ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮರಳು ದಂಧೆಗೆ ಜಲಮೂಲ ಬರಿದು

ಹೊಳೆಇಟಗಿ–ಸಾಸಲವಾಡದವರೆಗೆ ಹರಿದಿರುವ ಹಳ್ಳದಿಂದ ಮರಳು ಲೂಟಿ
Last Updated 29 ಮೇ 2018, 12:26 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಮರಳು ಅಕ್ರಮ ಸಾಗಾಟ ತಡೆಯಲು ಸರ್ಕಾರ ಎಷ್ಟೇ ಕ್ರಮ ಕೈಗೊಂಡರೂ, ತಾಲ್ಲೂಕಿನಾದ್ಯಂತ ಈ ದಂಧೆ ಎಗ್ಗಿಲ್ಲದೆ ನಡೆದಿದೆ. ಮರಳು ಕಳ್ಳರ ಲೂಟಿಗೆ ಸಿಲುಕಿ ತಾಲ್ಲೂಕಿನ ಜಲಮೂಲಗಳು ಬರಿದಾಗಿವೆ.

ಲಕ್ಷ್ಮೇಶ್ವರ ತಾಲ್ಲೂಕಿನ ಬಟ್ಟೂರು, ಪುಟಗಾಂವ್‌ಬಡ್ನಿ, ಹುಲ್ಲೂರು, ಅಮರಾಪುರಗಳಿಂದ ನಿತ್ಯ ಹತ್ತಾರು ಟ್ರ್ಯಾಕ್ಟರ್‌ಗಳಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾರೆ.

ಮಾಗಡಿಯಿಂದ ಹೊಳೆಇಟಗಿ–ಸಾಸಲವಾಡದವರೆಗೆ ಹರಿಯುವ ದೊಡ್ಡ ಹಳ್ಳ ತಾಲ್ಲೂನಲ್ಲಿಯೇ ಅತ್ಯಂತ ಉದ್ದ ವಾದ ಹಳ್ಳ. ಇದು ಮಾಗಡಿ, ಬಟ್ಟೂರು, ಪುಟಗಾಂವ್‌ ಬಡ್ನಿ, ಹುಲ್ಲೂರು, ಬೂದಿ ಹಾಳ, ಕೊಕ್ಕರಗುಂದಿ, ಕೊಂಚಿಗೇರಿ, ತಂಗೋಡ ಮಾರ್ಗವಾಗಿ ಹರಿದು ಕೊನೆಗೆ ಇಟಗಿ–ಸಾಸಲವಾಡದ ಹತ್ತಿರ ತುಂಗಭದ್ರಾ ನದಿಯನ್ನು ಸೇರುತ್ತದೆ. ಮಳೆಗಾಲದಲ್ಲಿ ಪ್ರತಿವರ್ಷ ಅಪಾರ ನೀರು ಈ ಹಳ್ಳದಲ್ಲಿ ಹರಿಯುತ್ತದೆ. ಈ ಹಳ್ಳದ ಪಾತ್ರವು ಮರಳುಗಳ್ಳರಿಗೆ ಅಕ್ಷಯಪಾತ್ರೆಯಾಗಿದೆ.

ಈ ಹಳ್ಳದಲ್ಲಿ ಸದಾ ಮರಳು ತುಂಬಿಕೊಂಡಿರುತ್ತದೆ. ಈಗ ಹಳ್ಳದಲ್ಲಿ ಮರಳು ತೆಗೆದು, ತೆಗೆದು, ಬೃಹತ್‌ ಗುಂಡಿಗಳು ಸೃಷ್ಟಿಯಾಗಿವೆ.

ಅಕ್ರಮ ಮರಳು ಸಾಗಾಟದ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡಿದ್ದರೂ, ಇದು ಇದು ನಿಯಂತ್ರಣಕ್ಕೆ ಬರುತ್ತಿಲ್ಲ.

ದಶಕದ ಹಿಂದಿನವರೆಗೆ ಈ ಹಳ್ಳದಲ್ಲಿ ಆಳೆತ್ತರದಷ್ಟು ಮರಳು ಇತ್ತು. ಈಗ ಇಡೀ ಹಳ್ಳ ಬರಿದಾಗಿದೆ. ಮರಳು ಮಾಫಿಯಾದವರು ಹಳ್ಳದ ಒಡಲಿಗೆ ಕೈ ಹಾಕಿದ್ದರಿಂದ ಜಲಮೂಲ ಬರಿದಾಗಿದೆ. ಈಗ ಧಾರಾಕಾರ ಮಳೆಯಾದರೂ ಹಳ್ಳದಲ್ಲಿ ನೀರು ನಿಲ್ಲುತ್ತಿಲ್ಲ. ಮರಳು ಇಲ್ಲದಿರುವುರಿಂದ ಹಳ್ಳದಲ್ಲಿ ನೀರು ಇಂಗುತ್ತಿಲ್ಲ. ಸುರಿದ ಮಳೆ ನೀರು ವ್ಯರ್ಥವಾಗಿ ಹರಿದುಹೋಗುತ್ತದೆ.

ಬೇಸಿಗೆಯಲ್ಲಿ ಇದೇ ಹಳ್ಳದಲ್ಲಿ ಮರಳಿನಡಿ ವರ್ತಿ ನೀರು ಸಿಗುತ್ತಿತ್ತು. ಬೇಸಿಗೆಯಲ್ಲಿ ತಾಲ್ಲೂಕಿನ ಎಲ್ಲ ಹಳ್ಳಗಳಲ್ಲಿ ವರ್ತಿ ನೀರು ದೊರೆಯುತ್ತಿತ್ತು.

ಆಗ ಹಳ್ಳಗಳು ಬತ್ತಿದಾಗ ವರ್ತಿಗಳೇ ಗ್ರಾಮಸ್ಥರಿಗೆ ನೀರಿನ ಮೂಲಗಳಾಗಿ ಅವರ ದಾಹ ತಣಿಸುತ್ತಿದ್ದವು. ಈಗ ಮರಳೂ ಇಲ್ಲ, ವರ್ತಿಯೂ ಇಲ್ಲ ಎಂಬಂತಾಗಿದೆ.

‘ಮದ್ಲ ನಮ್ಮೂರಿನ ಹಳ್ಳದಾಗ ಆಳೆತ್ತರ ಉಸುಗು ಇತ್ರಿ. ಆವಾಗ ಹಳ್ಳ ಸದಾ ಕಾಲ ತುಂಬಿ ಹರೀತಿತ್ತು. ಆದರ ಉಸುಗನ್ನು ಹೇರಾಕತ್ತಿದ ಮ್ಯಾಲ ಹಳ್ಳದಾಗ ನೀರ ನಿಲ್ಲವಲ್ದು’ ಎಂದು ಬಟ್ಟೂರು ಗ್ರಾಮದ ಹಿರಿಯ ಮಲ್ಲಪ್ಪ ನೋವಿನಿಂದ ಹೇಳಿದರು.

‘ಪಟ್ಟಣದ ಮುಕ್ತಿಮಂದಿರ ರಸ್ತೆಗುಂಟ ದಿನಾಲೂ 3–4 ಟ್ರ್ಯಾಕ್ಟರ್‌ಗಳು ಉಸುಕು ಹೇರಿಕೊಂಡು ವಾಯು ವಿಹಾರಕ್ಕೆ ಹೋಗುತ್ತಿರುವವರನ್ನೂ ಲೆಕ್ಕಿಸದೆ ವೇಗವಾಗಿ ಹೋಗುತ್ತವೆ. ಅವು ಹೋಗುವುದನ್ನು ನೋಡಿದರೆ ಗಾಬರಿ ಆಗುತ್ತದೆ’ ಎಂದು ವಾಯುವಿಹಾರಿ ಸಂತೋಷ ಆತಂಕ ವ್ಯಕ್ತಪಡಿಸಿದರು.

ಮರಳುಗಳ್ಳರ ಹಾವಳಿಗೆ ಕೇದಿಗೆ ಬನ ಸರ್ವನಾಶ

ಹಳ್ಳದಲ್ಲಿ ನೀರು ಹರಿಯುತ್ತಿದ್ದ ಕಾಲದಲ್ಲಿ ಬಟ್ಟೂರು ಗ್ರಾಮದಿಂದ ಹುಲ್ಲೂರು ಗ್ರಾಮದವರೆಗೆ ಹಳ್ಳದ ಎರಡೂ ಬದಿಯಲ್ಲಿ ಹೇರಳವಾಗಿ ಕೇದಿಗೆ ಬೆಳೆಯುತ್ತಿತ್ತು. ಕೇದಿಗೆ ಹೂವು ಈ ಭಾಗದಲ್ಲಿ ಹೆಸರುವಾಸಿ ಆಗಿತ್ತು. ಪ್ರತಿವರ್ಷ ಕಂದಾಯ ಇಲಾಖೆ ಈ ಹೂವನ್ನು ಹರಾಜು ಹಾಕುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಮರಳುಗಳ್ಳರು ಟ್ರ್ಯಾಕ್ಟರ್‌ ಸುಲಭವಾಗಿ ಹಳ್ಳದ ಸಮೀಪ ಬರಲಿ ಎಂದು ಇಡೀ ಕೇದಿಗೆ ಬನಕ್ಕೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ಈಗ ಹಳ್ಳದಗುಂಟ ಎಲ್ಲೂ ಕೇದಿಗೆ ಗಿಡಗಳು ಕಾಣುತ್ತಿಲ್ಲ. ‘ಹಳ್ಳದಾಗಿಂದ ಕ್ಯಾದಿಗಿ ಮಾಯಾಗಿ ಹತ್ತು ವರ್ಷಾತು’ ಎಂದು ಲಕ್ಷ್ಮೇಶ್ವರದ ಹೂವಿನ ವ್ಯಾಪಾರಿ ಮಹಮ್ಮದ್‌ ಸ್ಮರಿಸಿಕೊಂಡರು.

ಡೋಬಿಗಳಿಗೆ ವರದಾನ: ‘ವರ್ಷಪೂರ್ತಿ ಈ ಹಳ್ಳ ನೀರಿನಿಂದ ಕಂಗೊಳಿಸುತ್ತಿತ್ತು. ಅದು ಡೋಬಿಗಳಿಗೆ ವರದಾನವೂ ಆಗಿತ್ತು. ಲಕ್ಷ್ಮೇಶ್ವರದ ಡೋಬಿಗಳು ಹಳ್ಳಕ್ಕೆ ಬಂದು ಬಟ್ಟೆ ತೊಳೆದುಕೊಂಡು ಹೋಗುತ್ತಿದ್ದರು. ‘ನಾವು ಸಣ್ಣವರಿದ್ದಾಗ ಅರಿಬೀನ ಕತ್ತಿ ಮ್ಯಾಲ ತಗೊಂಡು ಹಳ್ಳಕ್ಕ ಹೋಗಿ ಸ್ವಚ್ಛ ಮಾಡಿಕೊಂಡು ಬರತಿದ್ವಿ’ ಲಕ್ಷ್ಮೇಶ್ವರದ ಪುಟ್ಟಪ್ಪ ಮಡಿವಾಳರ ನೆನಪುಮಾಡಿಕೊಂಡರು.

**
ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಅಕ್ರಮ ಮರಳು ದಂಧೆ ನಿಯಂತ್ರಣಕ್ಕೆ ಸೂಕ್ತ ಕ್ರಮಕೈಗೊಳ್ಳಲಾಗುವುದು
ಆರ್‌.ಎಸ್‌. ರೇವಡಿಗಾರ, ತಹಶೀಲ್ದಾರ್‌, ಲಕ್ಷ್ಮೇಶ್ವರ

ನಾಗರಾಜ ಎಸ್‌. ಹಣಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT