ಸೋಮವಾರ, ಸೆಪ್ಟೆಂಬರ್ 16, 2019
27 °C

ಕೊಡಗಿನಲ್ಲಿ ‘ರೆಡ್‌ ಅಲರ್ಟ್‌’: ಆಲಮಟ್ಟಿ ಜಲಾಶಯದಿಂದ ನೀರು ಹೊರಕ್ಕೆ,ಪ್ರವಾಹ ಭೀತಿ

Published:
Updated:

ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಬುಧವಾರ ಧಾರಾಕಾರ ಮಳೆಯಾಗಿದೆ. ದಕ್ಷಿಣ ಮಹಾರಾಷ್ಟ್ರದಲ್ಲೂ ಭಾರಿ ಮಳೆ ಸುರಿದಿದ್ದು, ಒಳಹರಿವು ಹೆಚ್ಚಾಗಿರುವುದರಿಂದ ಆಲಮಟ್ಟಿ ಜಲಾಶಯದಿಂದ ಒಂದು ಲಕ್ಷ ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ.

ಕೊಡಗು ಜಿಲ್ಲೆಯಾದ್ಯಂತ ನಿರಂತರ ಮಳೆ ಸುರಿಯುತ್ತಿದ್ದು, ‘ರೆಡ್‌ ಅಲರ್ಟ್‌’ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಾವೇರಿ, ಲಕ್ಷ್ಮಣ ತೀರ್ಥ ನದಿಗಳು ತುಂಬಿ ಹರಿಯುತ್ತಿವೆ. ಗುರುವಾರವೂ ಭಾರೀ ಮಳೆಯಾಗುವುದಾಗಿ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದ್ದು, ಸಾರ್ವಜನಿಕರು, ಪ್ರವಾಸಿಗರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಕೋರಿದೆ. ಅಪಾಯ ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಮನವಿ ಮಾಡಲಾಗಿದೆ. ಜಿಲ್ಲೆಯ ಶಾಲಾ–ಕಾಲೇಜುಗಳಿಗೆ ಗುರುವಾರ ರಜೆ ನೀಡಲಾಗಿದೆ.

ಭಾಗಮಂಡಲ ಜಲಾವೃತವಾಗಿದೆ. ಭಾಗಮಂಡಲ–ಅಯ್ಯಂಗೇರಿ ರಸ್ತೆ ಮೇಲೆ ಕಾವೇರಿ ನದಿಯ ನೀರು ಹರಿಯುತ್ತಿದ್ದು, ಈ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಮಡಿಕೇರಿ–ಭಾಗಮಂಡಲ–ತಲಕಾವೇರಿ ರಸ್ತೆಯೂ ಬಂದ್‌ ಆಗಿದೆ. 

ಲಕ್ಷ್ಮಣತೀರ್ಥ ನದಿಯ ಪ್ರವಾಹದಿಂದ ಕಾನೂರು, ಹರಿಹರದಲ್ಲಿ ಗದ್ದೆಗಳು ಜಲಾವೃತಗೊಂಡಿವೆ. ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಬಿಟ್ಟು ಬಿಟ್ಟು ಬಿರುಸಿನ ಮಳೆಯಾಗಿದೆ. ಎಚ್‌.ಡಿ. ಕೋಟೆ ತಾಲ್ಲೂಕಿನಲ್ಲಿ, ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನಲ್ಲಿ ಧಾರಾಕಾರವಾಗಿ ಸುರಿದಿದೆ. ತಾರಕ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಯಾವುದೇ ಕ್ಷಣದಲ್ಲಿ ನೀರನ್ನು ನದಿಗೆ ಹರಿಸುವ ಸಾಧ್ಯತೆ ಇರುವುದರಿಂದ ನದಿ ದಂಡೆಯ ಹಾಗೂ ತಗ್ಗು ಪ್ರದೇಶದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರದವರೆಗೆ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ.  ಘಟ್ಟ ಪ್ರದೇಶದ ಚಾರ್ಮಾಡಿ ಭಾಗದಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ಕಡಲಬ್ಬರ ಅಧಿಕವಾಗಿದೆ. ಸಮುದ್ರದಲ್ಲಿ ಪ್ರತಿ ಗಂಟೆಗೆ 40 ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಮೀನುಗಾರರು ಎಚ್ಚರದಿಂದ ಇರಬೇಕು ಎಂದು ಇಲಾಖೆ ಸೂಚಿಸಿದೆ.

ಹೊರ ಹರಿವು ಹೆಚ್ಚಳ

ರಾಯಚೂರು: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಹೊರಬಿಡುವ ನೀರಿನ ಪ್ರಮಾಣವನ್ನು ಬುಧವಾರ ಸಂಜೆ 1.13 ಲಕ್ಷ ಕ್ಯುಸೆಕ್‌ಗೆ ಹೆಚ್ಚಿಸಲಾಗಿದೆ. ಹೊರಹರಿವು ನಿರಂತರ ಹೆಚ್ಚಳ ಮಾಡುತ್ತಿರುವುದರಿಂದ ಯಾದಗಿರಿ ಜಿಲ್ಲೆ ಹಾಗೂ ರಾಯಚೂರು ಜಿಲ್ಲೆಯ ಲಿಂಗಸುಗೂರು, ದೇವದುರ್ಗ ಮತ್ತು ರಾಯಚೂರು ತಾಲ್ಲೂಕುಗಳ ನದಿತೀರ ಪ್ರದೇಶಗಳಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ.

Post Comments (+)