ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ಉತ್ತಮ ಮಳೆ: ಗಾಳಿಯ ಅಬ್ಬರಕ್ಕೆ ಧರೆಗುರುಳಿದ ಮರಗಳು

Last Updated 6 ಜೂನ್ 2019, 4:44 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕಿನಲ್ಲಿ ಬೆಳಗಿನ ಜಾವ 3 ಗಂಟೆಯಿಂದ‌ ಒಂದುತಾಸು ರಭಸದ ಮಳೆ ಸುರಿಯಿತು. ಗುಡುಗು ಮಿಂಚಿನ ಅಬ್ಬರ ಒಂದೆಡೆಯಾದರೆ, ಗಾಳಿಯ ಆರ್ಭಟ ಮಲಗಿದ್ದ ಜನರನ್ನು ಕಂಗಾಲು ಮಾಡಿತು.

ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹಲವಾರು ಕಡೆಗಳಲ್ಲಿ ಮರ ಬಿದ್ದು ಹಾನಿ ಸಂಭವಿಸಿದೆ. ನಗರದ ರೋಟರಿ ಆಸ್ಪತ್ರೆ ಆವರಣದಲ್ಲಿದ್ದ ದೊಡ್ಡ ಮರ ಮುರಿದು ಬಿದ್ದು ಕಾಂಪೌಂಡ್‌ಗೆ ಹಾನಿಯಾಗಿದೆ. ಹೊಸಪೇಟೆ, ಹುಬ್ಬಳ್ಳಿ ಹಾಗೂ ಬನವಾಸಿ ಮಾರ್ಗದ ರಸ್ತೆ‌ಗಳಲ್ಲಿ ಮರ ಮುರಿದು ಬಿದ್ದು ಸಂಚಾರ ವ್ಯತ್ಯಯವಾಗಿತ್ತು. ನಗರಸಭೆ ಸಿಬ್ಬಂದಿ ತೆರವು ಕಾರ್ಯ ನಡೆಸುತ್ತಿದ್ದಾರೆ.

ನಗರದ 10ಕ್ಕೂ ಹೆಚ್ಚು ಕಡೆಗಳಲ್ಲಿ ತೆಂಗಿನ ಮರಗಳು ಮುರಿದು ಬಿದ್ದಿವೆ. ವಿದ್ಯುತ್ ಕಂಬಗಳೂ ನೆಲಕ್ಕೊರಗಿವೆ. ವರ್ಷದ ಮೊದಲ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಇನ್ನೂ ದಟ್ಟ ಮೋಡ‌ಕವಿದ ವಾತಾವರಣವಿದ್ದು ಮಳೆ ಮುಂದುವರಿಯುವ ಸಾಧ್ಯತೆ ಇದೆ.

ಕಾರವಾರದಲ್ಲಿಯೂ ಜಿಟಿಜಿಟಿ ಮುಂದುವರಿದಿದೆ. ವಿದ್ಯುತ್ ಕೈಕೊಟ್ಟಿದ್ದು, ಗೃಹಿಣಿಯರಿಗೆ, ವಿದ್ಯಾರ್ಥಿಗಳಿಗೆ, ಕಚೇರಿಗಳಿಗೆ ಹೋಗುವವರಿಗೆ ತೊಂದರೆಯಾಗಿದೆ.

ಬೆಳಗಾವಿ ತಂಪೆರೆದ ಮಳೆ
ನಗರ ಹಾಗೂ ತಾಲ್ಲೂಕಿನ ವಿವಿಧೆಡೆ ಗುರುವಾರ ಮುಂಜಾನೆ ಗಂಟೆಗೂ ಹೆಚ್ಚಿನ ಸಮಯ ಗುಡುಗು, ಸಿಡಿಲು ಸಮೇತ ಸಾಧಾರಣ ಮಳೆಯಾಯಿತು. ಬಿಸಿಲಿನ ಝಳದಿಂದ ಬಸವಳಿದಿದ್ದ ಮನಗಳಿಗೆ ತಂಪೆರೆಯಿತು.

ಇದು ನಗರದಲ್ಲಿ ಸುರಿದ ಮೊದಲ ಮುಂಗಾರು ಪೂರ್ವ ಮಳೆಯಾಗಿದೆ. ಇಲ್ಲಿ ಸಾಮಾನ್ಯವಾಗಿ ಮೇ 2ನೇ ವಾರದಲ್ಲಿ ಅಡ್ಡಮಳೆ (ಮುಂಗಾರು ಪೂರ್ವ) ಮಳೆ ಆರಂಭವಾಗುವುದು ವಾಡಿಕೆ. ಕೃಷಿ ಚಟುವಟಿಕೆಗಳೂ ಚುರುಕುಗೊಳ್ಳುತ್ತಿದ್ದವು. ಆದರೆ, ಈ ಬಾರಿ ಮಳೆ ಸಂಪೂರ್ಣ ಕೈಕೊಟ್ಟಿತ್ತು. ಮುಂಗಾರು ಪೂರ್ವ ಅವಧಿಯಲ್ಲಿ ಶೇ 96ರಷ್ಟು ಮಳೆ ಕೊರತೆಯಾಗಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿತ್ತು.

ಇಂದು ಬಿದ್ದ ಮಳೆ ಉತ್ತಮ ಮುಂಗಾರಿನ ಆಶಾಭಾವ ಮೂಡಿಸಿದೆ. ಕೃಷಿಗಾಗಿ ಭೂಮಿ ಹಸನುಗೊಳಿಸಲು ನೆರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT