ಶುಕ್ರವಾರ, ಜುಲೈ 30, 2021
28 °C

ಭಾವುಕ ಶ್ರದ್ಧಾಂಜಲಿ | ಅಪ್ಪನ ನೆನೆದ ರಘು ಕಾರ್ನಾಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾಹಿತಿ, ನಾಟಕ ರಚನಕಾರ, ನಟ ಗಿರೀಶ ಕಾರ್ನಾಡರು ನಿಧನರಾದ ನಾಲ್ಕು ದಿನಗಳ ನಂತರ ಅವರ ಪುತ್ರ ರಘು ಕಾರ್ನಾಡ ಅವರು ತಮ್ಮ ತಂದೆಯ ಕುರಿತು ಭಾವನಾತ್ಮಕ ಬರಹವೊಂದನ್ನು ಸಾಮಾಜಿಕ ತಾಣ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ. 

ಫೇಸ್‌ಬುಕ್‌ ಪೋಸ್ಟ್‌ನ ಕನ್ನಡ ಅನುವಾದ 

ಆ ಚಿತ್ರ ನನ್ನ ಮನಸ್ಸಿನಲ್ಲಿ ಬೇರೂರಿ ನಿಂತಿದೆ. ನನ್ನಪ್ಪ ಕೂರುತ್ತಿದ್ದ ಸೋಫಾದ ಜಾಗ, ವಿಸ್ಕಿಯ ಗ್ಲಾಸಿನ ಮೇಲೆ ಆಡುತ್ತಿದ್ದ ಅವರ ಕೈ, ಇತಿಹಾಸದ ಮೆಲುಕು, ಜನಪದ, ತತ್ವಜ್ಞಾನ, ದಂತಕತೆ... ಅವರೇ ನಾನು ಪ್ರೀತಿಸಿದ ವ್ಯಕ್ತಿ.

ನನ್ನ ತಂದೆಯ ಸಮಯಪ್ರಜ್ಞೆಯ ಬಗ್ಗೆ ಅವರ ಬಹುತೇಕ ಸ್ನೇಹಿತರು ಮಾತನಾಡುತ್ತಾರೆ. ನಮ್ಮ ಸ್ನೇಹಿತರೊಬ್ಬರ ಮದುವೆಯ ಸಲುವಾಗಿ ನಾನು ನನ್ನ ಸಹೋದರಿ ಕಳೆದ ವಾರಾಂತ್ಯದಲ್ಲಿ ಮನೆಯಲ್ಲಿದ್ದೆವು. ಶನಿವಾರ ಸಂಜೆ ಅರ್ಷಿಯಾ ಸತ್ತರ್‌ ಅವರ ಜತೆಗೆ ನನ್ನ ತಂದೆ ಒಂದು ಹಂತದ ಆಡಿಯೋ ಸಂದರ್ಶನವನ್ನು ಪೂರ್ಣಗೊಳಿಸಿದ್ದರು.

ಭಾನುವಾರ ಸಂಜೆ ಹೊತ್ತಿಗೆ ಕುಟುಂಬದ ಮಂದಿಯೆಲ್ಲ ಮಹಡಿ ಮೇಲೆ ಕುಳಿತು ಚೆನ್ನಾಗಿ ಬಿಸಿಲು ಕಾದೆವು. ಅವರಿಗೆ ನಾನು ಫಿಸಿಯೊ ನೀಡಿದೆ. ನನ್ನ ಸಹೋದರಿ ಅಪ್ಪನ ಉಗುರುಗಳನ್ನು ಕತ್ತರಿಸಿದ್ದಳು. ಈ ವೇಳೆ ಅವರು ನಮ್ಮೊಂದಿಗೆ ತಮ್ಮ ಆರೋಗ್ಯ ಸಮಸ್ಯೆಗಳ ಕುರಿತು ಕೆಲ ಹೊಸ ವಿಷಯಗಳನ್ನು ಹಂಚಿಕೊಂಡಿದ್ದರು. ಅದು ದುಃಖದ ಸಂಗತಿ, ಅದಕ್ಕಿಂತಲೂ ದುಃಖದ ವಿಚಾರವೆಂದರೆ ಸೋಮವಾರ ಬೆಳಗ್ಗೆ ಅವರು ನಿಧನರಾದರು.

ಅವತ್ತಿನಿಂದಲೂ ಅಪ್ಪನೆಡೆಗಿನ ಕೃತಜ್ಞತೆ ನನ್ನನ್ನು ತುಂಬಿಕೊಂಡಿದೆ. ಮನೆ ಮತ್ತು ನನ್ನ ಮನಸ್ಸು ಅಡೆತಡೆಯಿಲ್ಲದೆ ಕೊಂಕಣಿ, ಕನ್ನಡ, ತಮಿಳು, ಮಲಯಾಳಂ, ಇಂಗ್ಲಿಷ್‌, ಹಿಂದಿ ಹೀಗೆ ಭಾಷೆಗಳೊಂದಿಗೆ ಗಿರಕಿ ಹೊಡೆಯುತ್ತಿದೆ. ನಮ್ಮೆಲ್ಲರಲ್ಲೂ ಅವರ ಬಗ್ಗೆ ಪ್ರೀತಿ, ನೆಮ್ಮದಿ ಕೃತಜ್ಞತೆಗಳ ಭಾವ ತುಂಬಿಕೊಂಡಿದೆ. ಅಪ್ಪನ ಬದುಕು ಮತ್ತು ಕೃತಿಗಳಿಂದ ಬದುಕು ಕಟ್ಟಿಕೊಂಡವರು ಕಳಿಸುತ್ತಿರುವ ಹಲವು ಮೆಸೇಜುಗಳನ್ನು ನೋಡಿದೆ. ಅವರೆಲ್ಲರಿಗೂ ಧನ್ಯವಾದಗಳು. ಇದಕ್ಕೆ ಪೂರ್ತಿ ಉಲ್ಟಾ ಕೂಡ ನಿಜ.

ಅವರ ಬದುಕು ಶ್ರೀಮಂತವಾದದ್ದು ಮತ್ತು ಉತ್ತುಂಗಕ್ಕೇರಿದ್ದು ಅವರ ಗುರುಗಳು, ಶಿಕ್ಷಕರು, ಅತ್ತೆಯರು ಮತ್ತು ಸಹೋದರಿಯರು, ಸ್ನೇಹಿತರು, ಸಹೋದ್ಯೋಗಿಗಳು, ನಿರ್ದೇಶಕರು, ವಿದ್ಯಾರ್ಥಿಗಳು, ಪ್ರಕಾಶಕರು, ನಟರು, ಓದುಗರು, ವಿರೋಧಿಗಳು, ಒಡನಾಡಿಗಳು, ಕೆಲ ಪ್ರಮುಖ ಚಾಲಕರು ಮತ್ತು ಕೆಲ ಕುಡಿತದ ಜೊತೆಗಾರರಿಂದ. ಕಳೆದ ಕೆಲ ವಾರಗಳಿಂದ ಅಷ್ಟೇ ಅಲ್ಲ, ಕೆಲ ಗಂಟೆಗಳ ಮುಂಚಿನವರೆಗೂ ನಾನು ಅಂಥ ಹಲವು ಹೆಸರುಗಳನ್ನು ಕೇಳಿಸಿಕೊಂಡಿದ್ದೇನೆ. ಅವರಂಥ (ನನ್ನಪ್ಪನಂಥ) ಅಸಾಧಾರಣ ವ್ಯಕ್ತಿಯನ್ನು ರೂಪಿಸಿದ ಎಲ್ಲರಿಗೂ ಧನ್ಯವಾದಗಳು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು