ನೀರಿನಲ್ಲಿ ಕೊಚ್ಚಿ ಹೋದ ಯುವಕರು

7
ಬೈಕ್‌ ಸಮೇತ ಕೊಚ್ಚಿದ ಹೋದ ಯುವಕ: ಮುಂದುವರಿದ ಶೋಧ

ನೀರಿನಲ್ಲಿ ಕೊಚ್ಚಿ ಹೋದ ಯುವಕರು

Published:
Updated:

ಬೆಂಗಳೂರು: ನಂಜನಗೂಡು ಪಟ್ಟಣ ಬಳಿಯ ಕಪಿಲಾ ನದಿಯಲ್ಲಿ ಮಂಗಳವಾರ ಸಂಜೆ ಈಜಲು ತೆರಳಿದ್ದ ಐವರು ಯುವಕರ ಪೈಕಿ ಒಬ್ಬ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.

ಪರಸ್ಪರ ಸವಾಲು ಹಾಕಿಕೊಂಡ ಯುವಕರು ರೈಲ್ವೆ ಸೇತುವೆಯಿಂದ ಜತೆಯಾಗಿ ನದಿಗೆ ಧುಮುಕಿದ್ದಾರೆ. ನಾಲ್ವರು ಈಜಿ ದಡ ಸೇರಿದರೆ, ನೀರಿನ ಸೆಳೆತದಲ್ಲಿ ಒಬ್ಬ ಕೊಚ್ಚಿ ಹೋಗಿದ್ದಾನೆ.

ನಾಪತ್ತೆಯಾದ ಯುವಕನನ್ನು ನಂಜನಗೂಡು ತ್ಯಾಗರಾಜ ಕಾಲೊನಿ ನಿವಾಸಿ ಮುಜಾಫರ್ ಷರೀಫ್ (22) ಎಂದು ಗುರುತಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ನುರಿತ ಈಜುಗಾರರ ಜತೆ ಬುಧವಾರ ಇಡೀ ದಿನ ಹುಡುಕಾಟ ನಡೆಸಿದರೂ ಫಲ ನೀಡಿಲ್ಲ.

ಬೈಕ್‌ ಸಮೇತ ಕೊಚ್ಚಿ ಹೋದ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಜಯಪುರ ಸಮೀಪದ ಗುಡ್ಡೇತೋಟ ಕಾರೆಮನೆಯ ಕೃಷಿ ಕಾರ್ಮಿಕ ಅಶೋಕ್ (21) ಮಂಗಳವಾರ ರಾತ್ರಿ ಬೈಕ್‌ ಸಹಿತ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಬುಧವಾರ ಬೈಕ್‌ ಹಳ್ಳದ ಬಳಿ ದೊರೆತಿದೆ. ಯುವಕನಿಗಾಗಿ ಹುಡುಕಾಟ ಮುಂದುವರಿದಿದೆ. ಶೃಂಗೇರಿಯ ಶಾರದ ಮಠದ ಕಪ್ಪೆಶಂಕರ ದೇವಾಲಯ ಜಲಾವೃತಗೊಂಡಿದೆ. ತಾಲ್ಲೂಕಿನ ಕುಂತೂರು ಗ್ರಾಮದ ವಿಟ್ಲಪುರ ರಸ್ತೆಯಲ್ಲಿ ಬಂಡೆಯೊಂದು ರಸ್ತೆಗೆ ಉರುಳಿ ಕೆಲವು ಸಮಯ ಸಂಚಾರ ಸ್ಥಗಿತಗೊಂಡಿತ್ತು.

ಶೃಂಗೇರಿ– ತೀರ್ಥಹಳ್ಳಿ ರಸ್ತೆಯ ಕೊರನಕೊಡಿಗೆ ಮಣ್ಣು ಕುಸಿದಿದ್ದು, ಮರ ನೆಲಕ್ಕುರುಳಿದೆ. ಶೃಂಗೇರಿ, ಜಯಪುರ ರಸ್ತೆಯ ಕುಂಚೇಬೈಲು ಸಮೀಪ ರಸ್ತೆಗೆ ಮರ ಬಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಮೂಡಿಗೆರೆಯಲ್ಲೂ ಬಿರುಸಿನ ಮಳೆ ಸುರಿದಿದೆ.

ಮುಂದುವರಿದ ಆರ್ಭಟ: ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು ಶಿವಮೊಗ್ಗ ನಗರ, ಭದ್ರಾವತಿ, ಸೊರಬ, ಶಿಕಾರಿಪುರ ತಾಲ್ಲೂಕಿನಲ್ಲೂ ಧಾರಾಕಾರ ಮಳೆ ಸುರಿದಿದೆ. ತುಂಗಾ ಜಲಾಶಯಕ್ಕೆ 51,481 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 20 ಕ್ರೆಸ್ಟ್‌ಗೇಟ್‌ ತೆರೆಯಲಾಗಿದೆ. ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಕೊಡಗುನಲ್ಲಿ ಚುರುಕು: ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಇನ್ನಷ್ಟು ಚುರುಕಾಗಿದೆ. ವಿರಾಜಪೇಟೆ, ಪೊನ್ನಂಪೇಟೆ, ಗೋಣಿಕೊಪ್ಪಲು, ಶ್ರೀಮಂಗಲ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಲಕ್ಷ್ಮಣತೀರ್ಥ ನದಿ ಉಕ್ಕಿ ಹರಿಯುತ್ತಿದೆ.

ಕೊಡಗು ಜಿಲ್ಲೆಯ ಹರಿಹರ, ಬಲ್ಲೇಮಂಡೂರು, ನಿಟ್ಟೂರು, ಬಾಳೆಲೆ ಮಾರ್ಗದಲ್ಲಿ ರಸ್ತೆಯ ಮೇಲೆ ನದಿಯ ನೀರು ಹರಿಯುತ್ತಿದ್ದು ಬುಧವಾರ ಬೆಳಿಗ್ಗೆಯಿಂದ ವಾಹನ ಸಂಚಾರ ಬಂದ್‌ ಆಗಿದೆ. ಭಾಗಮಂಡಲದಲ್ಲಿ ಪ್ರವಾಹ ಸ್ಥಿತಿ ಮುಂದುವರಿದಿದೆ. ಸ್ಥಳದಲ್ಲಿ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಮುಳುಗು ತಜ್ಞರು ಬೀಡುಬಿಟ್ಟಿದ್ದು ಬೋಟ್‌ ಮೂಲಕ ಸ್ಥಳೀಯರು ಹಾಗೂ ಭಕ್ತರನ್ನು ದಾಟಿಸಲಾಗುತ್ತಿದೆ.

ಭಾಗಮಂಡಲ– ಅಯ್ಯಂಗೇರಿ ರಸ್ತೆಯ ಮೇಲೆ ಕ್ಷಣಕ್ಷಣಕ್ಕೂ ನೀರು ಏರಿಕೆ ಆಗುತ್ತಿದ್ದು ತ್ರಿವೇಣಿ ಸಂಗಮದ ಸ್ನಾನಘಟ್ಟ ಮುಳುಗಡೆಯಾಗಿದೆ. ಹಾರಂಗಿ ಒಳಹರಿವು 12,168ರಿಂದ 14,973 ಕ್ಯುಸೆಕ್‌ಗೆ ಏರಿಕೆಯಾಗಿದೆ.

ಕಬಿನಿಯಿಂದ 50 ಸಾವಿರ ಕ್ಯುಸೆಕ್‌ ನೀರು: ಮೈಸೂರು ಜಿಲ್ಲೆಯ ಎಚ್‌.ಡಿ.ಕೋಟೆ ತಾಲ್ಲೂಕಿನ ಕಬಿನಿ ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, 50 ಸಾವಿರ ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ. ಇದರಿಂದ ಕಪಿಲಾ ನದಿಯ ನೀರಿನ ಪ್ರಮಾಣ ಏರಿಕೆಯಾಗಿದೆ.

ಎರಡು ಮನೆ ಕುಸಿತ: ಸಕಲೇಶಪುರ ತಾಲ್ಲೂಕಿನಲ್ಲಿ ಮಧ್ಯಾಹ್ನದ ನಂತರ ಒಂದೇ ಸಮನೆ ಮಳೆ ಸುರಿಯಿತು. ಗೊದ್ದು, ವಣಗೂರು ಗ್ರಾಮದಲ್ಲಿ ಮನೆ ಕುಸಿದಿವೆ.

ಮತ್ತೆರಡು ಸೇತುವೆ ಮುಳುಗಡೆ
ದಕ್ಷಿಣ ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ರಾಜ್ಯಕ್ಕೆ ಹರಿದು ಬರುವ ಕೃಷ್ಣಾ ನದಿಯ ಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಬೆಳಗಾವಿ, ಚಿಕ್ಕೋಡಿ, ಖಾನಾಪುರ, ಗೋಕಾಕ, ಬೈಲಹೊಂಗಲದಲ್ಲಿ ಜಿಟಿಜಿಟಿ ಮಳೆಯಾಗಿದೆ.

ಚಿಕ್ಕೋಡಿಯ ಕಲ್ಲೋಳ ಬಳಿ ಕೃಷ್ಣಾ ನದಿಗೆ 68,419 ಕ್ಯುಸೆಕ್‌ ನೀರು ಬಂದು ಸೇರುತ್ತಿದೆ. ಕೃಷ್ಣಾದ ಉಪನದಿಗಳಾದ ದೂಧ್‌ಗಂಗಾ ಹಾಗೂ ವೇದಗಂಗಾದಲ್ಲೂ ನೀರಿನ ಹರಿವು ಹೆಚ್ಚಳವಾಗಿದೆ.

ಚಿಕ್ಕೋಡಿ ತಾಲ್ಲೂಕಿನ ಕಾರದಗಾ– ಭೋಜ ಸೇತುವೆ ಹಾಗೂ ಭೋಜವಾಡಿ– ಕುನ್ನಾರ ಸೇತುವೆಗಳು ಬುಧವಾರ ಬೆಳಿಗ್ಗೆ ಮುಳುಗಡೆಯಾಗಿವೆ. ಈಗಾಗಲೇ ಮುಳುಗಡೆಯಾಗಿದ್ದ ಕಲ್ಲೋಳ– ಯಡೂರ ಹಾಗೂ ಮಲಿಕವಾಡ– ದತ್ತವಾಡ ಸೇತುವೆಗಳು ಯಥಾಸ್ಥಿತಿಯಲ್ಲಿವೆ.

ಪ್ರವಾಹ ಪರಿಸ್ಥಿತಿ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಹೆಗ್ಗೆಕೊಪ್ಪ, ಅರೆಂದೂರು, ನೆಜ್ಜೂರು, ಹಸ್ವಂತೆ ಸುತ್ತಮುತ್ತಲಿನ ಹೊಳೆಗಳು ಉಕ್ಕಿ ಹರಿಯುತ್ತಿವೆ. ಕಾರವಾರದಲ್ಲಿ ಕೂಡ ಆಗಾಗ ರಭಸದ ಮಳೆಯಾಗಿದೆ.

ಕುಮಟಾ ತಾಲ್ಲೂಕಿನಲ್ಲೂ ಅಘನಾಶಿನಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಸಣ್ಣ ಪ್ರಮಾಣದಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿದೆ.

ಮುಂಬೈನಲ್ಲಿ ತಗ್ಗಿದ ಮಳೆ
ಮುಂಬೈ (ಪಿಟಿಐ): ನಗರದಲ್ಲಿ ಮುಂಗಾರು ಮಳೆ ಬುಧವಾರ ಬಿಡುವು ನೀಡಿತು. ನಾಲ್ಕು ದಿನಗಳಿಂದ ಸುರಿದ ಮಳೆಯಿಂದಾಗಿ ವ್ಯತ್ಯಯಗೊಂಡಿದ್ದ ಉಪ ನಗರ ರೈಲು ಸಂಚಾರ ಸೇವೆ ಪುನಃ ಆರಂಭವಾಗಿದೆ.

ಮುಂಜಾನೆಯಿಂದಲೇ ಪ್ರಯಾಣಿಕರು ತಾವು ತಲುಪಬೇಕಾದ ಸ್ಥಳಗಳಿಗೆ ಪ್ರಯಾಣಿಸಲು ರೈಲು ನಿಲ್ದಾಣಗಳಿಗೆ ಬಂದು ಕಾಯುತ್ತಿದ್ದರು. ಎಲ್ಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಬೆಳಿಗ್ಗೆ 6.45ಕ್ಕೆ ಉಪನಗರ ರೈಲು ಸಂಚಾರ ಆರಂಭಿಸಲಾಯಿತು ಎಂದು ಪಶ್ಚಿಮ ರೈಲ್ವೆ ವಕ್ತಾರ ರವೀಂದ್ರ ಭಾಕರ್‌ ತಿಳಿಸಿದರು.ಮಳೆಯ ಅಬ್ಬರ ತಗ್ಗಿದ್ದರಿಂದ ಮಹಾನಗರದ ರಸ್ತೆಗಳಲ್ಲಿ ವಾಹನ ಸಂಚಾರ ಸಹಜ ಸ್ಥಿತಿಗೆ ಮರಳಿದೆ.

ಭಾರಿ ಮಳೆ: ಶಾಲೆಗಳ ರಜೆ ಮುಂದುವರಿಕೆ
ಶಿವಮೊಗ್ಗ: ಜಿಲ್ಲೆಯ ಹಲವೆಡೆ ಬುಧವಾರ ಮಳೆಯ ಆರ್ಭಟ ಮುಂದುವರಿದಿದೆ. 

ನಾಲ್ಕು ದಿನಗಳಿಂದ ತೀರ್ಥಹಳ್ಳಿ, ಹೊಸನಗರ, ಸಾಗರ ತಾಲ್ಲೂಕು ಭಾಗಗಳಲ್ಲಿ ನಿರಂತರ ಮಳೆ ಸುರಿಯುತ್ತಿರುವ ಪರಿಣಾಮ ಮೂರೂ ತಾಲ್ಲೂಕಿನ ಶಾಲಾ ಕಾಲೇಜುಗಳಿಗೆ ಜುಲೈ 12ರವರೆಗೆ ರಜೆ ಮುಂದುವರಿಸಲಾಗಿದೆ.

ತುಂಗಾ ಜಲಾಶಯಕ್ಕೆ 51,481 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 20 ಕ್ರೆಸ್ಟ್‌ಗೇಟ್‌ ತೆರೆದು ಅಷ್ಟೇ ಪ್ರಮಾಣದ ನೀರು ನದಿಗೆ ಹರಿಸಲಾಗುತ್ತಿದೆ. ಪರಿಣಾಮ ತುಂಗಾ ನದಿ ಅಪಾಯ ಮಟ್ಟ ಮೀರಿದೆ.

ಶಿವಮೊಗ್ಗ ನಗರ, ಭದ್ರಾವತಿ, ಸೊರಬ, ಶಿಕಾರಿಪುರ ತಾಲ್ಲೂಕಿನಲ್ಲೂ ಧಾರಾಕಾರ ಮಳೆ ಸುರಿದಿದೆ. 

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಹಾಗೂ ಹೊಳಲ್ಕೆರೆಯಲ್ಲಿ ಬಿರುಸಿನ ಮಳೆಯಾಗಿದೆ. ದಾವಣಗೆರೆ ಜಿಲ್ಲೆಯ ಕೆಲವೆಡೆಗಳಲ್ಲೂ ಹದಮಳೆಯಾಗಿದೆ.

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !