ಶುಕ್ರವಾರ, ಡಿಸೆಂಬರ್ 6, 2019
19 °C

ಮೋದಿ ಧರಿಸುವ ಕುರ್ತಾ ಅಳತೆ ಮಮತಾ ಬ್ಯಾನರ್ಜಿಗೆ ಹೇಗೆ ತಿಳಿಯಿತು?: ರಾಜ್ ಬಬ್ಬರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರತಿ ವರ್ಷ ಉಡುಗೊರೆಯಾಗಿ ನನಗೆ ಕುರ್ತಾ ಕಳುಹಿಸಿಕೊಡುತ್ತಾರೆ ಎಂದಿದ್ದ ಪ್ರಧಾನಿ ಮೋದಿ ಹೇಳಿಕೆಯನ್ನು ಅಣಕಿಸಿರುವ ಕಾಂಗ್ರೆಸ್‌ ಹಿರಿಯ ನಾಯಕ ರಾಜ್‌ ಬಬ್ಬರ್‌, ಮೋದಿ ಧರಿಸುವ ಕುರ್ತಾ ಅಳತೆ ಮಮತಾ ಅವರಿಗೆ ಹೇಗೆ ಗೊತ್ತಾಯಿತು? ಎಂದು ಪ್ರಶ್ನಿಸಿದ್ದಾರೆ.

‘ಪಶ್ಚಿಮ ಬಂಗಾಳದ ಎರಡು ಉತ್ಪನ್ನಗಳು ವಿಶ್ವದಾದ್ಯಂತ ಜನಪ್ರಿಯವಾಗಿವೆ. ಅದರಲ್ಲಿ ಒಂದು ಗಿಣ್ಣಿನಿಂದ ಮಾಡಿದ ಸಿಹಿ ತಿನಿಸು. ಮತ್ತೊಂದು ಕುರ್ತಾ. ಆದರೆ ಇಲ್ಲಿಯವರೆಗೆ ಈ ಎರಡನ್ನು ಮಮತಾ ಅವರು ನಮಗೆ ಅಥವಾ ಬೇರೆ ಯಾರಿಗೂ ಕಳುಹಿಸಿಲ್ಲ. ಒಂದುವೇಳೆ ಅವರು ಅವುಗಳನ್ನು ಉಡುಗೊರೆಯಾಗಿ ಕಳುಹಿಸುವುದಾದರೆ ಅದು ಒಬ್ಬರೇ ಒಬ್ಬರಿಗೆ ಮಾತ್ರ. ಹಾಗಾಗಿ ಅವರು ಪ್ರಧಾನಿಯ ಕುರ್ತಾ ಅಳತೆಯ ಬಗ್ಗೆ ತಿಳಿದಿದ್ದಾರೆ ಎಂದು ನೀವು ಅರ್ಥ ಮಾಡಿಕೊಳ್ಳಬಹುದು. ಈ ಹಿಂದೆ ನಾವು ಮೋದಿ ಅವರ 56 ಇಂಚಿನ ಎದೆ ಬಗ್ಗೆ ಪ್ರಶ್ನಿಸಿದ್ದೆವು’ ಎಂದಿದ್ದಾರೆ.

ನಟ ಅಕ್ಷಯ್‌ ಕುಮಾರ್‌ ಅವರು ಇತ್ತೀಚೆಗೆ ಪ್ರಧಾನಿ ಮೋದಿ ಅವರ ಸಂದರ್ಶನ ಮಾಡಿದ್ದರು. ಆ ವೇಳೆ ಮೋದಿ, ಮಮತಾ ಬ್ಯಾನರ್ಜಿ ಅವರು ಪ್ರತಿವರ್ಷ ತಾವೇ ಆಯ್ಕೆ ಮಾಡಿದ ಕುರ್ತಾ ಹಾಗೂ ಸಿಹಿತಿನಿಸುಗಳನ್ನು ಕಳುಹಿಸಿಕೊಡುತ್ತಾರೆ. ಅವರಂತೆ ಇನ್ನೂ ಹಲವು ಉತ್ತಮ ಸ್ನೇಹಿತರು ವಿರೋಧ ಪಕ್ಷಗಳಲ್ಲಿದ್ದಾರೆ ಎಂದು ಹೇಳಿಕೊಂಡಿದ್ದರು.

ಇದನ್ನೂ ಓದಿ: ಮಮತಾ ದೀದಿ ಪ್ರತಿ ವರ್ಷ ನನಗೆ ಕುರ್ತಾ ಉಡುಗೊರೆ ನೀಡುತ್ತಾರೆ: ನರೇಂದ್ರ ಮೋದಿ

ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಮಮತಾ ಬ್ಯಾನರ್ಜಿ, ಮೋದಿ ಅವರಿಗೆ ಕುರ್ತಾ ಕಳುಹಿಸಿದ್ದು ಕೇವಲ ಸೌಜನ್ಯಕ್ಕಾಗಿಯೇ ಹೊರತು ರಾಜಕೀಯ ಕಾರಣಗಳಿಗಾಗಿ ಅಲ್ಲ ಎಂದು ಸ್ಪಷ್ಟಪಡಿಸಿದ್ದರು.

‘ಅವರಿಗೆ ಕುರ್ತಾ ಕಳುಹಿಸುವುದರಲ್ಲಿ ತಪ್ಪೇನಿದೆ? ಮೋದಿ ಅವರಷ್ಟೇ ಅಲ್ಲ, ಹಲವು ಪ್ರಮುಖ ನಾಯಕರಿಗೆ ನಾನು ಉಡುಗೊರೆಗಳನ್ನು ನೀಡುತ್ತೇನೆ. ಆದರೆ ಮೋದಿ ಅವರ ರೀತಿ ನಾವು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ ಅಷ್ಟೇ. ಇದು ನಮ್ಮ ಸಂಸ್ಕೃತಿ. ಇದು ಸೌಜನ್ಯದ ವಿಷಯ. ರಾಜಕೀಯಕ್ಕೂ ಇದಕ್ಕೂ ಸಂಬಂಧವಿಲ್ಲ’ ಎಂದು ಮಮತಾ ಹೇಳಿದ್ದರು.

ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಮೋದಿ ಯತ್ನಿಸುತ್ತಿದ್ದಾರೆ ಎಂದೂ ದೂರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು