ಸೋಮವಾರ, ಅಕ್ಟೋಬರ್ 21, 2019
24 °C

ಹಿಂಗಾರು ಆರ್ಭಟ: ಸಿಡಿಲಿಗೆ ಮೂರು ಬಲಿ

Published:
Updated:

ಬೆಂಗಳೂರು: ಉತ್ತರ ಕರ್ನಾಟಕದ ವಿವಿಧೆಡೆ ಶುಕ್ರವಾರ ಹಿಂಗಾರು ಆರ್ಭಟಿಸಿದೆ. ಬಳ್ಳಾರಿ, ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಗುಡುಗು, ಸಿಡಿಲು ಸಹಿತ ಸಾಧಾರಣ ಮಳೆಯಾಗಿದೆ.

ಬೆಳಗಾವಿ ನಗರದಲ್ಲಿ ಮಧ್ಯಾಹ್ನದಿಂದ ಸಂಜೆವರೆಗೆ ಜಿಟಿಜಿಟಿ ಮಳೆಯಾಯಿತು. ಅಥಣಿ ತಾಲ್ಲೂಕಿನ ದರೂರಿನಲ್ಲಿ ಸಂತ್ರಸ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಳೆಯಿಂದಾಗಿ ಭಾಷಣ ಮೊಟಕುಗೊಳಿಸಿ ಬಾಗಲಕೋಟೆಗೆ ತೆರಳಿದರು. ಕಿತ್ತೂರು, ಖಾನಾಪುರ, ಹಿರೇಬಾಗೇವಾಡಿ, ಬೈಲಹೊಂಗಲ, ರಾಯಬಾಗ ಹಾಗೂ ಶಿರಸಿಯಲ್ಲಿ ಸಾಧಾರಣ ಮಳೆಯಾಯಿತು.

ಸಾಧಾರಣ ಮಳೆ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಕೋಣಂದೂರು, ಶಿಕಾರಿಪುರ, ಶಿರಾಳಕೊಪ್ಪ, ರಿಪ್ಪನ್‌ಪೇಟೆ, ಹೊಸನಗರದಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ. ಶಿವಮೊಗ್ಗ ನಗರ, ಸೊರಬ, ಸಾಗರ, ಭದ್ರಾವತಿ ಸುತ್ತಮುತ್ತ ತುಂತುರು ಮಳೆಯಾಗಿದೆ.

ದಾವಣಗೆರೆ, ಚಿತ್ರದುರ್ಗದ ವಿವಿಧೆಡೆ ಶುಕ್ರವಾರ ಮಧ್ಯಾಹ್ನದ ನಂತರ ಅರ್ಧ ತಾಸಿಗೂ ಅಧಿಕ ಹೊತ್ತು ಧಾರಾಕಾರ ಮಳೆಯಾಗಿದೆ.  ಹೊಸದುರ್ಗ ತಾಲ್ಲೂಕಿನ ಹಲವೆಡೆ ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ 12 ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಕಲಬುರ್ಗಿ, ಬಳ್ಳಾರಿಯಲ್ಲಿ ಅವಘಡ

ಕಲಬುರ್ಗಿ ಜಿಲ್ಲೆ ಸೇಡಂ ತಾಲ್ಲೂಕಿನ ಸೋಂಪಳ್ಳಿಯ ಹೊಲದಲ್ಲಿ ಶುಕ್ರವಾರ ಸಿಡಿಲು ಬಡಿದು ಪತಿ– ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.

ಸಿಡಿಲಿನ ಹೊಡೆತಕ್ಕೆ ಕೊಂತನಪಲ್ಲಿ ಗ್ರಾಮದ ಖಾಜಾಮಿಯಾ (35), ಅವರ ಪತ್ನಿ ಪರ್ಜಾನಾ (28) ಸಾವನ್ನಪ್ಪಿದರು. ಇದೇ ಊರಿನ ಶಾರದಮ್ಮ, ಪಾರ್ವತಮ್ಮ, ಯಲ್ಲಪ್ಪ, ಆನಂದಪ್ಪ ಅವರಿಗೆ ಗಾಯಗಳಾಗಿವೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು,  ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳ್ಳಾರಿ ಜಿಲ್ಲೆ ಕುರುಗೋಡು ತಾಲ್ಲೂಕಿನ ಸಿದ್ದಮ್ಮನಹಳ್ಳಿಯಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಿಡಿಲು ಬಡಿದು ರೈತ ಶಿವಕುಮಾರ (30) ಮೃತಪಟ್ಟಿದ್ದಾರೆ.

Post Comments (+)