ಕರಾವಳಿ ಭಾಗದಲ್ಲಿ ಬಿರುಸಿನ ಮಳೆ

ಶನಿವಾರ, ಜೂಲೈ 20, 2019
25 °C

ಕರಾವಳಿ ಭಾಗದಲ್ಲಿ ಬಿರುಸಿನ ಮಳೆ

Published:
Updated:
Prajavani

ಬೆಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಮಾತ್ರ ಗುರುವಾರ ಬೆಳಿಗ್ಗೆಯಿಂದ ಮಳೆ ಸುರಿಯಿತಾದರೂ, ಮಧ್ಯಾಹ್ನದ ನಂತರ ಬಿಡುವು ನೀಡಿತು. ಮಲೆನಾಡು ಭಾಗದಲ್ಲಿ ಮಳೆಯಾಗಿಲ್ಲ.

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಸುಮಾರು ಮೂರು ತಾಸು ಉತ್ತಮ ಮಳೆಯಾಗಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ, ರಾಯಬಾಗ ಹಾಗೂ ಬೈಲಹೊಂಗದಲ್ಲಿ ಸಾಧಾರಣ ಮಳೆಯಾಗಿದೆ.

ಕಾರವಾರದಲ್ಲಿ ಬೆಳಿಗ್ಗೆ ಭಾರಿ ಗುಡುಗು, ಸಿಡಿಲಿನೊಂದಿಗೆ ಧಾರಾಕಾರ ಮಳೆ ಸುರಿದರೂ ಮಧ್ಯಾಹ್ನದ ಹೊತ್ತಿಗೆ ಬಿಸಿಲು ಕಾಣಿಸಿಕೊಂಡಿತ್ತು. ಹಳಿಯಾಳದಲ್ಲಿ ಬೆಳಿಗ್ಗೆ ಒಂದು ತಾಸು ಉತ್ತಮ ಮಳೆಯಾಗಿದೆ. ಶಿರಸಿ, ಸಿದ್ದಾಪುರ, ಯಲ್ಲಾಪುರದಲ್ಲಿ ಸಾಧಾರಣ ಹಾಗೂ ಮುಂಡಗೋಡದಲ್ಲಿ ತುಂತುರು ಮಳೆಯಾಗಿದೆ. ಭಟ್ಕಳ ತಾಲ್ಲೂಕಿನಲ್ಲಿ ಕೆಲವು ತಾಸು ಉತ್ತಮ ಮಳೆಯಾಗಿದೆ.

ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಿಗ್ಗೆ ಸುರಿದ ಮಳೆಗೆ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಆತ್ಮಲಿಂಗದವರೆಗೆ ನೀರು ತುಂಬಿಕೊಂಡಿತ್ತು. ಇದರಿಂದ ಸುಮಾರು ಎರಡು ತಾಸು ಭಕ್ತರಿಗೆ ಪೂಜೆಗೆ ಅವಕಾಶವಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ರಭಸದ ಮಳೆಗೆ ಸವದತ್ತಿಯ ಯಲ್ಲಮ್ಮನಗುಡ್ಡದಲ್ಲಿರುವ ಕೆರೆ, ಹೊಂಡಗಳು ತುಂಬಿ ನೀರು ಉಕ್ಕಿ ಹರಿದಿದೆ.

ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಹಾಗೂ ಚಿಕ್ಕಮಗಳೂರಿನ ಕೆಲ ಭಾಗಗಳಲ್ಲಿ ಗುರುವಾರ ಸಾಧಾರಣ ಮಳೆಯಾಗಿದೆ. ಮುಂಜಾನೆ ವೇಳೆ ಬಿರುಸಾಗಿದ್ದ ಮಳೆ ಮಧ್ಯಾಹ್ನ, ಸಂಜೆ ಹೊತ್ತಿಗೆ ತುಂತುರಾಗಿ ಸುರಿದಿದೆ.

ಉಪ್ಪಳ ಸಮೀಪದ ಮುಸೋಡಿಯಲ್ಲಿ ಕಡಲ್ಕೊರೆತಕ್ಕೆ ಸಿಲುಕಿ ಸುಮಾರು 28 ತೆಂಗಿನ ಮರಗಳು ಸಮುದ್ರ ಪಾಲಾಗಿವೆ. ಮುಸೋಡಿಯ ಮಹಮ್ಮದ್ ಹಾಗೂ ನಫೀಸಾ ಅವರ ಮನೆಗಳು ಅಪಾಯಕ್ಕೆ ಸಿಲುಕಿವೆ.

ಸಾಧಾರಣ ಮಳೆ: ಕೊಡಗು ಜಿಲ್ಲೆಯ ಸುಂಟಿಕೊಪ್ಪ, ನಾಪೋಕ್ಲು ಹಾಗೂ ಮಡಿಕೇರಿಯಲ್ಲಿ ಗುರುವಾರ ಸಂಜೆ ಸಾಧಾರಣ ಮಳೆಯಾಗಿದೆ.

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !