ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜೆ ಕೇಳಿದ್ದಕ್ಕೆ ಕೊಂದು ಶವ ಸುಟ್ಟರು!

ಪೇಯಿಂಗ್ ಗೆಸ್ಟ್ ಮಾಲೀಕ ಸೇರಿ ಮೂವರ ಸೆರೆ
Last Updated 12 ಏಪ್ರಿಲ್ 2018, 19:18 IST
ಅಕ್ಷರ ಗಾತ್ರ

ಬೆಂಗಳೂರು: ರಜೆ ಹಾಗೂ ಸಂಬಳದ ವಿಚಾರಕ್ಕೆ ಜಗಳ ಮಾಡಿದ ಅಡುಗೆ ಕೆಲಸಗಾರನನ್ನು ಹತ್ಯೆಗೈದು, ಶವ ಸುಟ್ಟು ಹಾಕಿದ್ದ ಪೇಯಿಂಗ್ ಗೆಸ್ಟ್ ಕಟ್ಟಡದ ಮಾಲೀಕ ಸೇರಿ ಮೂವರು ಮಾರತ್ತಹಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಏ.7ರ ಬೆಳಿಗ್ಗೆ 7.45ರ ಸುಮಾರಿಗೆ ಕೆಂಪಾಪುರ ರಸ್ತೆಯ ಏರ್‌ವ್ಯೂವ್ ಕಾಂಪೌಂಡ್‌ ಬಳಿ ಅಪರಿಚಿತ ವ್ಯಕ್ತಿಯ ಶವ ಅರೆಬೆಂದ ಸ್ಥಿತಿಯಲ್ಲಿ ಪತ್ತೆ
ಯಾಗಿತ್ತು. ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ ಮಾರತ್ತಹಳ್ಳಿ ಪೊಲೀಸರು, ಸಿ.ಸಿ ಟಿ.ವಿ ಕ್ಯಾಮೆರಾ ಹಾಗೂ ಕಾರಿನ ಮೇಲಿದ್ದ ಸ್ಟಿಕ್ಕರ್‌ನ ಸುಳಿವಿನಿಂದ ಕೊಲೆ ರಹಸ್ಯ ಭೇದಿಸಿದ್ದಾರೆ.

‘ಆಂಧ್ರಪ್ರದೇಶದ ಮುರಳಿ (28) ಕೊಲೆಯಾದವರು. ಪ್ರಕರಣ ಸಂಬಂಧ ಕಾಡುಬೀಸನಹಳ್ಳಿಯ ‘ಸೆವೆನ್‌ ಹಿಲ್ಸ್‌’ ಪೇಯಿಂಗ್ ಗೆಸ್ಟ್‌ ಕಟ್ಟಡದ ಮಾಲೀಕ ರಾಮಿರೆಡ್ಡಿ (52), ವ್ಯವಸ್ಥಾಪಕ ಮಹೇಶ್‌ ರೆಡ್ಡಿ (22) ಹಾಗೂ ಅಲ್ಲಿನ ನಿವಾಸಿ ವಿನೀತ್‌ (22) ಅವರನ್ನು ಬಂಧಿಸಿದ್ದೇವೆ’ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದರು.

ಎರಡು ತಿಂಗಳಿನಿಂದ ಈ ಪಿ.ಜಿ.ಕಟ್ಟಡದಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಮುರಳಿ, ರಜೆ ಹಾಗೂ ಸಂಬಳದ ವಿಚಾರಕ್ಕೆ ಆಗಾಗ್ಗೆ ಮಾಲೀಕರೊಂದಿಗೆ ಗಲಾಟೆ ಮಾಡುತ್ತಿದ್ದರು. ಏ.6ರ ಸಂಜೆ ಸಹ ಇದೇ ವಿಚಾರಕ್ಕೆ ಶುರುವಾದ ಜಗಳವು, ಮುರಳಿ ಕೊಲೆಯಲ್ಲಿ ಅಂತ್ಯಕಂಡಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಕುಡಿಸಿ ಕೊಂದರು: ಮುರಳಿ, ಏಪ್ರಿಲ್ 6ರ ರಾತ್ರಿ ಆರೋಪಿಗಳ ಜತೆಯಲ್ಲೇ ಮದ್ಯಪಾನ ಮಾಡಿದ್ದರು. ಪಾನಗೋಷ್ಠಿ ಮುಗಿದ ನಂತರ, ‘ಬೆಳಿಗ್ಗೆ ಊರಿಗೆ ಹೋಗುತ್ತಿದ್ದೇನೆ. ನನಗೆ ಒಂದು ವಾರ ರಜೆ ಕೊಡಿ. ಹಾಗೆಯೇ ಬಾಕಿ ಉಳಿಸಿಕೊಂಡಿರುವ ಮಾರ್ಚ್ ತಿಂಗಳ ಸಂಬಳವನ್ನೂ ಕೊಡಿ’ ಎಂದು ಮಾಲೀಕರಿಗೆ ಮನವಿ ಮಾಡಿದ್ದರು. ಆದರೆ, ‘ಸದ್ಯ ರಜೆ ಕೊಡಲ್ಲ’ ಎಂದು ಅವರು ಹೇಳಿದ್ದರು.

ಇದರಿಂದ ವಾಗ್ವಾದ ನಡೆದು, ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಮಾಲೀಕರ ಕೊರಳಪಟ್ಟಿಗೆ ಕೈ ಹಾಕಿದ ಮುರಳಿ ವರ್ತನೆಯಿಂದ, ಕುಪಿತಗೊಂಡ ವ್ಯವಸ್ಥಾಪಕ ಹಾಗೂ ಕಟ್ಟಡದ ನಿವಾಸಿ ವಿನೀತ್, ಅವರನ್ನು ಎಳೆದು ಹಾಕಿ ಮನಸೋಇಚ್ಛೆ ಹಲ್ಲೆ ನಡೆಸಿದ್ದರು. ‘ನನ್ನ ಮೇಲೆಯೇ ಮಾಡುತ್ತೀಯಾ’ ಎನ್ನುತ್ತಾ ರಾಮಿರೆಡ್ಡಿ ಸಹ ಕಾಲಿನಿಂದ ಒದ್ದಿದ್ದರು. ಬೆನ್ನಿಗೆ ಗುದ್ದಿದಾಗ ಉಸಿರಾಟದ ತೊಂದರೆ ಉಂಟಾಗಿ ಮುರಳಿ ಸ್ಥಳದಲ್ಲೇ ನೆಯುಸಿರೆಳೆದಿದ್ದರು.

ಇದರಿಂದ ಗಾಬರಿಗೆ ಬಿದ್ದ ಆರೋಪಿಗಳು, ವೈರ್‌ನಿಂದ ಕೈ–ಕಾಲು ಕಟ್ಟಿ ಶವವನ್ನು ಮೂಟೆಯಲ್ಲಿ ತುಂಬಿ ಕೊಠಡಿ ಸ್ವಚ್ಛಗೊಳಿಸಿದ್ದರು. ನಂತರ ರಾತ್ರಿ 1.30ರ ಸುಮಾರಿಗೆ ‘Driv-Zy’ ಟ್ರಾವೆಲ್ಸ್‌ ಏಜೆನ್ಸಿಗೆ ತೆರಳಿದ್ದ ಮಹೇಶ್‌ರೆಡ್ಡಿ, ₹ 10 ಸಾವಿರ ಮುಂಗಡ ಕೊಟ್ಟು ‘ಸ್ವಿಫ್ಡ್ ಡಿಸೈರ್’ ಕಾರನ್ನು ಬಾಡಿಗೆಗೆ ತಂದಿದ್ದ. ಕಾರಿನಲ್ಲಿ ಶವ ಹಾಕಿಕೊಂಡು ಹೊರಟ ಆರೋಪಿಗಳು, ಹಳೇ ವಿಮಾನ ನಿಲ್ದಾಣ ರಸ್ತೆಯ ‘ಭಾರತ್ ಪೆಟ್ರೋಲಿಯಂ’ ಬಂಕ್‌ನಲ್ಲಿ ಕಾರಿಗೆ ಹಾಗೂ ಶವ ಸುಡಲು ಒಂದು ಕ್ಯಾನಿಗೆ ಪೆಟ್ರೋಲ್ ತುಂಬಿಸಿದ್ದರು. ನಂತರ ಕೆಂಪಾಪುರ ರಸ್ತೆಯ ಏರ್‌ವ್ಯೂವ್ ಕಾಂಪೌಂಡ್‌ ಬಳಿ ದೇಹವನ್ನು ಸುಟ್ಟು ಹಾಕಿ, ಬೆಳಿಗ್ಗೆ 7.30ರ ಸುಮಾರಿಗೆ ಕಾರನ್ನು ಏಜೆನ್ಸಿಗೆ ಹಿಂದಿರುಗಿಸಿದ್ದರು.

ಕಾರ್ ಸ್ಟಿಕ್ಕರ್ ಸುಳಿವು: ಹಂತಕರ ಪತ್ತೆಗೆ ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಮೂರು ವಿಶೇಷ ತಂಡಗಳನ್ನು ರಚಿಸಿದ್ದರು. ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಿದ ಪೊಲೀಸರಿಗೆ, ಏ.7ರ ನಸುಕಿನ ವೇಳೆ (ಸಮಯ 4.13)  ಏರ್‌ವ್ಯೂವ್ ಕಾಂಪೌಂಡ್ ಬಳಿ ಒಂದು ಕಾರು ಬಂದಿದ್ದು ಗೊತ್ತಾಯಿತು.

‘ಆ ಕಾರಿನ ನೋಂದಣಿ ಸಂಖ್ಯೆ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಆದರೆ, ಅದರ ಮೇಲೆ ‘Zoom..' ಎಂಬ ಸ್ಟಿಕ್ಕರ್ ಇರುವುದು ಸ್ಪಷ್ಟವಾಯಿತು. ಆ ಸುಳಿವು ಆಧರಿಸಿ ಕೆಂಪಾಪುರ, ಚಳ್ಳಘಟ್ಟ ರಸ್ತೆ, ಹಳೇ ವಿಮಾನ ನಿಲ್ದಾಣ ರಸ್ತೆ, ಎಚ್‌ಎಎಲ್... ಹೀಗೆ, ಸುತ್ತಮುತ್ತಲ ಸ್ಥಳಗಳ ಸುಮಾರು 250 ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಿದೆವು. ಆಗ ಆ ಸ್ಟಿಕ್ಕರ್ ಇರುವ ಕಾರು, 2.45ರ ಸುಮಾರಿಗೆ ‘ಭಾರತ್ ಪೆಟ್ರೋಲಿಯಂ’ ಬಂಕ್‌ಗೆ ಹೋಗಿರುವುದು ಗೊತ್ತಾಯಿತು’ ಎಂದು ತನಿಖಾಧಿಕಾರಿಗಳು ವಿವರಿಸಿದರು.

‘ಬಂಕ್‌ನ ಸಿ.ಸಿ ಟಿ.ವಿ ಕ್ಯಾಮೆರಾ ಪರಿಶೀಲಿಸಿದಾಗ, ಕಾರಿನ ಮೇಲೆ ‘Drive-Zy’ ಎಂಬ ಇನ್ನೊಂದು ಸ್ಟಿಕ್ಕರ್ ಇರುವುದು ಗೊತ್ತಾಯಿತು. ಆ ಸುಳಿವಿನಿಂದ ಇಂದಿರಾನಗರದ ಏಜೆನ್ಸಿಗೆ ತೆರಳಿ ವಿಚಾರಿಸಿದಾಗ ಕಾರು ಬಾಡಿಗೆ ಪಡೆದಿದ್ದವರ ಹೆಸರು–ವಿಳಾಸ ಸಿಕ್ಕಿತು.  ಕೃತ್ಯ ಎಸಗಿದ ನಂತರ ಆರೋಪಿಗಳು ಮೊಬೈಲ್ ಸ್ವಿಚ್ಡ್‌ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದರು. ಮೊಬೈಲ್ ಕರೆ ವಿವರ ಆಧರಿಸಿ, ಒಬ್ಬೊಬ್ಬರನ್ನೇ ವಶಕ್ಕೆ ಪಡೆಯಲಾಯಿತು’ ಎಂದು ಮಾಹಿತಿ ನೀಡಿದರು.

‘ನಾಲ್ಕೈದು ಏಟಿಗೇ ಸತ್ತು ಹೋದ’

‘ಮುರಳಿಯನ್ನು ಕೊಲ್ಲುವ ಉದ್ದೇಶ ಇರಲಿಲ್ಲ. ಕಟ್ಟಡದಲ್ಲಿ 40 ಮಂದಿ ವಾಸವಾಗಿದ್ದಾರೆ. ಅಡುಗೆ ಕೆಲಸಗಾರ ದಿಢೀರ್ ರಜೆ ಹೋದರೆ, ಎಲ್ಲರಿಗೂ ತೊಂದರೆಯಾಗುತ್ತಿತ್ತು. ಈ ಕಾರಣದಿಂದ ರಜೆ ಕೊಡಲು ಸಾಧ್ಯವಿಲ್ಲ ಎಂದು ಹೇಳಿದರೂ, ಅವನು ಕೇಳಲಿಲ್ಲ. ಮೊದಲೇ ಕುಡಿದ ಮತ್ತಿನಲ್ಲಿದ್ದ ನಾವು, ಆತ ಜೋರು ಜೋರಾಗಿ ಮಾತನಾಡುತ್ತಿದ್ದರಿಂದ ಕೋಪದ ಭರದಲ್ಲಿ ನಾಲ್ಕೈದು ಏಟು ಹೊಡೆದೆವು. ಅಷ್ಟಕ್ಕೇ ಆತ ಸತ್ತು ಹೋದ‘ ಎಂದು ರಾಮಿರೆಡ್ಡಿ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT