ಮಂಗಳವಾರ, ನವೆಂಬರ್ 12, 2019
27 °C
ಇಂದು ಹುಣಸಿಹೊಳೆಯಲ್ಲಿ ದೀಕ್ಷಾ ಕಾರ್ಯಕ್ರಮ ಆರಂಭ

ಕಣ್ಣಮಠದ ನೂತನ ಪೀಠಾಧಿಪತಿಯಾಗಿ ರವೀಂದ್ರಾಚಾರ್ಯ 

Published:
Updated:
Prajavani

ಸುರಪುರ: ತಾಲ್ಲೂಕಿನ ಹುಣಸಿಹೊಳೆಯಲ್ಲಿರುವ ಕಣ್ವಮಠದ ನೂತನ ಪೀಠಾಧಿಕಾರಿಯನ್ನಾಗಿ ರವೀಂದ್ರಾಚಾರ್ಯ ಜೋಷಿ ಅವರ ಹೆಸರನ್ನು ಬುಧವಾರ ಸುರಪುರ ಅರಮನೆಯಲ್ಲಿ ಸಂಸ್ಥಾನಿಕ ರಾಜಾ ಕೃಷ್ಣಪ್ಪನಾಯಕ ಘೋಷಿಸಿದರು.

ಪತ್ರಿಕಾಗೋಷ್ಠಿ ನಡೆಸಿದ ಅವರು, ‘1796ರಲ್ಲಿ ಮಾಧವತೀರ್ಥರು ನಮ್ಮ ಪೂರ್ವಜರಾದ ರಾಜಾ ಇಮ್ಮಡಿ ವೆಂಕಟಪ್ಪನಾಯಕ ಅವರ ರಾಜಾಶ್ರಯದಲ್ಲಿ ಕಣ್ವಮಠ ಸ್ಥಾಪನೆ ಮಾಡಿದರು’ ಎಂದು ತಿಳಿಸಿದರು.

‘ಅಲ್ಲಿಂದ ಇಲ್ಲಿವರೆಗೂ ನಮ್ಮ ಸಂಸ್ಥಾನಿಕರು ಮಠದ ಪೋಷಕರಾಗಿದ್ದಾರೆ. ಈಗಿನ ಪೀಠಾಧಿಪತಿ ವಿದ್ಯಾವಾರಿಧಿ ತೀರ್ಥರು ಪೀಠತ್ಯಾಗ ಮಾಡಲು ಮುಂದಾಗಿದ್ದರಿಂದ ನೂತನ ಪೀಠಾಧಿಕಾರಿ ನೇಮಕದ ಜವಾಬ್ದಾರಿಯನ್ನು ಕಣ್ವ ಅನುಯಾಯಿಗಳು ನನಗೆ ನೀಡಿದ್ದರು’ ಎಂದರು.

‘ಈಚೆಗೆ ಕಣ್ವಮಠದಲ್ಲಿ ಕಣ್ವ ಅನುಯಾಯಿಗಳು ಸಭೆ ಸೇರಿ ರವಿಂದ್ರಾಚಾರ್ಯ ಸೇರಿದಂತೆ, ರಾಮಾಚಾರ್ಯ ಹೊಸಪೇಟೆ ಇತರರ ಹೆಸರನ್ನು ನನ್ನ ಬಳಿ ಕೊಟ್ಟಿದ್ದರು’ ಎಂದು ತಿಳಿಸಿದರು.

‘ಇವರೆಲ್ಲರ ಜಾತಕ, ಭವಿಷ್ಯ, ವಿದ್ಯಾಭ್ಯಾಸ, ವೇದಾಧ್ಯಯನ, ಪಾಂಡಿತ್ಯ, ಪೀಠವನ್ನು ಮುನ್ನಡೆಸಿಕೊಂಡು ಹೋಗುವ, ಕಣ್ವ ಪರಂಪರೆ ಉಳಿಸಿಕೊಂಡುವ ಹೋಗುವ ಸಾಮಥ್ರ್ಯ ಪರಿಗಣಿಸಿ, ಸಾಕಷ್ಟು ಅಧ್ಯಯನ ಮಾಡಿ ರವೀಂದ್ರಾಚಾರ್ಯ ಅವರ ಹೆಸರನ್ನು ಅಂತಿಮಗೊಳಿಸಲಾಯಿತು’ ಎಂದು ಹೇಳಿದರು.

ರಾಜಾ ಲಕ್ಷ್ಮೀನಾರಾಯಣನಾಯಕ, ರಾಜಾ ರಂಗಪ್ಪನಾಯಕ ಸುಂಡಿ, ಕೇದಾರನಾಥ ಶಾಸ್ತ್ರಿ, ಗಣೇಶ ಜಾಗೀರದಾರ, ಸುನಿಲ ಸರಪಟ್ಟಣಶೆಟ್ಟಿ, ವಾಸುದೇವನಾಯಕ ಸರ್ ಹವಾಲ್ದಾರ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

***
ನೂತನಶ್ರೀಗಳ ಪರಿಚಯ
ಹೆಸರು: ರವೀಂದ್ರಾಚಾರ್ಯ ನರಸಿಂಹಾಚಾರ್ಯ ಜೋಷಿ
ಪತ್ನಿ: ಸವಿತಾ ಜೋಷಿ
ಪುತ್ರ: ಉಲ್ಲಾಸ ಜೋಷಿ
ಗೋತ್ರ: ಕೌಡಿಣ್ಯ
ವೇದ: ಶುಕ್ಲ ಯಜುರ್ವೇದ
ಸೂತ್ರ: ಕಾತ್ಯಾಯನ ಸೂತ್ರ
ಜನ್ಮಸ್ಥಳ: ಇಳಕಲ್
ಜನ್ಮ ದಿನಾಂಕ : 14-03-1957
ಅಭ್ಯಾಸ: ಎಸ್ಸೆಸ್ಸೆಲ್ಸಿ
ವೇದಾಧ್ಯಯನ: ಶುಕ್ಲ ಯಜುರ್ವೇದ, ಬೃಹದಾಕಾರಣ್ಯೋಪನಿಷತ್, ಯಾಜ್ಞವಲ್ಕ್ಯ ಸ್ಮುತಿ, ತರ್ಕಶಾಸ್ತ್ರ, ಸುಧಾಪಾಠ
ಸದ್ಯದ ಸೇವೆ: ಬೆಂಗಳೂರಿನ ಯಶವಂತಪುರದ ಮಹಾಗಣಪತಿ ದೇವಸ್ಥಾನದ ಅರ್ಚಕ

***
ನೂತನ ಯತಿಗಳು ಕಣ್ವಮಠ ಪರಂಪರೆ ಮತ್ತು ಸುರಪುರ ಸಂಸ್ಥಾನದ ಅವಿವಾನಾಭಾವ ಸಂಬಂಧ ಮುಂದುವರೆಸಿಕೊಂಡು ಹೋಗಬೇಕು.
- ರಾಜಾ ಕೃಷ್ಣಪ್ಪನಾಯಕ, ಸಂಸ್ಥಾನಿಕ

ಪ್ರತಿಕ್ರಿಯಿಸಿ (+)