ಕಳಸ, ಉಡುಪಿಯಲ್ಲಿ ಮಳೆ

ಶನಿವಾರ, ಮೇ 25, 2019
22 °C

ಕಳಸ, ಉಡುಪಿಯಲ್ಲಿ ಮಳೆ

Published:
Updated:
Prajavani

ಕಳಸ: ತಾಲ್ಲೂಕಿನ ವಿವಿಧೆಡೆ ಮಂಗಳವಾರ ಮಧ್ಯಾಹ್ನ ಆಲಿಕಲ್ಲು ಸಹಿತ ಮಳೆ ಸುರಿದಿದೆ. ಮಧ್ಯಾಹ್ನ 1.30ಕ್ಕೆ ಧೋ ಎಂದು ಸುರಿಯಲಾರಂಭಿಸಿದ ಮಳೆಯ ಜೊತೆಗೆ ಗುಡುಗಿನ ಆರ್ಭಟವೂ ಜೋರಾಗಿತ್ತು. ಕೆಲ ಹೊತ್ತಿನ ನಂತರ ಗೋಲಿ ಗಾತ್ರದ ಆಲಿಕಲ್ಲುಗಳು ಬಿದ್ದವು.

ಶೃಂಗೇರಿ ತಾಲ್ಲೂಕಿನ ತೆಕ್ಕೂರು, ಕೂತಗೋಡು, ಕೊಚ್ಚವಳ್ಳಿ, ನೆಮ್ಮಾರ್, ಅಗಸವಳ್ಳಿ, ಹೊಳೆಕೊಪ್ಪ, ಕಿಗ್ಗಾ ಭಾಗದಲ್ಲಿ ಮಂಗಳವಾರ ಉತ್ತಮ ಮಳೆಯಾಗಿದೆ.

ಕೊಪ್ಪ ಪಟ್ಟಣ ಸೇರಿದಂತೆ ತಾಲ್ಲೂಕಿನ ಕಮ್ಮರಡಿ, ಹರಿಹರಪುರ, ಜಯಪುರ ಸುತ್ತಮುತ್ತ ರಭಸದ
ಮಳೆ ಸುರಿದಿದೆ. ಬೆಳಗೊಳದ ಬಿ.ಎಸ್.ಶಿವಣ್ಣ ಅವರ ಕೊಟ್ಟಿಗೆ ಮೇಲೆ ಮರದ ಕೊಂಬೆ ಮುರಿದು ಹಾನಿಯಾಗಿದೆ.

ಬಾಳೆಹೊನ್ನೂರು ಸುತ್ತಮುತ್ತ ಆಲಿಕಲ್ಲು ಸಹಿತ ಉತ್ತಮ ಮಳೆಯಾಗಿದೆ. ಭಾರಿ ಗಾತ್ರದ ಆಲಿಕಲ್ಲು ಬಿದ್ದಿರುವುದರಿಂದ ಹಲವು ಮನೆಗಳಲ್ಲಿ ಅಳವಡಿಸಿದಿದ್ದ ತಗಡಿನ ಶೀಟು, ಹೆಂಚುಗಳಿಗೆ ಹಾನಿಯಾಗಿದೆ.
ಎನ್‌.ಆರ್‌ಪುರ ಭಾಗದಲ್ಲೂ ಮಳೆಯಾಗಿದೆ.

ಉಡುಪಿ ವರದಿ: ಬಿರು ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ನಾಗರಿಕರಿಗೆ ಮಂಗಳವಾರ ಸುರಿದ ಮಳೆ ತಂಪೆರೆಯಿತು. ಸಂಜೆ 5 ಗಂಟೆಯ ಸುಮಾರಿಗೆ ಬಿರುಗಾಳಿ ಸಹಿತ ಸುರಿದ ಮಳೆ ನಾಗರಿಕರಲ್ಲಿ ಹರ್ಷ ಮೂಡಿಸಿತು.

ಮಳೆಯ ಯಾವ ಮುನ್ಸೂಚನೆಯೂ ಇಲ್ಲದೆ ಇದ್ದಕ್ಕಿದ್ದಂತೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಜೋರಾಗಿ ಗಾಳಿ ಬೀಸಿತು. ಇದರಿಂದ ನಗರದ ಹಲವೆಡೆ ಮರದ ರಂಬೆಗಳು ಮುರಿದು ಬಿದ್ದವು. ನಂತರ ಕೆಲವೇ ಕ್ಷಣ ಜೋರಾಗಿ ಸುರಿದ ಮಳೆ ಹಾಗೆಯೇ ಮಾಯವಾಯಿತು. ಹೆಬ್ರಿ ಭಾಗದಲ್ಲೂ ಗಾಳಿ ಮಳೆ ಸುರಿದಿದೆ.

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !