ಸೋಮವಾರ, ಆಗಸ್ಟ್ 26, 2019
28 °C
ಸಾವಿನ ಸಂಖ್ಯೆ 18 l ಕಾರ್ಯಾಚರಣೆಗಿಳಿದ ಸೇನೆ l ಅರ್ಧ ರಾಜ್ಯ ಜಲಾವೃತ lಕುಸಿದ ಮನೆ, ನೀರಿನಿಂದ ತುಂಬಿದ ಹೊಲಗದ್ದೆ l ನೆರವಿಗೆ ಮನವಿ

ಜಲ ದಿಗ್ಬಂಧನ: ಜನತೆಯ ಆಕ್ರಂದನ

Published:
Updated:
Prajavani

ಬೆಂಗಳೂರು: ಮಳೆಯ ರುದ್ರನರ್ತನಕ್ಕೆ ಹುಚ್ಚೆದ್ದು ಕುಣಿಯುತ್ತಿರುವ ನದಿಗಳ ಮಹಾ ಪ್ರವಾಹದಿಂದ ರಾಜ್ಯದ ಅರ್ಧ ಭಾಗ ಜಲಾವೃತಗೊಂಡಿದೆ. ನದಿ ಪಾತ್ರದ ಗ್ರಾಮಗಳು ಮತ್ತು ಪಟ್ಟಣಗಳಿಗೆ ನೀರು ನುಗ್ಗಿದ್ದು, ‘ಜಲಾಘಾತ’ದಿಂದ ಸಂತ್ರಸ್ತರ ರಕ್ಷಣಾ ಕಾರ್ಯ ದುಸ್ತರವಾಗಿದೆ.

ಪ್ರವಾಹದ ಸೆಳೆತಕ್ಕೆ ರಸ್ತೆಗಳು, ಸೇತುವೆಗಳು ಕೊಚ್ಚಿ ಹೋಗಿವೆ. ಮನೆಗಳು, ಕಟ್ಟಡಗಳು ಕುಸಿದು ಬಿದ್ದಿವೆ. ತೋಟ, ಹೊಲ– ಗದ್ದೆಗಳಲ್ಲಿ ನೀರು ಹರಿಯುತ್ತಿರುವುದರಿಂದ ಭಾರಿ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ. ಜಾನುವಾರುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. 51 ತಾಲ್ಲೂಕುಗಳ 503 ಗ್ರಾಮಗಳು ನೀರಿನಿಂದ ಆವರಿಸಿದೆ. ನೂರಾರು ಗ್ರಾಮಗಳಲ್ಲಿ ಗ್ರಾಮಸ್ಥರನ್ನು ಸ್ಥಳಾಂತರಿಸಲಾಗಿದೆ. ಪ್ರವಾಹದಲ್ಲಿ ಸಿಲುಕಿದ್ದವರ ಪೈಕಿ ಈವರೆಗೆ 43,858 ಜನರನ್ನು ರಕ್ಷಿಸಲಾಗಿದೆ.

ಗುರುವಾರದ ಮಳೆ ಮತ್ತು ಪ್ರವಾಹಕ್ಕೆ ಬೆಳಗಾವಿ 1, ಯಾದಗಿರಿ 1, ಧಾರವಾಡ 2, ಶಿವಮೊಗ್ಗ 1, ಉಡುಪಿ 1 ಮತ್ತು ಮೂಡಿಗೆರೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಇದರಿಂದ ಈವರೆಗೆ ಮೃತಪಟ್ಟವರ ಸಂಖ್ಯೆ 18 ಕ್ಕೇರಿದೆ.

ರಕ್ಷಣೆಗೆ ಹರಸಾಹಸ : ಪ್ರವಾಹ ಸಂತ್ರಸ್ತರ ರಕ್ಷಣೆಗೆ ಜಿಲ್ಲಾಡಳಿತಗಳು ಹರಸಾಹಸ ಮಾಡುತ್ತಿರುವ ಬೆನ್ನಲ್ಲೇ, ಬೆಳಗಾವಿ ಜಿಲ್ಲೆ ಸಂಕೇಶ್ವರ ಪಟ್ಟಣಕ್ಕೆ ಹಿರಣ್ಯಕೇಶಿ ನದಿಯ ಹಿನ್ನೀರು ನುಗ್ಗಿದ್ದರಿಂದ ಸ್ಥಳೀಯರೇ ಟೈರ್‌ ಟ್ಯೂಬ್‌ಗಳಿಂದ ತಾತ್ಕಾಲಿಕ ಬೋಟ್‌ಗಳನ್ನು ನಿರ್ಮಿಸಿ ಜನರನ್ನು ರಕ್ಷಿಸಿದರು.

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿ ತುಂಗಾ ನದಿ ಉಕ್ಕಿ ಹರಿದ ಪರಿಣಾಮ ನರಸಿಂಹವನ ಮತ್ತು ಪಟ್ಟಣದ ಪ್ರಮುಖ ಬೀದಿಯನ್ನು ನೀರು ಆವರಿಸಿತು. ಎಲ್ಲ ರಸ್ತೆ ಸಂಪರ್ಕ ಕಡಿದಿದ್ದರಿಂದ ಪಟ್ಟಣ ದ್ವೀಪದಂತಾಗಿತ್ತು. ಉಡುಪಿ ಜಿಲ್ಲೆಯಲ್ಲಿ ಮನೆ ಕುಸಿದು ಒಬ್ಬ ಮಹಿಳೆ ಮೃತಪಟ್ಟಿದ್ದರೆ, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಹೇಮಾವತಿ ನದಿಯಲ್ಲಿ ಒಬ್ಬ ವ್ಯಕ್ತಿ ಕೊಚ್ಚಿ ಹೋಗಿದ್ದು, ಹುಡುಕಾಟ ನಡೆದಿದೆ.

ಕಾರವಾರ ತಾಲ್ಲೂಕಿನ ಕೊಡಸಳ್ಳಿ ಅಣೆಕಟ್ಟೆಯಲ್ಲಿ ಬಿರುಕು ಬಿಟ್ಟಿದೆ ಎಂಬ ವದಂತಿಯಿಂದ ಭೀತರಾದ ನೂರಾರು ಜನರು ಭೀಕರ ಮಳೆಯಲ್ಲೇ ಊರು ತೊರೆದರು. ಸಣ್ಣ ಮಕ್ಕಳು, ಮಹಿಳೆಯರು, ವೃದ್ಧರನ್ನು ಕರೆದುಕೊಂಡು ಕದ್ರಾ ಗ್ರಾಮದಿಂದ ಓಡಿ ಹೋದ ಘಟನೆಯೂ ನಡೆದಿದೆ.

ಬೆಳಗಾವಿ ತಾಲ್ಲೂಕಿನ ಕಬಾಲಪುರದಲ್ಲಿ ಬಳ್ಳಾರಿ ನಾಲ ನೀರಿನಿಂದ ಆವೃತವಾಗಿದ್ದ ಮನೆಯಲ್ಲಿ ಕಲ್ಲಪ್ಪ ಹಾಗೂ ರತ್ನವ್ವ ದಂಪತಿಯನ್ನು ರಕ್ಷಿಸುವಲ್ಲಿ ‘ಪ್ರಜಾವಾಣಿ’ ನೆರವಾಯಿತು.

ಅಫಜಲಪೂರ ತಾಲೂಕಿನಲ್ಲಿ ಭೀಮಾ ನದಿ ಪಾತ್ರದ 26 ಹಳ್ಳಿಗಳು ಪ್ರವಾಹಕ್ಕೆ ಸಿಲುಕುವ ಸಾಧ್ಯತೆಯಿರುವುದರಿಂದ ಈ ಗ್ರಾಮಗಳನ್ನು ಕೂಡಲೆ ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದ್ದಾರೆ.

ಕೇರಳದ ವಯನಾಡು ಭಾಗದಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ಚೆಕ್ ಪೋಸ್ಟ್ ಮೂಲಕ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಹುಬ್ಬಳ್ಳಿ– ಧಾರವಾಡ ಅವಳಿ ನಗರಗಳಿಗೆ ಇದೇ ಮೊದಲ ಬಾರಿಗೆ ಮಳೆಯಿಂದಾಗಿ ಎಲ್ಲೆಡೆ ನೀರು ನುಗ್ಗಿದೆ.

ನೆರವಿಗೆ ಧಾವಿಸಿದ ಸೇನೆ: ಪ್ರವಾಹ ಪೀಡಿತ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಎನ್‌ಡಿಆರ್‌ಎಫ್‌ನ 8 ತಂಡಗಳು, ಸೇನೆಯ 10 ತುಕಡಿಗಳು, ಎಸ್‌ಡಿಆರ್‌ಎಫ್‌ನ ಎರಡು ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಬೆಳಗಾವಿಯಲ್ಲಿ ಭಾರತೀಯ ವಾಯು ಪಡೆಯ ಎರಡು ಹೆಲಿಕಾಪ್ಟರ್‌ಗಳು ಗುರುವಾರ ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ.

ಸಂತ್ರಸ್ತ ಶಿಬಿರಗಳು: ಸಂತ್ರಸ್ತರಿಗಾಗಿ 272 ಶಿಬಿರಗಳನ್ನು ತೆರೆಯಲಾಗಿದೆ. 16,875 ಮಂದಿ ಆಶ್ರಯಪಡೆದಿದ್ದಾರೆ. 2611 ಮನೆಗಳು ಹಾನಿಗೀಡಾಗಿವೆ. ಒಟ್ಟು 1,48,293 ಹೆಕ್ಟೇರ್‌ ಬೆಳೆ ನಷ್ಟವಾಗಿದೆ. ಪ್ರವಾಹದಲ್ಲಿ ಸಿಲುಕಿದ್ದ 16,861 ಜಾನುವಾರು ರಕ್ಷಿಸಲಾಗಿದೆ.  ಸಂತ್ರಸ್ತ ಶಿಬಿರಗಳಲ್ಲಿ ಶುದ್ಧ ಕುಡಿಯುವ ನೀರು, ಆಹಾರ ಮತ್ತು ಇತರ ಪರಿಹಾರ ಸಾಮಗ್ರಿ ಒದಗಿಸಲಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಹ ಪೀಡಿತ ಪ್ರದೇಶದಲ್ಲಿ 3 ಸಾವಿರ ಮನೆಗಳನ್ನು ನಿರ್ಮಿಸಬೇಕಾಗಿದೆ. ಪರಿಹಾರಕ್ಕೆ ₹5 ಸಾವಿರ ಕೋಟಿ ಬೇಕಿದೆ. 3 ದಿನ ಇಲ್ಲೇ ಇದ್ದು ಪರಿಸ್ಥಿತಿ ಅವಲೋಕಿಸುತ್ತೇನೆ -ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

ಶಾಲೆ–ಕಾಲೇಜಿಗೆ ರಜೆ

ಧಾರವಾಡ, ಬೆಳಗಾವಿ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ಆಗಸ್ಟ್‌ 10 ರವರೆಗೆ,  ಉತ್ತರಕನ್ನಡ, ಹಾವೇರಿ, ಬಾಗಲಕೋಟೆ ಹಾಗೂ ಗದಗ ಜಿಲ್ಲೆಯ ಶಾಲಾ– ಕಾಲೇಜುಗಳಿಗೆ ಆ. 9 ರವರೆಗೆ ರಜೆ ವಿಸ್ತರಿಸಲಾಗಿದೆ. ಕೊಡಗು 
ಜಿಲ್ಲೆಯಲ್ಲಿ ಮತ್ತು ಚಿಕ್ಕಮಗಳೂರು ಜಿಲ್ಲೆಯ 
ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ ಮತ್ತು ಎನ್ಆರ್‌ ಪುರ ತಾಲ್ಲೂಕು
ಗಳ ಶಾಲಾ– ಕಾಲೇಜುಗಳಿಗೆ ಆ.9 ರಂದು, ದಕ್ಷಿಣ ಕನ್ನಡ ಮತ್ತು ಉಡುಪಿ, ಹಾಸನ ಜಿಲ್ಲೆಯಲ್ಲಿ ಶುಕ್ರವಾರ ರಜೆ ಘೋಷಿಸಲಾಗಿದೆ.

ಇನ್ಫೊಸಿಸ್ ‍ಪ್ರತಿಷ್ಠಾನದಿಂದ ₹ 10 ಕೋಟಿ ನೆರವು

ಪ್ರವಾಹದಿಂದ ತೊಂದರೆಗೆ ಒಳಗಾಗಿರುವ ಜನರಿಗಾಗಿ ಇನ್ಫೊಸಿಸ್‌ ಪ್ರತಿಷ್ಠಾನ ₹ 10 ಕೋಟಿ ನೆರವು ಘೋಷಿಸಿದೆ. ಪ್ರತಿಷ್ಠಾನವು ಈಗಾಗಲೇ ರಾಯಚೂರು, ಬಾಗಲಕೋಟೆ ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ ಕುಡಿಯುವ ನೀರು, ಆಹಾರ ಉತ್ಪನ್ನಗಳು, ಬಟ್ಟೆ ಮತ್ತು ವೈದ್ಯಕೀಯ ಕಿಟ್‍ಗಳು ಸೇರಿದಂತೆ ಜನರಿಗೆ ಅಗತ್ಯ ವಸ್ತುಗಳನ್ನು ವಿತರಿಸುತ್ತಿದೆ. ನಟ ಉಪೇಂದ್ರ ₹5 ಲಕ್ಷ ದೇಣಿಗೆ ನೀಡಿದ್ದಾರೆ.

ನೆರವಿಗೆ ಮನವಿ: ಸಂತ್ರಸ್ತರ ಪರಿಹಾರ ಕಾರ್ಯಕ್ಕೆ ದೇಣಿಗೆ ನೀಡುವಂತೆ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ. ದೇಣಿಗೆ ನೀಡಬೇಕಾದ ಬ್ಯಾಂಕ್‌ ಖಾತೆ ಸಂಖ್ಯೆ ಮತ್ತು ವಿಳಾಸ– ಮುಖ್ಯಮಂತ್ರಿಯವರ ನೈಸರ್ಗಿಕ ವಿಕೋಪ ನಿಧಿ, ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾ, ವಿಧಾನಸೌಧ ಬ್ರಾಂಚ್‌, ಖಾತೆ ಸಂಖ್ಯೆ 37887098605, ಐಎಫ್‌ಎಸ್‌ಸಿ ಕೋಡ್‌ SBIN0040277. ಕಳಿಸಬೇಕಾದ ವಿಳಾಸ– ನಂ 235–ಎ, 2ನೇ ಮಹಡಿ, ಮುಖ್ಯಮಂತ್ರಿ ಪರಿಹಾರ ನಿಧಿ ಶಾಖೆ, ವಿಧಾನಸೌಧ, ಬೆಂಗಳೂರು–1

8 ಜಿಲ್ಲೆಗಳಲ್ಲಿ ರೆಡ್ ಅಲರ್ಟ್‌

ಕರಾವಳಿ, ಮಲೆನಾಡು ಭಾಗದಲ್ಲಿ ಇನ್ನೂ ಎರಡು ದಿನ ಭಾರಿ ಮಳೆ ಸುರಿಯಲಿದ್ದು, 8 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮುಂದುವರಿಸುವಂತೆ ಹವಾಮಾನ ಇಲಾಖೆ ತಿಳಿಸಿದೆ.

‘ಬೆಳಗಾವಿ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯಲಿದೆ. ಎರಡು ದಿನಗಳಲ್ಲಿ ಗರಿಷ್ಠ 20 ಸೆಂಟಿ ಮೀಟರ್ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ ಎರಡು ದಿನ  ಕರಾವಳಿಗಿಂತ ಮಲೆನಾಡಿನಲ್ಲೇ ಹೆಚ್ಚು ಮಳೆಯಾಗಲಿದೆ. ನಂತರ ಮಳೆಯ ತೀವ್ರತೆ ಕಡಿಮೆಯಾಗಲಿದೆ’ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ಈವರೆಗೂ ರಾಜ್ಯ ಸರ್ಕಾರ ನೆರವು ಕೇಳಿಲ್ಲ: ಜೋಶಿ

ಬೆಂಗಳೂರು: ಪ್ರವಾಹದಿಂದ ತತ್ತರಿಸಿರುವ ಜಿಲ್ಲೆಗಳಲ್ಲಿ ಜನರ ರಕ್ಷಣೆ ಹಾಗೂ ಪರಿಹಾರ ಕಾರ್ಯ ಕೈಗೊಳ್ಳಲು ಯಾವ ರೀತಿಯ ನೆರವು ಬೇಕು ಎಂಬುದನ್ನು ರಾಜ್ಯ ಈವರೆಗೂ ಕೇಳಿಲ್ಲ. ರಾಜ್ಯದಿಂದ ಮನವಿ ಬಂದರೆ ತಕ್ಷಣ ಸ್ಪಂದಿಸಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

‘ಉತ್ತರ ಕರ್ನಾಟಕ ಭಾಗದ ಜನರ ರಕ್ಷಣೆಗೆ ತುರ್ತಾಗಿ ಸ್ಪಂದಿಸಲು ಕೇಂದ್ರ ಸರ್ಕಾರ ಸಿದ್ಧವಿದೆ. ಆದರೆ ಏನೆಲ್ಲ ನೆರವು ಬೇಕು ಎಂಬುದನ್ನು ರಾಜ್ಯ ಕೇಳಬೇಕು’ ಎಂದು ಸುದ್ದಿಗಾರರಿಗೆ ತಿಳಿಸಿದರು.

ಮಹಾರಾಷ್ಟ್ರ

ಕೊಯ್ನಾ-3,85,000

ಉಜನಿ, ವೀರಾ ಡ್ಯಾಂ-2,74,000

 

ಕರ್ನಾಟಕ

ಆಲಮಟ್ಟಿ-3,55,340

ನಾರಾಯಣಪುರ-4,14,064

ಮಲಪ್ರಭಾ-1,00,00

ಘಟಪ್ರಭಾ-1,00,00

ಕಬಿನಿ-90,000

ಹಿಪ್ಪರಗಿ-3,42,000

ಕದ್ರಾ-1,80,000

ತುಂಗಾ-85,590

Post Comments (+)