ರಾಹುಲ್ ಸ್ಥಾನ ಭದ್ರ; ಮಯಂಕ್‌ಗಿಲ್ಲ ಅವಕಾಶ

7
ಟೆಸ್ಟ್ ಕ್ರಿಕೆಟ್ ಸರಣಿ ಕ್ಲೀನ್‌ಸ್ವೀಪ್ ಮೇಲೆ ವಿರಾಟ್ ಕೊಹ್ಲಿ ಬಳಗದ ಕಣ್ಣು

ರಾಹುಲ್ ಸ್ಥಾನ ಭದ್ರ; ಮಯಂಕ್‌ಗಿಲ್ಲ ಅವಕಾಶ

Published:
Updated:
Deccan Herald

ಹೈದರಾಬಾದ್: ದೇಶಿ ಕ್ರಿಕೆಟ್‌ನ ‘ರನ್‌ ಯಂತ್ರ’ ಕರ್ನಾಟಕದ ಮಯಂಕ್ ಅಗರವಾಲ್ ಅವರಿಗೆ ಶುಕ್ರವಾರ ಆರಂಭವಾಗಲಿರುವ ವೆಸ್ಟ್ ಇಂಡೀಸ್ ಎದುರಿನ ಎರಡನೇ ಟೆಸ್ಟ್‌ನಲ್ಲಿ ಆಡುವ ಅವಕಾಶ ನೀಡಿಲ್ಲ.

ಗುರುವಾರ ಪ್ರಕಟಿಸಿರುವ ತಂಡದ 12 ಆಟಗಾರರಲ್ಲಿ ಮಯಂಕ್ ಅವರ ಹೆಸರು ಇಲ್ಲ. ಇನ್ನೊಬ್ಬ ಕನ್ನಡಿಗ ಕೆ.ಎಲ್. ರಾಹುಲ್ ತಂಡದಲ್ಲಿ ಮುಂದುವರೆದಿದ್ದಾರೆ. ಅವರು ರಾಜ್‌ಕೋಟ್‌ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಇನಿಂಗ್ಸ್‌ ಆರಂಭಿಸಿದ್ದರು. ಆದರೆ ಶೂನ್ಯಕ್ಕೆ ಔಟ್ ಆಗಿದ್ದರು.  ಆ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಪೃಥ್ವಿ ಶಾ ಶತಕ ಬಾರಿಸಿ ದಾಖಲೆ ಬರೆದಿದ್ದರು. ಈ ಪಂದ್ಯದಲ್ಲಿಯೂ ರಾಹುಲ್ ಮತ್ತು ಪೃಥ್ವಿ ಇನಿಂಗ್ಸ್ ಆರಂಭಿಸುವುದು ಖಚಿತ.

ಮೊದಲ ಪಂದ್ಯದಲ್ಲಿ ಇನಿಂಗ್ಸ್‌ ಮತ್ತು 272 ರನ್‌ಗಳ ಜಯ ಸಾಧಿಸಿದ್ದ ಭಾರತ ತಂಡವು ಈ ಪಂದ್ಯದಲ್ಲಿಯೂ ಗೆದ್ದು ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿಕೊಳ್ಳುವ ಛಲದಲ್ಲಿದೆ. ರಾಜ್‌ಕೋಟ್‌ನಲ್ಲಿ ಪೃಥ್ವಿ,, ವಿರಾಟ್ ಕೊಹ್ಲಿ, ರವೀಂದ್ರ ಜಡೇಜ ಶತಕ ಗಳಿಸಿದ್ದರು. ಚೆತೇಶ್ವರ ಪೂಜಾರ ಮತ್ತು ರಿಷಬ್ ಪಂತ್ ಕೆಲವೇ ರನ್‌ಗಳ ಅಂತರದಲ್ಲಿ ಶತಕ ತಪ್ಪಿಸಿಕೊಂಡಿದ್ದರು. ಅಜಿಂಕ್ಯ ರಹಾನೆ ಲಯಕ್ಕೆ ಮರಳುವ ನಿರೀಕ್ಷೆ ಇದೆ.

ಮೂವರು ಸ್ಪಿನ್ನರ್‌ಗಳು ಮತ್ತು ಇಬ್ಬರು ಮಧ್ಯಮವೇಗಿಗಳು  ವಿಂಡೀಸ್‌ ತಂಡವನ್ನು ಎರಡೂ ಇನಿಂಗ್ಸ್‌ಗಳಲ್ಲಿ ಧೂಳಿಪಟ ಮಾಡಿದ್ದರು. ಅದರಿಂದಾಗಿ ಪಂದ್ಯದ ಮೂರನೇ ದಿನದ ಮಧ್ಯಾಹ್ನವೇ ಫಲಿತಾಂಶ ಹೊರಹೊಮ್ಮಿತ್ತು. ಅದೇ ಲಯವನ್ನು ಮುಂದುವರಿಸುವ ಸಲುವಾಗಿ ತಂಡದಲ್ಲಿ ಬದಲಾವಣೆ ಮಾಡಿಲ್ಲ.

ವಿಂಡೀಸ್‌ಗೆ ಚಿಂತೆ: ಪ್ರಮುಖ ಆಟಗಾರರ ಗಾಯದ ಸಮಸ್ಯೆಯಿಂದಾಗಿ ವಿಂಡೀಸ್ ತಂಡವು ದುರ್ಬಲವಾಗಿದೆ.  ನಾಯಕ ಜೇಸನ್ ಹೋಲ್ಡರ್‌ ಅವರು ಇನ್ನೂ ಪೂರ್ತಿಯಾಗಿ ಫಿಟ್‌ ಆಗಿಲ್ಲ. ವೇಗಿ ಶಾನನ್ ಗ್ಯಾಬ್ರಿಯಲ್ ಕೂಡ ಗಾಯದಿಂದ ಚೇತರಿಸಿಕೊಂಡಿಲ್ಲ. ಅದರಿಂದಾಗಿ ತಂಡಕ್ಕೆ ಚಿಂತೆ ಕಾಡುತ್ತಿದೆ. 

ಅನುಭವಿ ಕ್ರೆಗ್ ಬ್ರೇಥ್‌ವೈಟ್, ಕೀರನ್ ಪೊವೆಲ್, ಶೇನ್ ಡೋರಿಚ್‌ ಅವರ ಮೇಲೆಯೇ ಬ್ಯಾಟಿಂಗ್‌  ಬಲ ನಿಂತಿದೆ. ಭಾರತದ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹಣಿಯಲು ಬೌಲರ್‌ಗಳು ವಿಶೇಷ ಯೋಜನೆಯೊಂದಿಗೆ ಕಣಕ್ಕೆ ಇಳಿಯುವುದೊಂದೇ ದಾರಿ.

ಹೈದರಾಬಾದ್ ಅಂಗಳದಲ್ಲಿ ಭಾರತವು ಇದುವರೆಗೆ ನಾಲ್ಕು ಟೆಸ್ಟ್‌ ಪಂದ್ಯಗಳನ್ನು ಆಡಿದೆ. ಅದರಲ್ಲಿ ಒಂದು ಡ್ರಾ ಮತ್ತು ಮೂರು ಜಯ ಸಾಧಿಸಿದೆ. 2017ರಲ್ಲಿ ಬಾಂಗ್ಲಾ ಎದುರಿನ ಪಂದ್ಯ ಇಲ್ಲಿ ನಡೆದಿತ್ತು. ಅದರ ನಂತರ ಯಾವುದೇ ಟೆಸ್ಟ್ ಪಂದ್ಯ  ಇಲ್ಲಿ ಆಗಿಲ್ಲ.

ತಂಡಗಳು ಇಂತಿವೆ

ಭಾರತ: ವಿರಾಟ್ ಕೊಹ್ಲಿ (ನಾಯಕ), ಪೃಥ್ವಿ ಶಾ, ಕೆ.ಎಲ್. ರಾಹುಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ,  ರಿಷಬ್ ಪಂತ್ (ವಿಕೆಟ್‌ಕೀಪರ್), ರವೀಂದ್ರ ಜಡೇಜ, ಆರ್. ಅಶ್ವಿನ್, ಕುಲದೀಪ್ ಯಾದವ್, ಉಮೇಶ್ ಯಾದವ್, ಮೊಹಮ್ಮದ್ ಶಮಿ.

ವೆಸ್ಟ್ ಇಂಡೀಸ್: ಜೇಸನ್ ಹೋಲ್ಡರ್ (ನಾಯಕ), ಕ್ರೇಗ್ ಬ್ರೇಥ್‌ವೈಟ್, ಕೀರನ್ ಪೊವೆಲ್, ಶಾಯ್ ಹೋಪ್, ಶಿಮ್ರೊನ್ ಹೆಟ್ಮೆಯರ್, ಸುನಿಲ್ ಆಂಬ್ರಿಸ್, ರೋಸ್ಟನ್ ಚೇಸ್, ಶೇನ್ ಡೋರಿಚ್ (ವಿಕೆಟ್‌ಕೀಪರ್), ಕೀಮೊ ಪಾಲ್, ಶೆರ್ಮನ್ ಲೂಯಿಸ್, ಶಾನನ್ ಗ್ಯಾಬ್ರಿಯಲ್, ದೇವೇಂದ್ರ ಬಿಷೂ, ಜೇಮರ್ ಹ್ಯಾಮಿಲ್ಟನ್, ಕೆಮರ್ ರೂಚ್, ಜೊಮೆಲ್ ವಾರಿಕನ್. 

ಅಂಪೈರ್‌: ಇಯಾನ್ ಗೌಲ್ಡ್‌(ಇಂಗ್ಲೆಂಡ್), ಬ್ರೂಸ್ ಆಕ್ಸೆನ್‌ಫೋರ್ಡ್(ಆಸ್ಟ್ರೇಲಿಯಾ),   ಟಿ.ವಿ. ಅಂಪೈರ್: ನಿಗೆಲ್ ಲಾಂಗ್(ಇಂಗ್ಲೆಂಡ್), ರೆಫರಿ: ಕ್ರಿಸ್ ಬ್ರಾಡ್ (ಇಂಗ್ಲೆಂಡ್).

ಪಂದ್ಯ ಆರಂಭ:  ಬೆಳಿಗ್ಗೆ 9.30 ನೇರಪ್ರಸಾರ: ಸ್ಟಾರ್ ನೆಟ್‌ವರ್ಕ್

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !