ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫಲಿತಾಂಶದ ಚಿಂತೆ ಬಿಡಿ, ಮೈತ್ರಿ ಮುಂದುವರಿಸಿ: ರಾಹುಲ್‌ ಕಿವಿಮಾತು

Last Updated 19 ಮೇ 2019, 19:14 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದರೂ, ಬರದೇ ಇದ್ದರೂ ಕರ್ನಾಟಕದಲ್ಲಿ ‘ಮೈತ್ರಿ ಸರ್ಕಾರ’ ಮುಂದುವರಿಯಬೇಕು ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಭಾನುವಾರ ತಮ್ಮನ್ನು ಭೇಟಿ ಮಾಡಿದ ರಾಜ್ಯದ
ಕಾಂಗ್ರೆಸ್‌ ಮುಖಂಡರಿಗೆ ಕಿವಿಮಾತು ಹೇಳಿದ್ದಾರೆ.

ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಸಮ್ಮುಖದಲ್ಲಿ ಇಲ್ಲಿನ ತುಘಲಕ್ ಲೇನ್‌ನಲ್ಲಿರುವ ತಮ್ಮ ನಿವಾಸದಲ್ಲಿ ಒಂದೂವರೆ ಗಂಟೆ ಕಾಲ ನಡೆದ ಸಭೆಯಲ್ಲಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಸಚಿವ ಡಿ.ಕೆ. ಶಿವಕುಮಾರ್‌ ಹಾಜರಿದ್ದರು. ‘ಲೋಕಸಭೆ ಚುನಾವಣೆಯ ಫಲಿತಾಂಶದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ’ ಎಂದೂ ಸೂಚಿಸಿದ್ದಾರೆ.

‘ಜೆಡಿಎಸ್‌ ಮುಖಂಡರೊಂದಿಗೆ ಮೊದಲೇ ಮಾತನಾಡಿದಂತೆ ಮೈತ್ರಿ ಸರ್ಕಾರ ಐದು ವರ್ಷಗಳ ಅಧಿಕಾರದ ಅವಧಿ ಪೂರೈಸಬೇಕು. ಈ ನಿಟ್ಟಿನಲ್ಲಿ ಜೆಡಿಎಸ್ ಜೊತೆ ಸಮನ್ವಯದೊಂದಿಗೆ ಇರಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವುದು ಅನಿವಾರ್ಯ
ವಾಗಲಿದೆ’ ಎಂದು ಅವರು ರಾಜ್ಯ ಮುಖಂಡರಿಗೆ ಕಟ್ಟುನಿಟ್ಟಿನ ಎಚ್ಚರಿಕೆಯನ್ನೂ ನೀಡಿದ್ದಾರೆ.

ಮೈತ್ರಿ ನಾಯಕರು ನೀಡುತ್ತಿರುವ ಪರಸ್ಪರ ಹೇಳಿಕೆ, ಚುನಾವಣೆ ಸಂದರ್ಭದಲ್ಲಿ ಎದುರಿಸಿರುವ ಟೀಕೆ, ಸ್ಥಳೀಯ ಮಟ್ಟದಲ್ಲಿ ಎದುರಾಗಬಹುದಾದ ಮುಜುಗರ ಮೊದಲಾದ ವಿಷಯ ಆಲಿಸಿದ ರಾಹುಲ್‌ ಗಾಂಧಿ, ವ್ಯತಿರಿಕ್ತ ಹೇಳಿಕೆ ನೀಡದಂತೆ ಮುಖಂಡರಿಗೆ ಸೂಚಿಸಿದರು.

‘ನಮ್ಮ ಪಕ್ಷ ನಂಬಿಕೆಗೆ ಅನರ್ಹ ಎಂಬ ಸಂದೇಶ ಹೋಗಬಾರದು. ಶೀಘ್ರವೇ ಸಮನ್ವಯ ಸಮಿತಿ ಸಭೆ ಕರೆದು ಭಿನ್ನಾಭಿಪ್ರಾಯವನ್ನು ಶಮನಗೊಳಿಸಬೇಕು’ ಎಂದು ಸಿದ್ದರಾಮಯ್ಯ ಅವರಿಗೂ ಸಲಹೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಮೈತ್ರಿ ಧರ್ಮ ಪಾಲನೆಗೆ ಸ್ಪಷ್ಟ ನಿರ್ದೇಶನ

‘ಮೈತ್ರಿ ಧರ್ಮ ಪಾಲಿಸುವುದೂ ಸೇರಿದಂತೆ ಜೆಡಿಎಸ್‌ನೊಂದಿಗಿನ ಸಮನ್ವಯ ಸಾಧಿಸುವಂತೆ ವರಿಷ್ಠರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ’ ಎಂದು ದಿನೇಶ್‌ ಗುಂಡೂರಾವ್ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

‘ಲೋಕಸಭೆ ಚುನಾವಣೆ ಕಾರಣ ಕೆಲವು ದಿನಗಳಿಂದ ಪಕ್ಷದ ವರಿಷ್ಠರೊಂದಿಗೆ ಚರ್ಚೆ ನಡೆದಿರಲಿಲ್ಲ. ಇದೀಗ ಸಭೆ ನಡೆಸುವ ಮೂಲಕ ಮೈತ್ರಿಯಲ್ಲಿ ಉಂಟಾಗಬಹುದಾದ ಸಂಭವನೀಯ ಸಮಸ್ಯೆಯನ್ನು ನಿವಾರಿಸಿ ಮುಂದೆ ಸಾಗಬೇಕೆಂಬ ನಿರ್ಧಾರ ಕೈಗೊಳ್ಳಲಾಯಿತು’ ಎಂದು ಹೇಳಿದರು.

‘ಮೈತ್ರಿಯ ಕುರಿತು ಕಾಂಗ್ರೆಸ್ ಮುಖಂಡರಿಂದ ಅಪಸ್ವರ ಕೇಳಿ ಬಂದರೆ ಸಹಿಸಲು ಸಾಧ್ಯವಿಲ್ಲ. ಶಿಸ್ತು ಉಲ್ಲಂಘನೆಗೆ ಅವಕಾಶವಿಲ್ಲ ಎಂಬ ಸಂದೇಶವನ್ನು ಮುಖಂಡರಿಗೆ ರವಾನಿಸುವಂತೆ ವರಿಷ್ಠರು ಹೇಳಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT