ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ಧಾರಾಕಾರ ಮಳೆ: ಸಿಡಿಲಿಗೆ ಮೂವರು ಬಲಿ

ಉಕ್ಕಿ ಹರಿದ ಬೆಣ್ಣೆಹಳ್ಳ, ನರಗುಂದ–ರೋಣ ಹೆದ್ದಾರಿ ಸಂಚಾರ ಸ್ಥಗಿತ
Last Updated 9 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧೆಡೆ ಬುಧವಾರವೂ ಧಾರಾಕಾರ ಮಳೆಯಾಗಿದೆ. ತುಮಕೂರು ಜಿಲ್ಲೆ ಪಾವಗಡದಲ್ಲಿ ಒಂದೇ ದಿನ 221 ಮಿ.ಮೀ ಮಳೆಯಾಗಿದೆ. ಪ್ರತ್ಯೇಕ ಘಟನೆಗಳಲ್ಲಿ ಸಿಡಿಲು ಬಡಿದು ಇಬ್ಬರು ಮಹಿಳೆಯರು ಸೇರಿ ಮೂವರು ಮೃತಪಟ್ಟಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಬೆಳೆದು ನಿಂತ ಭತ್ತಕ್ಕೆ ಹಾನಿಯಾಗಿದೆ.

ಕಲಬುರ್ಗಿ ಜಿಲ್ಲೆ ಆಳಂದ ತಾಲ್ಲೂಕಿನ ಕವಲಗಾ ಗ್ರಾಮದಲ್ಲಿ ಬುಧವಾರ ಸಿಡಿಲು ಬಡಿದು ಭೀಮಾಬಾಯಿ ಧೂಳಪ್ಪ ಕಡಕೋಳ (60) ಎಂಬುವರು ಮೃತಪಟ್ಟಿದ್ದಾರೆ. ದನ ಮೇಯಿಸಲು ಹೋಗಿದ್ದ ವೇಳೆ ದುರ್ಘಟನೆ ನಡೆದಿದೆ.

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಿರೇಬೇವನೂರ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ಜಮೀನಿನಲ್ಲಿ ಕಸ ತೆಗೆಯುತ್ತಿದ್ದ ಮಹಿಳೆಯೊಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ. ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ.

ಗದಗ, ಧಾರವಾಡ, ವಿಜಯಪುರ, ಬೆಳಗಾವಿ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಬುಧವಾರವೂ ಮಳೆ ಮುಂದುವರಿದಿದೆ. ಬೆಣ್ಣೆಹಳ್ಳ ಉಕ್ಕಿಹರಿದ ಪರಿಣಾಮ ಗದಗ ಜಿಲ್ಲೆಯ ಯಾವಗಲ್‌ ಬಳಿ ನರಗುಂದ- ರೋಣ ರಾಜ್ಯ ಹೆದ್ದಾರಿ ಸಂಚಾರ ಸ್ಥಗಿತಗೊಂಡಿದೆ. ನರಗುಂದ ತಾಲ್ಲೂಕಿನ ಕೊಣ್ಣೂರಿನಲ್ಲಿ ಶೆಡ್‍ನಲ್ಲಿ ವಾಸಿಸುತ್ತಿರುವ ಸಂತ್ರಸ್ತರು ತೊಂದರೆಗೆ ಒಳಗಾದರು.

ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ, ಎಂ.ಕೆ. ಹುಬ್ಬಳ್ಳಿ, ಖಾನಾಪುರ, ರಾಮದುರ್ಗ, ರಾಯಬಾಗ ಹಾಗೂ ಹಾರೂಗೇರಿಯಲ್ಲಿ ಬಿರುಸಿನ ಮಳೆಯಾಗಿದೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ಕುಂದಗೋಳ, ಅಳ್ನಾವರ, ಕಲಘಟಗಿಯಲ್ಲಿ ತಾಲ್ಲೂಕುಗಳಲ್ಲಿ
ಮಳೆ ಸುರಿದಿದೆ. ನವಲಗುಂದ ತಾಲ್ಲೂಕಿನಲ್ಲಿ 50ಕ್ಕೂ ಹೆಚ್ಚು ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಹಿರೇಹಡಗಲಿ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ 23 ಮನೆಗಳು ಭಾಗಶಃ ಕುಸಿದಿದ್ದು, ಕಟಾವಿಗೆ ಬಂದಿದ್ದ ಭತ್ತದ ಬೆಳೆ ನೆಲಕಚ್ಚಿದೆ. ಸಂಡೂರು ತಾಲ್ಲೂಕಿನ ಭುಜಂಗನಗರ ಗ್ರಾಮದ ಬೈಪಾಸ್ ಬಳಿಯ ವಿ.ಎಸ್.ಎಲ್ ಪ್ಲಾಟ್ ಬಳಿ ಸಿಡಿಲು ಬಡಿದ ಪರಿಣಾಮ 27 ಕುರಿಗಳು, 16 ಮೇಕೆಗಳು ಮೃತಪಟ್ಟಿವೆ.

ಬರಪೀಡಿತ ಪ್ರದೇಶವಾದ ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನಲ್ಲಿ ಕಳೆದ ನಾಲ್ಕೈದು ವರ್ಷಗಳಲ್ಲಿ ಆಗದ ದಾಖಲೆ ಪ್ರಮಾಣ 221.4 ಮಿ.ಮೀ ಮಳೆ ಭಾನುವಾರ ರಾತ್ರಿ ಒಂದೇ ದಿನ ಸುರಿದಿದೆ. ತಾಲ್ಲೂಕಿನ ದೊಡ್ಡ ಕೆರೆಗಳಲ್ಲೊಂದಾದ ರಾಜವಂತಿ ಕೆರೆ ಸೇರಿದಂತೆ ಹಲವಾರು ಕೆರೆಗಳು ತುಂಬಿವೆ. ಕಲಬುರ್ಗಿ ಜಿಲ್ಲೆಯ ಕವಲಗಾ, ಭೂಸನೂರು ಜಿಡಗಾ, ಕಮಲಾಪುರ ಮತ್ತು ವಾಡಿಯಲ್ಲಿ ಅಲ್ಲದೇ ಯಾದಗಿರಿ ಜಿಲ್ಲೆಯ ಶಹಾಪುರ, ಸೈದಾಪುರ ಮತ್ತು ಗುರುಮಠಕಲ್‌ನಲ್ಲಿ ಉತ್ತಮ ಮಳೆ ಸುರಿಯಿತು.

ಜೋರು ಮಳೆ: ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ, ಸಾಗರ, ತೀರ್ಥಹಳ್ಳಿ, ಹೊಸನಗರ, ಭದ್ರಾವತಿ, ಸೊರಬ, ರಿಪ‍್ಪನ್‌ಪೇಟೆ, ಕೋಣಂದೂರು, ಶಿಕಾರಿಪುರ ಸುತ್ತಮುತ್ತ ಗುಡುಗು ಮಿಂಚು ಸಹಿತಭಾರಿಮಳೆಸುರಿದಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ, ಸಿರಿಗೆರೆಯಲ್ಲಿ ತುಂತುರು ಮಳೆಯಾಗಿದೆ. ಹೊಸದುರ್ಗದಲ್ಲಿ ಧಾರಾಕಾರ ಮಳೆಯಾಗಿದೆ. ದಾವಣಗೆರೆ ಜಿಲ್ಲೆಯ ನ್ಯಾಮತಿ, ಮಲೇಬೆನ್ನೂರು, ಹೊನ್ನಾಳಿಯಲ್ಲಿ ಸಾಧಾರಣ ಮಳೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಹಾಗೂ ತರೀಕೆರೆ ತಾಲ್ಲೂಕುಗಳಲ್ಲಿ ಬುಧವಾರ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ಉತ್ತಮ ಮಳೆ ಸುರಿದಿದೆ. ತರೀಕೆರೆ ಪಟ್ಟಣದಲ್ಲೂ ಮಧ್ಯಾಹ್ನ ಒಂದು ತಾಸಿಗೂ ಹೆಚ್ಚು ಸಮಯ ಉತ್ತಮ ಮಳೆಯಾಗಿದ್ದು, ರಾಮಾನಾಯ್ಕನ ಕೆರೆ ಕೋಡಿ ಬಿದ್ದಿದೆ. ಕೊಡಗಿನ ವಿವಿಧೆಡೆ ಬುಧವಾರ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಮಡಿಕೇರಿಯಲ್ಲಿ ಮಧ್ಯಾಹ್ನ ಅರ್ಧ ತಾಸು ಬಿರುಸಿನ ಮಳೆಯಾಗಿದೆ. ಸುಂಟಿಕೊಪ್ಪ, ಕಂಬಿಬಾಣೆ, ಕಾಟಕೇರಿ, ಮದೆನಾಡು, 2ನೇ ಮೊಣ್ಣಂಗೇರಿ ವ್ಯಾಪ್ತಿಯಲ್ಲೂ ಮಳೆ ಸುರಿಯಿತು. ಚಾಮರಾಜನಗರ ಜಿಲ್ಲೆಯ ಬಂಡೀಪುರದ ಗೋಪಾಲಸ್ವಾಮಿ ಬೆಟ್ಟದಲ್ಲಿ ಒಂದು ತಾಸು ಬಿರುಸಿನ ಮಳೆಯಾಗಿದೆ.

ಸಿಡಿಲು ಇಬ್ಬರು ಮಹಿಳೆಯರು ಬಲಿ

ಕಲಬುರ್ಗಿ ಜಿಲ್ಲೆ ಆಳಂದ ತಾಲ್ಲೂಕಿನ ಕವಲಗಾ ಗ್ರಾಮದಲ್ಲಿ ಬುಧವಾರ ಸಿಡಿಲು ಬಡಿದು ಭೀಮಾಬಾಯಿ ಧೂಳಪ್ಪ ಕಡಕೋಳ (60) ಎಂಬುವರು ಮೃತಪಟ್ಟಿದ್ದಾರೆ. ದನ ಮೇಯಿಸಲು ಹೋಗಿದ್ದ ವೇಳೆ ದುರ್ಘಟನೆ ನಡೆದಿದೆ.

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಿರೇಬೇವನೂರ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ಜಮೀನಿನಲ್ಲಿ ಕಸ ತೆಗೆಯುತ್ತಿದ್ದ ಮಹಿಳೆಯೊಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT