ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಮಾಣವಚನ ಸ್ವೀಕಾರ ಸಮಾರಂಭ: ಕಮಲ ‍ಪಡೆಯ ಸಂಭ್ರಮೋಲ್ಲಾಸ

Last Updated 21 ಆಗಸ್ಟ್ 2019, 1:42 IST
ಅಕ್ಷರ ಗಾತ್ರ

ಬೆಂಗಳೂರು: ಸಚಿವರಾಗಿ ಬಿಜೆಪಿಯ ಶಾಸಕರು ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ, ರಾಜಭವನದ ಹೊರಗಡೆ ಅವರ ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.

ನಗರ ಹಾಗೂ ಹೊರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದ ಕಾರ್ಯಕರ್ತರು ಹಾಗೂ ಬೆಂಬಲಿಗರು, ರಾಜಭವನದ ಎದುರು ನಿಂತು ತಮ್ಮ ನಾಯಕರ ಹೆಸರು ಕೂಗಿ ಜೈಕಾರ ಹಾಕಿದರು.

ಕಾರಿನಲ್ಲಿ ಬಂದ ಶಾಸಕರು ರಾಜಭವನದೊಳಗೆ ಹೋಗುವಾಗ ಹಾಗೂ ಹೊರಗೆ ಬರುವಾಗ ಕಾರ್ಯಕರ್ತರ ಸಂಭ್ರಮ ಹೆಚ್ಚಾಗಿತ್ತು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಶಾ ಅವರ ಕಟೌಟ್‌ಗಳನ್ನು ಕಾರ್ಯಕರ್ತರು ಪ್ರದರ್ಶಿಸಿದರು.

ರಾಜಭವನ ಹಾಗೂ ವಿಧಾನಸೌಧ ಎದುರಿನ ಎರಡೂ ರಸ್ತೆಗಳು ಕಾರ್ಯಕರ್ತರಿಂದ ತುಂಬಿ ಹೋಗಿದ್ದವು. ಕೆಲ ಕಾರ್ಯಕರ್ತರು, ರಸ್ತೆಯಲ್ಲೇ ಬಿಜೆಪಿಯ ಬಾವುಟ ಹಾರಿಸಿ ಸಾಮೂಹಿಕವಾಗಿ ನೃತ್ಯ ಮಾಡಿದರು. ರಸ್ತೆಯಲ್ಲೇ ಪರಸ್ಪರ ಶುಭಾಶಯ ಕೋರಿಕೊಂಡರು. ಆ ಕ್ಷಣಗಳನ್ನುಮೊಬೈಲ್‌ನಲ್ಲೂ ಚಿತ್ರೀಕರಿಸಿಕೊಂಡರು.

ಸಂಚಾರ ಬಂದ್, ಬಿಗಿ ಭದ್ರತೆ: ಕಾರ್ಯಕ್ರಮದ ನಿಮಿತ್ತ ರಾಜಭವನದ ಎದುರಿನ ರಸ್ತೆಯಲ್ಲಿ ಖಾಸಗಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು. ಪರ್ಯಾಯ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಜೊತೆಗೆ ರಾಜಭವನದ ಪ್ರವೇಶ ದ್ವಾರ ಹಾಗೂ ರಸ್ತೆಯ ಎರಡೂ ಬದಿಯಲ್ಲೂ ಭದ್ರತೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ರಸ್ತೆಯುದ್ದಕ್ಕೂ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಅಷ್ಟಾದರೂ ಕೆಲ ಕಾರ್ಯಕರ್ತರು, ಬ್ಯಾರಿಕೇಡ್‌ಗಳನ್ನು ಸರಿಸಿ ಮುಂದಕ್ಕೆ ಹೋದರು. ಅಂಥ ಸಂದರ್ಭದಲ್ಲಿ ಪೊಲೀಸರು, ಅವರನ್ನು ತಡೆದು ಬೇರೆಡೆ ಕಳುಹಿಸಿದರು. ಆಗ ಮಾತಿನ ಚಕಮಕಿಯೂ ನಡೆಯಿತು.

ಕೆಲ ಕಾರ್ಯಕರ್ತರು, ಪಾಸ್‌ ಇಲ್ಲದೇ ರಾಜಭವನದೊಳಗೆ ಹೋಗಲು ಯತ್ನಿಸಿದರು. ಬ್ಯಾರಿಕೇಡ್ ಹಾಗೂ ಹಗ್ಗದಿಂದ ಮಾನವ ಸರಪಳಿ ನಿರ್ಮಿಸಿದ ಪೊಲೀಸರು, ಅವರನ್ನು ತಡೆದು ವಾಪಸ್ ಕಳುಹಿಸಿದ್ದು ಕಂಡುಬಂತು. ಕೆಲವರು, ರಸ್ತೆಯಲ್ಲಿ ಹಾಕಿದ್ದ ಪರದೆಗಳಲ್ಲಿ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಿದರು.

ಸಂಚಾರ ದಟ್ಟಣೆ: ಮಾರ್ಗ ಬದಲಾವಣೆ ಮಾಡಿದ್ದರಿಂದ, ರಾಜಭವನ ಸುತ್ತಮುತ್ತ ವಾಹನಗಳ ದಟ್ಟಣೆ ಕಂಡುಬಂತು. ಕಬ್ಬನ್‌ ಪಾರ್ಕ್ ಮೆಟ್ರೊ ನಿಲ್ದಾಣದಿಂದ ಮೀಸೆ ತಿಮ್ಮಯ್ಯ ವೃತ್ತ, ಅಂಬೇಡ್ಕರ್ ರಸ್ತೆ, ಶಿವಾಜಿನಗರ, ಬಸವೇಶ್ವರ ವೃತ್ತ, ರೇಸ್‌ಕೋರ್ಸ್‌ ರಸ್ತೆ ಹಾಗೂ ಸುತ್ತಮುತ್ತ ಸಂಚಾರ ದಟ್ಟಣೆ ಇತ್ತು.

ಇದೇ ಮಾರ್ಗವಾಗಿ ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್, ದಟ್ಟಣೆಯಲ್ಲಿ ಸಿಲುಕಿತ್ತು. ಪೊಲೀಸರು ಅದಕ್ಕೆ ದಾರಿ ಮಾಡಿಕೊಟ್ಟರು.

ಪಾಸ್‌ ಇದ್ದರೂ ಪ್ರವೇಶ ನಿರಾಕರಣೆ

ಪ್ರಮಾಣವಚನ ಕಾರ್ಯಕ್ರಮಕ್ಕೆ ಪಾಸ್‌ ಸಮೇತ ಬಂದಿದ್ದ ಕೆಲವರಿಗೆ ರಾಜಭವನದೊಳಗೆ ಹೋಗಲು ಅವಕಾಶ ಸಿಗಲಿಲ್ಲ.

ಕಾರ್ಯಕ್ರಮದ ಪಾಸ್‌ಗಳನ್ನು ಮುಖಂಡರು, ತಮ್ಮ ಕಾರ್ಯಕರ್ತರಿಗೆ ಹಂಚಿದ್ದರು. ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಸ್ಥಳಕ್ಕೆ ಬಂದವರನ್ನು ರಾಜಭವನದೊಳಗೆ ಕಳುಹಿಸಲಾಯಿತು. ರಾಜಭವನದಲ್ಲಿ ನಿಗದಿಗಿಂತ ಹೆಚ್ಚು ಜನರು ಸೇರಿದ್ದರಿಂದ, ಹೆಚ್ಚುವರಿ ಜನರಿಗೆ ಪ್ರವೇಶ ನಿರ್ಬಂಧಿಸಲಾಯಿತು.

ಪಾಸ್ ಹೊಂದಿದ್ದ ಕೆಲ ಕಾರ್ಯಕರ್ತರನ್ನು ಪೊಲೀಸರು, ಪ್ರವೇಶ ದ್ವಾರದ ಬಳಿಯೇ ತಡೆದು ನಿಲ್ಲಿಸಿದರು. ಅದು ಮಾತಿನ ಚಕಮಕಿಗೂ ಕಾರಣವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT