ಪ್ರವಾಹ: ನಂಜನಗೂಡು ದೇವಸ್ಥಾನ ಜಲಾವೃತ

7

ಪ್ರವಾಹ: ನಂಜನಗೂಡು ದೇವಸ್ಥಾನ ಜಲಾವೃತ

Published:
Updated:
Deccan Herald

ಬೆಂಗಳೂರು: ರಾಜ್ಯದ ಮಲೆನಾಡು ಪ್ರದೇಶಗಳಲ್ಲಿ ಮಳೆ ಆರ್ಭಟ ಮುಂದುವರೆದಿದೆ. ಆದರೆ ಕರಾವಳಿಯಲ್ಲಿ ಕಡಿಮೆಯಾಗಿದೆ. ಮೈಸೂರು ಜಿಲ್ಲೆಯ ಕಬಿನಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರಬಿಡುತ್ತಿರುವುದರಿಂದಾಗಿ ನಂಜನಗೂಡು ಪಟ್ಟಣದ ಸಾಕಷ್ಟು ಪ್ರದೇಶ ಜಲಾವೃತಗೊಂಡಿವೆ.

ನಂಜನಗೂಡಿನ ಪ್ರಸಿದ್ಧ ಶ್ರೀಕಂಠೇಶ್ವರ ದೇವಸ್ಥಾನದ ಮುಂಭಾಗ ಶನಿವಾರ ಪ್ರವಾಹದ ನೀರಿನಿಂದ ಮುಳುಗಡೆಯಾಗಿತ್ತು.

80 ಸಾವಿರ ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು, ಪ್ರವಾಹದಿಂದಾಗಿ ದೇಗುಲದ ಮುಂಭಾಗ, ಹರಕೆ ಮುಡಿಕಟ್ಟೆ ಸಂಪೂರ್ಣ ಮುಳುಗಿತ್ತು. ಹಾಗಾಗಿ, ಭಕ್ತಾದಿಗಳಿಗೆ ದೇವಸ್ಥಾನ ಕಟ್ಟಡದ ಮೊದಲ ಅಂತಸ್ತಿನಲ್ಲಿ ಮುಡಿಸೇವೆಗೆ ವ್ಯವಸ್ಥೆ ಮಾಡಲಾಗಿತ್ತು.

ಮಧ್ಯಾಹ್ನದ ವೇಳೆಗೆ ಪಟ್ಟಣದ ತಗ್ಗಿನ ಪ್ರದೇಶಗಳಿಗೂ ನೀರು ನುಗ್ಗಿದೆ. ಸರಸ್ವತಿ ಕಾಲೊನಿ, ಹಳ್ಳದ ಕೇರಿ, ರಾಜಾಜಿ ಕಾಲೊನಿಯ ರಸ್ತೆಗಳು ಮುಳುಗುವಷ್ಟು ನೀರಿನ ಪ್ರಮಾಣ ಏರಿಕೆಯಾಗಿದೆ. ರಾಘವೇಂದ್ರ ಸ್ವಾಮಿ ಮಠದ ಹಿಂಭಾಗದ ಹಿರಿಯ ಸ್ವಾಮಿಗಳ ಪಂಚ ಬೃಂದಾವನ ಸಹ ಮುಳುಗಿದೆ.

ದಕ್ಷಿಣ ಕೊಡಗಿನ ಶ್ರೀಮಂಗಲ, ಕುಟ್ಟ, ಹುದಿಕೇರಿ, ಪೊನ್ನಂಪೇಟೆಯಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಲಕ್ಷ್ಮಣತೀರ್ಥ ನದಿಯು ಮತ್ತೆ ಮೈದುಂಬಿಕೊಂಡು ಹರಿಯುತ್ತಿದೆ. ನಾಪೋಕ್ಲು, ಭಾಗಮಂಡಲ, ತಲಕಾವೇರಿ ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗುತ್ತಿದೆ. ಕಾವೇರಿ ನದಿಯ ಪ್ರವಾಹ ತಗ್ಗಿದೆ. ತ್ರಿವೇಣಿ ಸಂಗಮದಲ್ಲಿ ನೀರಿನಮಟ್ಟ ಇಳಿಕೆಯಾಗಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ತಾಲ್ಲೂಕಿನಲ್ಲಿ ಶನಿವಾರವೂ ಮಳೆಯ ಆರ್ಭಟ ಮುಂದುವರಿದಿದೆ. 

ಜಿಲ್ಲೆಯ ಜಲಾಶಯಗಳ ಒಳಹರಿವು ಕಡಿಮೆಯಾದರೂ, ನದಿಗಳ ನೀರಿನ ಮಟ್ಟ ಕಡಿಮೆಯಾಗಿಲ್ಲ. ಸಾಗರ, ಶಿಕಾರಿಪುರ, ಶಿವಮೊಗ್ಗ, ಭದ್ರಾವತಿ ತಾಲ್ಲೂಕುಗಳಲ್ಲಿ ಸಾಧಾರಣ ಮಳೆಯಾಗಿದೆ.

ತಂಪೆರೆದ ಮಳೆ (ಕಲಬುರ್ಗಿ ವರದಿ): ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಶನಿವಾರ ಉತ್ತಮ ಮಳೆ ಸುರಿಯಿತು. ಸಂಜೆ 6 ಗಂಟೆಗೆ ಆರಂಭವಾದ ಮಳೆ ಕೆಲಹೊತ್ತು ಬಿರುಸಿನಿಂದ ಸುರಿಯಿತು.

ಜಿಲ್ಲೆಯ ಅಫಜಲಪುರ, ಆಳಂದ, ಜೇವರ್ಗಿ, ಸೇಡಂ ತಾಲ್ಲೂಕಿನಾದ್ಯಂತ ಜಿಟಿಜಿಟಿ ಮಳೆಯಾಯಿತು. ಕಳೆದ ಎರಡು ವಾರಗಳಿಂದ ಮಳೆ ಕೈಕೊಟ್ಟಿದ್ದರಿಂದ ರೈತರು ಆತಂಕಕ್ಕೆ ಒಳಗಾಗಿದ್ದರು. ಉದ್ದು, ಹೆಸರು ಮತ್ತು ತೊಗರಿ ಬಿತ್ತನೆ ಮಾಡಿದ್ದ ರೈತರು ಮಳೆ ನಿರೀಕ್ಷೆಯಲ್ಲಿದ್ದರು. ಈಗ ಸುರಿದ ಮಳೆ ರೈತರಲ್ಲಿ ಮಂದಹಾಸ ಮೂಡಿಸಿದೆ.

ಆದರೆ, ಹೈದರಾಬಾದ್‌ ಕರ್ನಾಟಕದ ಉಳಿದ ಭಾಗದಲ್ಲಿ ಮಳೆ ಆಗಿಲ್ಲ.

ಕಾಲುವೆಗೆ ಬಿದ್ದು ಮಹಿಳೆ ಸಾವು

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ, ಶೃಂಗೇರಿ ಸಹಿತ ಕೆಲವು ಕಡೆ ಶನಿವಾರ ಬಿರುಸಿನ ಮಳೆ ಸುರಿದಿದ್ದು, ಶೃಂಗೇರಿ ತಾಲ್ಲೂಕಿನ ಬೇಗಾರ್‌ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ದೇವಳ್ಳಿಕೊಪ್ಪದಲ್ಲಿ ಸುಶೀಲಾ (48) ಎಂಬುವವರು ತಮ್ಮ ಜಮೀನಿನ ಪಕ್ಕದಲ್ಲಿ ಕಾಲುವೆ ದಾಟುವಾಗ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾರೆ.

ಮಳೆ ಕ್ಷೀಣ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ನಿರೀಕ್ಷೆಯಲ್ಲಿ ಶನಿವಾರ ಶಾಲೆ ಮತ್ತು ಪಿಯು ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಆದರೆ ಶನಿವಾರ ಬೆಳಿಗ್ಗೆಯವರೆಗೆ ಸುರಿದ ಮಳೆ, ಬಳಿಕ ಕ್ಷೀಣಿಸಿತು. ಬಂಟ್ವಾಳದಲ್ಲಿ 89 ಮಿ.ಮೀ. ಹಾಗೂ ಪುತ್ತೂರಿನಲ್ಲಿ 78 ಮಿ.ಮೀ.ಮಳೆಯಾಗಿದೆ.

 

 

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !