ರಾಜ್ಯದ ವಿವಿಧೆಡೆ ಆಲಿಕಲ್ಲು ಮಳೆ

ಬುಧವಾರ, ಜೂನ್ 19, 2019
28 °C

ರಾಜ್ಯದ ವಿವಿಧೆಡೆ ಆಲಿಕಲ್ಲು ಮಳೆ

Published:
Updated:
Prajavani

ಬೆಂಗಳೂರು: ರಾಜ್ಯದ ವಿವಿಧೆಡೆ ಮುಂಗಾರುಪೂರ್ವ ಮಳೆಯಾಗಿದೆ. ಗುಡುಗು, ಸಿಡಿಲು ಆಲಿಕಲ್ಲು ಸಹಿತ ಮಳೆಯಾಗಿದೆ. ಜೋರು ಗಾಳಿಯಿಂದಾಗಿ ಹಲವೆಡೆ ವಿದ್ಯುತ್‌ ಕಂಬಗಳು, ಮರಗಳು ಧರೆಗುರುಳಿವೆ.

ಹೊಳಲ್ಕೆರೆ ತಾಲ್ಲೂಕಿನ ಗುಡ್ಡದ ಸಾಂತೇನಹಳ್ಳಿ, ಲೋಕದೊಳಲು, ತಿರುಮಲಾಪುರ, ಆವಿನಹಟ್ಟಿ ಸುತ್ತಮುತ್ತ ಶುಕ್ರವಾರ ಸಂಜೆ ಉತ್ತಮ ಮಳೆ ಸುರಿದಿದೆ. ಬಿರುಸಿನ ಮಳೆಯಿಂದ ಹೊಲ, ತೋಟಗಳಲ್ಲಿ ನೀರು ತುಂಬಿದೆ. ಸಮೀಪದ ದೊಡ್ಡಹೊಟ್ಟೆ ರಂಗನಾಥ ಸ್ವಾಮಿಯ ಬೆಟ್ಟ ಪ್ರದೇಶದಲ್ಲಿ ಹೆಚ್ಚು ಮಳೆ ಸುರಿದಿದ್ದು, ಹಳ್ಳಗಳಲ್ಲಿ ನೀರು ಹರಿದಿದ್ದು, ಚೆಕ್ ಡ್ಯಾಂ, ಗೋಕಟ್ಟೆ, ಕೃಷಿಹೊಂಡಗಳಲ್ಲಿ ನೀರು ಸಂಗ್ರಹವಾಗಿದೆ.

ಭರಮಸಾಗರದಲ್ಲಿ ಆಲಿಕಲ್ಲು ಮಳೆಯಾಗಿದೆ. ಸಿರಿಗೆರೆಯಲ್ಲಿ ಸಾಧಾರಣ ಮಳೆ, ಚಿಕ್ಕಜಾಜೂರಿನಲ್ಲಿ ಗುಡುಗು ಸಹಿತ ಮಳೆಯಾಗಿದೆ.

ಚನ್ನಗಿರಿ ತಾಲ್ಲೂಕಿನಾದ್ಯಾಂತ್ಯ ಗುರುವಾರ ರಾತ್ರಿ ಉತ್ತಮ ಮಳೆಯಾಗಿದೆ. ಸಿಡಿಲು ಬಡಿದು ಒಂದು ಎತ್ತು ಹಾಗೂ ಹಸು ಮೃತಪಟ್ಟಿವೆ. ಶುಕ್ರವಾರ ರಾತ್ರಿ ದಾವಣಗೆರೆ ನಗರದಲ್ಲಿಯೂ ಮಳೆಯಾಗಿದೆ.

ಉತ್ತಮ ಮಳೆ: ಮೈಸೂರು, ಮಂಡ್ಯ, ಕೊಡಗು ಹಾಗೂ ಹಾಸನ ಜಿಲ್ಲೆಯ ಹಲವೆಡೆ ಗುರುವಾರ ರಾತ್ರಿ ಹಾಗೂ ಶುಕ್ರವಾರ ಉತ್ತಮ ಮಳೆಯಾಗಿದೆ.

ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಹಲವೆಡೆ ಮನೆಗಳ ಮೇಲೆ ಮರ ಉರುಳಿ ಬಿದ್ದಿದ್ದು, 100ಕ್ಕೂ ಹೆಚ್ಚು ಮನೆಗಳ ಚಾವಣಿ ಹಾರಿಹೋಗಿವೆ.

ಮೈಸೂರಿನಲ್ಲಿ ಗುರುವಾರ ರಾತ್ರಿ ಸುರಿದ ಭಾರಿ ಮಳೆ ಹಾಗೂ ಗಾಳಿಯಿಂದಾಗಿ 50ಕ್ಕೂ ಹೆಚ್ಚು ಮರಗಳು ಹಾಗೂ ವಿದ್ಯುತ್‌ ಕಂಬಗಳು ಉರುಳಿದ್ದವು. ಶುಕ್ರವಾರ ಇಡೀ ದಿನ ವಿದ್ಯುತ್‌ ಕಂಬಗಳ ಜೋಡಣೆ ಹಾಗೂ ಮರಗಳ ತೆರವು ಕಾರ್ಯ ನಡೆದಿದ್ದರಿಂದ ಸಂಜೆ 6ರವರೆಗೂ ನಗರದ ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್‌ ಸಂಪರ್ಕ ಇರಲಿಲ್ಲ.

ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಜುಟ್ಟನಹಳ್ಳಿಯಲ್ಲಿ 250ಕ್ಕೂ ಹೆಚ್ಚು ಮರಗಳು ಹಾಗೂ ವಿದ್ಯುತ್‌ ಕಂಬಗಳು ನೆಲಕಚ್ಚಿವೆ.

ಹೊಯ್ಸಳರ ಕಾಲದಲ್ಲಿ ಸೈನಿಕರ ತಂಗುದಾಣವಾಗಿ ಹಾಗೂ ಆಯುಧಾಗಾರವಾಗಿ ಬಳಕೆಯಾಗುತ್ತಿದ್ದ, ಹಾಸನ ಜಿಲ್ಲೆ ಬಾಣಾವರದಲ್ಲಿನ ಉಗ್ರಾಣ ಕೋಟೆ ಕುಸಿದುಬಿದ್ದಿದೆ. ಕೊಡಗು ಜಿಲ್ಲೆಯ ಶನಿವಾರಸಂತೆಯಲ್ಲಿ ಮಳೆಯಾಗಿದೆ.

ಸಿಡಿಲು ಬಡಿದು ಸಾವು: ಕಲಬುರ್ಗಿ ಜಿಲ್ಲೆ ಕಮಲಾಪುರದಲ್ಲಿ ಶುಕ್ರವಾರ ಸಂಜೆ ಸಿಡಿಲು ಬಡಿದು ಶಂಕರ ನಾಗಪ್ಪ ಹವಳಿ (38) ಎಂಬುವವರು ಮೃತಪಟ್ಟು, ರೇವಣಸಿದ್ದಪ್ಪ ನಾಗಪ್ಪ ಸುಗೂರ ಹಾಗೂ ಬೀದರ್ ಜಿಲ್ಲೆಯ ಔರಾದ್ ನಿವಾಸಿ ಜಗನ್ನಾಥ ಈರಣ್ಣ ಗಾಯಗೊಂಡಿದ್ದಾರೆ.

ತುಮಕೂರು ಜಿಲ್ಲೆಯ ಕೆಲವು ಭಾಗಗಳಲ್ಲಿ ಗುರುವಾರ ರಾತ್ರಿ ಮಳೆಗಾಳಿಗೆ ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ಕಂಬ ಮುರಿದು ಬಿದ್ದಿವೆ.

ತುರುವೇಕರೆ ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಬಡಗರಹಳ್ಳಿಯಲ್ಲಿ ಸಿಡಿಲು ಬಡಿದು 10 ಕುರಿಗಳು ಮೃತಪಟ್ಟಿವೆ.

ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ವ್ಯಾಪ್ತಿಯಲ್ಲಿ ಬಿರುಗಾಳಿಗೆ 6 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.

ಚಿಕ್ಕಮಗಳೂರು ನಗರ, ಆಲ್ದೂರು, ಕಡೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಕ್ರವಾರ ಸಂಜೆ ಗುಡುಗುಸಹಿತ ಮಳೆಯಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !