ಅನಂತಕುಮಾರ್ ನೆನಪು: ರೈಲ್ವೆ ಕ್ವಾಟ್ರರ್ಸ್‌ನಿಂದ ಕೇಂದ್ರ ಮಂತ್ರಿಯ ತನಕ...

7

ಅನಂತಕುಮಾರ್ ನೆನಪು: ರೈಲ್ವೆ ಕ್ವಾಟ್ರರ್ಸ್‌ನಿಂದ ಕೇಂದ್ರ ಮಂತ್ರಿಯ ತನಕ...

Published:
Updated:

ಬಾಲ್ಯದಿಂದಲೂ ನಾವು ಒಟ್ಟಿಗೇ ಬೆಳೆದೆವು. ಹುಬ್ಬಳ್ಳಿಯ ಎಂಟಿಎಸ್‌ ಕಾಲೊನಿಯಲ್ಲಿರುವ ರೈಲ್ವೆ ಕ್ವಾಟ್ರರ್ಸ್‌ನಲ್ಲಿ ಹಿಂದೆ–ಮುಂದೆ ನಮ್ಮ ಮನೆಗಳಿದ್ದವು. ನಮ್ಮ ತಂದೆ ವೆಂಕಟೇಶ ಜೋಶಿ ಮತ್ತು ಅವರ ತಂದೆ ನಾರಾಯಣ ಶಾಸ್ತ್ರಿ ಇಬ್ಬರೂ ರೈಲ್ವೆ ಉದ್ಯೋಗಿಗಳು.

ಕಾಲೊನಿಯಲ್ಲಿದ್ದ ‍ರೈಲ್ವೆ ಶಾಲೆಗೆ ಒಟ್ಟಿಗೇ ಹೋಗುತ್ತಿದ್ದೆವು. ಬೇವಿನಮರದ ಕಟ್ಟೆ ನಮ್ಮ ಎಲ್ಲ ಚಟುವಟಿಕೆಗಳ ಕೇಂದ್ರವಾಗಿತ್ತು. ಕ್ರಿಕೆಟ್‌ ಬಗ್ಗೆ ಇಬ್ಬರಿಗೂ ಆಸಕ್ತಿ ಇತ್ತು. ನಾನು ಆರ್‌ಎಸ್‌ಎಸ್‌ನಲ್ಲಿದ್ದಾಗ ಅವರು ಎಬಿವಿಪಿಯಲ್ಲಿ ಸಕ್ರಿಯರಾಗಿದ್ದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು.

ನಮ್ಮ ಹಾಗೂ ಅವರ ತಂದೆ ಇಬ್ಬರೂ ನಿವೃತ್ತಿಯಾದ ಬಳಿಕ ಇಂದಿರಾ ಕಾಲೊನಿಯಲ್ಲಿ ಮನೆ ಕಟ್ಟಿಸಿದೆವು. ಈಗಲೂ ನಮ್ಮಿಬ್ಬರ ಮನೆ ಅಕ್ಕಪಕ್ಕದಲ್ಲಿಯೇ ಇವೆ. ನಾನು ಅವರ ತಾಯಿಯ ಕೈತುತ್ತು ತಿಂದು ಬೆಳೆದಿದ್ದೇನೆ. ಅನಂತಕುಮಾರ್‌ ಕೂಡ ನಮ್ಮ ಮನೆಗೆ ಬಂದು ಅಮ್ಮನ ಕೈತುತ್ತು ಸವಿದಿದ್ದಾರೆ.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕಾಲೇಜಿನಿಂದ ಹೊರಬಂದು ಹೋರಾಟ ಮಾಡಿದ ಅನಂತಕುಮಾರ್‌ ಜೈಲು ಸೇರಿದರು. ಆಗ, ಅವರ ಕೆಲ ಸ್ನೇಹಿತರು ಮತ್ತು ಸಂಬಂಧಿಕರು ಅನಂತನ ಬದುಕು ಸರ್ವನಾಶವಾಯಿತು ಎಂದು ಟೀಕಿಸಿದ್ದರು. ಆದರೆ, ಅನಂತಕುಮಾರ್‌ ಅವರಿಗೆ ಸಾಮಾಜಿಕ ಹೋರಾಟಗಳ ಮೂಲಕವೇ ಮುಂದೆ ಬರುತ್ತೇನೆಂಬ ದಿಟ್ಟ ಛಲವಿತ್ತು. ಅದನ್ನು ಅವರು ಸಾಧಿಸಿಯೂ ತೋರಿಸಿದರು.

ಈದ್ಗಾ ಮೈದಾನದ ಹೋರಾಟದ ಸಂದರ್ಭದಲ್ಲಿ ನಮ್ಮನ್ನು ಹತ್ತಿಕ್ಕಲು ದೊಡ್ಡ ಪ್ರಯತ್ನ ನಡೆದಿತ್ತು. ಆಗಿನ ಕಾಂಗ್ರೆಸ್‌ ಸರ್ಕಾರ ಮತ್ತು ಪೊಲೀಸರ ವರ್ತನೆ ನೋಡಿದರೆ ನಮ್ಮನ್ನೆಲ್ಲ ಅವರು ಕೊಂದು ಹಾಕುವ ಭಯದ ವಾತಾವರಣವಿತ್ತು. ಆಗ ಅನಂತಕುಮಾರ್‌ ಕಾಶ್ಮೀರ ಪ್ರವಾಸದಲ್ಲಿದ್ದರು. ಅವರು ಮತ್ತು ಯಡಿಯೂರಪ್ಪ ಹುಬ್ಬಳ್ಳಿಗೆ ಬಂದು ಕೈ ಜೋಡಿಸಿದ್ದರಿಂದ ನಮ್ಮ ಹೋರಾಟಕ್ಕೆ ದೊಡ್ಡ ಬಲ ಬಂತು. ನಂತರ ಗೋಲಿಬಾರ್‌ ಆದ ಕಾರಣ, ಹುಬ್ಬಳ್ಳಿಗೆ ಬರುವಂತೆ ಲಾಲಕೃಷ್ಣ ಅಡ್ವಾಣಿ ಅವರನ್ನು ಅನಂತಕುಮಾರ್‌ ಕೇಳಿಕೊಂಡರು. ಅವರ ಒಂದೇ ಮಾತಿಗೆ ಅಡ್ವಾಣಿ ಇಲ್ಲಿಗೆ ಬಂದರು. ರಾಷ್ಟ್ರೀಯ ನಾಯಕರ ಜೊತೆ ಅವರ ಬಾಂಧವ್ಯ ಹೇಗಿತ್ತು ಎಂಬುದು ಇದರಿಂದ ಗೊತ್ತಾಗುತ್ತದೆ.

ಅವರ ನೆನಪಿನ ಶಕ್ತಿ ಅಗಾಧವಾದದ್ದು. ಕಮರಿಪೇಟೆ ಪೊಲೀಸ್‌ ಠಾಣೆಯ ಹತ್ತಿರ ಚಪ್ಪಲಿ ರಿಪೇರಿ ಮಾಡುವ ಮಾರುತಿ ಎಂಬುವವರಿದ್ದರು. ಅನಂತಕುಮಾರ್‌ ಮೊದಲ ಬಾರಿಗೆ ಕೇಂದ್ರ ಸಚಿವರಾದ ಬಳಿಕ ಹುಬ್ಬಳ್ಳಿಗೆ ಬಂದಾಗ ಆ ಅಂಗಡಿಗೆ ಭೇಟಿ ನೀಡಿದ್ದರು. ಸುಮಾರು 20 ವರ್ಷಗಳ ಹಿಂದೆ ಭೇಟಿಯಾಗಿದ್ದ ಕಾರ್ಯಕರ್ತರೊಬ್ಬರನ್ನು ಅದೊಮ್ಮೆ ಸವಾಯಿ ಗಂಧರ್ವ ಹಾಲ್‌ ಬಳಿ ನೋಡಿ ಹೆಸರಿಡಿದು ಕೂಗಿ ಮಾತನಾಡಿಸಿದ್ದರು. ಪಕ್ಷದ ಕಾರ್ಯಕರ್ತರ ಹೆಸರನ್ನು ನೆನಪಿಟ್ಟುಕೊಳ್ಳುತ್ತಿದ್ದ ರೀತಿ ಅಮೋಘವಾಗಿತ್ತು.

ಮಿರ್ಚಿಗೆ ಮನಸೋತಿದ್ದ ಅನಂತ್‌: ಅನಂತಕುಮಾರ್‌ ಹುಬ್ಬಳ್ಳಿಗೆ ಬಂದಾಗಲೊಮ್ಮೆ ‘ಚುರುಮುರಿ, ಮಿರ್ಚಿ ಎಲ್ಲಿ?’ ಎಂದು ಮೊದಲು ಕೇಳುತ್ತಿದ್ದರು. ತಿನ್ನುವಾಗ ಅವರ ಸುತ್ತಲೂ ಕನಿಷ್ಠ ಏಳೆಂಟು ಜನ ಇರಲೇಬೇಕಿತ್ತು. ಎಲ್ಲರ ಜೊತೆ ಹರಟುತ್ತಾ ತಿನ್ನುವುದು ಅವರಿಗೆ ಹೆಚ್ಚು ಖುಷಿ ನೀಡುತ್ತಿತ್ತು. ದುರ್ಗದ ಬೈಲ್‌ನಿಂದ ತರುತ್ತಿದ್ದ ಮಿರ್ಚಿಯನ್ನು ತುಂಬಾ ಇಷ್ಟಪಡುತ್ತಿದ್ದರು.

ಊಟದ ವಿಷಯದಲ್ಲಿ ಅಚ್ಚುಕಟ್ಟುತನ ಹೊಂದಿದ್ದರು. ಸಂಸತ್‌ ಅಧಿವೇಶನದಲ್ಲಿ ಪಾಲ್ಗೊಳ್ಳಲು ದೆಹಲಿಗೆ ಹೋದಾಗ ತಾವು ಹೋಗುವ ವಿಮಾನದಲ್ಲಿಯೇ ನನಗೂ ಬರಲು ಹೇಳುತ್ತಿದ್ದರು. ‘ನೀನು ಹುಬ್ಬಳ್ಳಿಯಿಂದ ಜೋಳದ ರೊಟ್ಟಿ ತೊಗೊಂಡು ಬರೋದು ಮರೀಬ್ಯಾಡ’ ಅನ್ನುತ್ತಿದ್ದರು. ದೆಹಲಿಯಲ್ಲಿದ್ದಾಗ ಸಂಸತ್ತಿನಲ್ಲಿ ಕ್ಯಾಂಟೀನ್‌ಗೆ ಊಟಕ್ಕೆ ಹೋಗುತ್ತಿದ್ದೆ. ಅದನ್ನು ನೋಡಿದ್ದ ಅವರು, ‘ಕ್ಯಾಂಟೀನ್‌ನಲ್ಲಿ ಊಟ ಮಾಡಬೇಡ. ಮನೆಯಿಂದಲೇ ಊಟ ತರಿಸುತ್ತೇನೆ. ನನ್ನೊಂದಿಗೇ ಊಟ ಮಾಡು’ ಅನ್ನುತ್ತಿದ್ದರು. ದೆಹಲಿಯಿಂದ ಮರಳುವಾಗಲೂ ಅವರೇ ಮನೆ ಊಟ ತರಿಸುತ್ತಿದ್ದರು.

ರೈಲ್ವೆ ಕ್ವಾರ್ಟರ್ಸ್‌ನ ಮನೆಯಲ್ಲಿ ಬದುಕು ಆರಂಭಿಸಿದ ಅನಂತಕುಮಾರ್‌ ನನಗೆ ದೊಡ್ಡ ಶಕ್ತಿಯಾಗಿದ್ದರು. ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದರು. ಅರೋಗ್ಯದ ಬಗ್ಗೆ ಎಚ್ಚರದಿಂದ ಇರುವಂತೆ ನನಗೂ ಕಿವಿಮಾತು ಹೇಳುತ್ತಿದ್ದರು. ಹೀಗೆ ಬದುಕಿನ ಪ್ರತಿ ಹಂತದಲ್ಲಿ ಅವರ ಜೊತೆಯಲ್ಲಿಯೇ ಹೆಜ್ಜೆ ಹಾಕಿದ್ದೇನೆ. ಆದರೆ, ಅವರೊಂದಿಗಿನ ನೆನಪುಗಳ ಬಗ್ಗೆ ನಾನು ಹೀಗೆ ಬರೆಯಬೇಕಾಗಿ ಬರಬಹುದೆಂಬ ಸಣ್ಣ ನಿರೀಕ್ಷೆಯೂ ನನಗಿರಲಿಲ್ಲ.

ನಿರೂಪಣೆ: ಪ್ರಮೋದ ಜಿ.ಕೆ.

ಬರಹ ಇಷ್ಟವಾಯಿತೆ?

 • 18

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !