ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣಿ ಬಳಗಕ್ಕೆ ಕಾಡಿದ ನಿರಾಸೆ: ಫೈನಲ್‌ ಪ್ರವೇಶಿಸಿದ ಆಸ್ಟ್ರೇಲಿಯಾ

Last Updated 12 ಏಪ್ರಿಲ್ 2018, 19:27 IST
ಅಕ್ಷರ ಗಾತ್ರ

ಗೋಲ್ಡ್‌ ಕೋಸ್ಟ್‌: ಅಂತಿಮ ಕ್ವಾರ್ಟರ್‌ನಲ್ಲಿ ಸಿಕ್ಕಿದ್ದ ಗೋಲು ಗಳಿಸುವ ಎರಡು ಅವಕಾಶಗಳನ್ನು ಕೈಚೆಲ್ಲಿದ ಭಾರತದ ಮಹಿಳಾ ಹಾಕಿ ತಂಡದವರು ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಫೈನಲ್‌ ಪ್ರವೇಶಿಸಲು ವಿಫಲರಾದರು.

ಗೋಲ್ಡ್‌ ಕೋಸ್ಟ್‌ ಹಾಕಿ ಕೇಂದ್ರದಲ್ಲಿ ಗುರುವಾರ ನಡೆದ ಸೆಮಿಫೈನಲ್‌ನಲ್ಲಿ ರಾಣಿ ರಾಂಪಾಲ್‌ ಬಳಗ 0–1 ಗೋಲಿನಿಂದ ಆಸ್ಟ್ರೇಲಿಯಾ ಎದುರು ಸೋತಿತು.‌

ಶುಕ್ರವಾರ ಕಂಚಿನ ಪದಕಕ್ಕಾಗಿ ನಡೆಯುವ ಹೋರಾಟದಲ್ಲಿ ಭಾರತ ತಂಡ ಇಂಗ್ಲೆಂಡ್‌ ವಿರುದ್ಧ ಸೆಣಸಲಿದೆ.

ಹಿಂದಿನ ಮೂರು ಕೂಟಗಳಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿರುವ ಆಸ್ಟ್ರೇಲಿಯಾದ ವನಿತೆಯರಿಗೆ ಮೊದಲ ಕ್ವಾರ್ಟರ್‌ನ ಆರಂಭದಲ್ಲಿ ಸತತ ಎರಡು ಪೆನಾಲ್ಟಿ ಕಾರ್ನರ್‌ ಸಿಕ್ಕಿತ್ತು. ಈ ಅವಕಾಶಗಳಲ್ಲಿ ಗೋಲು ಗಳಿಸಲು ಕಾಂಗರೂಗಳ ನಾಡಿನ ತಂಡಕ್ಕೆ ಆಗಲಿಲ್ಲ.

ನಂತರವೂ ಆಸ್ಟ್ರೇಲಿಯಾ ತಂಡ ಆಕ್ರಮಣಕಾರಿ ಹೋರಾಟ ಮುಂದುವರಿಸಿತು.

ಎರಡನೆ ಕ್ವಾರ್ಟರ್‌ನ ಶುರುವಿನಲ್ಲಿ ಆಸ್ಟ್ರೇಲಿಯಾದ ಆಟಗಾರ್ತಿ ಬಾರಿಸಿದ ಚೆಂಡನ್ನು ಭಾರತದ ಗೋಲ್‌ಕೀಪರ್‌ ಸವಿತಾ ತಡೆದರು. ಬಳಿಕ ಭಾರತದ ರಕ್ಷಣಾ ವಿಭಾಗದ ಆಟಗಾರ್ತಿಯರು ದಿಟ್ಟ ಆಟ ಆಡಿ ಎದುರಾಳಿಗಳು ಆವರಣ ಪ್ರವೇಶಿಸದಂತೆ ತಡೆದರು. ಹೀಗಾಗಿ ಮೊದಲರ್ಧ ಗೋಲು ರಹಿತವಾಗಿತ್ತು.

ದ್ವಿತೀಯಾರ್ಧದಲ್ಲಿ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿತು. 36ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್‌ನಲ್ಲಿ ಗ್ರೇಸ್‌ ಸ್ಟೀವರ್ಟ್‌ ಗೋಲು ದಾಖಲಿಸಿ ಕಾಂಗರೂಗಳ ನಾಡಿನ ತಂಡದ ಸಂಭ್ರಮಕ್ಕೆ ಕಾರಣರಾದರು.

ನಾಲ್ಕನೆ ಕ್ವಾರ್ಟರ್‌ನಲ್ಲಿ ಭಾರತ ಮಿಂಚಿನ ಆಟ ಆಡಿತು. ಕೊನೆಯ 10 ನಿಮಿಷಗಳಲ್ಲಿ ರಾಣಿ ಬಳಗ ಗೋಲು ಗಳಿಸುವ ಎರಡು ಅವಕಾಶಗಳನ್ನು ಪಡೆದಿತ್ತು.

54ನೇ ನಿಮಿಷದಲ್ಲಿ ಮೋನಿಕಾ ಮಲಿಕ್‌, ಎದುರಾಳಿ ಆವರಣದ ಬಲತುದಿಯಿಂದ ಚೆಂಡನ್ನು ನವನೀತ್‌ ಕೌರ್‌ ಅವರತ್ತ ತಳ್ಳಿದರು. ಚೆಂಡಿನ ಮೇಲೆ ಚುರುಕಾಗಿ ಹಿಡಿತ ಸಾಧಿಸಿದ ನವನೀತ್‌ ಅದನ್ನು ಗುರಿ ಸೇರಿಸಲು ವಿಫಲರಾದರು.

58ನೇ ನಿಮಿಷದಲ್ಲಿ ಭಾರತಕ್ಕೆ ಗೋಲು ಗಳಿಸುವ ಮತ್ತೊಂದು ಅವಕಾಶ ಲಭ್ಯವಾಗಿತ್ತು. ವಂದನಾ ಕಟಾರಿಯ ನೀಡಿದ ಪಾಸ್‌ನಲ್ಲಿ ಚೆಂಡನ್ನು ಗುರಿ ಮುಟ್ಟಿಸಲು ನಾಯಕಿ ರಾಣಿಗೆ ಆಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT