ಮುಂಡಗೋಡ ತಾಲ್ಲೂಕಿನ ಪಾಳಾ ಗ್ರಾಮ: ಗಾಳಿ ಮಳೆಗೆ ಬಿದ್ದ ಚುನಾವಣಾ ಪ್ರಚಾರದ ಶಾಮಿಯಾನ

ಮಂಗಳವಾರ, ಏಪ್ರಿಲ್ 23, 2019
33 °C
ಕಾತೂರಿನಲ್ಲಿ ಜೇನುಹುಳ ಹಾರಾಡಿ ಆತಂಕ

ಮುಂಡಗೋಡ ತಾಲ್ಲೂಕಿನ ಪಾಳಾ ಗ್ರಾಮ: ಗಾಳಿ ಮಳೆಗೆ ಬಿದ್ದ ಚುನಾವಣಾ ಪ್ರಚಾರದ ಶಾಮಿಯಾನ

Published:
Updated:
Prajavani

ಮುಂಡಗೋಡ (ಉತ್ತರ ಕನ್ನಡ): ತಾಲ್ಲೂಕಿನ ಪಾಳಾ ಗ್ರಾಮದಲ್ಲಿ ಜೆಡಿಎಸ್‌ ಅಭ್ಯರ್ಥಿ ಆನಂದ ಅಸ್ನೋಟಿಕರ್‌ ಪ್ರಚಾರ ಸಭೆಗೆ ಸೋಮವಾರ ಹಾಕಿದ್ದ ಶಾಮಿಯಾನ ಗಾಳಿ, ಮಳೆಗೆ ನೆಲಕ್ಕೆ ಉರುಳಿತು. ಮತ್ತೊಂದೆಡೆ ಕಾತೂರಿನಲ್ಲಿ ಪ್ರಚಾರ ಸಭೆ ಮುಗಿಯುತ್ತಿದ್ದಂತೆ ಜೇನುಹುಳಗಳು ಹಾರಾಡಿ ಆತಂಕ ಉಂಟು ಮಾಡಿದವು. ಕಾರ್ಯಕರ್ತರು ಅತ್ತಿತ್ತ ಓಡಿ ತಪ್ಪಿಸಿಕೊಂಡರು.

ಪ್ರಚಾರ ಸಭೆಗೆಂದು ಶಾಮಿಯಾನ ಹಾಕಿದ್ದ ಸ್ಥಳೀಯ ಮುಖಂಡರು ಆನಂದ ಅಸ್ನೋಟಿಕರ್ ಬರುವುದನ್ನು ಕಾಯುತ್ತಿದ್ದರು. ಅದೇ ಸಂದರ್ಭದಲ್ಲಿ ಸುಮಾರು ಅರ್ಧ ಗಂಟೆ ಗಾಳಿಯೊಂದಿಗೆ ಮಳೆ ಸುರಿಯಿತು. ಶಾಮಿಯಾನ ನೆಲಕ್ಕುರಳಿ, ಕುರ್ಚಿಗಳು ಬಿದ್ದವು. ಮುಖಂಡರು, ಕಾರ್ಯಕರ್ತರು ಸಮೀಪದ ದೇವಸ್ಥಾನದಲ್ಲಿ ಆಶ್ರಯ ಪಡೆದರು.

ಮಳೆ ನಿಂತ ನಂತರ ಗ್ರಾಮಕ್ಕೆ ಬಂದ ಅಭ್ಯರ್ಥಿ ಆನಂದ ಅಸ್ನೋಟಿಕರ್‌ ಹಾಗೂ ಕಾಂಗ್ರೆಸ್ ಶಾಸಕ ಶಿವರಾಮ ಹೆಬ್ಬಾರ್‌ ಬೇರೆ ಜಾಗದಲ್ಲಿ ಪ್ರಚಾರ ಸಭೆ ನಡೆಸಿದರು. ‘ಮಳೆ ಬಂದಿರುವುದು ಶುಭಸೂಚನೆ’ ಎಂದು ಶಾಸಕ ಶಿವರಾಮ ಹೆಬ್ಬಾರ್‌ ಹೇಳಿದರು.

ಅತ್ತ ಕಾತೂರ ಗ್ರಾಮದಲ್ಲಿ ಪ್ರಚಾರ ಸಭೆ ಮುಗಿಯುತ್ತಿದ್ದಂತೆ ಏಕಾಏಕಿ ಜೇನುಹುಳಗಳು ಹಾರಾಡಿದವು. ಕೆಲವು ಕಾರ್ಯಕರ್ತರು ತಲೆಯ ಮೇಲೆ ಟವಲ್‌ ಹಾಕಿಕೊಂಡು ಅತ್ತಿಂದಿತ್ತ ಓಡತೊಡಗಿದರು. ಕೆಲವು ಮುಖಂಡರು ಸಹ ಓಡಿಹೋಗಿ ತಮ್ಮ ಕಾರಿನಲ್ಲಿ ಕುಳಿತು ಬಚಾವಾದರು.

ಸೆಕ್ಟರ್ ಅಧಿಕಾರಿ ಆಸ್ಪತ್ರೆಗೆ ದಾಖಲು 
ಚುನಾವಣೆಯಲ್ಲಿ ಸೆಕ್ಟರ್ ಅಧಿಕಾರಿ ಆಗಿ ಕಾರ್ಯನಿರ್ವಹಿಸುತ್ತಿದ್ದ ತಾಲ್ಲೂಕು ಪಂಚಾಯ್ತಿ ಇಒ ಪ್ರವೀಣ ಕಟ್ಟಿ ಅವರಿಗೆ ಜೇನು ಹುಳಗಳು ಕಡಿದು ಗಾಯಗೊಂಡಿದ್ದಾರೆ.

ಅವರನ್ನು ಇಲ್ಲಿನ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿದೆ.

ಸೋಮವಾರ ತಾಲ್ಲೂಕಿನ ಕಾತೂರ ಗ್ರಾಮದಲ್ಲಿ ಜೆಡಿಎಸ್ ಚುನಾವಣಾ ಪ್ರಚಾರ ಸಭೆ ನಡೆದಿತ್ತು. ಸಭೆ ಮುಗಿಯುತ್ತಿದ್ದಂತೆ ಏಕಾಏಕಿ ಜೇನು ಹುಳಗಳು ಹಾರಾಡಿವೆ. ಇದರಿಂದ ತಪ್ಪಿಸಿಕೊಳ್ಳಲು ಜನರು, ಅಧಿಕಾರಿಗಳು ಅತ್ತಿಂದಿತ್ತ ಓಡಿ ಕೆಲವೆಡೆ ಆಶ್ರಯ ಪಡೆದರು. 

ಇಒ ಪ್ರವೀಣ ಕಟ್ಟಿ ಅವರಿಗೆ ಹತ್ತಾರು ಹುಳಗಳು ಕಡಿದ ಪರಿಣಾಮ ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ. ಮುಂಡಗೋಡ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹುಬ್ಬಳ್ಳಿಗೆ ಕರೆದೊಯ್ಯಲಾಗಿದೆ.    

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !