಲಿಸುವ ಸಾಧ್ಯತೆಯಿದೆ.

***

ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ದೊಡ್ಡ ಪ್ರಮಾಣದಲ್ಲಿ ಹಣ ಸಂಗ್ರಹಿಸಲಾಗಿದೆ. ಅದನ್ನು ಸಂತ್ರಸ್ತರಿಗೆ ತಲುಪಿಸಲು ಸೂಕ್ತ ಯೋಜನೆಯೇ ಇಲ್ಲ
ಎಸ್‌.ಆರ್‌. ಹಿರೇಮಠ,ಸಮಾಜ ಪರಿವರ್ತನಾ ಸಮುದಾಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !