ಮೂರೂವರೆ ಕೆ.ಜಿ ಮುದ್ದೆ ಮೆದ್ದ ಮಲ್ಲ!

7
9ನೇ ಸ್ಪರ್ಧೆ ಗೆದ್ದ ಅರಕೆರೆ ರೈತ

ಮೂರೂವರೆ ಕೆ.ಜಿ ಮುದ್ದೆ ಮೆದ್ದ ಮಲ್ಲ!

Published:
Updated:
ರಾಗಿ ಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮೀಸೆ ಈರೇಗೌಡ

ಮಂಡ್ಯ: ತಾಲ್ಲೂಕಿನ ಮಂಗಲ ಗ್ರಾಮದ ರಂಗದಬೀದಿಯಲ್ಲಿ ಭಾನುವಾರ ನಡೆದ ನಾಟಿಕೋಳಿ ಸಾಂಬಾರ್‌ ಜೊತೆ ರಾಗಿ ಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಗ್ರಾಮದ ಮೀಸೆ ಈರೇಗೌಡ ಅವರು ಆರೂವರೆ ಮುದ್ದೆ (3.5 ಕೆ.ಜಿ) ಉಂಡು ಬಹುಮಾನ ಗೆದ್ದಿದ್ದಾರೆ.

ಕಿಕ್ಕಿರಿದು ತುಂಬಿದ್ದ ಗ್ರಾಮೀಣ ಜನರ ಸಮ್ಮುಖದಲ್ಲಿ ಯಾವುದೇ ಒತ್ತಡಕ್ಕೆ ಒಳಗಾಗದೆ, ಆವೇಶಕ್ಕೀಡಾಗದೆ ಅಂಗೈ ತುಂಬಾ ಮುದ್ದೆ ಮುರಿದು ಬಾಯಿಗಿಡುತ್ತಾ ಹೋದರು. ಆಗಾಗ, ಮುಖವನ್ನು ಆವರಿಸಿಕೊಂಡಿದ್ದ ಗಿರಿಜಾ ಮೀಸೆ ತಿರುವಿದರು, ದಾಡಿ ನೇವರಿಸಿಕೊಂಡರು. ಐದು ಮುದ್ದೆ ತಿಂದು ಮುಗಿಸಿ ಒಂದು ಲೋಟ ನೀರು ಕುಡಿದರು. ನಂತರ ಒಂದೂವರೆ ಮುದ್ದೆ ಉಂಡರು.

ನಿಗದಿತ 20 ನಿಮಿಷ ಮುಗಿಯುವುದರೊಳಗೆ ತಲಾ ಅರ್ಧ ಕೆ.ಜಿ ಇದ್ದ ಆರೂವರೆ ಮುದ್ದೆ ತಿಂದರು. ಆ ಮೂಲಕ ಪ್ರಥಮ ಬಹುಮಾನ ತಮ್ಮದಾಗಿಸಿಕೊಂಡರು. ಕೆಲ ಸ್ಪರ್ಧಿಗಳು ಮುದ್ದೆ ತಿಂದು ಅರಗಿಸಿಕೊಳ್ಳಲಾಗದೆ ವಾಂತಿ ಮಾಡಿಕೊಂಡರು. ಕೆಲವರು ಉಣ್ಣಲಾಗದೆ ಸ್ಪರ್ಧೆಯಿಂದ ಎದ್ದು ಹೋದರು. ಆದರೆ 57 ವರ್ಷ ವಯಸ್ಸಿನ ಮೀಸೆ ಈರೇಗೌಡರು ಎಲ್ಲರಿಗಿಂತಲೂ ಮೊದಲು ಉಂಡು ಮುಗಿಸಿದರು. ಈರೇಗೌಡರಿಗೆ ಇದು 9ನೇ ಬಹುಮಾನ. ಜಿಲ್ಲೆಯ ವಿವಿಧೆಡೆ ನಡೆದ 8 ಸ್ಪರ್ಧೆಗಳಲ್ಲಿ ಈಗಾಗಲೇ ಪ್ರಥಮ ಬಹುಮಾನ ಪಡೆದು ದಾಖಲೆ ನಿರ್ಮಿಸಿದ್ದಾರೆ.

ಪುರಾಣಗಳಲ್ಲಿ ‘ರಾಮಧಾನ್ಯ’ ಎನಿಸಿಕೊಂಡಿರುವ ರಾಗಿ ಆರೋಗ್ಯದ ದೃಷ್ಟಿಯಿಂದ ಇತ್ತೀಚೆಗೆ ಪ್ರಸಿದ್ಧಿ ಪಡೆಯುತ್ತಿರುವುದು ಈ ಸ್ಪರ್ಧೆಯಿಂದ ವ್ಯಕ್ತವಾಯಿತು. ಜಿಲ್ಲಾಮಟ್ಟದ ಸ್ಪರ್ಧೆಯಾಗಿ ಆಯೋಜನೆಗೊಂಡಿದ್ದ ಕಾರ್ಯಕ್ರಮ ನಂತರ ರಾಗಿ ಉಣ್ಣುವ ಹಲವು ಜಿಲ್ಲೆಗಳಿಗೂ ವಿಸ್ತರಣೆಗೊಂಡಿತ್ತು. ಮೈಸೂರು, ಹಾಸನ,  ರಾಮನಗರ, ಕನಕಪುರದಿಂದಲೂ 65 ಸ್ಪರ್ಧಿಗಳು ಭಾಗವಹಿಸಿದ್ದರು. ಕಾಗೆಹಳ್ಳದದೊಡ್ಡಿಯ ಜಯಮ್ಮ ಅವರೂ ಸ್ಪರ್ಧೆಯಲ್ಲಿ ಪಾಲ್ಗೊಂಡು 2 ಮುದ್ದೆ ತಿಂದು ಆಶ್ಚರ್ಯ ಮೂಡಿಸಿದರು. ಹೈಕೋರ್ಟ್‌ ವಕೀಲ ಜಿ.ಎನ್‌.ಉಮೇಶ್‌ ಅವರೂ ಎರಡು ಮುದ್ದೆ ತಿಂದರು.

ವಿಜೇತರು: ಪ್ರಥಮ ಬಹುಮಾನ ಪಡೆದ ಮೀಸೆ ಈರೇಗೌಡರು ₹ 5 ಸಾವಿರ ನಗದು ಬಹುಮಾನ ಹಾಗೂ ಪಾರಿತೋಷಕ ಪಡೆದರು. ಮದ್ದೂರು ತಾಲ್ಲೂಕು, ಚಿಕ್ಕರಸಿನಕೆರೆಯ ಸುರೇಶ್‌ 6 ಮುದ್ದೆ ತಿಂದು ₹ 3 ಸಾವಿರ (ದ್ವಿತೀಯ) ನಗದು ಬಹುಮಾನ ಪಡೆದರು. ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ರಾಮಮೂರ್ತಿ ಐದೂವರೆ ಮುದ್ದೆ ತಿಂದು ₹ 2 ಸಾವಿರ (ತೃತೀಯ) ನಗದು ಬಹುಮಾನ ಪಡೆದರು.

ಎಚ್‌.ಡಿ.ಕೋಟೆ ತಾಲ್ಲೂಕಿನ ಯೋಗೇಶ್‌, ಶ್ರೀರಂಗಪಟ್ಟಣ ತಾಲ್ಲೂಕಿನ ನಾಗೇಶ್‌, ಕಾರಸವಾಡಿಯ ಶಂಕರೇಗೌಡ, ಅಂಬರಹಳ್ಳಿಯ ನಂದೀಶ್‌ ಸಮಾಧಾನಕರ ಬಹುಮಾನ ಪಡೆದರು. ಅವರಿಗೆ ತಲಾ ₹ 1 ಸಾವಿರ ನಗದು ಬಹುಮಾನ ವಿತರಣೆ ಮಾಡಲಾಯಿತು.

ಪ್ರಥಮ ಬಹುಮಾನ ಪಡೆದ ಮೀಸೆ ಈರೇಗೌಡರು ಸೂನಗಹಳ್ಳಿ ರಾಜು ನಿರ್ದೇಶನದ ‘ಆನೆಬಲ’ ಚಲನಚಿತ್ರದಲ್ಲಿ ಅಭಿನಯಿಸುವ ಅವಕಾಶ ಪಡೆದರು. ಜನತಾ ಟಾಕೀಸ್‌, ನಮ್ಮ ಹೈಕ್ಳು ತಂಡ ಹಾಗೂ ನೆಲದನಿ ಬಳಗದ ಸದಸ್ಯರು ಸ್ಪರ್ಧೆ ಏರ್ಪಡಿಸಿದ್ದರು.

***

ನನಗೆ ಮಾತನಾಡಲು ಬರುವುದಿಲ್ಲ. ಬೇಕಿದ್ದರೆ ಇನ್ನೂ ಎರಡು ಮುದ್ದೆ ಕೊಡಿ, ಉಂಡು ತೋರಿಸುತ್ತೇನೆ. ಕೂಲಿ ಕೆಲಸ ಮಾಡುವ ನಾನು ಮುದ್ದೆ ತಿಂದೇ ಬೆಳೆದಿದ್ದೇನೆ
–ಮೀಸೆ ಈರೇಗೌಡ, ಪ್ರಥಮ ಬಹುಮಾನ ಪಡೆದ ಸ್ಪರ್ಧಿ
 

ಬರಹ ಇಷ್ಟವಾಯಿತೆ?

 • 32

  Happy
 • 3

  Amused
 • 0

  Sad
 • 3

  Frustrated
 • 1

  Angry

Comments:

0 comments

Write the first review for this !