ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ ಭೀತಿ: ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ

ಕೊಡಗಿನಲ್ಲಿ ಆರೆಂಜ್‌ ಅಲರ್ಟ್‌ ಘೋಷಣೆ: ಅರಬ್ಬಿ ಸಮುದ್ರ ಪ್ರಕ್ಷುಬ್ಧ– ಮೀನುಗಾರರಿಗೆ ಎಚ್ಚರಿಕೆ
Last Updated 5 ಸೆಪ್ಟೆಂಬರ್ 2019, 19:27 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ಗುರುವಾರವೂ ಮಳೆಯ ಆರ್ಭಟ ಮುಂದುವರಿದಿದೆ. ಉತ್ತರ ಕನ್ನಡ, ಬೆಳಗಾವಿ ಜಿಲ್ಲೆಯಲ್ಲಿ ನೆರೆ ಭೀತಿ ಕಾಡುತ್ತಿದೆ. ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಕೃಷ್ಣಾ ಹಾಗೂ ರಾಯಚೂರು ಜಿಲ್ಲೆಯಲ್ಲಿ ತುಂಗಭದ್ರಾ ನದಿ ತೀರದಲ್ಲಿ ಮತ್ತೆ ಪ್ರವಾಹ ಸ್ಥಿತಿ ಉಂಟಾಗಿದೆ.

ಉತ್ತರ ಕನ್ನಡ, ಬೆಳಗಾವಿ ಜಿಲ್ಲೆಗಳಲ್ಲಿ ಗುರುವಾರವೂ ಮಳೆ ಮುಂದುವರಿದಿದ್ದು ಮತ್ತೆ ನೆರೆಭೀತಿ ಕಾಡುತ್ತಿದೆ.ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನಕಿಲ್ಲಾ ತೊರಗಲ್‌ ಸಮೀಪ ರಭಸವಾಗಿ ಹರಿಯುತ್ತಿರುವ ಮಲಪ್ರಭಾ ನದಿಯನ್ನು ಈಜಿ ದಾಟಲು ಮುಂದಾದ ವ್ಯಕ್ತಿಯೊಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ಕೊಲ್ಹಾಪುರ ಮತ್ತು ಸಾತಾರ ಜಿಲ್ಲೆಗಳಲ್ಲಿ ಹರಿಯುವ ಕೃಷ್ಣಾ, ಕೊಯ್ನಾ ಹಾಗೂ ಪಂಚಗಂಗಾ ನದಿಗಳಿಗೆ ವಿವಿಧ ಜಲಾಶಯಗಳಿಂದ 2 ಲಕ್ಷ ಕ್ಯುಸೆಕ್‌ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಸಾಧ್ಯತೆ ಇದೆ. ಸದ್ಯ ಮಹಾರಾಷ್ಟ್ರದ ಜಲಾಶಯಗಳಿಂದ 1.34 ಲಕ್ಷ ಕ್ಯುಸೆಕ್‌ ನೀರು ಕೃಷ್ಣಾ ನದಿಗೆ ಸೇರುತ್ತಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಎಸ್‌.ಬಿ.ಬೊಮ್ಮನಹಳ್ಳಿ ಹೇಳಿದ್ದಾರೆ.

ಶರಾವತಿ ಟೇಲ್‌ರೇಸ್ ಅಣೆಕಟ್ಟೆಯಿಂದ ಗುರುವಾರ ಮಧ್ಯಾಹ್ನದ ನಂತರ 80 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ.ಲಿಂಗನಮಕ್ಕಿಅಣೆಕಟ್ಟೆಯಿಂದಹೊರಹರಿವು ಹೆಚ್ಚಾಗಿದ್ದು, ಟೇಲ್‌ರೇಸ್‌ನಿಂದಲೂ ನೀರು ಹರಿಸಲಾಯಿತು.ಇದರಿಂದ ಶರಾವತಿ ಎಡ ಹಾಗೂ ಬಲದಂಡೆ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ನಿಲಗೋಡ, ಮೂರ್ನಕುಳಿ, ಹೈಗುಂದ ಹಾಗೂ ಹೊಸಾಡಿನಲ್ಲಿಪರಿಹಾರಕೇಂದ್ರಗಳನ್ನು ತೆರೆಯಲಾಗಿದೆ. ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಹಾಯಕ ಆಯುಕ್ತರು ತಿಳಿಸಿದ್ದಾರೆ.

ಅರಬ್ಬಿ ಸಮುದ್ರವೂ ಪ್ರಕ್ಷುಬ್ಧಗೊಂಡಿದ್ದು, ರಾಜ್ಯದ ಕರಾವಳಿಯುದ್ದಕ್ಕೂ ಮೂರರಿಂದ 3.3 ಮೀಟರ್‌ಗಳಷ್ಟು ಎತ್ತರದ ಅಲೆಗಳು ಏಳಬಹುದು. ಮೀನುಗಾರರು ಎಚ್ಚರಿಕೆ ವಹಿಸುವಂತೆ ಭಾರತೀಯ ಹವಾಮಾನ ಇಲಾಖೆಯ ಪ್ರಕಟಣೆ ತಿಳಿಸಿದೆ.

ಸಿದ್ದಾಪುರ, ಶಿರಸಿ, ಕುಮಟಾ ಭಾಗದಲ್ಲಿ ಕೂಡ ದಿನವಿಡೀ ಜೋರಾಗಿ ಮಳೆಯಾಗಿದೆ. ಕಾರವಾರ, ಅಂಕೋಲಾ, ಜೊಯಿಡಾ, ಮುಂಡಗೋಡದಲ್ಲಿ ಆಗಾಗ ಬಿರುಸಾಗಿ ಸುರಿದಿದೆ.ಹುಬ್ಬಳ್ಳಿ– ಧಾರವಾಡ ಅವಳಿ ನಗರಗಳಲ್ಲಿ, ಬೆಳಗಾವಿ ನಗರ ಹಾಗೂ ಖಾನಾಪುರ ತಾಲ್ಲೂಕಿನಲ್ಲಿ ಜಿಟಿಜಿಟಿ ಮಳೆ ಸುರಿದಿದೆ. ಬಾಗಲಕೋಟೆ, ಹಾವೇರಿ ಜಿಲ್ಲೆಗಳಲ್ಲಿಯೂ ಆಗಾಗ ಮಳೆಯಾಗಿದ್ದು, ನದಿಪಾತ್ರದ ಗ್ರಾಮಗಳು ಮತ್ತೆ ನೆರೆ ಭೀತಿಯನ್ನು ಎದುರಿಸುತ್ತಿವೆ.

ಶಿವಮೊಗ್ಗ ನಗರ ಸೇರಿ ಜಿಲ್ಲೆಯ ತೀರ್ಥಹಳ್ಳಿ, ಆಗುಂಬೆ, ಮಾಸ್ತಿಕಟ್ಟೆ, ಹೊಸನಗರ ಭಾಗದಲ್ಲಿ ಎಡೆಬಿಡದೆ ಸುರಿಯಿತು.

ರಸ್ತೆ ಮುಳುಗಡೆ: ಲಿಂಗನಮಕ್ಕಿ ಅಣೆಕಟ್ಟೆಯಿಂದ ಭಾರಿ ಪ್ರಮಾಣದಲ್ಲಿ ನೀರು ಹೊರಬರುತ್ತಿದ್ದಂತೆ ಇಲ್ಲಿಯ ಮರಳು ಕೋರೆ ಯಡ್ಡಳ್ಳಿ ಕಾರ್ಗಲ್ ಸಂಪರ್ಕ ರಸ್ತೆ ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲಕ್ಷ್ಮಿನಾರಾಯಣ ಮಾಹಿತಿ ನೀಡಿದರು. ಮರಳು ಕೋರೆ ಭಾಗದ ನಿವಾಸಿಗಳಿಗೆ ಅಗತ್ಯ ನೀಡಲಾಗಿದೆ ಎಂದು ತಿಳಿಸಿದರು.

