ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾ, ತುಂಗಭದ್ರಾ ಪ್ರವಾಹ ಏರುಗತಿ: ಕೆಲವು ಜಿಲ್ಲೆಗಳಲ್ಲಿ ಇನ್ನೂ ರೆಡ್‌ ಅಲರ್ಟ್

ಕೊಪ್ಪರ ನರಸಿಂಹಸ್ವಾಮಿ ದೇವಸ್ಥಾನ ಜಲಾವೃತ * ಶಹಾಪುರ – ದೇವದುರ್ಗ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತ
Last Updated 23 ಅಕ್ಟೋಬರ್ 2019, 18:49 IST
ಅಕ್ಷರ ಗಾತ್ರ

ಬೆಂಗಳೂರು: ರಾಯಚೂರು ಜಿಲ್ಲೆಯಲ್ಲಿ ಕೃಷ್ಣಾ ಹಾಗೂ ತುಂಗಭದ್ರಾ ನದಿಗಳಲ್ಲಿ ಪ್ರವಾಹ ಏರುಗತಿಯಲ್ಲಿದೆ. ನಾರಾಯಣಪುರ ಜಲಾಶಯದಿಂದ ಹೊರಬಿಡುವ ನೀರಿನ ಪ್ರಮಾಣ 3.72 ಲಕ್ಷ ಕ್ಯುಸೆಕ್‌ಗೆ ತಲುಪಿದೆ.

ಕಲಬುರ್ಗಿ ಮತ್ತು ಬೀದರ್ ಮಾರ್ಗಗಳಿಂದ ರಾಯಚೂರು ಸಂಪರ್ಕಿಸುವ ದೇವದುರ್ಗ ತಾಲ್ಲೂಕಿನ ಹೂವಿನಹೆಡಗಿ ಸೇತುವೆಯು ಕೃಷ್ಣಾ ನದಿಯಲ್ಲಿ ಮುಳುಗಡೆಯಾಗಿದೆ. ವಾಹನಗಳು ಹೆಚ್ಚುವರಿ 50 ಕಿ.ಮೀ. ಸುತ್ತವರಿದು ತಿಂಥಣಿ, ಜಾಲಹಳ್ಳಿ ಮೂಲಕ ರಾಯಚೂರಿಗೆ ಬರುತ್ತಿವೆ. ಸುಕ್ಷೇತ್ರ ಕೊಪ್ಪರ ನರಸಿಂಹಸ್ವಾಮಿ ದೇವಸ್ಥಾನ ಜಲಾವೃತವಾಗಿದೆ.

ತುಂಗಭದ್ರಾಗೆ 1.86 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಮಂತ್ರಾಲಯದಲ್ಲಿ ಸ್ನಾನಘಟ್ಟಗಳು ಮತ್ತು ಮಾನ್ವಿ ತಾಲ್ಲೂಕಿನ ಚೀಕಲಪರ್ವಿ ವಿಜಯದಾಸರ ಕಟ್ಟೆ ಜಲಾವೃತವಾಗಿದೆ.

ಶಹಾಪುರ ತಾಲ್ಲೂಕಿನ ಕೊಳ್ಳೂರ (ಎಂ) ಸೇತುವೆ ಮುಳುಗಡೆಯಾಗಿದ್ದು, ಶಹಾಪುರ–ದೇವದುರ್ಗ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.

ಭೀಮಾ ನದಿಗೂ ನೀರು: ಮಹಾರಾಷ್ಟ್ರದ ಮಳೆಗೆ ಭೀಮಾ ನದಿತುಂಬಿ ಹರಿಯುತ್ತಿವೆ. ಸದ್ಯ 52 ಸಾವಿರ್ ಕ್ಯುಸೆಕ್ ನೀರಿನ ಹರಿವು ಇದೆ.

ಮೈಸೂರು ಹಾಗೂ ಕೊಡಗು ಜಿಲ್ಲೆಯಾದ್ಯಂತ ಬುಧವಾರವೂ ಮಳೆ ಮುಂದುವರಿದಿದೆ. ಹಾಸನ, ಚಾಮರಾಜ
ನಗರ ಹಾಗೂ ಮಂಡ್ಯದಲ್ಲಿ ಕ್ಷೀಣಿಸಿದೆ.

ಮೈಸೂರಿನಲ್ಲಿ ಮಧ್ಯಾಹ್ನ ಒಂದೂವರೆ ತಾಸು ಬಿರುಸಿನ ಮಳೆಯಾಗಿದೆ. ಸಾಲಿಗ್ರಾಮದ ಸರ್ಕಾರಿ ಶಾಲೆಯ ಗೋಡೆ ನೆಲಕಚ್ಚಿದೆ.

ಕಳೆದ ಮೂರು ದಿನಗಳಲ್ಲಿ ಸುರಿದ ಮಳೆಗೆ, ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ 42 ಮನೆಗಳು ಹಾನಿಗೀಡಾಗಿವೆ. ಬೇಲೂರು, ಹಳೇಬೀಡಿನಲ್ಲಿ ಹಾಗೂ ಶ್ರವಣಬೆಳಗೊಳ ಹೋಬಳಿ ವ್ಯಾಪ್ತಿಯಲ್ಲಿ ಮಂಗಳವಾರ ತಡರಾತ್ರಿ ನಾಲ್ಕು ಮನೆಗಳಿಗೆ ಹಾನಿಯಾಗಿದೆ.

ಕೊಡಗು ಜಿಲ್ಲೆಯ ಮಡಿಕೇರಿ, ತಲಕಾವೇರಿ, ಭಾಗಮಂಡಲ, ನಾಪೋಕ್ಲು, ಬೆಟ್ಟಗೇರಿ, ಚೆಟ್ಟಿಮಾನಿ, ಅಪ್ಪಂಗಳ, ಕಾಟಕೇರಿ, ಮದೆನಾಡು ವ್ಯಾಪ್ತಿಯಲ್ಲಿ ಉತ್ತಮ ಮಳೆ ಸುರಿದಿದೆ. ಕಾವೇರಿ ನದಿ, ಹಳ್ಳಕೊಳ್ಳಗಳು ಮೈದುಂಬಿಕೊಂಡಿದ್ದು, ಹಾರಂಗಿ ಜಲಾಶಯದ ನೀರಿನಮಟ್ಟ ಏರಿಕೆ ಕಂಡಿದೆ.

ನಾಗಮಂಗಲದಲ್ಲಿ ರೆಡ್ ಅಲರ್ಟ್: ನಾಗಮಂಗಲ ತಾಲ್ಲೂಕಿನಲ್ಲಿ ರೆಡ್ ಅಲರ್ಟ್ ಘೋಷಿಸಿದ್ದು, ಕೆರೆಕಟ್ಟೆಗಳ ಅಚ್ಚುಕಟ್ಟು ಪ್ರದೇಶಗಳಲ್ಲಿ ಇರುವವರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಐತಿಹಾಸಿಕ ನೀರಗುಂದ ಗ್ರಾಮದ ಕೆರೆಯ ಏರಿ ಒಡೆದ ಪರಿಣಾಮ ಒಂದೇ ದಿನಕ್ಕೆ ಬರಿದಾಗಿದೆ.

ಐದಾರು ದಿನಗಳಿಂದ ಸುರಿದ ಭಾರಿ ಮಳೆಯಿಂದ 850 ಎಕರೆ ವಿಸ್ತೀರ್ಣದ ಕೆರೆ ಸೋಮವಾರ ಕೋಡಿ ಬಿದ್ದಿತ್ತು. ದಶಕದ ಬಳಿಕ ಕೆರೆ ತುಂಬಿತ್ತು. ಆದರೆ, ಬೆಳಗಾಗುವಷ್ಟರಲ್ಲಿ ಕೆರೆ ಏರಿಯು ಕುಸಿದು ನೀರು ಹರಿದು ಬರಿದಾಗಿದೆ.

ಏಷ್ಯಾದ ಎರಡನೇ ಅತಿ ದೊಡ್ಡ ಕೆರೆಯಾಗಿರುವ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಶಾಂತಿ ಸಾಗರ (ಸೂಳೆಕೆರೆ) ಭರ್ತಿಯಾಗಲು ಅರ್ಧ ಅಡಿ ಮಾತ್ರ ಬಾಕಿ ಉಳಿದಿದ್ದು, ಒಂದೆರಡು ದಿನಗಳಲ್ಲಿ ಕೋಡಿ ಬೀಳುವ ಸಾಧ್ಯತೆ ಇದೆ. ಭಾರಿ ಮಳೆ ಹಾಗೂ ಭದ್ರಾ ಕಾಲುವೆ ನೀರಿನಿಂದಾಗಿ ಒಳಹರಿವು ಹೆಚ್ಚಿದೆ.

ಜಗಳೂರು ತಾಲ್ಲೂಕಿನ ಕಟ್ಟಿಗೆಹಳ್ಳಿ ಸಮೀಪ ಮಂಗಳವಾರ ರಾತ್ರಿ ಭಾರಿ ಮಳೆಗೆ ತುಂಬಿ ಹರಿಯುತ್ತಿದ್ದ ಹಳ್ಳ ದಾಟುವಾಗ ಕಟ್ಟಿಗೆಹಳ್ಳಿ ಗ್ರಾಮದ ಬಸವರಾಜಪ್ಪ (52) ಎಂಬುವವರು ಕೊಚ್ಚಿಕೊಂಡು ಹೋಗಿದ್ದಾರೆ. ಬುಧವಾರ ಸಂಜೆಯವರೆಗೆ ಶೋಧ ನಡೆಸಿದರೂ ಅವರ ಶವ ಪತ್ತೆಯಾಗಿಲ್ಲ.

ಶಿವಮೊಗ್ಗ ಜಿಲ್ಲೆಯ ಹಲವೆಡೆ ಬುಧವಾರ ಸಾಧಾರಣ ಮಳೆಯಾಗಿದೆ.

ರೆಡ್ ಅಲರ್ಟ್ ಮುಂದುವರಿಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ರೆಡ್ ಅಲರ್ಟ್ ಮುಂದುವರಿಯಲಿದೆ. ಇದೇ 18ರಿಂದ ಆರಂಭವಾಗಿರುವ ಮಳೆಯಿಂದ 33 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, 9 ಮನೆಗಳಿಗೆ ತೀವ್ರವಾದ ಹಾನಿಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ತಖ್ವಾ ಮಸೀದಿ ಬಳಿ ಕಲ್ಲಾಪು ಪಟ್ಲ ಮುಖ್ಯ ರಸ್ತೆಯು ತಡೆಗೋಡೆ ಸಹಿತ ಕುಸಿದಿದ್ದು, ಇದರಿಂದ ವಾಹನ ಸಂಚಾರ ಸ್ಥಗಿತವಾಗಿತ್ತು. ಕಡಬ ತಾಲ್ಲೂಕಿನ ಆಲಂಕಾರು ಪರಿಸರದಲ್ಲಿ 2 ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಗ್ರಾಮದ ನೆಕ್ಕಿಲಾಡಿಯಲ್ಲಿಕಿಂಡಿ ಅಣೆಕಟ್ಟು ಕುಸಿದಿದ್ದು, ರಸ್ತೆ ಸಂಪರ್ಕ ಕಡಿತವಾಗಿದೆ.

6 ಜಿಲ್ಲೆಗಳಲ್ಲಿ ಇಂದು ‘ಆರೆಂಜ್‌ ಅಲರ್ಟ್’: ಬೆಂಗಳೂರು (ವರದಿ): ರಾಜ್ಯದ ಕರಾವಳಿ ಭಾಗದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಅ.24ರಂದು ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ‘ಆರೆಂಜ್‌ ಅಲರ್ಟ್‌’ ಘೋಷಿಸಲಾಗಿದೆ.

ಕರಾವಳಿಯಲ್ಲಿ ಗಂಟೆಗೆ 45ರಿಂದ 65 ಕಿ.ಮೀ.ವೇಗದಲ್ಲಿ ಗಾಳಿ ಬೀಸುತ್ತಿದೆ. ಹೀಗಾಗಿ ಶುಕ್ರವಾರವೂ ವ್ಯಾಪಕ ಮಳೆಯಾಗಲಿದ್ದು, ಈ ಭಾಗದಲ್ಲಿ ‘ರೆಡ್‌ ಅಲರ್ಟ್‌’ ಘೋಷಿಸಲಾಗಿದೆ. ಅ.26ರವರೆಗೆ ಮೀನುಗಾರರು ಕಡಲಿಗೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಸೂಚಿಸಿದೆ.

ತಗ್ಗಿದ ಪ್ರವಾಹ; ಕೊಚ್ಚಿ ಹೋದ ಈರುಳ್ಳಿ

ಹುಬ್ಬಳ್ಳಿ: ಕಳೆದೆರಡು ದಿನಗಳಿಂದ ಧಾರಾಕಾರವಾಗಿ ಸುರಿದು ಸಾಕಷ್ಟು ಅವಾಂತರ ಸೃಷ್ಟಿಸಿದ್ದ ಮಳೆಯ ಆರ್ಭಟ ಬುಧವಾರ ಸ್ವಲ್ಪ ತಗ್ಗಿದೆ. ಬೆಳಗಾವಿ, ಉತ್ತರ ಕನ್ನಡ, ಬಾಗಲಕೋಟೆ ಹಾಗೂ ಧಾರವಾಡ ಜಿಲ್ಲೆಯ ಕೆಲವೆಡೆ ಮಾತ್ರ ಮಳೆಯಾಗಿದೆ. ಬಾದಾಮಿಯಲ್ಲಿ ಧಾರಾಕಾರ ಮಳೆ ಸುರಿದಿದೆ. ಕೂಡಲ
ಸಂಗಮದಲ್ಲಿ ಸಂಗಮನಾಥ ದೇವಸ್ಥಾನಕ್ಕೆ ನೀರು ನುಗ್ಗಿದೆ.

ಬಳ್ಳಾರಿ ಜಿಲ್ಲೆಯಲ್ಲಿ ತುಂಗಭದ್ರಾ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದ್ದು, ಕಂಪ್ಲಿ- ಇಟಿಗಿ ಬಳಿಯ ನಾರಿಹಳ್ಳ ಸೇತುವೆ ಮುಳುಗಡೆಯಾಗಿ ಬುಧವಾರದಿಂದ ಸಿರುಗುಪ್ಪ ಸಂಚಾರ ಸ್ಥಗಿತಗೊಂಡಿದೆ. ಇಟಿಗಿ ಗ್ರಾಮಸ್ಥರು ತೆಪ್ಪದ ಮೂಲಕ ತಾಲ್ಲೂಕು ಕೇಂದ್ರಕ್ಕೆ ತೆರಳುತ್ತಿದ್ದಾರೆ. ತುಂಗಭದ್ರಾ ನದಿ ಪಾತ್ರದ ಸಣಾಪುರ, ಇಟಿಗಿ ಗ್ರಾಮದ ಭತ್ತದ ಗದ್ದೆಗಳು ಎರಡು ದಿನದಿಂದ ಸಂಪೂರ್ಣ ಜಲಾವೃತವಾಗಿವೆ.

ಮಲಪ್ರಭಾ ನದಿ ನೀರಿನ ಪ್ರವಾಹ ಬಾದಾಮಿ ತಾಲ್ಲೂಕಿನ ಗೋವನಕೊಪ್ಪ ಬಳಿ ಹೆದ್ದಾರಿ ಮೇಲೆ ಹರಿಯುತ್ತಿರುವುದರಿಂದ ಹುಬ್ಬಳ್ಳಿ–ಸೊಲ್ಲಾಪುರ ನಡುವೆ ವಾಹನ ಸಂಚಾರ ಸತತ ಮೂರನೇ ದಿನ ಸ್ಥಗಿತಗೊಂಡಿತ್ತು. ರಾಮದುರ್ಗ–ಚಿತ್ತರಗಿ, ಮುಧೋಳ– ಯಾದವಾಡ ರಾಜ್ಯ ಹೆದ್ದಾರಿಗಳಲ್ಲೂ ವಾಹನ ಸಂಚಾರ ಬಂದ್ ಆಗಿದೆ. ಕಳೆದ ಐದು ದಿನಗಳಿಂದ ಸುರಿದ ಮಳೆ ಹಾಗೂ ನದಿಗಳಲ್ಲಿ ಪ್ರವಾಹದಿಂದ 109 ಗ್ರಾಮಗಳು ಬಾಧಿತವಾಗಿವೆ. ಆರು ಪರಿಹಾರ ಕೇಂದ್ರಗಳನ್ನು ತೆರೆದಿದ್ದು, ಅಲ್ಲಿ 3,404 ಮಂದಿ ಆಶ್ರಯ ಪಡೆದಿದ್ದಾರೆ.

ಹುನಗುಂದ ತಾಲ್ಲೂಕಿನ ಕಮತಗಿ ಪಟ್ಟಣಕ್ಕೆ ಮಲಪ್ರಭಾ ಪ್ರವಾಹದ ನೀರು ನುಗ್ಗಿದೆ. ಕೈಮಗ್ಗಗಳಿಗೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಕಟಾವು ಮಾಡಿ, ಹೊಲದಲ್ಲಿ ಇಟ್ಟಿದ್ದ ಈರುಳ್ಳಿ ಮಳೆ ನೀರಿಗೆ ಕೊಚ್ಚಿ ಹೋಗಿದೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ ಹಾಗೂ ಭಟ್ಕಳದಲ್ಲಿ ಮಳೆ ಜೋರಾಗಿ ಸುರಿದಿದೆ. ಕಾರವಾರ ತಾಲ್ಲೂಕಿನ ಶಿರವಾಡ ಹಾಗೂ ಕಡವಾಡ ಗ್ರಾಮಗಳ ಕೆಲವೆಡೆ ಪ್ರವಾಹ ಭೀತಿ ಮಧ್ಯಾಹ್ನದ ನಂತರ ಕಡಿಮೆಯಾಯಿತು.

ಚಿಕ್ಕೋಡಿ ತಾಲ್ಲೂಕಿನಲ್ಲಿ ಜಲಾವೃತಗೊಂಡಿರುವ 6 ಸೇತುವೆಗಳು ಯಥಾಸ್ಥಿತಿಯಲ್ಲಿವೆ.

6 ಜಿಲ್ಲೆಗಳಲ್ಲಿ ಇಂದು ‘ಆರೆಂಜ್‌ ಅಲರ್ಟ್’

ಬೆಂಗಳೂರು: ರಾಜ್ಯದ ಕರಾವಳಿ ಭಾಗದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಅ.24ರಂದು ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ‘ಆರೆಂಜ್‌ ಅಲರ್ಟ್‌’ ಘೋಷಿಸಲಾಗಿದೆ.

ದಕ್ಷಿಣ ಒಳನಾಡಿನ ಕೆಲವೆಡೆ ಸಾಧಾರಣ ಮಳೆಯಾಗಲಿದೆ. ಕರಾವಳಿಯಲ್ಲಿ ಗಂಟೆಗೆ 45ರಿಂದ 65 ಕಿ.ಮೀ.ವೇಗದಲ್ಲಿ ಗಾಳಿ ಬೀಸುತ್ತಿದೆ. ಹೀಗಾಗಿ ಶುಕ್ರವಾರವೂ ವ್ಯಾಪಕ ಮಳೆಯಾಗಲಿದ್ದು, ಈ ಭಾಗದಲ್ಲಿ ‘ರೆಡ್‌ ಅಲರ್ಟ್‌’ ಘೋಷಿಸಲಾಗಿದೆ. ಅ.26ರವರೆಗೆ ಮೀನುಗಾರರು ಕಡಲಿಗೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಸೂಚಿಸಿದೆ.

ಬುಧವಾರ ಚಿಕ್ಕಮಗಳೂರು ಜಿಲ್ಲೆಯ ಯಗಟಿಯಲ್ಲಿ 7 ಸೆಂ.ಮೀ.ಮಳೆಯಾಗಿದೆ. ಸವದತ್ತಿ, ರಾಯಬಾಗ 5, ಮುಂಡಗೋಡ, ಹಗರಿಬೊಮ್ಮನಹಳ್ಳಿ, ಗದಗ 4, ಕಾರವಾರ, ಹೊಸನಗರ, ಸುಬ್ರಹ್ಮಣ್ಯದಲ್ಲಿ 3 ಸೆಂ.ಮೀ.ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT