ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆವರು,ರಕ್ತ ಬಸಿದು ಖಜಾನೆ ತುಂಬಿದರು ಜನರು; ಅದನ್ನು ಬಂಡವಾಳಶಾಹಿಗಳಿಗೆ ನೀಡಿ ಬರಿದು ಮಾಡಿದರು ಮೋದಿ: ರಾಹುಲ್‌ ಗಾಂಧಿ ಆರೋಪ

Last Updated 7 ಏಪ್ರಿಲ್ 2018, 16:12 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: 'ಜನರು ಬೆವರು, ರಕ್ತ ಬಸಿದು ಖಜಾನೆ ತುಂಬಿದರೆ, ಅದನ್ನು ಮೋದಿ ಅವರು ಬಂಡವಾಳಶಾಹಿಗಳಿಗೆ ನೀಡಿ ಬರಿದು ಮಾಡುತ್ತಿದ್ದಾರೆ' ಎಂದು ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಆರೋಪಿಸಿದರು.

ನಗರದಲ್ಲಿ ಶನಿವಾರ ನಡೆದ ಜನಾಶೀರ್ವಾದ ಯಾತ್ರೆಯ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದರು.

ಬ್ಯಾಂಕಿಗೆ ವಂಚನೆ ಮಾಡಿದ ನೀರವ್ ಮೋದಿ ಪ್ರಧಾನಿ‌ ನರೇಂದ್ರ ಮೋದಿ ಅವರಿಗೆ ಗುಜರಾತಿನಲ್ಲಿ ಹಳೆಯ ಸಂಬಂಧಿ. ಆರು ವರ್ಷಗಳ ಹಿಂದೆ ಕಾಂಗ್ರೆಸ್ ಮುಖಂಡರು ನೀರವ್ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರೂ ನರೇಂದ್ರ ಮೋದಿ ಅವರು ಯಾವುದೇ ಕ್ರಮಕೈಗೊಳ್ಳಲಿಲ್ಲ ಎಂದರು.

ಈ ಚುನಾವಣೆ ಎರಡು ಸಿದ್ಧಾಂತಗಳ ನಡುವಿನ ಹೋರಾಟವಾಗಿದೆ. ಬಿಜೆಪಿ, ಆರ್‌ಎಸ್‌ಎಸ್‌ ವಿಚಾರಧಾರೆಗಳು ಇವತ್ತು ದೇಶವನ್ನು ಒಡೆಯುತ್ತಿವೆ. ಆರ್‌ಎಸ್ಎಸ್  ನವರು ಬಿಜೆಪಿ ಮುಖಂಡರಿಗೆ ಖಾಕಿ ಚೆಡ್ಡಿ ತೊಟ್ಟು, ಲಾಠಿ ಹಿಡಿದು ಸುಳ್ಳು ಪ್ರಚಾರ ಮಾಡುವಂತೆ ಹೇಳಿದ್ದಾರೆ ಎಂದು ಟೀಕಿಸಿದರು.

ಬಸವಣ್ಣನವರ ಮುಂದೆ ಕೈಜೋಡಿಸುವ ಮೋದಿ ಅವರು ಕಳೆದ ನಾಲ್ಕು ವರ್ಷಗಳಲ್ಲಿ ನುಡಿದಂತೆ ನಡೆದಿಲ್ಲ. ಉದ್ಯೋಗಾವಕಾಶಗಳ ವಿಚಾರದಲ್ಲಿ ನೀಡಿದ ಭರವಸೆ ಈಡೇರಿಸಿಲ್ಲ. ಮೋದಿ, ಅಮಿತ್ ಶಾ ಅವರು ದಾರಿ ತಪ್ಪಿದ್ದಾರೆ. ದೇಶ ನಡೆಸುವ ವಿಚಾರದಲ್ಲಿ ದ್ವಂದ್ವದಲ್ಲಿ ಇದ್ದಾರೆ ಎಂದರು.

ಅನೇಕ ವಿಚಾರಗಳಲ್ಲಿ ವಿರೋಧ ಪಕ್ಷಗಳನ್ನು ಎದುರಿಸಲಾಗದೆ ಮೋದಿ ಅವರು ಸಂಸತ್ ಕಲಾಪ ನಡೆಯಲು ಬಿಡಲಿಲ್ಲ.

ಭೂಮಂಡಲದಲ್ಲಿ ಕಾಂಗ್ರೆಸ್ ಸೋಲಿಸಲು ಯಾರಿಗೂ ಸಾಧ್ಯವಿಲ್ಲ. ಈ ಬಾರಿ ಬಿಜೆಪಿಯನ್ನು ಸೋಲಿಸಲು ನಮ್ಮ ಕಾರ್ಯಕರ್ತರು ಸಜ್ಜಾಗಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT