ಭಾನುವಾರ, ನವೆಂಬರ್ 17, 2019
28 °C

ಏಳು ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ

Published:
Updated:

ಬೆಂಗಳೂರು: ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ನ. 11ರಂದು ಗುಡುಗು, ಸಿಡಿಲು ಸಹಿತ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ. ಈ ಜಿಲ್ಲೆಗಳಲ್ಲಿ ಸೋಮವಾರ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿ ಭಾಗದ ಕೆಲವೆಡೆ ಸಾಧಾರಣ ಮಳೆಯಾಗಲಿದೆ. ಉತ್ತರ ಒಳನಾಡಿನಲ್ಲಿ ಮಳೆ ಪ್ರಮಾಣ ಕಡಿಮೆ ಇರಲಿದೆ.

ಬೆಳ್ತಂಗಡಿಯ ಕೆಲವೆಡೆ ಭಾರಿ ಮಳೆ: ತಾಲ್ಲೂಕಿನ ಮುಂಡಾಜೆ, ಸೋಮಂತಡ್ಕ, ಕಾನರ್ಪ, ಮಲವಂತಿಗೆ, ದಿಡುಪೆ , ಉಜಿರೆ ಭಾಗದಲ್ಲಿ ಭಾನುವಾರ ಸುಮರು 1 ಗಂಟೆ ಕಾಲ ವ್ಯಾಪಕ ಗುಡುಗುಸಹಿತ ಮಳೆ ಸುರಿದಿದೆ. ಮುಂಡಾಜೆ ಪರಿಸರದಲ್ಲಿ ಆಲಿಕಲ್ಲು ಮಳೆ ಸುರಿದಿದೆ.

ತಾಲ್ಲೂಕಿನಾದ್ಯಂತ ಸಂಜೆ 4 ಗಂಟೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಸೆಖೆಯೂ ಹೆಚ್ಚಾಗಿತ್ತು. ಸಂಜೆ ವೇಳೆಗೆ ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಗುಡುಗಿನೊಂದಿಗೆ ತುಂತುರು ಮಳೆ ಸುರಿಯಿತು. ಆಗಸ್ಟ್ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದ ಪ್ರವಾಹಕ್ಕೆ ತುತ್ತಾಗಿದ್ದ ಕುಕ್ಕಾವು, ಮಲವಂತಿಗೆ, ದಿಡುಪೆ ಭಾಗದಲ್ಲಿ ಭಾರಿ ಮಳೆ ಸುರಿಯಿತು. ಜೋರಾಗಿ ಗಾಳಿಯೂ ಬೀಸಿತು.

ಹೆಬ್ರಿ ಪರಿಸರದಲ್ಲಿ ಮಳೆ: ಉಡುಪಿ ಜಿಲ್ಲೆಯ ಹೆಬ್ರಿ, ಮುದ್ರಾಡಿ, ಮುನಿಯಾಲು ಸುತ್ತಮುತ್ತಲಿನ ಪ್ರದೇಶದಲ್ಲಿ ಭಾನುವಾರ ಸಂಜೆ ಸಾಧಾರಣ ಮಳೆ ಸುರಿದಿದೆ.

ಭಾನುವಾರ ಮೈಸೂರಿನಲ್ಲಿ 6 ಸೆಂ.ಮೀ. ಮಳೆಯಾಗಿದೆ. ಬೆಂಗಳೂರು 5, ಕೊಳ್ಳೇಗಾಲ, ಹಾರಂಗಿ 2, ಮಳವಳ್ಳಿ, ನಂಜನಗೂಡು, ಚಾಮರಾಜನಗರ, ಎಚ್‌.ಡಿ.ಕೋಟೆಯಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ.

ಪ್ರತಿಕ್ರಿಯಿಸಿ (+)