ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಕ್ರಾಡಿ: ಸಿಡಿಲ ಆಘಾತಕ್ಕೆ ಇಬ್ಬರು ಬಲಿ

ರಾಜ್ಯದ ಕೆಲವೆಡೆ ಸಿಡಿಲು, ಆಲಿಕಲ್ಲು ಮಳೆ
Last Updated 5 ಏಪ್ರಿಲ್ 2019, 19:02 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ದಕ್ಷಿಣ ಕನ್ನಡ, ಶಿವಮೊಗ್ಗ, ಧಾರವಾಡ, ಬೆಳಗಾವಿ ಹಾಗೂ ಕಲಬುರ್ಗಿ ಜಿಲ್ಲೆಯ ಕೆಲವೆಡೆ ಶುಕ್ರವಾರ ಗುಡುಗು, ಸಿಡಿಲು, ಆಲಿಕಲ್ಲು ಸಹಿತ ಮಳೆಯಾಗಿದೆ. ಬೆಳ್ತಂಗಡಿ ತಾಲ್ಲೂಕಿನ ಕೊಕ್ರಾಡಿ ಗ್ರಾಮದ ಬನತ್ಯರಡ್ಡ ಎಂಬಲ್ಲಿ ಗುರುವಾರ ರಾತ್ರಿ ಸಿಡಿಲಿನ ಆಘಾತದಿಂದ ಕೃಷಿಕರಾದ ಸಂಜೀವ ಮೂಲ್ಯ (55), ಅವರ ಪತ್ನಿ ಸರೋಜಿನಿ (50) ಮೃತಪಟ್ಟಿದ್ದಾರೆ.

ಸಿಡಿಲಿನ ಆಘಾತದಿಂದ ಮನೆಯ ವಿದ್ಯುತ್ ತಂತಿಯಲ್ಲಿ ಒಮ್ಮೆಲೇ ಅಧಿಕ ಪ್ರಮಾಣದ ವಿದ್ಯುತ್‌ ಹರಿಯಿತು. ಇದರಿಂದ ಆಘಾತಕ್ಕೆ ಒಳಗಾಗಿ ಸರೋಜಿನಿ ಅವರು ಕುಸಿದು ಬಿದ್ದರು. ಅವರನ್ನು ಬದುಕಿಸಲು ತೆರಳಿದ ಸಂಜೀವ ಮೂಲ್ಯ ಅವರೂ ಆಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಮೃತಪಟ್ಟರು.

ಶುಕ್ರವಾರ ಸಂಜೆ ಸುಬ್ರಹ್ಮಣ್ಯ ಸುತ್ತಮುತ್ತ ಸುಮಾರು ಅರ್ಧ ಗಂಟೆ ಹೊತ್ತು ಗುಡುಗು, ಮಿಂಚು, ಗಾಳಿಯಿಂದ ಕೂಡಿದ ಆಲಿಕಲ್ಲು ಮಳೆ ಸರಿಯಿತು. ಭಾರಿ ಮಳೆಯಿಂದಾಗಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಯಿತು. ಸುಳ್ಯ, ಪುತ್ತೂರು ಸುತ್ತಮುತ್ತ ಸಹ ಗಾಳಿಯಿಂದ ಕೂಡಿದ ಮಳೆ ಸುರಿಯಿತು.

ಶಿವಮೊಗ್ಗ ಜಿಲ್ಲೆಯ ಕೆಲವೆಡೆ ಶುಕ್ರವಾರ ಗುಡುಗು, ಸಿಡಿಲು ಸಹಿತ ಸಾಧಾರಣ ಮಳೆಯಾಗಿದೆ. ಶಿಕಾರಿಪುರ, ಸೊರಬ, ಸಾಗರ, ಹೊಸನಗರ, ರಿಪ್ಪನ್‌ಪೇಟೆಯಲ್ಲಿ ಗುಡುಗು ಸಹಿತ ಮಳೆಯಾಗಿದೆ. ಶಿವಮೊಗ್ಗ ನಗರ, ತೀರ್ಥಹಳ್ಳಿ ತಾಲ್ಲೂಕಿನ ಸುತ್ತಮುತ್ತ ಮೋಡ ಕವಿದ ವಾತಾವರಣ ಇತ್ತು.

ಧಾರವಾಡದಲ್ಲಿ ಅರ್ಧತಾಸು ಬಿರುಸಾಗಿ ಸುರಿದಿದ್ದು, ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಒಂದು ತಾಸು ಧಾರಾಕಾರ ಮಳೆಯಾಗಿದೆ. ಭಾರಿ ಗಾಳಿಗೆ ವಿದ್ಯುತ್‌ ಕಂಬಗಳು, ಗಿಡಗಳು ನೆಲಕ್ಕುರುಳಿವೆ. ರಾಮದುರ್ಗ ಹಾಗೂ ಕಿತ್ತೂರು ಸುತ್ತಮುತ್ತಲಿನಲ್ಲಿ ಕೆಲ ಕಾಲ ಜಿಟಿಜಿಟಿ ಮಳೆಯಾಗಿದೆ.

ಕಲಬುರ್ಗಿ ಜಿಲ್ಲೆ ಸೇಡಂ ಪಟ್ಟಣದಲ್ಲಿ ಶುಕ್ರವಾರ ಉತ್ತಮ ಮಳೆಯಾಗಿದ್ದು, ತಾಲ್ಲೂಕಿನ ಮುಧೋಳ, ಆಡಕಿ, ಕೋಡ್ಲಾ, ಅಳ್ಳೋಳ್ಳಿ, ಮಳಖೇಡ, ತೆಲ್ಕೂರ, ಹಾಬಾಳ, ಕುರಕುಂಟಾ ಮತ್ತಿತರೆಡೆತುಂತುರು ಮಳೆಯಾಯಿತು.

ಚಿಂಚೋಳಿ ತಾಲ್ಲೂಕಿನ ವಿವಿಧೆಡೆಯೂ ಬಿರುಗಾಳಿ ಸಹಿತ ಮಳೆ ಸುರಿಯಿತು. ಚಿಂಚೋಳಿ, ಕುಸ್ರಂಪಳ್ಳಿ, ಗೊಟ್ಟಂಗೊಟ್ಟ, ಕುಂಚಾವರಂ, ಸುಲೇಪೇಟ ಮೊದಲಾದ ಕಡೆಗಳಲ್ಲಿ ಸಾಧಾರಣ ಮಳೆಯಾದರೆ, ಶಾದಿಪುರ, ವೆಂಕಟಾಪುರ, ಚಿಕ್ಕಲಿಂಗದಳ್ಳಿ ಸುತ್ತಲೂ ಆಲಿಕಲ್ಲು ಮಳೆ ಸುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT