ಶನಿವಾರ, ನವೆಂಬರ್ 23, 2019
17 °C
ದ.ಕ. ಜಿಲ್ಲೆಯಲ್ಲಿ ಆರೆಂಜ್‌ ಅಲರ್ಟ್‌ ಘೋಷಣೆ

ಕರಾವಳಿ, ಮಲೆನಾಡಿನಲ್ಲಿ ಧಾರಾಕಾರ ಮಳೆ

Published:
Updated:
Prajavani

ಬೆಂಗಳೂರು: ಅರಬ್ಬಿ ಸಮುದ್ರದ ಲಕ್ಷ ದ್ವೀಪದ ಬಳಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಪಶ್ಚಿಮ ಕರಾವಳಿ, ಮಲೆನಾಡು ಮತ್ತು ಘಟ್ಟ ಪ್ರದೇಶಗಳಲ್ಲಿ ಶುಕ್ರವಾರ ಜೋರು ಮಳೆಯಾಗಿದೆ

ಮಂಗಳೂರಿನಲ್ಲಿ ಬೆಳಿಗ್ಗೆಯಿಂದ ಉತ್ತಮ ಮಳೆಯಾಗಿದೆ. ಮಧ್ಯಾಹ್ನ ಧಾರಾಕಾರ ಮಳೆ ಸುರಿದಿದ್ದು, ನಗರದ ಹಲವೆಡೆ ರಸ್ತೆಗಳು ಜಲಾವೃತಗೊಂಡಿದ್ದವು. ನಗರದ ಕೇಂದ್ರ ರೈಲು ನಿಲ್ದಾಣದ ಆವರಣದ ಪಾರ್ಕಿಂಗ್ ಸ್ಥಳದಲ್ಲಿ ಸಂಪೂರ್ಣ ನೀರು ಸಂಗ್ರಹವಾಗಿತ್ತು. ಹೊಯ್ಗೆ ಬಜಾರ್‌ನ ಮೂರು ಮನೆಗಳಿಗೆ ನೀರು ನುಗ್ಗಿತ್ತು.

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಶುಕ್ರವಾರ ಹಾಗೂ ಶನಿವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದ್ದು, 64.5 ಮಿ.ಮೀ.ನಿಂದ 115.5 ಮಿ.ಮೀ. ವರೆಗೆ ಮಳೆ ಬೀಳುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಲಿದ್ದು, ಮುಂಜಾಗ್ರತಾ ಕ್ರಮವಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಉಡುಪಿ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗಿದೆ. ಉಡುಪಿ ನಗರ, ಬ್ರಹ್ಮಾವರ, ಮಲ್ಪೆಯಲ್ಲಿ ಮಧ್ಯಾಹ್ನದಿಂದಲೇ ಧಾರಾಕಾರ ಮಳೆ ಸುರಿದಿದೆ. 

ಕಾರವಾರದಲ್ಲಿಯೂ ಒಳ್ಳೆಯ ಮಳೆಯಾಗಿದೆ. ಭಟ್ಕಳ, ಹೊನ್ನಾವರ, ಕುಮಟಾ ಮತ್ತು ಶಿರಸಿ ಭಾಗದಲ್ಲಿಯೂ ಒಳ್ಳೆಯ ಮಳೆಯಾಗಿದೆ.

ಚಿಕ್ಕಮಗಳೂರು ನಗರ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಶುಕ್ರವಾರ ಸಂಜೆ ಮುಕ್ಕಾಲು ಗಂಟೆ ರಭಸದ ಮಳೆ ಸುರಿಯಿತು. ಬಯಲುಸೀಮೆಯ ಕಡೂರು, ತರೀಕೆರೆ, ಅಜ್ಜಂಪುರ ಭಾಗದಲ್ಲಿ ಸಾಧಾರಣ ಸುರಿದಿದೆ.

ಮಲೆನಾಡು ಭಾಗದ ಮೂಡಿಗೆರೆ, ಕಳಸ, ಎನ್‌.ಆರ್.ಪುರ, ಶೃಂಗೇರಿ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಹೇಮಾವತಿ, ತುಂಗಾ, ಭದ್ರಾ ನದಿಗಳಲ್ಲಿ ಹರಿವು ಹೆಚ್ಚಾಗಿದೆ.

ಶಿವಮೊಗ್ಗ ಜಿಲ್ಲೆಯ ಹಲವೆಡೆ ಶುಕ್ರವಾರ ಗುಡುಗು ಸಹಿತ ಮಳೆ ಸುರಿಯಿತು.

ಸಾಗರ ತಾಲ್ಲೂಕಿನ ಹಲವೆಡೆ ಮುಂಜಾನೆಯಿಂದ ಜಿಟಿ–ಜಿಟಿ ಮಳೆ ಇತ್ತು. ಸಂಜೆ ಭಾರಿ ಮಳೆಯಾಗಿದೆ. ತೀರ್ಥಹಳ್ಳಿ, ಶಿಕಾರಿಪುರ, ಶಿವಮೊಗ್ಗ, ಭದ್ರಾವತಿಯ ಹಲವೆಡೆ ಒಂದೆರಡು ಗಂಟೆ ಉತ್ತಮ ಮಳೆಯಾಗಿದೆ. ಹೊಸನಗರ, ರಿಪ್ಪನ್‌ಪೇಟೆಯಲ್ಲೂ ನಿರಂತರವಾಗಿ ಮಳೆ ಸುರಿದಿದೆ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಬಾಗೂರು ಸುತ್ತಮುತ್ತ ಶುಕ್ರವಾರ ಮಧ್ಯಾಹ್ನ ಒಂದು ತಾಸಿಗೂ ಹೆಚ್ಚು ಕಾಲ ಮಳೆ ಸುರಿದಿದೆ. ಇದರಿಂದಾಗಿ ಕಟಾವಿಗೆ ಬಂದಿದ್ದ ಈರುಳ್ಳಿ ಭೂಮಿಯಲ್ಲಿಯೇ ಕೊಳೆಯುವಂತಾಗಿದೆ.

ಪ್ರತಿಕ್ರಿಯಿಸಿ (+)