ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರು ಮೃತಪಟ್ಟರೆ ಅಂಗಡಿಗಳೆಲ್ಲ ಬಂದ್‌: ಜಾಗಟಗಲ್‌ನಲ್ಲಿ ಅನಿಷ್ಟ ಪದ್ಧತಿ

Last Updated 6 ಮಾರ್ಚ್ 2020, 6:26 IST
ಅಕ್ಷರ ಗಾತ್ರ
ADVERTISEMENT
""

ರಾಯಚೂರು: ಪರಿಶಿಷ್ಟ ಜಾತಿಯವರು ವಾಸಿಸುವ ಕೇರಿಗಳಲ್ಲಿ ಯಾರಾದರೂ ಮೃತಪಟ್ಟರೆ, ಅಂತ್ಯಸಂಸ್ಕಾರಕ್ಕಾಗಿ ಬರುವ ಜನರೆಲ್ಲ ಮರಳುವವರೆಗೆ ಗ್ರಾಮದೊಳಗಿನ ಕಿರಾಣಿ ಅಂಗಡಿಗಳು ಮತ್ತು ಹೋಟೆಲ್‌ಗಳನ್ನೆಲ್ಲ ಬಂದ್‌ ಮಾಡಿಕೊಂಡು ಅಸಹಕಾರ ತೋರಿಸುವ ಅನಿಷ್ಟ ಪದ್ಧತಿ ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಜಾಗಟಗಲ್‌ ಗ್ರಾಮದಲ್ಲಿ ಜಾರಿಯಲ್ಲಿದೆ!

ಗುರುವಾರ ಇಂತಹದ್ದೊಂದು ಪ್ರಕರಣ ನಡೆದಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅಂಗಡಿಗಳನ್ನು ಬಂದ್‌ ಮಾಡಿಕೊಂಡಿರುವುದು ಹಾಗೂ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿರುವ ಛಾಯಾಚಿತ್ರಗಳು ಹರಿದಾಡುತ್ತಿವೆ.

ಗ್ರಾಮದ ದಲಿತರ ಕೇರಿಯಲ್ಲಿ ಗುರುವಾರ ವಯೋವೃದ್ಧರೊಬ್ಬರು ತೀರಿಕೊಂಡಿದ್ದರು. ಸವರ್ಣೀಯರು ಎಂದಿನಂತೆ ಅಂಗಡಿಗಳನ್ನೆಲ್ಲ ಬಂದ್ ಮಾಡಿದ್ದರು. ಈ ಬಗ್ಗೆ ಮಾಹಿತಿ ತಿಳಿದು, ಕೆಲವು ದಲಿತ ಸಂಘಟನೆಗಳ ಮುಖಂಡರು ಗಬ್ಬೂರು ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದರಿಂದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು.


ಎಚ್ಚೆತ್ತ ಗ್ರಾಮ ಪಂಚಾಯಿತಿ: ಪೊಲೀಸರು ಬಂದಿದ್ದರಿಂದ ಎಚ್ಚೆತ್ತಿರುವ ಗ್ರಾಮ ಪಂಚಾಯಿತಿ ಅಧಿಕಾರಿಗಳು ‘ಗ್ರಾಮದಲ್ಲಿ ಬಂದ್‌ ಮಾಡಿಕೊಂಡಿರುವ ಅಂಗಡಿಗಳಲ್ಲಿ ಮತ್ತು ಹೋಟೆಲ್‌ಗಳಲ್ಲಿ ಕೂಡಲೇ ವ್ಯಾಪಾರ ಆರಂಭಿಸಬೇಕು. ಇಲ್ಲದಿದ್ದರೆ ಪರವಾನಿಗೆ ರದ್ದುಗೊಳಿಸಿ ಮುಂದೆ ವ್ಯಾಪಾರ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಜೆ.ಜಾಡಲದಿನ್ನಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯು ಜಾಗಟಗಲ್‌ ಅಂಗಡಿ, ಹೋಟೆಲ್‌ ಮಾಲೀಕರಿಗೆ ಅದೇ ದಿನ ನೋಟಿಸ್‌ ನೀಡಿದ್ದಾರೆ.

‘ಜಾಗಟಗಲ್‌ ಗ್ರಾಮದಲ್ಲಿ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಅಂಗಡಿ ಮತ್ತು ಹೋಟೆಲ್‌ಗಳು ವ್ಯಾಪಾರ ಮಾಡುತ್ತಿದ್ದು, ಇದು ‘ಪಂಚಾಯಿತಿ ಕಾಯ್ದೆ 1993’ ರ ವಿರುದ್ಧವಾಗಿದೆ. ಗ್ರಾಮದಲ್ಲಿ ಪರಿಶಿಷ್ಟ ಜಾತಿಯವರು ಮೃತಪಟ್ಟ ಸಂದರ್ಭದಲ್ಲಿ ಉದ್ದೇಶ ಪೂರ್ವಕವಾಗಿ ಅಂಗಡಿ, ಹೋಟೆಲ್‌ ಮುಚ್ಚಿದ್ದು, ಈ ನೋಟಿಸ್‌ ಮುಟ್ಟಿದ ತಕ್ಷಣ ವ್ಯಾಪಾರ ಆರಂಭಿಸಬೇಕು’ ಎಂದು ಸೂಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT