ಸೋಮವಾರ, ಡಿಸೆಂಬರ್ 9, 2019
17 °C
ಸಚಿವ ಸುರೇಶ ಅಂಗಡಿ ಹೇಳಿಕೆ

ಕಿತ್ತೂರಲ್ಲಿ ರೈಲ್ವೆ ಕಾರ್ಖಾನೆ ಸ್ಥಾಪನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕಿತ್ತೂರು ಕೈಗಾರಿಕಾ ಪ್ರದೇಶದಲ್ಲಿ ರೈಲ್ವೆ ಇಲಾಖೆಯ ಉತ್ಪನ್ನಗಳ ತಯಾರಿಕೆ ಮತ್ತು ರಫ್ತು ಮಾಡುವ ರೈಲ್ವೆ ಕಾರ್ಖಾನೆ ಸ್ಥಾಪನೆಗೆ ಯೋಜಿಸಲಾಗಿದೆ. ರಾಜ್ಯ ಸರ್ಕಾರ ಸಹಕಾರ ನೀಡಿದರೆ ಶೀಘ್ರವೇ ಆರಂಭಿಸಲಾಗುವುದು’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ತಿಳಿಸಿದರು.

ಇಲ್ಲಿ ಶುಕ್ರವಾರ ನಡೆದ ‘ಮೈಸೂರಿನ ಅಶೋಕಪುರಂ ನಿಲ್ದಾಣದಿಂದ ಬೆಳಗಾವಿವರೆಗೆ ವಿಸ್ತರಿಸಿದ ವಿಶ್ವಮಾನವ ಎಕ್ಸ್‌ಪ್ರೆಸ್‌ ರೈಲು’ ಉದ್ಘಾಟನೆ ಮತ್ತು ಬೆಳಗಾವಿ– ಬೆಂಗಳೂರು ಎಕ್ಸ್‌ಪ್ರೆಸ್‌ ರೈಲಿನ ನಿಯಮಿತ ಸೇವೆ ಆರಂಭ ಹಾಗೂ ಆಧುನಿಕ ಎಲ್.ಎಚ್.ಬಿ. ಬೋಗಿಗಳ ಪರಿವರ್ತನೆ ಘೋಷಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೈಗಾರಿಕೆ ಸ್ಥಾಪನೆಗೆ 300ರಿಂದ 400 ಎಕರೆ ಅಗತ್ಯವಿದೆ. ರಾಜ್ಯವು ಒದಗಿಸಿದರೆ ಹೂಡಿಕೆಗೆ ವಿದೇಶಿ ಕಂಪನಿಗಳು ಮುಂದೆ ಬಂದಿವೆ. ಈ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಯಿಂದ ಉದ್ಯೋಗ ಅವಕಾಶ ಹೆಚ್ಚುತ್ತದೆ’ ಎಂದರು.

‘ನಗರದ ಗೂಡ್ಸ್‌ಶೆಡ್ ಅನ್ನು ಸಾಂಬ್ರಾಕ್ಕೆ ಸ್ಥಳಾಂತರಿಸಲಾಗುತ್ತಿದೆ. ಸಾಂಬ್ರಾ-ಬೆಳಗಾವಿ ಹೆದ್ದಾರಿ ವಿಸ್ತರಣೆಗೆ ಯೋಜನೆ ರೂಪಿಸಲಾಗುತ್ತಿದೆ. 2022ರ ಒಳಗೆ ಎಲ್ಲ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ. ಹೀಗಾಗಿ, ಕಾಮಗಾರಿಗಳನ್ನು ತ್ವರಿತಗೊಳಿಸಲಾಗಿದೆ’ ಎಂದರು.

ಮುಖ್ಯಮಂತ್ರಿಯೊಂದಿಗೆ ನ. 5ರಂದು ಸಭೆ:

‘ರಾಜ್ಯದಲ್ಲೂ ಇಲಾಖೆಯ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸಲು ಚರ್ಚಿಸುವುದಕ್ಕಾಗಿ ನ.5ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಸಭೆ ಆಯೋಜಿಸಲಾಗಿದೆ. ಭೂಸ್ವಾಧೀನಕ್ಕೆ ತೊಂದರೆ ಮೊದಲಾದ ಕಾರಣಗಳಿಂದಾಗಿ ಕೆಲವು ಯೋಜನೆಗಳು ನನೆಗುದಿಗೆ ಬಿದ್ದಿವೆ. ಆ ಬಗ್ಗೆ ಸಮಾಲೋಚಿಸಲಾಗುವುದು’ ಎಂದು ತಿಳಿಸಿದರು.

‘ರೈಲ್ವೆ ಯೋಜನೆಗಳಿಂದ ವಂಚಿತವಾಗಿದ್ದ ಬೆಳಗಾವಿಗೆ ಈಗ ಆದ್ಯತೆ ಸಿಗುತ್ತಿದೆ. ಘಟಪ್ರಭಾ–ಸವದತ್ತಿ–ಧಾರವಾಡ ಮಾರ್ಗವಾಗಿ ಬೆಂಗಳೂರಿಗೆ ಹೊಸ ರೈಲು ಮಾರ್ಗ ರಚಿಸಬೇಕು. ಹೊಸ ಎಕ್ಸ್‌ಪ್ರೆಸ್‌ ರೈಲಿಗೆ ಸವದತ್ತಿ ಯಲ್ಲಮ್ಮ ಹೆಸರಿಡಬೇಕು’ ಎಂದು ಶಾಸಕ ಆನಂದ ಮಾಮನಿ ಒತ್ತಾಯಿಸಿದರು.

ಧರಣಿ ನಡೆಸುವೆ:

‘ಬೆಳಗಾವಿ- ಅಶೋಕಪುರಂ, ಬೆಳಗಾವಿ- ಬೆಂಗಳೂರು ಎಕ್ಸ್‌ಪ್ರೆಸ್‌ ರೈಲುಗಳನ್ನು ಮೀರಜ್‌ವರೆಗೂ ವಿಸ್ತರಣೆ ಮಾಡಬೇಕು. ಹಬ್ಬದ ಸಂದರ್ಭದಲ್ಲಿ ಆರಂಭಿಸಿದ ವಿಶೇಷ ರೈಲು ಮಾರ್ಗಗಳನ್ನು ನಿಯಮಿತಗೊಳಸಬೇಕು. ಇಲ್ಲದಿದ್ದರೆ ಕಾರ್ಯಕರ್ತರೊಂದಿಗೆ ಸಚಿವರ ಮನೆ ಮುಂದೆ ಧರಣಿ ನಡೆಸುತ್ತೇನೆ’ ಎಂದು ಶಾಸಕ ಡಿ.ಎಂ. ಐಹೊಳೆ ಹೇಳಿದರು.

ಶಾಸಕ ಅನಿಲ ಬೆನಕೆ, ‘ಬೆಳಗಾವಿ-ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಸಮಯ ಪಾಲನೆ ಮಾಡುತ್ತಿದೆ. ಆದರೆ, ಟಿಕೆಟ್ ದರ ಇಳಿಸಬೇಕು’ ಎಂದು ಕೋರಿದರು.

‘ರೈಲ್ವೆ ಇಲಾಖೆ ಮತ್ತು ಸೇವೆ ಎಂದರೆ ಬಿಹಾರ, ತಮಿಳುನಾಡಿಗೆ ಎನ್ನುವ ಮಾತನ್ನು ಸುರೇಶ ಅಂಗಡಿ ಬದಲಾಯಿಸುತ್ತಿದ್ದಾರೆ. ಈಗ, ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಈ ಭಾಗದ ತರಕಾರಿಗಳನ್ನು ಮುಂಬೈ ಮೊದಲಾದ ದೊಡ್ಡ ನಗರಗಳಿಗೆ ರವಾನಿಸಲು ವಿಶೇಷ ರೈಲು ಮತ್ತು ವಿಮಾನ ಸೇವೆ ಆರಂಭಗೊಳ್ಳಬೇಕು’ ಎಂದು ವಿಧಾನಪರಿಷತ್‌ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಒತ್ತಾಯಿಸಿದರು.

ಶೀಘ್ರ ಪೂರ್ಣಗೊಳಿಸಿ:

‘ಬೆಳಗಾವಿ-ಕಿತ್ತೂರು-ಧಾರವಾಡ ಯೋಜನೆ ಶೀಘ್ರ ಪೂರ್ಣಗೊಳ್ಳಬೇಕು. ಕಲಬುರ್ಗಿ ಭಾಗಕ್ಕೂ ರೈಲು ಸಂಪರ್ಕ ಕಲ್ಪಿಸಬೇಕು’ ಎಂದು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಆಗ್ರಹಿಸಿದರು.

ಶಾಸಕ ಅಭಯ ಪಾಟೀಲ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ, ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ, ಪೊಲೀಸ್ ಆಯುಕ್ತ ಬಿ.ಎನ್. ಲೋಕೇಶ್‌ಕುಮಾರ್, ರೈಲ್ವೆ ನೈರುತ್ಯ ವಲಯದ ಮುಖ್ಯ ವ್ಯವಸ್ಥಾಪಕ ಅಜಯಕುಮಾರ ಸಿಂಗ್, ರಾಜೇಶ್‌ ಅಗರವಾಲ್ ಇದ್ದರು.

ಪ್ರತಿಕ್ರಿಯಿಸಿ (+)