ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ದಿನ ಕೊಡಗಿನಲ್ಲಿ ಭಾರಿ ಮಳೆ

ಕೊಡಗಿನ ವಿವಿಧೆಡೆ ಮುಂದುವರಿದ ಮಳೆ
Last Updated 11 ಜೂನ್ 2019, 14:02 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬುಧವಾರ ಮತ್ತು ಗುರುವಾರ ಭಾರಿ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಮುನ್ನೆಚ್ಚರಿಕೆ ನೀಡಿದೆ.

ಜೂನ್‌ 15ರಿಂದ 20ರ ನಡುವೆ ಮಳೆಯ ಪ್ರಮಾಣ ತಗ್ಗಲಿದೆ. 20ರ ನಂತರ ಮತ್ತೆ ಮುಂಗಾರು ಮಳೆ ಚುರುಕು ಪಡೆಯಲಿದ್ದು ಮಳೆ ಹಾಗೂ ಗಾಳಿ ವೇಳೆ ಸಾರ್ವಜನಿಕರು, ಜಿಲ್ಲೆಗೆ ಬರುವ ಪ್ರವಾಸಿಗರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

ನಾಪೋಕ್ಲು, ಭಾಗಮಂಡಲ, ತಲಕಾವೇರಿ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೂ ಬಿಡುವು ಕೊಟ್ಟು ಬಿರುಸಿನ ಮಳೆ ಸುರಿಯಿತು. ನಾಪೋಕ್ಲು ಹಾಗೂ ಭಾಗಮಂಡಲಕ್ಕೆ ವಿದ್ಯುತ್‌ ಪೂರೈಸುವ ಮಾರ್ಗದಲ್ಲಿ ಸೋಮವಾರ ರಾತ್ರಿ ಗಾಳಿಗೆ ಕಂಬಗಳು ಧರೆಗುರುಳಿದ್ದು ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿತ್ತು.

ಮಡಿಕೇರಿ, ಶನಿವಾರಸಂಜೆ, ಸುಂಟಿಕೊಪ್ಪ ಹಾಗೂ ಸೋಮವಾರಪೇಟೆ ಭಾಗದಲ್ಲಿ ತುಂತುರು ಮಳೆ ಸುರಿಯುತ್ತಿದೆ. ಜಿಲ್ಲೆಯಲ್ಲಿ ದಟ್ಟವಾದ ಮೋಡ ಕವಿದ ವಾತಾವರಣ ಇದೆ.

ಕುಮಟಾದಲ್ಲಿ ಉತ್ತಮ ಮಳೆ

ಕಾರವಾರ ಜಿಲ್ಲೆಯ ಕುಮಟಾ ಪಟ್ಟಣ ಹಾಗೂ ಸುತ್ತಮುತ್ತ ಮಂಗಳವಾರ ಉತ್ತಮ ಮಳೆಯಾಯಿತು. ಸಂಜೆ ಆರು ಗಂಟೆಯ ನಂತರ ಒಂದು ತಾಸಿಗೂ ಹೆಚ್ಚು ಹೊತ್ತು ಮಿಂಚು, ಗುಡುಗಿನೊಂದಿಗೆ ಬಿರುಸಾದ ಮಳೆ ಸುರಿಯಿತು. ಉಳಿದಂತೆ,ಕರಾವಳಿ ಭಾಗದ ವಿವಿಧೆಡೆ ದಿನವಿಡೀ ಆಗಾಗ ಸಾಧಾರಣ ಮಳೆಯಾಯಿತು. ರಭಸದ ಗಾಳಿಯೂ ಜೊತೆಯಾಗಿತ್ತು.

ಕಾರವಾರ, ಕುಮಟಾ, ಭಟ್ಕಳ ಹಾಗೂ ಗೋಕರ್ಣದಲ್ಲಿ ಮಧ್ಯಾಹ್ನ 15 ನಿಮಿಷ ಜೋರಾಗಿ ಮಳೆಯಾಯಿತು. ದಿನವಿಡೀ ಮೋಡ ಕವಿದ ವಾತಾವರಣವಿತ್ತು. ಆಗಾಗ ಜಿಟಿಜಿಟಿ ಹನಿಯಿತು.

ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಸಾಮಾನ್ಯವಾಗಿ ಸಣ್ಣ ಅಲೆಗಳೊಂದಿಗೆಶಾಂತವಾಗಿರುತ್ತಿದ್ದ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ, ದೊಡ್ಡಗಾತ್ರದ ಅಲೆಗಳು ಕಂಡುಬರುತ್ತಿವೆ. ಗಂಟೆಗೆ ಸುಮಾರು 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಬಹುದು ಹಾಗೂ ಭಾರಿ ಮಳೆಯಾಗಬಹುದುಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಹಾಗಾಗಿ ಕಡಲತೀರದಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ.ಉಳಿದಂತೆ, ಜಿಲ್ಲೆಯ ಮಲೆನಾಡು ತಾಲ್ಲೂಕುಗಳಲ್ಲಿ ತುಂತುರು ಮಳೆಯಾಗಿದ್ದು, ಮೋಡ ಹಾಗೂ ಬಿಸಿಲಿನ ವಾತಾವರಣವಿತ್ತು.

ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ದಿನವಿಡೀ ಜಿಟಿಜಿಟಿ ಮಳೆಯಾಗಿದೆ. ಬೆಳಗಾವಿ ನಗರ ಹಾಗೂ ಹಿರೇಬಾಗೇವಾಡಿಯಲ್ಲಿ ಮೋಡಕವಿದ ವಾತಾವರಣವಿತ್ತು. ಹುಬ್ಬಳ್ಳಿಯಲ್ಲಿ ಮಧ್ಯಾಹ್ನ ಸ್ವಲ್ಪಹೊತ್ತು ಮಳೆ ಸುರಿದಿದ್ದು, ಮೋಡ ಕವಿದ ವಾತಾವರಣವಿತ್ತು.

ಮಂಗಳೂರು: ತುಂತುರು ಮಳೆ

ಜಿಲ್ಲೆಯಲ್ಲಿ ಮಂಗಳವಾರ ತುಂತುರು ಮಳೆಯಾಗಿದ್ದು, ಸರಾಸರಿ 18.9 ಮಿ.ಮೀ. ಸುರಿದಿದೆ.

ಸಮುದ್ರದಲ್ಲಿ ಅಲೆಗಳ ಅಬ್ಬರ ಪರಿಣಾಮಸೋಮೇಶ್ವರ ಕಡಲ ತೀರದ ನಾಲ್ಕು ಮನೆಗಳು ಅಪಾಯದಲ್ಲಿವೆ. ಇಲ್ಲಿಗೆ ಉಪ ವಿಭಾಗಾಧಿಕಾರಿ ಹಾಗೂ ಪ್ರಕೃತಿ ವಿಕೋಪ ನಿರ್ವಹಣಾ ಘಟಕದ ಅಧಿಕಾರಿಗಳು ಭೇಟಿ ನೀಡಿದ್ದು, ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ. ಆದರೆ, ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ತನಕ ಯಾವುದೇ ಹಾನಿ ಸಂಭವಿಸಿದ ವರದಿಯಾಗಿಲ್ಲ ಎಂದು ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣಾ ಘಟಕ ಮಾಹಿತಿ ನೀಡಿದೆ.

‘ವಾಯು’ ಚಂಡಮಾರುತದ ಪರಿಣಾಮ ಸದ್ಯ ಕರಾವಳಿ ಭಾಗದಲ್ಲಿ ಮಳೆಯಾಗುತ್ತಿದೆ. ಹೀಗಾಗಿ, ಮುಂಗಾರು ಪ್ರವೇಶವನ್ನು ಸದ್ಯ ಅಂದಾಜಿಸಲು ಸಾಧ್ಯವಿಲ್ಲ. ಆದರೆ, ನೈರುತ್ಯದ ಮೋಡಗಳ ಚಲನೆ ಹಾಗೂ ಗಾಳಿ ದಿಕ್ಕುಗಳು ಮುಂಗಾರಿನಂತೆ ಭಾಸವಾಗುತ್ತಿವೆ. ಇನ್ನೆರಡು ದಿನ ನಿರಂತರ ಮಳೆ, ಸ್ಥಿರತೆ ಹಾಗೂ ಗಾಳಿಯ ಪರಿಣಾಮವಿದ್ದರೆ, ಮುಂಗಾರು ಪ್ರವೇಶವನ್ನು ನಿರ್ಧರಿಸಬಹುದು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.

ಚಂಡಮಾರುತವು ಸುಮಾರು 45 ರಿಂದ 55 ಕಿ.ಮೀ. ವೇಗದಲ್ಲಿದೆ. ಇದು, ಸಮುದ್ರದಲ್ಲೇ ಕ್ರಮೇಣ ಉತ್ತರಕ್ಕೆ ಚಲಿಸುವ ಸಾಧ್ಯತೆ ಇದೆ. ಹೀಗಾಗಿ, ಚಂಡಮಾರುತ ಕ್ಷೀಣಿಸಿದ ಬಳಿಕ ಮುಂಗಾರು ಮಳೆಯು ಮುಂದುವರಿಯಬಹುದು. ಆದರೆ, ಒಳನಾಡು ಪ್ರದೇಶಕ್ಕೆ ಮುಂಗಾರಿನ ಪ್ರವೇಶವಾಗಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ.

ಮಲೆನಾಡಲ್ಲೂ ತುಂತುರು:

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗ ಮೂಡಿಗೆರೆ, ಕೊಪ್ಪ, ಎನ್‌.ಆರ್‌.ಪುರ, ಶೃಂಗೇರಿ ತಾಲ್ಲೂಕುಗಳ ವಿವಿಧೆಡೆ ಮಂಗಳವಾರ ತುಂತುರು ಮಳೆಯಾಗಿದೆ. ಜಿಲ್ಲೆಯಲ್ಲಿ ಇಡೀ ದಿನ ಮೋಡ ಕವಿದಿತ್ತು. ತಂಪು ಹವೆ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT