ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆಯಾಗಿ ಆತಂಕ ಹೆಚ್ಚಿಸಿದ ವರುಣ!

5 ತಾಲ್ಲೂಕುಗಳಲ್ಲಿ ಮಳೆ ಕೊರತೆ, 5ರಲ್ಲಿ ವಾಡಿಕೆಗಿಂತಲೂ ಹೆಚ್ಚು
Last Updated 18 ಜುಲೈ 2019, 19:54 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಈ ಸಂದರ್ಭದಲ್ಲಿ ಆರ್ಭಟಿಸುತ್ತಿದ್ದ ವರುಣ ಈ ಬಾರಿ ಕಣ್ಣಾಮುಚ್ಚಾಲೆ ಆಡುತ್ತಿರುವುದರಿಂದ ಕೃಷಿ ಚಟುವಟಿಕೆಗಳ ಮೇಲೆ ‘ಕಾರ್ಮೋಡ’ ಕವಿದಿದೆ.‌

ರೈತರು ಮಳೆ ಬರಬಹುದೆಂಬ ನಿರೀಕ್ಷೆ, ನಂಬಿಕೆಯಲ್ಲಿ ಅದೃಷ್ಟವನ್ನು ಪಣಕ್ಕಿಟ್ಟು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ವಿಳಂಬವಾಗಿ ಆರಂಭವಾಗಿದ್ದ ಮುಂಗಾರು ಮಳೆಯು, ಜುಲೈನಲ್ಲಿ ಉತ್ತಮವಾಗಿ ಸುರಿದು ಅನ್ನದಾತರು ಸೇರಿದಂತೆ ಎಲ್ಲರಲ್ಲೂ ಆಶಾಭಾವನೆ ಮೂಡಿಸಿತ್ತು. ಆದರೆ, ಬಹುತೇಕ ಕಳೆದೊಂದು ವಾರದಿಂದ ಕೆಲವೆಡೆ ಬಿಟ್ಟರೆ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮಳೆಯಾಗಿಲ್ಲ. ಗುರುವಾರ ಬೈಲಹೊಂಗಲ, ಸವದತ್ತಿಯಲ್ಲಷ್ಟೇ ವರ್ಷಧಾರೆಯಾಗಿದೆ.

ಕೃಷಿ ಇಲಾಖೆ ಮಾಹಿತಿ ಪ್ರಕಾರ, ಜೂನ್‌ 1ರಿಂದ ಜುಲೈ 18ರವರೆಗೆ ಅಥಣಿ, ಬೈಲಹೊಂಗಲ, ಬೆಳಗಾವಿ, ರಾಮದುರ್ಗ ಹಾಗೂ ರಾಯಬಾಗ ತಾಲ್ಲೂಕುಗಳಲ್ಲಿ ಮಳೆ ಕೊರತೆ ಕಂಡುಬಂದಿದೆ. ಉಳಿದಂತೆ ಚಿಕ್ಕೋಡಿ, ಗೋಕಾಕ, ಹುಕ್ಕೇರಿ, ಖಾನಾಪುರ, ರಾಯಬಾಗ ತಾಲ್ಲೂಕುಗಳಲ್ಲಿ ವಾಡಿಕೆಗಿಂತಲೂ ಹೆಚ್ಚಿನ ಮಳೆಯಾಗಿರುವುದು ದಾಖಲಾಗಿದೆ.

ಜೂನ್ ತಿಂಗಳಲ್ಲಿ ಬಹುತೇಕ ಸಮಾಧಾನಕರ ಮಳೆ ಬರಲಿಲ್ಲ. ಜುಲೈ ಮೊದಲ ವಾರದಲ್ಲಷ್ಟೇ ಅಲ್ಲಲ್ಲಿ ಚದುರಿದಂತೆ, ಕೆಲವು ಕಡೆಗಳಲ್ಲಿ ಜೋರಾಗಿಯೇ ಮಳೆಯಾಗಿದೆ. ಕೆಲವು ತಾಲ್ಲೂಕುಗಳಲ್ಲಷ್ಟೇ ಉತ್ತಮ ಪ್ರಮಾಣದಲ್ಲಿ ಮಳೆ ಆಗಿರುವುದನ್ನು ಅಂಕಿ–ಅಂಶಗಳು ಹೇಳುತ್ತಿವೆ.

ದುರ್ಬಲ ಮುಂಗಾರು:

ದುರ್ಬಲ ಮುಂಗಾರಿನಿಂದಾಗಿ ಜಲಾಶಯಗಳಲ್ಲಿನ ನೀರಿನ ಮಟ್ಟದಲ್ಲೂ ಗಮನಾರ್ಹ ಪ್ರಮಾಣದಲ್ಲಿನ ಏರಿಕೆಯೇನೂ ಕಂಡುಬಂದಿಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ. ಘಟಪ್ರಭಾ ಹಾಗೂ ಮಲಪ್ರಭಾ ಜಲಾಶಯಗಳಿಗೆ ಕೆಲವು ದಿನಗಳ ಹಿಂದೆ ಐದಂಕಿಗಳಲ್ಲಿದ್ದ ಒಳಹರಿವಿನ ಪ್ರಮಾಣ ಈಚೆಗೆ ನಾಲ್ಕಂಕಿಗೆ ಇಳಿದಿದೆ. ಹೀಗಾಗಿ, ಜಲಾಶಯಗಳ ಒಡಲು ವೇಗವಾಗಿ ತುಂಬುತ್ತಿಲ್ಲ.

ಇಲ್ಲಿ ಮುಂಗಾರು ಹಂಗಾಮಿನಲ್ಲಿ 7,18,351 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈ ಪೈಕಿ ಇತ್ತೀಚಿನ ಮಾಹಿತಿಯಂತೆ, 4,72,622 ಹೆಕ್ಟೇರ್‌ ಪ್ರದೇಶದಲ್ಲಿ ಅಂದರೆ ಶೇ 66ರಷ್ಟು ಮಾತ್ರ ಬಿತ್ತನೆಯಾಗಿದೆ. ಜುಲೈ 3ನೇ ವಾರ ಮುಗಿಯುತ್ತಾ ಬಂದರೂ ಬಿತ್ತನೆ ಪ್ರಮಾಣದಲ್ಲಿ ತೀವ್ರ ಪ್ರಗತಿ ಕಂಡುಬಂದಿಲ್ಲ.

ಬೈಲಹೊಂಗಲದಲ್ಲಿ ಅತಿ ಕಡಿಮೆ

ಬೈಲಹೊಂಗಲ ತಾಲ್ಲೂಕಿನಲ್ಲಿ ಅತಿ ಕಡಿಮೆ ಅಂದರೆ ಶೇ 32ರಷ್ಟು ಮಾತ್ರವೇ ಬಿತ್ತನೆಯಾಗಿದೆ! ಹುಕ್ಕೇರಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ ಶೇ 91ರಷ್ಟು ಬಿತ್ತನೆ ಕಾರ್ಯ ಮುಗಿದಿದೆ. ಉಳಿದಂತೆ ಅಥಣಿಯಲ್ಲಿ ಶೇ 61, ಬೆಳಗಾವಿ ಶೇ 68, ಚಿಕ್ಕೋಡಿ ಶೇ 73, ಗೋಕಾಕ ಶೇ 69, ಖಾನಾಪುರ ಶೇ 79, ರಾಯಬಾಗ ಶೇ 64, ರಾಮದುರ್ಗ ಶೇ 66 ಹಾಗೂ ಸವದತ್ತಿಯಲ್ಲಿ ಶೇ 63ರಷ್ಟು ಬಿತ್ತನೆಯಾಗಿದೆ.

ಜಿಲ್ಲೆಯಲ್ಲಿ ಜೂನ್ 1ರಿಂದ ಜುಲೈ 17ರವರೆಗೆ ವಾಡಿಕೆ ಪ್ರಕಾರ 273 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, 287 ಮಿ.ಮೀ. ಮಳೆಯಾಗಿದೆ. ಅಂದರೆ ವಾಡಿಕೆಗಿಂತಲೂ ಹೆಚ್ಚು. ಆದರೆ, ಇದು ಎಲ್ಲ ತಾಲ್ಲೂಕುಗಳಲ್ಲೂ ಹಂಚಿಕೆಯಾಗಿಲ್ಲ. ಕೆಲವು ತಾಲ್ಲೂಕುಗಳಲ್ಲಷ್ಟೇ ವಾಡಿಕೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಿದ್ದಿದೆ. ಜಿಲ್ಲಾ ಸರಾಸರಿ ಸಮಾಧಾನಕರವಾಗಿದ್ದರೂ ತಾಲ್ಲೂಕು ಸರಾಸರಿಯಲ್ಲಿ ನಿರಾಶಾದಾಯಕ ಪರಿಸ್ಥಿತಿ ಇದೆ.

ಗೋಕಾಕ ತಾಲ್ಲೂಕಿನಲ್ಲಿ ಪ್ಲಸ್!:

ಗೋಕಾಕ ತಾಲ್ಲೂಕಿನಲ್ಲಿ ವಾಡಿಕೆಗಿಂತ ಅತಿ ಹೆಚ್ಚು ಅಂದರೆ ಶೇ 38ರಷ್ಟು ಹೆಚ್ಚಿನ ಮಳೆಯಾಗಿದೆ. ನಂತರದ ಸ್ಥಾನದಲ್ಲಿ ಚಿಕ್ಕೋಡಿ ಶೇ 32, ಹುಕ್ಕೇರಿ ಶೇ 21, ಖಾನಾಪುರ ಶೇ 14, ರಾಯಬಾಗ ಶೇ 8ರಷ್ಟು ಪ್ಲಸ್ ಆಗಿದೆ.

ಬೆಳಗಾವಿಯಲ್ಲಿ ಶೇ 19, ಅಥಣಿ ಶೇ 10, ಬೈಲಹೊಂಗಲ ಶೇ 15, ರಾಮದುರ್ಗ ಶೇ 8 ಹಾಗೂ ಸವದತ್ತಿಯಲ್ಲಿ ಶೇ 5ರಷ್ಟು ಕಡಿಮೆ (ಮೈನಸ್‌) ಮಳೆಯಾದ ಬಗ್ಗೆ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT