ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳ್ಳರ ಅಪ್ಪುವ ನಾಯಕ ಮೋದಿ

ಚುನಾವಣಾ ಪ್ರಚಾರ ಸಭೆ; ರಾಹುಲ್‌ ವಾಗ್ದಾಳಿ
Last Updated 13 ಏಪ್ರಿಲ್ 2019, 20:18 IST
ಅಕ್ಷರ ಗಾತ್ರ

ಕೋಲಾರ/ಚಿತ್ರದುರ್ಗ: ‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಸುಳ್ಳಿನ ಸಾಮ್ರಾಜ್ಯ ಸೃಷ್ಟಿಸುತ್ತಿದ್ದಾರೆ. ಚೌಕೀದಾರ್‌ (ಕಾವಲುಗಾರ) ಎಂದು ಹೇಳಿಕೊಳ್ಳುವ ಅವರು ದೇಶದ ಸಂಪತ್ತು ಲೂಟಿ ಮಾಡಿದ್ದಾರೆ’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ತೀವ್ರ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಕೆ.ಎಚ್‌. ಮುನಿಯಪ್ಪ ಪರ ಕೋಲಾರದಲ್ಲಿ ಶನಿವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಮೋದಿ ಬಡ ಜನರ ಕಿಸೆಯಿಂದ ಹಣ ಕದ್ದು ನೀರವ್‌ ಮೋದಿ, ವಿಜಯ್ ಮಲ್ಯ, ಲಲಿತ್‌ ಮೋದಿಯಂತಹ ಕಳ್ಳರಿಗೆ ಕೊಟ್ಟು ವಿದೇಶಕ್ಕೆ ಕಳುಹಿಸಿದ್ದಾರೆ. ಈ ಕಳ್ಳರ ಗುಂಪಿಗೆ ಮೋದಿಯೇ ನಾಯಕ’ ಎಂದು ವ್ಯಂಗ್ಯವಾಡಿದರು.

ಚಿತ್ರದುರ್ಗದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಪರವಾಗಿ ಜಯದೇವ ಮುರುಘರಾಜೇಂದ್ರ ಕ್ರೀಡಾಂಗಣದ ಸಮಾವೇಶದಲ್ಲಿಯೂ ಅವರು ಇದೇ ಅಭಿಪ್ರಾಯವನ್ನು ಪುನರುಚ್ಚರಿಸಿದರು. ಇಲ್ಲಿ ಅವರು ‘ನ್ಯಾಯ್’ ಯೋಜನೆಯ ವಿವರಗಳನ್ನು ಜನರಲ್ಲಿ ಹಂಚಿಕೊಂಡರು.

‘5 ವರ್ಷಗಳಲ್ಲಿ ಏನು ಸಾಧನೆ ಮಾಡಿದ್ದೇನೆ ಎಂಬ ಬಗ್ಗೆ ಮೋದಿ ಮಾತನಾಡುವುದಿಲ್ಲ. ದೇಶದ ಅಭಿವೃದ್ಧಿ, ನಿರುದ್ಯೋಗ ಸಮಸ್ಯೆ, ರೈತರ ಸಂಕಷ್ಟದ ಬಗ್ಗೆ ತುಟಿ ಬಿಚ್ಚುವುದಿಲ್ಲ. ಬಿಜೆಪಿಯ ಪ್ರಣಾಳಿಕೆಯಲ್ಲೂ ಈ ವಿಚಾರಗಳ ಪ್ರಸ್ತಾಪವಿಲ್ಲ. ದೇಶದ ಕಾವಲುಗಾರ ಎಂದು ಹೇಳಿಕೊಳ್ಳುವ ಮೋದಿ ನೂರಕ್ಕೆ ನೂರರಷ್ಟು ಕಳ್ಳ’ ಎಂದು ಕುಟುಕಿದರು.

‘ಅನಿಲ್‌ ಅಂಬಾನಿಯನ್ನು ಬಾಚಿ ತಬ್ಬಿಕೊಳ್ಳುವ ಮೋದಿ ರೈತರನ್ನು ಅಪ್ಪಿಕೊಳ್ಳುವುದಿಲ್ಲ. ವಂಚಕರ ಹೆಸರೆಲ್ಲಾ ಮೋದಿ ಎಂದೇ ಅಂತ್ಯಗೊಳ್ಳುತ್ತದೆ. ರಫೇಲ್‌ ಹಗರಣ ಬಯಲಾದ ನಂತರ ಚೌಕೀದಾರ ಮೋದಿಯ ಮುಖಚರ್ಯೆಯೇ ಬದಲಾಯಿತು’ ಎಂದು ಟೀಕಿಸಿದರು.

ದೇಶಭಕ್ತರೇ ಅಲ್ಲ: ‘ಈ ಚುನಾವಣೆಯಲ್ಲಿ ಮೋದಿ ದೇಶ ಛಿದ್ರಗೊಳಿಸುವ ವಿಚಾರ ಮುಂದಿರಿಸಿದ್ದಾರೆ. ಕಾಂಗ್ರೆಸ್ ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯುವ ವಿಚಾರಧಾರೆ ಮುಂದಿಟ್ಟಿದೆ. ಬಿಜೆಪಿಯವರು ದೇಶಭಕ್ತಿ ಬಗ್ಗೆ ಮಾತನಾಡುತ್ತಾರೆ. ಆದರೆ, ದೇಶಭಕ್ತರು ಕಳ್ಳತನ ಮಾಡುವುದಿಲ್ಲ. ಕಳ್ಳತನ ಮಾಡುವವರು ದೇಶಭಕ್ತರೇ ಅಲ್ಲ’ ಎಂದು ತಿರುಗೇಟು ನೀಡಿದರು.

ಸರಕು ಮತ್ತು ಸೇವಾ ತೆರಿಗೆ ಪದ್ಧತಿಯನ್ನು (ಜಿಎಸ್‌ಟಿ) ಗಬ್ಬರ್‌ ಸಿಂಗ್‌ ಟ್ಯಾಕ್ಸ್‌ ಎಂದು ವ್ಯಂಗ್ಯವಾಡಿದ ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಜಿಎಸ್‌ಟಿ ರದ್ದುಗೊಳಿಸಿ ಸರಳ ತೆರಿಗೆ ವ್ಯವಸ್ಥೆ ಜಾರಿಗೊಳಿಸುತ್ತದೆ. ಪ್ರತ್ಯೇಕ ಕೃಷಿ ಬಜೆಟ್‌ ಮಂಡಿಸುತ್ತದೆ ಎಂದು ಭರವಸೆ ನೀಡಿದರು.

ಮೋದಿಯ ಟ್ರಂಕ್‌ ಪರಿಶೀಲಿಸಲಿ

‘ನರೇಂದ್ರ ಮೋದಿ ಚುನಾವಣಾ ಪ್ರಚಾರಕ್ಕೆ ಹೋದ ಕಡೆಗೆ ರಾಜಾರೋಷವಾಗಿ ದೊಡ್ಡ ಟ್ರಂಕ್‌ನಲ್ಲಿ ಹಣ ಸಾಗಿಸುತ್ತಿದ್ದಾರೆ. ಹಣ ಸಾಗಣೆ ಹಾಗೂ ಶಾಸಕರ ಖರೀದಿ ಅವರ ವೃತ್ತಿ’ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಕೋಲಾರದಲ್ಲಿ ಗಂಭೀರ ಆರೋಪ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಮೋದಿ ಹೆಲಿಕಾಪ್ಟರ್‌ ಹಾಗೂ ವಿಮಾನದಲ್ಲಿ ಕೋಟಿಗಟ್ಟಲೆ ಹಣ ಸಾಗಿಸುತ್ತಿದ್ದಾರೆ. ವಿರೋಧ ಪಕ್ಷಗಳ ನಾಯಕರು ಪ್ರಯಾಣಿಸುವ ಕಾರು, ಹೆಲಿಕಾಪ್ಟರ್‌ ತಪಾಸಣೆ ಮಾಡುವ ಚುನಾವಣಾಧಿಕಾರಿಗಳು ಮೋದಿಯ ಟ್ರಂಕ್‌ ಪರಿಶೀಲಿಸದಿರುವುದು ಸರಿಯಲ್ಲ’ ಎಂದು ಕಿಡಿಕಾರಿದರು.

‘ಮೋದಿಯ ಟ್ರಂಕ್‌ ಬಗ್ಗೆ ತನಿಖೆಯಾಗಬೇಕು. ಚುನಾವಣಾಧಿಕಾರಿಗಳು ರಾಜಕೀಯ ಬಿಟ್ಟು ಮೋದಿಯ ಹೆಲಿಕಾಪ್ಟರ್‌ ಮತ್ತು ವಿಮಾನ ತಪಾಸಣೆ ಮಾಡಲಿ’ ಎಂದು ಆಗ್ರಹಿಸಿದರು.

ಮಹಿಳೆಯರ ಖಾತೆಗಳಿಗೆ ‘ನ್ಯಾಯ್’ ಹಣ

ಚಿತ್ರದುರ್ಗದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ‘ದೇಶದ 5 ಕೋಟಿ ಬಡವರ ಖಾತೆಗಳಿಗೆ ಪ್ರತಿ ತಿಂಗಳು ₹ 6,000 ಜಮೆ ಮಾಡುವ ಉದ್ದೇಶ ‘ನ್ಯಾಯ್’ ಯೊಜನೆಯದ್ದು. ಕುಟುಂಬಗಳ ಮಹಿಳೆಯರ ಖಾತೆಗಳಿಗೆ ಈ ಹಣ ಜಮೆಯಾಗಲಿದೆ. ಆ ಕುಟುಂಬಗಳ ಒಟ್ಟು 25 ಕೋಟಿ ಬಡವರು ಇದರ ಫಲಾನುಭವಿಗಳಾಗಲಿದ್ದಾರೆ. ₹ 15 ಲಕ್ಷ ಖಾತೆಗೆ ಹಾಕುವ ಸುಳ್ಳು ಭರವಸೆಯನ್ನು ನೀಡದೆ, ಆರ್ಥಿಕ ಚಿಂತಕರ ಸಲಹೆ ಪಡೆದು ಇಷ್ಟು ಹಣವನ್ನು ನೀಡಲು ನಿರ್ಧರಿಸಿದ್ದೇವೆ. ಇದರಿಂದ ದೇಶದ ಅರ್ಥ ವ್ಯವಸ್ಥೆ ಹಾಳಾಗದು ಎನ್ನುವುದನ್ನು ಖಾತರಿಪಡಿಸಿಕೊಂಡಿದ್ದೇವೆ’ ಎಂದು ತಿಳಿಸಿದರು.

‘ನರೇಗಾ’ ಯೋಜನೆಯಲ್ಲಿ ವರ್ಷಕ್ಕೆ 100 ದಿನಗಳ ಕೂಲಿ ಕೆಲಸ ನೀಡಲಾಗುತ್ತಿದೆ. ತಮ್ಮ ನೇತೃತ್ವದ ಸರ್ಕಾರ ಚುನಾಯಿತವಾದರೆ ಇದನ್ನು 150 ದಿನಗಳಿಗೆ ವಿಸ್ತರಿಸುವ ಭರವಸೆಯನ್ನೂ ನೀಡಿದರು. ಕೇಂದ್ರ ಸರ್ಕಾರದ ಖಾಲಿ ಇರುವ 27 ಲಕ್ಷದಷ್ಟು ಉದ್ಯೋಗಗಳನ್ನು ಯುವಕರಿಗೆ ನೀಡುವ ಆಶ್ವಾಸನೆಯನ್ನಿತ್ತರು.

ಇದು ಅನಿಲ್‌ ಅಂಬಾನಿ ಹಾಗೂ ಸಾಮಾನ್ಯ ಜನರ ನಡುವಿನ ಚುನಾವಣೆ ಎಂಬ ಅವರ ಭಾವುಕ ಮಾತಿಗೆ ಜನರಿಂದ ಕರತಾಡನ ಸಿಕ್ಕಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT