ಗುರುವಾರ , ಅಕ್ಟೋಬರ್ 24, 2019
21 °C
ಮೋದಿ ಸಹಕಾರ ನನಗಿತ್ತು; ನಿಮಗೇಕಿಲ್ಲ?– ಬಿಎಸ್‌ವೈಗೆ ಎಚ್‌ಡಿಕೆ ಪ್ರಶ್ನೆ

ಖಾಲಿಯಾಗಿರುವುದು ಯಾರ ಬೊಕ್ಕಸ?: ಎಚ್‌.ಡಿ.ಕುಮಾರಸ್ವಾಮಿ ಲೇವಡಿ

Published:
Updated:
Prajavani

ಮೈಸೂರು/ಮಂಡ್ಯ: ‘ಖಾಲಿಯಾಗಿರುವುದು ಯಾರ ಬೊಕ್ಕಸ? ಸರ್ಕಾರದ್ದೋ, ಅವರ ಕುಟುಂಬದ್ದೋ? ಬಹುಶಃ ಯಡಿಯೂರಪ್ಪ ಅವರ ಮಗನ ಖಜಾನೆ ಖಾಲಿ ಆಗಿರಬಹುದು. ಅದನ್ನು ತುಂಬಿಸಿಕೊಳ್ಳಲು ಓಡಾಡುತ್ತಿದ್ದಾರೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಲೇವಡಿ ಮಾಡಿದರು.

ಸಮ್ಮಿಶ್ರ ಸರ್ಕಾರದಲ್ಲಿ ಹಗಲು ದರೋಡೆ ನಡೆದಿದೆ ಎಂಬ ಬಿ.ವೈ.ವಿಜಯೇಂದ್ರ ಆರೋಪಕ್ಕೆ, ‘ಯಾರ್ರೀ ಅವನು? ಆ ಹುಡುಗನಿಗೆ ಏನು ಗೊತ್ತು? ಹಣ ಲಪಟಾಯಿಸುವುದೊದೇ ಗೊತ್ತಿರುವುದು. ಅಂಥವರನ್ನು ನಾಯಕರನ್ನಾಗಿ ಬಿಂಬಿಸಲು ಬಿಜೆಪಿಯಲ್ಲಿ ಪ್ರಯತ್ನ ನಡೆದಿದೆ’ ಎಂದು ಶುಕ್ರವಾರ ಹರಿಹಾಯ್ದರು.

‘ನೆರೆ ನಿರ್ವಹಣೆಗೆ ರಾಜ್ಯದಲ್ಲಿ ಹಣದ ಕೊರತೆ ಇಲ್ಲ. ನಾನು 14 ತಿಂಗಳು ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದು, ಸರ್ಕಾರದ ಬೊಕ್ಕಸ ಸಂಪದ್ಭರಿತವಾಗಿದೆ. ಕರ್ನಾಟಕದ ಖಜಾನೆಯು ಲಕ್ಷ್ಮಿ ಇದ್ದ ಹಾಗೆ, ಅದಕ್ಕೆ ಎಂದೂ ದಾರಿದ್ರ್ಯ ಬಂದಿಲ್ಲ. ಕೇಂದ್ರ ಸರ್ಕಾರದ ಮುಲಾಜಿಗೆ ಒಳಗಾಗದೆಯೂ ನೆರೆ ಸಂತ್ರಸ್ತರಿಗೆ ಸಹಾಯ ಮಾಡಬಹುದು. ಸಚಿವ ಸಂಪುಟದ ಅನುಮೋದನೆ ಮೂಲಕ ತಕ್ಷಣವೇ ₹ 10 ಸಾವಿರ ಕೋಟಿ ಬಿಡುಗಡೆ ಮಾಡಬಹುದು’ ಎಂದು ನುಡಿದರು. ‘ಎನ್‌ಡಿಆರ್‌ಎಫ್‌ ನಿಯಮಾವಳಿಗೆ ಕಾಯುತ್ತಾ ಕುಳಿತರೆ ಸಂತ್ರಸ್ತರು ಉಳಿಯುವುದಿಲ್ಲ. ಎರಡು ಬಜೆಟ್‌ಗಳಲ್ಲಿ ಸಾಲ ಮನ್ನಾಕ್ಕಾಗಿ ₹ 25 ಸಾವಿರ ಕೋಟಿ ಮೀಸಲಿಟ್ಟಿದ್ದೆ. ಅದರಲ್ಲಿ ಇನ್ನೂ ಐದಾರು ಸಾವಿರ ಕೋಟಿ ಮಿಕ್ಕಿದೆ. ಅದನ್ನು ನೆರೆ ಪರಿಹಾರಕ್ಕೆ ಬಳಸಿಕೊಳ್ಳಬಹುದು’ ಎಂದರು.

‘ಕನಿಷ್ಠ ಸರ್ವಪಕ್ಷ ಸಭೆಯನ್ನಾದರೂ ಕರೆಯಬೇಕಿತ್ತು. ಆದರೆ, ಮಂತ್ರಿಗಳು, ಸಂಸದರು ಉದ್ಧಟತನದ ಹೇಳಿಕೆ ನೀಡುತ್ತಿದ್ದಾರೆ. ಒಬ್ಬ ಸಚಿವರು ತಮ್ಮ ಜಮೀನಿನ ಬೆಳೆಯೇ ಹಾಳಾಗಿದೆ ಎನ್ನುತ್ತಾರೆ. ಮತ್ತೊಬ್ಬರು ದಸರಾ ಆಚರಣೆಯೇ ಮುಖ್ಯ ಎನ್ನುತ್ತಾರೆ. ಕಂದಾಯ ಸಚಿವರಿಗೆ ಸಾಮಾನ್ಯ ಜ್ಞಾನ ಇಲ್ಲ. ರಾಜ್ಯ ಸರ್ಕಾರ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು, ಜನರ ಜೊತೆ ಚೆಲ್ಲಾಟವಾಡುತ್ತಿದೆ. ಅಧಿವೇಶನದಲ್ಲಿ
ಈ ಬಗ್ಗೆ ದನಿ ಎತ್ತುತ್ತೇನೆ’ ಎಂದು ಎಚ್ಚರಿಸಿದರು.

‘ಕೊಡಗಿನಲ್ಲಿ ನೆರೆ ಬಂದಾಗ, ಮುಖ್ಯಮಂತ್ರಿಯಾಗಿದ್ದ ನನ್ನನ್ನು ಪ್ರಧಾನಿ ಮೋದಿ ದೂರವಾಣಿ ಕರೆ ಮಾಡಿ ವಿಚಾರಿಸಿದ್ದರು. ನಿರಂತರವಾಗಿ ಸಂಪರ್ಕದಲ್ಲಿದ್ದರು. ತಕ್ಷಣ ₹ 580 ಕೋಟಿ ಹಣವನ್ನೂ ಬಿಡುಗಡೆ ಮಾಡಿದ್ದರು. ಆದರೆ, ಪ್ರಧಾನಿ ಭೇಟಿಯಾಗಲು ಈಗ ಅವರದ್ದೇ ಪಕ್ಷದ ಯಡಿಯೂರಪ್ಪ ಅವರಿಗೆ ಸಾಧ್ಯವಾಗುತ್ತಿಲ್ಲ ಏಕೆ? ಮೋದಿ ಹಾಗೂ ಯಡಿಯೂರಪ್ಪ ನಡುವೆ ವಿಶ್ವಾಸದ ಕೊರತೆ ಇದೆ’ ಎಂದು ಟೀಕಿಸಿದರು.

‘ಹಣಕಾಸಿನ ವ್ಯವಸ್ಥೆ ಸರಿ ಇಲ್ಲ’

ಮೈಸೂರು: ‘ಯಡಿಯೂರಪ್ಪ ಈ ಬಾರಿ ಮುಖ್ಯಮಂತ್ರಿಯಾದ ಮೇಲೆ ಹಣಕಾಸಿನ ವ್ಯವಸ್ಥೆ ಸರಿ ಇಲ್ಲ ಎಂಬುದು ಸತ್ಯ’ ಎಂದು ಬಿ.ವೈ.ವಿಜಯೇಂದ್ರ ಶುಕ್ರವಾರ ವರುಣಾದಲ್ಲಿ ಹೇಳಿದರು.

‘ಕಳೆದ ಆರೂವರೆ ವರ್ಷಗಳಲ್ಲಿ ಕಾಂಗ್ರೆಸ್‌ ಹಾಗೂ ಸಮ್ಮಿಶ್ರ ಸರ್ಕಾರ ಹಗಲು ದರೋಡೆ ನಡೆಸಿವೆ’ ಎಂದು ಆರೋಪಿಸಿದ ಅವರು, ‘ಜನಪರ ಯೋಜನೆ ಜಾರಿಗೆ ತರಲು ಯಡಿಯೂರಪ್ಪ ಅವರಿಗೆ ಸಾಧ್ಯವಾಗುತ್ತಿಲ್ಲ. ಬೊಕ್ಕಸ ಖಾಲಿಯಾಗಿರುವುದು ಅವರ ಕೈಕಟ್ಟಿ ಹಾಕಿದೆ’ ಎಂದರು.

‘ಪ್ರವಾಹ ವಿಚಾರದಲ್ಲಿ ಅನುದಾನ ನೀಡುವುದು ತಡವಾಗಿರುವುದು ನಿಜ. ಆದರೆ, ರಾಜ್ಯಮಟ್ಟದಲ್ಲಿಯೇ ಸಮಸ್ಯೆಗೆ ಮುಖ್ಯಮಂತ್ರಿ ಸ್ಪಂದಿಸುತ್ತಿದ್ದಾರೆ’ ಎಂದು ಹೇಳಿದರು.

‘ತಾಂತ್ರಿಕ ಕಾರಣಗಳಿಂದ ವಿಳಂಬ’

‘ತಾಂತ್ರಿಕ ಕಾರಣಗಳಿಂದಾಗಿ ಕೇಂದ್ರ ಸರ್ಕಾರ ವರದಿಯನ್ನು ತಿರಸ್ಕರಿಸಿರಬಹುದು. ಆದರೆ, ಪರಿಹಾರವನ್ನು ಕೊಡದೆ ಇರಲು ಸಾಧ್ಯವಿಲ್ಲ’ ಎಂದು ಸಂಸದೆ ಸುಮಲತಾ ಹೇಳಿದರು.

‘ಸಂಸದರಾಗಿ ನಮ್ಮ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಕೇವಲ ರಾಜಕೀಯ ಕಾರಣಗಳಿಗಾಗಿ ಟೀಕೆ ಮಾಡುವುದು ಸರಿ ಅಲ್ಲ’ ಎಂದರು.

ಹಣದ ಕೊರತೆ ಇಲ್ಲ: ಆರ್‌. ಅಶೋಕ

ಮಂಡ್ಯ: ‘ನೆರೆ ನಿರ್ವಹಣೆಗೆ ರಾಜ್ಯ ಸರ್ಕಾರದಲ್ಲಿ ಹಣಕಾಸಿನ ಕೊರತೆ ಇಲ್ಲ. ಬೊಕ್ಕಸ ಖಾಲಿಯಾಗಿದೆ ಎಂದು ಮುಖ್ಯಮಂತ್ರಿ ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ’ ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದರು.

‘ನೆರೆ ನಿರ್ವಹಣೆ ಕಂದಾಯ ಇಲಾಖೆ ಕೆಳಗೆ ಬರುತ್ತದೆ. ಈಗಾಗಲೇ ಸಾಕಷ್ಟು ಹಣ ಬಿಡುಗಡೆ ಮಾಡಲಾಗಿದೆ. ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ಕೆಲಸವೂ ಪ್ರಗತಿಯಲ್ಲಿದೆ’ ಎಂದರು.

‘ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕೋರಿ ಕಳುಹಿಸಲಾಗಿರುವ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕಾರ ಮಾಡಿಲ್ಲ. ಆದರೆ, ವರದಿಯಲ್ಲಿ ಕೆಲವು ಬದಲಾವಣೆ ಬಯಸಲಾಗಿದೆ’ ಎಂದು ಹೇಳಿದರು.

* ಸಂತ್ರಸ್ತರ ಸಂಕಷ್ಟ ಪರಿಹರಿಸಲು ಮಾತ್ರ ನಾನೀಗ ಗಮನ ಹರಿಸಿರುವೆ. ವಿರೋಧ ಪಕ್ಷಗಳ ಸ್ನೇಹಿತರ ಯಾವುದೇ ಟೀಕೆಗೂ ಪ್ರತಿಕ್ರಿಯಿಸುವುದಿಲ್ಲ.

-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)