ಕುಕ್ಕೆ ಸ್ನಾನಘಟ್ಟ ಮುಳುಗಡೆ: ಕುಮಾರಧಾರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಗುರುವಾರ ಬೆಳಿಗ್ಗೆ ಮುಳುಗಡೆಯಾಗಿತ್ತು.

ಬುಧವಾರ ರಾತ್ರಿಯಿಂದ ಸುಬ್ರಹ್ಮಣ್ಯ ಭಾಗದಲ್ಲಿ ಭಾರಿ ಮಳೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಮುಂದುವರಿದಿದ್ದು, ಕೊಟ್ಟಿಗೆಹಾರ, ಚಾರ್ಮಾಡಿ ಭಾಗದಲ್ಲಿ ಧಾರಾಕಾರ ಮಳೆಯಾಗಿದೆ.

ಮೂಡಿಗೆರೆ, ಕೊಟ್ಟಿಗೆಹಾರ, ಆಲೆಖಾನ್‌ ಹೊರಟ್ಟಿ, ದುರ್ಗದಹಳ್ಳಿ, ಬಣಕಲ್‌ ಬೆಳಿಗ್ಗೆಯಿಂದಲೂ ನಿರಂತರವಾಗಿ ಮಳೆ ಅಬ್ಬರಿಸಿದೆ. ಚಾರ್ಮಾಡಿ ಭಾಗದಲ್ಲಿ ಕೆಲವೆಡೆ ಗುಡ್ಡದ ಮಣ್ಣು ಕುಸಿದಿದೆ. ಕೊಟ್ಟಿಗೆಹಾರ ಭಾಗದಲ್ಲಿ 13.9 ಸೆ.ಮೀ. ಮಳೆಯಾಗಿದೆ.

ಭೂಮಿಯೊಳಗಿಂದ ಶಬ್ದ: ‘ಗ್ರಾಮದ ಪಕ್ಕದಲ್ಲಿ ಗುಡ್ಡ ಇದೆ. ಮಧ್ಯಾಹ್ನ 3.45ರ ಸುಮಾರಿಗೆ ಭೂಮಿಯೊಳಗಿಂದ ‘ಗುಡು... ಗುಡು...’ ಶಬ್ದ ಎರಡ್ಮೂರು ಬಾರಿ ಕೇಳಿಸಿತು’ ಎಂದು ಮೂಡಿಗೆರೆ ತಾಲ್ಲೂಕಿನ ಬಣಕಲ್‌ ಹೋಬಳಿಯ ಬಿನ್ನಡಿ ಗ್ರಾಮಸ್ಥ ಪ್ರಭಾಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಹೇಮಾವತಿ, ತುಂಗಾ, ಭದ್ರಾ ನದಿಗಳಲ್ಲಿ ಹರಿವು ಹೆಚ್ಚಳವಾಗಿದೆ.

ಕೊಡಗು ಜಿಲ್ಲೆಯ ಭಾಗಮಂಡಲ, ನಾಪೋಕ್ಲು, ತಲಕಾವೇರಿ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿಯಿಡೀ ಗಾಳಿ ಸಹಿತ ಧಾರಾಕಾರ ಮಳೆ ಸುರಿದಿದ್ದು, ಕಾವೇರಿ ನದಿಯಲ್ಲಿ ಮತ್ತೆ ನೀರಿನಮಟ್ಟ ಏರಿಕೆಯಾಗಿದೆ. ಸುಂಟಿಕೊಪ್ಪ ಸಮೀಪ ಮಾದಾಪುರದಲ್ಲಿ ಮನೆಯೊಂದು ಕುಸಿದಿದೆ.

ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನದಿ ದಂಡೆಯಲ್ಲಿ ವಾಸಿಸುತ್ತಿರುವ ಜನರು, ಇನ್ನೂ ಎರಡು ದಿನ ಸುರಕ್ಷಿತ ಸ್ಥಳದಲ್ಲಿಯೇ ಇರುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಹಾರಂಗಿ ಜಲಾನಯನ ಪ್ರದೇಶದಲ್ಲಿ ಎರಡು ದಿನಗಳ ಸುರಿದ ಭಾರೀ ಮಳೆಯಿಂದ ಜಲಾಶಯದ ಒಳಹರಿವು ಏರಿಕೆಯಾಗಿದೆ.

ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಕೃಷ್ಣಾ ಹಾಗೂ ರಾಯಚೂರು ಜಿಲ್ಲೆಯಲ್ಲಿ ತುಂಗಭದ್ರಾ ನದಿ ತೀರದಲ್ಲಿಮತ್ತೆ ಪ್ರವಾಹ ಸ್ಥಿತಿ ಉಂಟಾಗಿದೆ.

‘ನಾರಾಯಣಪುರದ ಬಸವ ಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 1.85 ಲಕ್ಷ ಕ್ಯುಸೆಕ್‌ ನೀರು ಹೊರಬಿಡಲಾಗುತ್ತಿದ್ದು, ಇದು 2 ಲಕ್ಷ ಕ್ಯುಸೆಕ್‌ಗೆ ಹೆಚ್ಚಳವಾಗುವ ಸಾಧ್ಯತೆ ಇದೆ’ ಎಂದು ಜಲಾಶಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಶಂಕರ ನಾಯ್ಕೋಡಿ ತಿಳಿಸಿದ್ದಾರೆ.

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ನಡುಗಡ್ಡೆಗೆ ಸಂಪರ್ಕಿಸುವ ಶೀಲಹಳ್ಳಿ ಸೇತುವೆ ಮೇಲೆ ವಾಹನ ಮತ್ತು ಜನ ಸಂಚಾರವನ್ನು ಮುನ್ನಚ್ಚರಿಕೆ ಕ್ರಮವಾಗಿ ನಿರ್ಬಂಧಿಸಲಾಗಿದೆ. ಯಾದಗಿರಿ ಜಿಲ್ಲೆಯನೀಲಕಂಠರಾಯನಗಡ್ಡಿ ಸಂಪರ್ಕ ಕಡಿದುಕೊಂಡಿದೆ.

ಕಬಿನಿ ಜಲಾಶಯಕ್ಕೆ ಸಿಎಂ ಬಾಗಿನ ನಾಳೆ

ಮೈಸೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೆ. 7ರಂದು ಬೆಳಿಗ್ಗೆ 11 ಗಂಟೆಗೆ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿರುವ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸುವರು. ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಬೆಳಿಗ್ಗೆ 9.30ಕ್ಕೆ ಹೊರಡುವ ಅವರು ಜಲಾಶಯದ ಹೆಲಿಪ್ಯಾಡ್‌ಗೆ ಬಂದಿಳಿದು, ಬಾಗಿನ ಅರ್ಪಿಸಿ ವಾಪಸ್ಸಾಗಲಿದ್ದಾರೆ.

ಕರಾವಳಿ: ಸೆ. 9ರ ವರೆಗೆ ‘ಯೆಲ್ಲೊ ಅಲರ್ಟ್‌’

ಬೆಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಸೆ. 6ರಿಂದ 9ರ ವರೆಗೆ ವ್ಯಾಪಕ ಮಳೆಯಾಗಲಿದ್ದು, ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್‌.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ಘಟ್ಟ ಪ್ರದೇಶದ ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸೆ. 6ರಂದು ಹೆಚ್ಚು ಮಳೆಯಾಗಲಿದೆ. ಹೀಗಾಗಿ ಈ ಪ್ರದೇಶದಲ್ಲೂ ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದೆ. ಉತ್ತರ ಒಳನಾಡಿನ ಬಹುತೇಕ ಪ್ರದೇಶಗಳಲ್ಲಿ ಭಾನುವಾರದವರೆಗೆ ಸಾಧಾರಣಕ್ಕಿಂತ ಹೆಚ್ಚು ಮಳೆಯಾಗಲಿದೆ. ಬಳಿಕ ಮಳೆ ಪ್ರಮಾಣ ಕಡಿಮೆಯಾಗಲಿದೆ. ಉಳಿದಂತೆ ದಕ್ಷಿಣ ಒಳನಾಡಿನ ಹಲವೆಡೆ ಸಾಧಾರಣ ಮಳೆಯಾಗಲಿದೆ ಎಂದು ತಿಳಿಸಿದರು.

ಕರಾವಳಿಯಲ್ಲಿ 3.0ರಿಂದ 3.3 ಮೀಟರ್‌ನಷ್ಟು ಎತ್ತರದ ಅಲೆಗಳೂ ಬೀಸುತ್ತಿದ್ದು, ಸೆ. 6ರ ವರೆಗೆ ಮೀನುಗಾರರಿಗೆ ಕಡಲಿಗೆ ಇಳಿಯದಂತೆ ಇಲಾಖೆ ಸೂಚನೆ ನೀಡಿದೆ.

ಮುಂಬೈ ಮಳೆಗೆ ಆರು ಬಲಿ

ಮುಂಬೈ: ಮುಂಬೈನಲ್ಲಿ ಬುಧವಾರ ಮತ್ತು ಗುರುವಾರ ಸುರಿದ ಭಾರಿ ಮಳೆಗೆ ಸಂಬಂಧಿಸಿದ ಅವಘಡಗಳಲ್ಲಿ 6 ಜನರು ಮೃತಪಟ್ಟಿದ್ದಾರೆ. ಇದರಲ್ಲಿ ಏಳು ವರ್ಷದ ಬಾಲಕನೊಬ್ಬ ಸೇರಿದ್ದಾನೆ. ಗುರುವಾರ ಸಂಜೆಯ ನಂತರ ಮಳೆ ತುಸು ಬಿಡುವು ಕೊಟ್ಟಿದೆ. ಆದರೆ ನಗರದ ಬಹುಪಾಲು ರಸ್ತೆಗಳು ಸಂಜೆಯ ನಂತರವೂ ಜಲಾವೃತವಾಗೇ ಇದ್ದವು. 350ಕ್ಕೂ ಹೆಚ್ಚು ವಿಮಾನಗಳ ಹಾರಾಟ ವಿಳಂಬವಾದವು. ಬುಧವಾರ ತಡರಾತ್ರಿ ಮಳೆಯ ಕಾರಣ ಸಾವಿರಾರು ಮಂದಿ ತಮ್ಮ ಕಚೇರಿಗಳಲ್ಲಿ ಮತ್ತು ತಾವಿದ್ದ ರೈಲು ನಿಲ್ದಾಣಗಳಲ್ಲೇ ರಾತ್ರಿ ಕಳೆದಿದ್ದರು. ಗುರುವಾರ ಬೆಳಿಗ್ಗೆ ಮಳೆ ತುಸು ಬಿಡುವು ನೀಡಿದ ಕಾರಣ ಮನೆಗೆ ತೆರಳಿದರು. ಮಳೆ ನೀರಿನಿಂದ ಆವೃತವಾಗಿದ್ದ ರಸ್ತೆಗಳಲ್ಲಿ ಕೆಟ್ಟು ನಿಂತಿದ್ದ ವಾಹನಗಳನ್ನು ಜನರು ಅಲ್ಲಿಯೇ ಬಿಟ್ಟು ಮನೆಗಳಿಗೆ ತೆರಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT