ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುರುವಾಯಿತು ಮುಂಗಾರು: ಕೃಷಿ ಚಟುವಟಿಕೆಗೆ ಮುನ್ನುಡಿ

ಲಕ್ಷ್ಮೇಶ್ವರ-–ಗದಗ ಹೆದ್ದಾರಿಯಲ್ಲಿ 2 ಗಂಟೆ ಸಂಚಾರ ಸ್ಥಗಿತ
Last Updated 23 ಜೂನ್ 2019, 19:47 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯವನ್ನು ಮುಂಗಾರು ಮಳೆ ವ್ಯಾಪಿಸುತ್ತಿದೆ. ಕರಾವಳಿಯಲ್ಲಿ ಬಿರುಸಾಗಿ, ಮಲೆನಾಡಿನಲ್ಲಿ ಸಾಧಾರಣ
ವಾಗಿದೆ. ಹೈದರಾಬಾದ್‌–ಕರ್ನಾಟಕ ಭಾಗದ ಕಲಬುರ್ಗಿ, ಬೀದರ್‌ನಲ್ಲಿ ಜೋರಾಗಿ, ಹುಬ್ಬಳ್ಳಿ ಭಾಗದಲ್ಲಿ ಒಳ್ಳೆಯ ಮಳೆಯಾಗಿದೆ. ಮಲೆನಾಡು ಭಾಗದಲ್ಲಿ ಅಲ್ಪಸ್ವಲ್ಪ ಮಳೆ ಕೃಷಿಗೆ ಪೂರಕವಾಗಿದ್ದು, ರೈತರು ಕೃಷಿ ಚಟುವಟಿಕೆಗಳತ್ತ ಗಮನ ಹರಿಸುತ್ತಿದ್ದಾರೆ.

50 ಮನೆ ಜಲಾವೃತ: ಕಾರವಾರದಲ್ಲಿ ಶನಿವಾರ ಆರಂಭಗೊಂಡ ಮಳೆ ಭಾನುವಾರ ಸಂಜೆಯವರೆಗೂ ಸುರಿದಿದೆ. ನದಿ, ಹಳ್ಳಗಳು ಉಕ್ಕಿ ಹರಿದು ಅಂಕೋಲಾ ತಾಲ್ಲೂಕಿನ 50ಕ್ಕೂ ಹೆಚ್ಚು ಮನೆಗಳು ಜಲಾವೃತ
ವಾಗಿವೆ. ಈ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಅವರ ತಂಡ ಭಾನುವಾರ ಭೇಟಿ ನೀಡಿ ತುರ್ತುಕ್ರಮಗಳನ್ನು ಕೈಗೊಂಡಿದೆ.

ಹುಬ್ಬಳ್ಳಿ–ಧಾರವಾಡ, ಉತ್ತರ ಕನ್ನಡ, ಬೆಳಗಾವಿ, ಗದಗ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಹಳ್ಳದ ನೀರು ರಸ್ತೆಗೆ ನುಗ್ಗಿ ಲಕ್ಷ್ಮೇಶ್ವರ- ಗದಗ ಹೆದ್ದಾರಿಯಲ್ಲಿ 2 ಗಂಟೆ ಸಂಚಾರ ಸ್ಥಗಿತಗೊಂಡಿತ್ತು.

ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಳೆಯಾಗಿದೆ. ಕಿತ್ತೂರು, ಹಾರೊಗೇರಿ, ಬೈಲಹೊಂಗಲ, ಹುಕ್ಕೇರಿ, ಗೋಕಾಕ, ಘಟಪ್ರಭಾ, ಮೂಡಲಗಿ ವ್ಯಾಪ್ತಿಯಲ್ಲಿ ಸಾಧಾರಣ ಮಳೆ ಸುರಿಯಿತು.

ಹುಬ್ಬಳ್ಳಿ ನಗರದಲ್ಲಿ ಮಧ್ಯಾಹ್ನ ಸುರಿದ ಮಳೆಗೆ ದಾಜೀಬಾನ್ ಪೇಟೆಯಲ್ಲಿ ರಸ್ತೆ ಬದಿಗೆ ನಿಲ್ಲಿಸಿದ್ದ ವಾಹನಗಳು ತೇಲಿಕೊಂಡು ಹೋದವು. ನಗರದ ಕೆಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಕಲಘಟಗಿ ಹಾಗೂ ಕುಂದಗೋಳದಲ್ಲೂ ಮಳೆಯಾಗಿದೆ.

150 ಮನೆಗೆ ಹಾನಿ, ಗಂಜಿಕೇಂದ್ರ ಸ್ಥಾಪನೆ: ಹುಬ್ಬಳ್ಳಿ ನಗರದಲ್ಲಿ 150 ಮನೆಗಳಿಗೆ ಹಾನಿಯಾಗಿದೆ. ಮಹಾ
ನಗರ ಪಾಲಿಕೆ ವತಿಯಿಂದ ಗಂಜಿ ಕೇಂದ್ರ ಆರಂಭಿಸಲಾಗಿದೆ. ವಿಪತ್ತು ನಿರ್ವಹಣಾ ತಂಡದಿಂದ ಈ ಕುಟುಂಬಗಳನ್ನು ಸಮುದಾಯ ಭವನಕ್ಕೆ ಸ್ಥಳಾಂತರಿಸಲಾಗಿದೆ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾನುವಾರ ಬೆಳಿಗ್ಗೆಯಿಂದಲೇ ಮಳೆ ಜೋರಾಗಿತ್ತು. ಮಧ್ಯಾಹ್ನದವರೆಗೆ ಬಿರುಸಾಗಿದ್ದ ಮಳೆ, ನಂತರ ಬಿಡುವು ಪಡೆದಿತ್ತು. ಬಂಟ್ವಾಳ, ಬೆಳ್ತಂಗಡಿಯಲ್ಲಿ ಸಾಧಾರಣ ಮಳೆಯಾಗಿದ್ದು, ಮಂಗಳೂರು ನಗರದ ಸುತ್ತ ಉತ್ತಮ ಮಳೆ ಬಿದ್ದಿದೆ. ಚಿಕ್ಕಮಗಳೂರು ನಗರ ಮತ್ತು ಸುತ್ತಮುತ್ತ, ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್‌.ಆರ್‌.ಪುರ, ಕಳಸ ಭಾಗದಲ್ಲಿ ಸಾಧಾರಣ ಮಳೆಯಾಗಿದೆ.

ಕೊಡಗು, ಮೈಸೂರು ಹಾಗೂ ಹಾಸನ ಜಿಲ್ಲೆಯ ಕೆಲವೆಡೆ ಬಿಡುವು ಕೊಟ್ಟು ಮಳೆ ಸುರಿಯಿತು. ಮೈಸೂರು ನಗರದಲ್ಲಿ ಮಧ್ಯಾಹ್ನ ವೇಳೆಗೆ ವರ್ಷಧಾರೆ ಆಯಿತು. ಕೊಡಗು ಜಿಲ್ಲೆಯಾದ್ಯಂತ ಮುಂಗಾರು ಚುರುಕು ಪಡೆಯುವ ಲಕ್ಷಣ ಕಾಣಿಸುತ್ತಿದೆ. ಹಾಸನ ಜಿಲ್ಲೆ ಸಕಲೇಶಪುರ ಸುತ್ತಮುತ್ತ ಸಾಧಾರಣ ಮಳೆಯಾಯಿತು.

ಸಾಧಾರಣ ಮಳೆ: ಶಿವಮೊಗ್ಗ ನಗರದಲ್ಲಿ ಶನಿವಾರ ರಾತ್ರಿಯಿಂದಲೇ ಜಿಟಿಜಿಟಿ ಮಳೆ ಆರಂಭವಾಗಿ, ಭಾನುವಾರ ಬೆಳಿಗ್ಗೆಯಿಂದ ಜೋರು ಮಳೆ ಸುರಿಯಿತು. ಸಾಗರ, ಹೊಸನಗರ, ಶಿಕಾರಿಪುರ, ತೀರ್ಥಹಳ್ಳಿ, ಕೋಣಂದೂರು, ಭದ್ರಾವತಿ, ದಾವಣಗೆರೆ ನಗರದಲ್ಲಿ ಸಾಧಾರಣ ಮಳೆ ಸುರಿದಿದೆ. ಸಂತೇಬೆನ್ನೂರು ಹೋಬಳಿಯಾದ್ಯಂತ ಉತ್ತಮ ಮಳೆಯಾಗಿದ್ದು, ರೈತರು ಸಂತಸಗೊಂಡಿದ್ದಾರೆ.

ಕಲಬುರ್ಗಿ ಸೇರಿದಂತೆ ಜಿಲ್ಲೆಯ ಚಿಂಚೋಳಿ, ಕಾಳಗಿ, ಸೇಡಂ ತಾಲ್ಲೂಕಿನಲ್ಲಿ ಧಾರಾಕಾರ ಮಳೆ ಸುರಿಯಿತು. ಚಿಂಚೋಳಿಯಲ್ಲಿ ಇಡೀ ದಿನ ಮಳೆಯಾದ ಕಾರಣ ಹೊಲ ಹಾಗೂ ಊರಿನ ರಸ್ತೆಗಳು ನೀರಿನಿಂದ ಆವೃತವಾಗಿದ್ದವು.

ಇಬ್ಬರ ಸಾವು; ಮಹಿಳೆ ನಾಪತ್ತೆ

ಬೀದರ್‌ ಜಿಲ್ಲೆಯಬಸವಕಲ್ಯಾಣ ತಾಲ್ಲೂಕಿನಲ್ಲಿ ಭಾನುವಾರ ಸುರಿದ ಭಾರಿ ಮಳೆಗೆ ಯಲ್ಲದಗುಂಡಿಯ ನಾಲೆ ತುಂಬಿ ಹರಿದಿದೆ. ಇದನ್ನು ದಾಟಲು ಯತ್ನಿಸಿದ ಬಾಲಕ ಭಾಗ್ಯೇಶ ಪರಮೇಶ್ವರ (14) ಮೃತಪಟ್ಟಿದ್ದು, ಅವನೊಂದಿಗಿದ್ದ ತಾಯಿ ಅನಿತಾ ಪರಮೇಶ್ವರ ನಾಪತ್ತೆ ಆಗಿದ್ದಾರೆ.

ಸಿಡಿಲು ಬಡಿದು ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಮಿಶ್ರೀಕೋಟಿಯಲ್ಲಿ ರವಿ ಪಿರೋಜಿ ಎಂಬುವವರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT