ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ: ಸಿಡಿಲು ಬಡಿದು ಇಬ್ಬರ ಸಾವು

ಶುಕ್ರವಾರ, ಏಪ್ರಿಲ್ 19, 2019
27 °C

ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ: ಸಿಡಿಲು ಬಡಿದು ಇಬ್ಬರ ಸಾವು

Published:
Updated:

ಬೆಂಗಳೂರು: ರಾಜ್ಯದ ವಿವಿಧ ಕಡೆಗಳಲ್ಲಿ ಗುರುವಾರ ಬಿರುಗಾಳಿ, ಗುಡುಗು ಸಹಿತ ಸಾಧಾರಣ ಮಳೆಯಾಗಿದೆ. ಸಿಡಿಲಿಗೆ ಮಹಿಳೆ ಸೇರಿ ಇಬ್ಬರು ಬಲಿಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಬಂಟ್ವಾಳ, ಉಳ್ಳಾಲ ಸಹಿತ ಹಲವೆಡೆ ಗುರುವಾರ ಭಾರಿ ಗಾಳಿ ಸಹಿತ ಬಿರುಸಿನ ಮಳೆ ಸುರಿಯಿತು.

ಬಂಟ್ವಾಳ ತಾಲ್ಲೂಕಿನ ಮಾಣಿ ಸಮೀಪ ಬುಡೋಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಗಾಳಿಗೆ ದೊಡ್ದ ಗಾತ್ರದ ಮರ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಸ್ವಲ್ಪ ಹೊತ್ತು ಅಡಚಣೆ ಉಂಟಾಯಿತು.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಸುತ್ತಮುತ್ತ ಸಹ ಮಳೆ ಸುರಿಯಿತು.

ಸಾಧಾರಣ ಮಳೆ: ಶಿವಮೊಗ್ಗ ಜಿಲ್ಲೆಯ ಕೆಲವೆಡೆ ಗುರುವಾರ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ. ಶಿಕಾರಿಪುರ, ಸಾಗರ, ತೀರ್ಥಹಳ್ಳಿ, ಸೊರಬ, ಭದ್ರಾವತಿ, ಕೋಣಂದೂರು, ರಿಪ್ಪನ್‌ಪೇಟೆಯಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ.

ಬೇಲೂರು ಪಟ್ಟಣ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಗುರುವಾರ ಮಧ್ಯಾಹ್ನ ಗುಡುಗು ಸಹಿತ ಜೋರು ಮಳೆ ಸುರಿಯಿತು. ಒಂದು ವಾರದಿಂದ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ವ್ಯಾಪ್ತಿಯಲ್ಲಿ ಮಳೆ ಬೀಳುತ್ತಿದೆ.

ಬಿಸಿಲಿನ ಝಳದಿಂದ ತತ್ತರಿಸಿದ್ದ ಜನರಿಗೆ ಸ್ವಲ್ಪ ಮಟ್ಟಿಗೆ ತಂಪಿನ ಅನುಭವವಾಯಿತು.

ಬಾಗಲಕೋಟೆ ಜಿಲ್ಲೆಯ ಅಮೀನಗಡ ಸಮೀಪದ ಐಹೊಳೆ ಗ್ರಾಮದಲ್ಲಿ ಗುರುವಾರ ಸಂಜೆ ಸಿಡಿಲಿನ ಹೊಡೆತಕ್ಕೆ ಕೂಲಿ ಕೆಲಸ ಮಾಡುತ್ತಿದ್ದ ರಾಮವ್ವ ಹನಮಂತ ದಳವಾಯಿ (35) ಎಂಬುವವರು ಮೃತಪಟ್ಟಿದ್ದಾರೆ. ಇವರೊಂದಿಗೆ ಕೆಲಸ ಮಾಡುತ್ತಿದ್ದ ಯಮನವ್ವ ನೀಲಪ್ಪ ಚಿಮ್ಮಲಗಿ, ಕವಿತಾ ಈರಯ್ಯ ಹಿರೇಮಠ, ಹುಲಿಗೆವ್ವ ಯಮನಪ್ಪ ಪಟ್ಟೇದ ಎಂಬುವರು ಕೂಡ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕೆಲವೆಡೆ ಗುರುವಾರ ಸಾಯಂಕಾಲ ಕೆಲ ಹೊತ್ತು ಮಳೆಯಾಗಿದೆ.

ಬೈಲಹೊಂಗಲ, ಹಿರೆಬಾಗೇವಾಡಿ, ಚೆನ್ನಮ್ಮನ ಕಿತ್ತೂರು ಸಮೀಪದ ತಿಗಡೊಳ್ಳಿಯಲ್ಲಿ ಅರ್ಧ ಗಂಟೆ ಮಳೆ ಸುರಿಯಿತು. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ, ಹಳಿಯಾಳ ಹಾಗೂ ಯಲ್ಲಾಪುರ ತಾಲ್ಲೂಕಿನ ಕೆಲವೆಡೆ ಸಾಧಾರಣ ಮಳೆಯಾಗಿದೆ.

ಯಾದಗಿರಿ ಜಿಲ್ಲೆ ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದಲ್ಲಿ ಬುಧವಾರ ರಾತ್ರಿ ಸಿಡಿಲು ಬಡಿದು ರೈತ ದೇವಿಂದ್ರಪ್ಪ ಲಕ್ಕುಂಡಿ (58) ಎಂಬುವವರು ಮೃತಟ್ಟಿದ್ದಾರೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !