ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಿಗೆರೆ, ಕಡೂರಿನಲ್ಲಿ ಉತ್ತಮ ಮಳೆ

Last Updated 1 ಏಪ್ರಿಲ್ 2019, 18:06 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನ ಬೀಜುವಳ್ಳಿ, ಹ್ಯಾಂಡ್ ಪೋಸ್ಟ್, ಬಿದರಹಳ್ಳಿ, ಹೊಸಂಪುರ, ಬೀರ್ಗೂರು, ಗಬ್ಗಲ್ ಸೇರಿದಂತೆ ವಿವಿಧೆಡೆ ಸೋಮವಾರ ಮಧ್ಯಾಹ್ನ ಉತ್ತಮ ಮಳೆಯಾಗಿದೆ.

ಮಧ್ಯಾಹ್ನ 2ಕ್ಕೆ ಪ್ರಾರಂಭವಾದ ಮಳೆ ಒಂದು ತಾಸಿಗೂ ಅಧಿಕ ಕಾಲ ಸುರಿದಿದೆ. ಹೆಮ್ಮಕ್ಕಿ, ನೆಲ್ಲಿಮಕ್ಕಿ, ಚಂದುವಳ್ಳಿ ಮುಂತಾದ ಕಡೆಗಳಲ್ಲಿ ಗುಡುಗು ಸಹಿತ ಮಳೆ ಸುರಿಯಿತು. ಧಾರಾಕಾರವಾಗಿ ಮಳೆ ಸುರಿದಿದ್ದರಿಂದ ಕಾಫಿ ಬೆಳೆಗೆ ಹದವಾಗಿದ್ದು, ನೀರು ಹಾಯಿಸುತ್ತಿದ್ದ ಬೆಳೆಗಾರರಿಗೆ ವರದಾನವಾಗಿ ಪರಿಣಮಿಸಿದೆ. ಬಗ್ಗಸಗೋಡು, ಫಲ್ಗುಣಿ ಮುಂತಾದ ಕಡೆಗಳಲ್ಲಿ ಕಣದಲ್ಲಿ ಒಣಹಾಕಿದ್ದ ಕಾಳುಮೆಣಸು ಬೆಳೆಯು ಮಳೆ ನೀರಿಗೆ ಸಿಲುಕಿ ಕೊಚ್ಚಿಹೋಗಿದೆ.

ಕಡೂರಿನಲ್ಲಿ ಸೋಮವಾರ ಮಧ್ಯಾಹ್ನ ಒಂದು ಗಂಟೆಗೂ ಹೆಚ್ಚಿನಕಾಲ ಬಿರುಸಾಗಿ ಮಳೆ ಸುರಿಯಿತು. ಪಟ್ಟಣವೂ ಸೇರಿದಂತೆ ಮಲ್ಲೇಶ್ವರ, ಮಚ್ಚೇರಿ, ತಂಗಲಿ, ಹರುವನಹಳ್ಳಿ, ತಂಗಲಿ ಮುಂತಾದ ಕಡೆ ಮಳೆಯಾಗಿದ್ದು, ರೈತರು ಹರ್ಷಗೊಂಡಿದ್ದಾರೆ.

ತರೀಕೆರೆ ಪಟ್ಟಣದಲ್ಲಿ ಸೋಮವಾರ ಸಂಜೆ ಅರ್ಧ ಗಂಟೆ ಕಾಲ ಸಾಧಾರಣ ಮಳೆ ಸುರಿದಿದೆ. ಬಿಸಿಲಿನ ಬೇಗೆಗೆ ಹೈರಾಣಾಗಿದ್ದ ಜನರು ನಿಟ್ಟುಸಿರು ಬಿಡುವಂತಾಯಿತು. ಬೀರೂರು ಪಟ್ಟಣದಲ್ಲಿ ಸೋಮವಾರ ಮಧ್ಯಾಹ್ನ ಅರ್ಧ ಗಂಟೆ ಮಳೆಯಾಯಿತು.

ಆಲಿಕಲ್ಲು ಸಹಿತ ಬಿರುಗಾಳಿ ಮಳೆ: ನೆಲಕಚ್ಚಿದ ಎಲೆ ಬಳ್ಳಿ ಬೆಳೆ
ಹನುಮಸಾಗರ (ಕೊಪ್ಪಳ ಜಿಲ್ಲೆ): ಹನುಮಸಾಗರ, ಹನುಮನಾಳ, ಹೂಲಗೇರಿ ಸೇರಿದಂತೆ ವಿವಿಧ ಕಡೆಗಳಲ್ಲಿ ಭಾನುವಾರ ರಾತ್ರಿ ಬಿರುಗಾಳಿ, ಗುಡುಗು, ಸಿಡಿಲು ಸಹಿತ ಸುರಿದ ಅಕಾಲಿಕ ಮಳೆಯಿಂದಾಗಿ ಅಲ್ಲಲ್ಲಿ ಗಿಡ–ಮರಗಳು ಉರುಳಿ ಬಿದ್ದಿವೆ.

ಮಾವಿನ ಫಸಲು ಹಾಳಾಗಿದೆ. ಎಲೆಬಳ್ಳಿ ನೆಲಕ್ಕೆ ಒರಗಿದೆ. ಮನೆಯ ತಗಡುಗಳು ಹಾರಿಹೋಗಿವೆ. ವಿದ್ಯುತ್ ಕಂಬಗಳ ತಂತಿಗಳು ಬಿದ್ದು, ವಿದ್ಯುತ್ ವ್ಯತ್ಯಯ ಉಂಟಾಯಿತು.

ಹನುಮಸಾಗರದಲ್ಲಿ ಸಂತೆ ಬಜಾರ್ ಸೇರಿದಂತೆ ವಿವಿಧ ಕಡೆಗಳಲ್ಲಿ ಮರಗಳು ನೆಲಕ್ಕುರುಳಿವೆ.

ಹೊಳಲ್ಕೆರೆ ತಾಲ್ಲೂಕಿನಾದ್ಯಂತ ಹದಮಳೆ
ಹೊಳಲ್ಕೆರೆ:
ಪಟ್ಟಣವೂ ಒಳಗೊಂಡಂತೆ ತಾಲ್ಲೂಕಿನ ವಿವಿಧೆಡೆ ಸೋಮವಾರ ಹದವಾದ ಮಳೆ ಸುರಿದಿದೆ.

ಉಗಣೇಕಟ್ಟೆ ವಡ್ಡರ ಹಟ್ಟಿ, ಆವಿನಹಟ್ಟಿ, ಸಾಂತೇನಹಳ್ಳಿ. ಬೊಮ್ಮನಕಟ್ಟೆ, ಲೋಕದೊಳಲು ಭಾಗದಲ್ಲಿ ಉತ್ತಮ ಮಳೆ ಆಗಿದೆ. ಕೆಲವೆಡೆ ಆಲಿಕಲ್ಲು ಸಹಿತ ಮಳೆ ಸುರಿದಿದೆ. ಪಟ್ಟಣದಲ್ಲಿ ಸಂಜೆ ಸುಮಾರು 10 ನಿಮಿಷ ಗುಡುಗು ಸಹಿತ ಧಾರಾಕಾರ ಮಳೆ ಸುರಿಯಿತು. ಮಧ್ಯಾಹ್ನವೇ ಆರಂಭವಾದ ಮಳೆ ವಾತಾವರಣವನ್ನು ತಂಪಾಗಿಸಿತು.

ತಾಲ್ಲೂಕಿನಲ್ಲಿ ಅಂತರ್ಜಲ ಕಡಿಮೆಯಾಗಿ ಕೊಳವೆಬಾವಿಗಳು ವಿಫಲವಾಗಿದ್ದು, ಅಡಿಕೆ ತೋಟಗಳು ಒಣಗುತ್ತಿವೆ. ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಟ್ಯಾಂಕರ್ ಮೂಲಕ ತೋಟಗಳಿಗೆ ನೀರು ಹಾಯಿಸುತ್ತಿದ್ದಾರೆ. ಮಳೆಯಿಂದ ರೈತರಲ್ಲಿ ಆಶಾಭಾವ ಮೂಡಿದೆ. ಭರಮಸಾಗರ ಶಿವಮೊಗ್ಗ, ಸಾಗರದಲ್ಲೂ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT