ಸೀಟು ಹಂಚಿಕೆ: ಫಲಪ್ರದವಾಗದ ಮಾತುಕತೆ; ನಿರ್ಧಾರಕ್ಕೆ ಬಾರದ‌ ಸಭೆ

ಗುರುವಾರ , ಮಾರ್ಚ್ 21, 2019
24 °C

ಸೀಟು ಹಂಚಿಕೆ: ಫಲಪ್ರದವಾಗದ ಮಾತುಕತೆ; ನಿರ್ಧಾರಕ್ಕೆ ಬಾರದ‌ ಸಭೆ

Published:
Updated:

ನವದೆಹಲಿ: ಮೈತ್ರಿಯೊಂದಿಗೆ ಲೋಕಸಭೆ ಚುನಾವಣೆ ಎದುರಿಸುವ ನಿರ್ಧಾರ ಪ್ರಕಟಿಸಿರುವ ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ ಹಾಗೂ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ, ಬುಧವಾರ ಇಲ್ಲಿ ಸೀಟು ಹಂಚಿಕೆ ಕುರಿತು ಸುದೀರ್ಘ ಮಾತುಕತೆ ನಡೆಸಿದರು.

ಆದರೆ, ಹಾಲಿ ಸದಸ್ಯರಿರುವ ಹಳೆ ಮೈಸೂರು ಭಾಗದಲ್ಲಿನ ಕೆಲವು ಕ್ಷೇತ್ರಗಳನ್ನು ಬಿಟ್ಟುಕೊಡುವ ನಿಟ್ಟಿನಲ್ಲಿ ರಾಹುಲ್‌ ಒಪ್ಪಿಗೆ ಸೂಚಿಸದ್ದರಿಂದ, ದೇವೇಗೌಡರ ನಿವಾಸದಲ್ಲಿ ಎರಡು ಗಂಟೆಗೂ ಅಧಿಕ ಕಾಲ ನಡೆದ ಉಭಯ ನಾಯಕರ ನಡುವಿನ ಮಾತುಕತೆ ಫಲಪ್ರದವಾಗದೆ ಕೊನೆಗೊಂಡಿತು.

ಮೊದಲು 12 ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಬೇಡಿಕೆ ಸಲ್ಲಿಸಿದ್ದ ದೇವೆಗೌಡ, ಈ ಮಾತುಕತೆ ವೇಳೆ 10 ಕ್ಷೇತ್ರಗಳಿಗೆ ತಮ್ಮ ಸಮ್ಮತಿ ಸೂಚಿಸಿದರು.

ಮೈಸೂರು, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ ಮತ್ತು ಕೋಲಾರ ಕ್ಷೇತ್ರ ಬಿಟ್ಟುಕೊಡುವ ಬೇಡಿಕೆ ಕುರಿತು ರಾಜ್ಯ ಮುಖಂಡರು ನಿರಾಕರಿಸಿದ್ದು, ರಾಹುಲ್ ಗಾಂಧಿ ಅವರೂ ಒಪ್ಪಿಗೆ ನೀಡದೆ ಸಭೆ ಮುಗಿಸಿ ಮರಳಿದರು.

ಬಿಜೆಪಿಯನ್ನು ಸೋಲಿಸುವ ನಿಟ್ಟಿನಲ್ಲಿ ಹಾಲಿ ಸದಸ್ಯರಿರುವ ಕೆಲವು ಕ್ಷೇತ್ರಗಳನ್ನು ಬಿಟ್ಟುಕೊಟ್ಟಲ್ಲಿ ಮೈತ್ರಿಕೂಟಕ್ಕೆ ಗೆಲುವು ಸುಲಭ ಎಂಬ ಕಾರಣದಿಂದ ಆ ಕ್ಷೇತ್ರಗಳಿಗೆ ಬೇಡಿಕೆ ಇರಿಸಲಾಗಿದೆ ಎಂದು ದೇವೇಗೌಡ ಅವರು ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

ಉಭಯ ಪಕ್ಷಗಳ ಪ್ರಧಾನ ಕಾರ್ಯದರ್ಶಿಗಳಾದ ಡ್ಯಾನಿಶ್ ಅಲಿ ಮತ್ತು ಕೆ.ಸಿ. ವೇಣುಗೋಪಾಲ್ ಅವರು ಮೂರ್ನಾಲ್ಕು ದಿನಗಳಲ್ಲಿ ಇನ್ನೊಂದು ಸುತ್ತು ಮಾತುಕತೆ ನಡೆಸುವ ಮೂಲಕ ಸೀಟು ಹಂಚಿಕೆ ಪ್ರಕ್ರಿಯೆ ಪೂರ್ಣಗೊಳಿಸಲಿದ್ದಾರೆ. ಈ ಕುರಿತ ವರದಿಯನ್ನು ರಾಹುಲ್‌ ಗಾಂಧಿ ಅವರಿಗೆ ಸಲ್ಲಿಸಲಿದ್ದು, ನಂತರವಷ್ಟೇ ಕಾಂಗ್ರೆಸ್ ಹೈಕಮಾಂಡ್ ಸೀಟು ಹಂಚಿಕೆ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸಲಿದೆ ಎಂದರು.

ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ಲೋಕಸಭೆ ಚುನಾವಣೆಯಲ್ಲೂ ಮೈತ್ರಿ ಮುಂದುವರಿಸಲು ನಿರ್ಧರಿಸಲಾಗಿದೆ. ರಾಹುಲ್ ಗಾಂಧಿ ಅವರೂ ಇದಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದರು.

‘ನಾವು 12 ಕ್ಷೇತ್ರಗಳಿಗೆ ಬೇಡಿಕೆ ಇರಿಸಿದ್ದೆವು. 10 ಕ್ಷೇತ್ರ ಬಿಟ್ಟುಕೊಟ್ಟರೂ ನಮ್ಮ ಆಕ್ಷೇಪ ಇಲ್ಲ’ ಎಂದು ಅವರು ಒತ್ತಿ ಹೇಳಿದರು.

ನಿರ್ದಿಷ್ಟ ಕ್ಷೇತ್ರಗಳನ್ನು ಬಿಟ್ಟುಕೊಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ತೀರ್ಮಾನ ಕೈಗೊಳ್ಳುವುದು ಬಾಕಿ ಇದೆ ಎಂದು ಡ್ಯಾನಿಶ್‌ ಅಲಿ ಹೇಳಿದರು.

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 0

  Sad
 • 0

  Frustrated
 • 10

  Angry

Comments:

0 comments

Write the first review for this !