ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾತೆ ಹಂಚಿಕೆ ಬಿಕ್ಕಟ್ಟು ಬಗೆಹರಿಸುವ ಹೊಣೆ ರಾಹುಲ್‌ ಗಾಂಧಿ ಹೆಗಲಿಗೆ

ತಾರಕಕ್ಕೇರಿದ ಕಾಂಗ್ರೆಸ್ ಕಲಹ
Last Updated 26 ಡಿಸೆಂಬರ್ 2018, 20:06 IST
ಅಕ್ಷರ ಗಾತ್ರ

ಬೆಂಗಳೂರು: ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರಕ್ಕೆ ನೂತನವಾಗಿ ಸೇರ್ಪಡೆಗೊಂಡ ಸಚಿವರ ಖಾತೆ ಹಂಚಿಕೆ ವಿಷಯ ಕಾಂಗ್ರೆಸ್‌ ನಾಯಕರಲ್ಲಿ ಕಲಹ ಸೃಷ್ಟಿಸಿದ್ದು, ಬಿಕ್ಕಟ್ಟು ಪರಿಹಾರದ ಹೊಣೆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಹೆಗಲೇರಿದೆ.

ಕಳೆದ ಶನಿವಾರ ಸಂಪುಟ ಸೇರಿದ ಎಂಟು ಸಚಿವರು ಆಯಕಟ್ಟಿನ ಖಾತೆ ಬಯಸಿದ್ದಾರೆ. ಏಳು ತಿಂಗಳ ಹಿಂದೆ ಸಚಿವರಾಗಿ ಅಧಿಕಾರ ವಹಿಸಿಕೊಂಡವರು ತಮ್ಮಲ್ಲಿರುವ ಲಾಭಕಟ್ಟಿನ ಖಾತೆಗಳನ್ನು ಬಿಟ್ಟುಕೊಡಲು ತಯಾರಿಲ್ಲ. ಕಾಂಗ್ರೆಸ್‌ನ ರಾಜ್ಯ ನಾಯಕರ ಮಧ್ಯೆ ಖಾತೆ ಕಿತ್ತಾಟ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಬುಧವಾರ ಎರಡು ಗಂಟೆ ನಡೆಸಿದ ಸಂಧಾನ ಫಲ ನೀಡಿಲ್ಲ. ಅವರ ಸಮ್ಮುಖದಲ್ಲೇ ನಾಯಕರ ಮಧ್ಯೆ ವಾಗ್ಯುದ್ಧವೂ ನಡೆದಿದ್ದು, ವರಿಷ್ಠರಿಗೆ ತಲೆನೋವು ತಂದಿಟ್ಟಿದೆ.

ವೇಣುಗೋಪಾಲ್‌, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಜಿ. ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಸಚಿವ ಡಿ.ಕೆ. ಶಿವಕುಮಾರ್ ಸಮಾಲೋಚನೆ ನಡೆಸಿದರು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹೆಚ್ಚಿನ ಸ್ಥಾನ ಗೆಲ್ಲಬೇಕಿರುವುದರಿಂದ ಹೊಸ ಸಚಿವರಿಗೆ ಪ್ರಮುಖ ಖಾತೆಯನ್ನು ಬಿಟ್ಟುಕೊಡುವುದು ಅನಿವಾರ್ಯ ಎಂದು ವೇಣುಗೋಪಾಲ್‌ ಸೂಚಿಸಿದರು.

ಇದಕ್ಕೆ ಸಿದ್ದರಾಮಯ್ಯ ಕೂಡ ಧ್ವನಿಗೂಡಿಸಿದರು. ಆದರೆ, ಗೃಹ ಖಾತೆಯನ್ನು ಬಿಟ್ಟುಕೊಡಲು ಪರಮೇಶ್ವರ, ವೈದ್ಯಕೀಯ ಶಿಕ್ಷಣ ಖಾತೆ ಬಿಟ್ಟುಕೊಡಲು ಡಿ.ಕೆ. ಶಿವಕುಮಾರ್ ಸುತರಾಂ ಒಪ್ಪಲಿಲ್ಲ. ಈ ಎರಡೂ ಖಾತೆಗಳನ್ನು ಕ್ರಮವಾಗಿ ಎಂ.ಬಿ. ಪಾಟೀಲ ಹಾಗೂ ಇ. ತುಕಾರಾಂ ಅವರಿಗೆ ನೀಡುವುದು ವರಿಷ್ಠರ ಅಪೇಕ್ಷೆ. ಸುಮಾರು ಹೊತ್ತು ಚೌಕಾಸಿ ನಡೆದರೂ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ. ಇದನ್ನು ಗಮನಿಸಿದ ವೇಣುಗೋಪಾಲ್‌, ‘ರಾಹುಲ್ ಗಾಂಧಿ ಅವರೇ ಇತ್ಯರ್ಥ ಪಡಿಸುತ್ತಾರೆ. ಹೈಕಮಾಂಡ್ ಹೇಳಿದ್ದನ್ನು ಎಲ್ಲರೂ ಪಾಲಿಸಬೇಕು’ ಎಂದು ಹೇಳಿ ಸಭೆಯನ್ನು ಮುಕ್ತಾಯಗೊಳಿಸಿದರು.

ಮರು ಹಂಚಿಕೆ ಚರ್ಚೆ: ಪರಮೇಶ್ವರ ಬಳಿ ಗೃಹ ಮತ್ತು ಬೆಂಗಳೂರು ಅಭಿವೃದ್ಧಿ, ಡಿ.ಕೆ.ಶಿವಕುಮಾರ್ ಬಳಿ ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ, ಯು.ಟಿ. ಖಾದರ್ ಬಳಿ ವಸತಿ ಮತ್ತು ನಗರಾಭಿವೃದ್ಧಿ, ಆರ್.ವಿ. ದೇಶಪಾಂಡೆ ಬಳಿ ಕಂದಾಯ, ಹಾಗೂ ಕೌಶಲಾಭಿವೃದ್ಧಿ, ಜಮೀರ್ ಅಹಮದ್ ಅವರ ಹತ್ತಿರ ಆಹಾರ ಮತ್ತು ನಾಗರಿಕ ಪೂರೈಕೆ, ಅಲ್ಪಸಂಖ್ಯಾತ, ವಕ್ಫ್‌, ಕೃಷ್ಣ ಬೈರೇಗೌಡರ ಹತ್ತಿರ ಗ್ರಾಮೀಣಾಭಿವೃದ್ಧಿ ಮತ್ತು ಕಾನೂನು, ಜಯಮಾಲಾ ಅವರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕನ್ನಡ ಮತ್ತು ಸಂಸ್ಕೃತಿ, ರಾಜಶೇಖರ ಪಾಟೀಲರಲ್ಲಿ ಗಣಿ ಮತ್ತು ಭೂವಿಜ್ಞಾನ, ಮುಜರಾಯಿ ಖಾತೆಗಳಿವೆ.

ಇವರ ಪೈಕಿ ಖಾದರ್, ಜಮೀರ್‌ ತಮ್ಮ ಬಳಿ ಇರುವ ತಲಾ ಒಂದು ಖಾತೆಯನ್ನು ಬಿಟ್ಟುಕೊಡುವುದಾಗಿ ಭರವಸೆ ಕೊಟ್ಟಿದ್ದಾರೆ. ಕೃಷ್ಣ ಬೈರೇಗೌಡ ಅವರು ಕಾನೂನು ಮತ್ತು ಸಂಸದೀಯ ಖಾತೆ ಬಿಟ್ಟುಕೊಡಲು ಸಿದ್ಧರಿದ್ದಾರೆ. ದೇಶ
ಪಾಂಡೆ ಅವರು ಖಾತೆ ರಹಿತ ಸಚಿವರಾಗಲೂ ಸಿದ್ಧ ಎಂದಿದ್ದಾರೆ.

ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬ ಕೂಗನ್ನು ನಿವಾರಿಸಲು ಮುಂದಾಗಿರುವ ಸಿದ್ದರಾಮಯ್ಯ, ಎಂ.ಬಿ. ಪಾಟೀಲರಿಗೆ ಗೃಹ ಖಾತೆ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವಿಗೆ ಕೊಡುಗೆ ನೀಡಿರುವ ಬಳ್ಳಾರಿಗೆ ಪ್ರಮುಖ ಖಾತೆ ನೀಡಬೇಕು ಎಂಬ ಕಾರಣಕ್ಕೆ ವೈದ್ಯಕೀಯ ಶಿಕ್ಷಣ ಖಾತೆ
ಯನ್ನು ತುಕಾರಾಂಗೆ ನೀಡಬೇಕು ಎಂದು ಹಟ ಹಿಡಿದಿದ್ದಾರೆ.

***

ಖಾತೆ ಹಂಚಿಕೆ ಬಗ್ಗೆ ಚರ್ಚೆ ನಡೆಸಿದ್ದೇವೆ. ಈ ವಿವರವನ್ನು ರಾಹುಲ್ ಗಾಂಧಿ ಅವರ ಮುಂದೆ ಮಂಡಿಸಲಾಗುವುದು. ಅವರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.

-ಕೆ.ಸಿ. ವೇಣುಗೋಪಾಲ್‌,ಕಾಂಗ್ರೆಸ್‌ ರಾಜ್ಯ ಉಸ್ತುವಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT