ಬನ್ನಿ, ರಾಜಭವನ ನೋಡೋಕೆ...

7
ಆಗಸ್ಟ್ 16ರಿಂದ 31ರವರೆಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ * ಆನ್‌ಲೈನ್‌ ಮೂಲಕ ನೋಂದಣಿ

ಬನ್ನಿ, ರಾಜಭವನ ನೋಡೋಕೆ...

Published:
Updated:
Deccan Herald

ರಾಜ್ಯದ ಮುಖ್ಯಸ್ಥರಾದ ರಾಜ್ಯಪಾಲರ ಅಧಿಕೃತ ನಿವಾಸ ಬೆಂಗಳೂರಿನ ‘ರಾಜಭವನ’. ಬ್ರಿಟಿಷ್‌ರ ಕಾಲದಲ್ಲಿ ನಿರ್ಮಾಣವಾದ ಈ ಭವನ, ರಾಜ ಕಳೆಯಿಂದ ಕಂಗೊಳಿಸುತ್ತಿದೆ. ಈ ಭವನದೊಳಗೆ ಒಮ್ಮೆಯಾದರೂ ಓಡಾಡಬೇಕು. ಉದ್ಯಾನ, ಕಟ್ಟಡವನ್ನು ನೋಡಬೇಕು. ಅಲ್ಲಿಯ ಸೌಲಭ್ಯಗಳ ಬಗ್ಗೆ ತಿಳಿದುಕೊಳ್ಳಬೇಕೆಂದು ಪ್ರತಿಯೊಬ್ಬರು ಆಸೆಪಡುತ್ತಾರೆ. ಆ ಆಸೆಯನ್ನು ಈಡೇರಿಸಲು ಮುಂದಾಗಿರುವ ರಾಜ್ಯಪಾಲರಾದ ವಜುಭಾಯಿ ವಾಲಾ, ರಾಜಭವನದೊಳಗೆ ಸಾರ್ವಜನಿಕರಿಗೆ ಪ್ರವೇಶ ನೀಡಲು ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. 

ರಾಜಭವನ ಇತಿಹಾಸ: ಸಮುದ್ರ ಮಟ್ಟದಿಂದ 3,031 ಅಡಿ ಎತ್ತರದಲ್ಲಿರುವ ಬೆಂಗಳೂರಿನ ‘ಹೈಗ್ರೌಂಡ್’ ಪ್ರದೇಶದಲ್ಲಿ ಕ್ರಿ.ಶ 1840–42ರ ಅವಧಿಯಲ್ಲಿ ಮೈಸೂರು ಪ್ರಾಂತದ ಕಮಿಷನರ್ ಸರ್ ಮಾರ್ಕ್ ಕಬ್ಬನ್ ಅವರು ರಾಜಭವನದ ಕಟ್ಟಡ ನಿರ್ಮಿಸಿದ್ದರು.

ಮಾರ್ಕ್ ಕಬ್ಬನ್ ಅವರು 1861ರಲ್ಲಿ ನಗರ ತೊರೆಯುತ್ತಿದ್ದಂತೆ, ಕಟ್ಟಡವನ್ನು ಮಾರಾಟಕ್ಕಿಡಲಾಗಿತ್ತು. ಮಾರ್ಕ್ ಅವರ ಉತ್ತರಾಧಿಕಾರಿ ಕಮಿಷನರ್ ಲೆವಿನ್ ಬೆಂಥಮ್, ಸರ್ಕಾರದ ಅನುದಾನದಿಂದಲೇ ಕಟ್ಟಡ ಖರೀದಿಸಿ ಕಮಿಷನರ್‌ರ ಅಧಿಕೃತ ನಿವಾಸವನ್ನಾಗಿ ಮಾಡಿದರು. 

ಇಂಗ್ಲೆಂಡ್‌ನ ದೊರೆ ವೇಲ್ಸ್‌ ರಾಜಕುಮಾರ ಏಳನೇ ಎಡ್ವರ್ಡ್ ಕ್ರಿ.ಶ. 1874ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದಾಗ, ಒಂದು ಬಾಲ್‌ರೂಮ್ ನಿರ್ಮಿಸಲಾಯಿತು. ನಂತರ, ಬ್ರಿಟಿಷ್‌ರ ಕಾಲದಲ್ಲೇ ಭವನಕ್ಕೆ ಹಲವು ಮಾರ್ಪಾಡು ಮಾಡಲಾಯಿತು.

1881ರಲ್ಲಿ ಪ್ರಾಂತೀಯ ಅಧಿಕಾರವನ್ನು ಮೈಸೂರು ರಾಜಮನೆತನಕ್ಕೆ ಹಸ್ತಾಂತರಿಸಿದಾಗ, ಕಮಿಷನರ್‌ ಕಚೇರಿ ರದ್ದುಪಡಿಸಲಾಯಿತು. ನಂತರ, ಈ ಭವನಕ್ಕೆ ‘ಬೆಂಗಳೂರು ರೆಸಿಡೆನ್ಸಿ‘ ಎಂದು ಹೆಸರಿಡಲಾಯಿತು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ‘ಬೆಂಗಳೂರು ರೆಸಿಡೆನ್ಸಿ’ಯನ್ನೂ ರದ್ದುಪಡಿಸಲಾಯಿತು.

ಭಾರತ ಸಂವಿಧಾನದಲ್ಲಿ ‘ರಾಜ್ಯ ಪ್ರಮುಖ (ರಾಜ್ಯಪಾಲರು)’ ಎಂಬುದನ್ನು ಸೃಜಿಸಿ, ಮೈಸೂರು ಮಹಾರಾಜರನ್ನೇ ಮೊದಲ ರಾಜ್ಯ ಪ್ರಮುಖರನ್ನಾಗಿ ಮಾಡಲಾಯಿತು. ಮಹಾರಾಜರು ತಮ್ಮ ವಾಸ್ತವ್ಯಕ್ಕಾಗಿ ಈ ಭವನವನ್ನು ಬಳಸಲಿಲ್ಲ. ಬದಲಿಗೆ, ಬೆಂಗಳೂರು ಹಾಗೂ ಮೈಸೂರಿನಲ್ಲಿದ್ದ ಅರಮನೆಗಳನ್ನೇ ಆಯ್ಕೆ ಮಾಡಿಕೊಂಡರು. ಅದರಿಂದಾಗಿ, ಈ ಕಟ್ಟಡವನ್ನು ‘ರಾಜ್ಯ ಅತಿಥಿಗೃಹ’ವನ್ನಾಗಿ ಬಳಸಲಾಯಿತು. ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ, ಕೇಂದ್ರ ಸಚಿವರು ರಾಜ್ಯಕ್ಕೆ ಬಂದಾಗಲೆಲ್ಲ ಈ ಭವನದಲ್ಲಿ ಉಳಿದುಕೊಳ್ಳುತ್ತಿದ್ದರು.

1964ರಲ್ಲಿ ಮೈಸೂರು ರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್, ‘ರಾಜ ಪ್ರಮುಖ‘ ಹುದ್ದೆ ತ್ಯಜಿಸಿದರು. ನಂತರ, ಜನರಲ್ ಎಸ್.ಎಂ.ಶೃಂಗೇಶ್ ಅವರನ್ನು ಹುದ್ದೆಗೆ ನೇಮಿಸಲಾಯಿತು. ಅವರು ರಾಜಭವನದಲ್ಲೇ ವಾಸ್ತವ್ಯ ಹೂಡಿದರು. ಅಂದಿನಿಂದಲೇ ರಾಜಭವನವು ರಾಜ್ಯಪಾಲರ ಅಧಿಕೃತ ನಿವಾಸವಾಯಿತು. ಒಂದು ಅಂತಸ್ತಿನ ಕಟ್ಟಡವನ್ನು 1967ರಲ್ಲಿ ಮೊದಲ ಮಹಡಿಗೆ ವಿಸ್ತರಣೆ ಮಾಡಲಾಗಿದೆ. 178 ವರ್ಷದ ಈ ಕಟ್ಟಡ, ಇಂದಿಗೂ ತನ್ನ ನೈಜತೆಯನ್ನು ಉಳಿಸಿಕೊಂಡಿದೆ. ನೋಡುಗರ ಕಣ್ಮನ ಸೆಳೆಯುತ್ತಿದೆ.

16 ಎಕರೆ (65000 ಚ.ಮೀ.): ರಾಜಭವನ ವಿಸ್ತೀರ್ಣ 

3,000 ನೋಂದಣಿ: ‘ಜಾಲತಾಣದ ಮೂಲಕ ಈಗಾಗಲೇ ಸುಮಾರು 3,000 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಅದರಲ್ಲಿ 1,800 ಮಂದಿಗೆ ಪ್ರವೇಶದ ದಿನಾಂಕ ನಿಗದಿ ಮಾಡಲಾಗಿದೆ. ಉಳಿದವರಿಗೂ ಸದ್ಯದಲ್ಲೇ ದಿನಾಂಕ ನೀಡಲಾಗುವುದು’ ಎಂದು ರಾಜಭವನದ ಅಧಿಕಾರಿಯೊಬ್ಬರು ತಿಳಿಸಿದರು.

16 ವರ್ಷಗಳ ನಂತರ ಅವಕಾಶ: 1999–2002ರ ಅವಧಿಯಲ್ಲಿ ರಾಜ್ಯಪಾಲರಾಗಿದ್ದ ವಿ.ಎಸ್.ರಮಾದೇವಿ ಅವರು ಮೊದಲ ಬಾರಿಗೆ ರಾಜಭವನದೊಳಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನೀಡಿದ್ದರು. ಅದಾಗಿ 16 ವರ್ಷಗಳ ನಂತರ ಮತ್ತೇ ರಾಜಭವನ ಸುತ್ತಾಡುವ ಅವಕಾಶ ಸಾರ್ವಜನಿಕರಿಗೆ ಸಿಕ್ಕಿದೆ.

ಜಾಲತಾಣದಲ್ಲಿ ಬುಕ್ಕಿಂಗ್‌:

http://rajbhavan.kar.nic.in ಜಾಲತಾಣಕ್ಕೆ ಭೇಟಿ ನೀಡಿ, ಅಲ್ಲಿರುವ ‘E Visitor Pass' ಕ್ಲಿಕ್ ಮಾಡಿ ನೋಂದಣಿ ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಬೇಕು.

* ಹೆಸರು, ವಿಳಾಸ, ವಯಸ್ಸು, ಮೊಬೈಲ್ ನಂಬರ್ ಸೇರಿದಂತೆ ಕೆಲವು ಮಾಹಿತಿಯನ್ನು ನಮೂದಿಸಬೇಕು. ಗುರುತಿನ ಚೀಟಿ ವಿವರವನ್ನೂ ದಾಖಲಿಸಬೇಕು. 

* ‘To Meet' ಕಾಲಂನಲ್ಲಿ "Athority/Officer - AMS Raj Bhavan" ಎಂದು ನಮೂದಿಸಬೇಕು. ಅಲ್ಲಿಯೇ ಪ್ರವೇಶದ ದಿನಾಂಕ ಆಯ್ಕೆ ಮಾಡಿಕೊಳ್ಳಬೇಕು. 

* ಮಾಹಿತಿ ಭರ್ತಿ ನಂತರ, ‘Submit’ ಬಟನ್ ಒತ್ತಬೇಕು. ನಂತರ, ಮೊಬೈಲ್‌ಗೆ ಒನ್‌ ಟೈಂ ಪಾಸ್‌ವರ್ಡ್‌ (ಒಟಿಪಿ) ಬರುತ್ತದೆ. ಅದನ್ನು ಜಾಲತಾಣದಲ್ಲಿ ನಮೂದಿಸುತ್ತಿದ್ದಂತೆ, ಅರ್ಜಿ ಭರ್ತಿ ಪೂರ್ಣಗೊಳ್ಳುತ್ತದೆ.

* ಭರ್ತಿ ಮಾಡಿದ ಸಾರ್ವಜನಿಕರ ವಿವರವನ್ನು ಪರಿಶೀಲಿಸುವ ರಾಜಭವನದ ಅಧಿಕಾರಿಗಳು, ಮೊಬೈಲ್ ಸಂದೇಶ ಹಾಗೂ ಇಮೇಲ್ ಮೂಲಕ ಪ್ರವೇಶವನ್ನು ಖಾತ್ರಿಪಡಿಸಲಿದ್ದಾರೆ. ನಿಗದಿತ ದಿನ ಹಾಗೂ ಸಮಯಕ್ಕೆ 15 ನಿಮಿಷ ಮುಂಚಿತವಾಗಿಯೇ ಸಾರ್ವಜನಿಕರು ರಾಜಭವನಕ್ಕೆ ಹೋಗಬಹುದು.

* ಭದ್ರತಾ ಸಿಬ್ಬಂದಿ, ಪ್ರತಿಯೊಬ್ಬರಿಗೂ ಪ್ರತ್ಯೇಕ ಪಾಸ್‌ ನೀಡಲಿದ್ದಾರೆ. ಅದನ್ನು ಜತೆಯಲ್ಲಿಟ್ಟುಕೊಂಡು ರಾಜಭವನ ಸುತ್ತಾಡಬಹುದು 

* ವಿದೇಶಿಗರ ಪ್ರವೇಶಕ್ಕೂ ಅವಕಾಶವಿದೆ. ಅವರು ತಮ್ಮ ಪಾಸ್‌ಪೋರ್ಟ್‌ ಹಾಗೂ ವೀಸಾ ಕಾರ್ಡ್ ದಾಖಲೆಯನ್ನು ಜಾಲತಾಣಗಳಲ್ಲಿ ನಮೂದಿಸಬೇಕು 

ಇವುಗಳನ್ನು ತರಬೇಡಿ: ಹ್ಯಾಂಡ್ ಬ್ಯಾಗ್, ಮೊಬೈಲ್,  ಕ್ಯಾಮೆರಾ

ಇವುಗಳನ್ನು ಕಡ್ಡಾಯವಾಗಿ ತನ್ನಿ: ಭಾರತೀಯ ಪ್ರಜೆ ಎಂಬುದನ್ನು ನಿರೂಪಿಸುವ ಯಾವುದೇ ಗುರುತಿನ ಚೀಟಿ. ವಿದೇಶಿಗರಾಗಿದ್ದರೆ ಅಸಲಿ ಪಾಸ್‌ಪೋರ್ಟ್‌ ಹಾಗೂ ವೀಸಾ.

ಪಾರ್ಕಿಂಗ್: ರಾಜಭವನದೊಳಗೆ ವಾಹನಗಳಿಗೆ ಪ್ರವೇಶವಿಲ್ಲ. ಇಂದಿರಾಗಾಂಧಿ ಸಂಗೀತ ಕಾರಂಜಿ ಉದ್ಯಾನ ಬಳಿಯೇ ವಾಹನಗಳನ್ನು ಪಾರ್ಕಿಂಗ್ ಮಾಡಬಹುದು.

ಎಲ್ಲಿಂದ– ಎಲ್ಲಿಯವರೆಗೆ ಪ್ರವೇಶ: ಆಗಸ್ಟ್ 16ರಿಂದ 31ರವರೆಗೆ – ಸಂಜೆ 4 ಗಂಟೆಯಿಂದ 6.30ರವರೆಗೆ  

ರಾಜಭವನ ಭೇಟಿಯ ವಿಶೇಷತೆಗಳು: * ರಾಜಭವನ ಭೇಟಿ ಉಚಿತವಾಗಿರುತ್ತದೆ.  

* ತಲಾ 30 ಜನರನ್ನು ತಂಡಗಳನ್ನಾಗಿ ಮಾಡಿ ಒಳಗೆ ಬಿಡಲಾಗುತ್ತದೆ. ಪ್ರತಿಯೊಂದು ತಂಡಕ್ಕೂ ಒಬ್ಬ ಮಾರ್ಗದರ್ಶಕರು ಇರಲಿದ್ದು, ಅವರೇ ಸ್ಥಳಗಳ ಬಗ್ಗೆ ವಿವರಣೆ ನೀಡಲಿದ್ದಾರೆ. ರಾಜಭವನವನ್ನು ಪೂರ್ತಿಯಾಗಿ ನೋಡಲು 20ರಿಂದ 30 ನಿಮಿಷ ಬೇಕಾಗುತ್ತದೆ.

* ಸಾರ್ವಜನಿಕರಿಗೆ ಉಚಿತ ಚಹಾ ಹಾಗೂ ಉಪಹಾರ ವ್ಯವಸ್ಥೆ ಇರುತ್ತದೆ.

* ಗುಂಪು ಛಾಯಾಚಿತ್ರಗಳನ್ನು ರಾಜಭವನದ ಛಾಯಾಗ್ರಾಹಕರೇ ತೆಗೆಯಲಿದ್ದಾರೆ. ಆ ಫೋಟೊಗಳನ್ನು ಉಚಿತವಾಗಿ ಇಮೇಲ್‌ಗೆ ಕಳುಹಿಸುವ ವ್ಯವಸ್ಥೆಯೂ ಇದೆ

* ಒಬ್ಬರು ಅಥವಾ ಐದು ಜನರು ಗುಂಪಾಗಿಯೂ ಬರಬಹುದು.

* ಶಿಕ್ಷಕರು, ತಮ್ಮ ಶಾಲೆಗಳ ಮಕ್ಕಳನ್ನೂ ಕರೆದುಕೊಂಡು ಬರಬಹುದು. 

ಏನೇನು ನೋಡಬಹುದು
* ಗಾಜಿನ ಮನೆ: ಹೊಸ ಸರ್ಕಾರ ರಚನೆಯಾದ ವೇಳೆಯಲ್ಲಿ ಇದೇ ಗಾಜಿನ ಮನೆಯಲ್ಲೇ ಪ್ರಮಾಣ ವಚನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ರಾಜಭವನಕ್ಕೆ ಬರುವ ಸಾರ್ವಜನಿಕರು ಮೊದಲಿಗೆ ಈ ಗಾಜಿನ ಮನೆಯನ್ನು ವೀಕ್ಷಿಸಬಹುದು. ಅಲ್ಲಿಂದಲೇ ಕಿರು ಪ್ರವಾಸ ಶುರುವಾಗಲಿದೆ.

* ಉದ್ಯಾನ: ಗಾಜಿನ ಮನೆಯಿಂದ ಉದ್ಯಾನಕ್ಕೆ ಕರೆದೊಯ್ಯಲಾಗುತ್ತದೆ. ಪೈನ್, ಸೂಚಿಪತ್ರ ಸೇರಿದಂತೆ ಶತಮಾನದಷ್ಟು ಹಳೆಯ ಮರಗಳು ಇಲ್ಲಿವೆ. ಕಾರಂಜಿ, ಔಷಧಿ ಗಿಡಗಳು, ವಿಗ್ರಹಗಳು, ಶಾಸನಗಳು, ಗಿಡಗಳನ್ನು ಕತ್ತರಿಸಿ ಮಾಡಿದ ಆನೆ ಹಾಗೂ ನವಿಲು ಸೇರಿದಂತೆ ವಿವಿಧ ಆಕೃತಿಗಳನ್ನು ಕಾಣಬಹುದು. 

* ರಾಜ್ಯಪಾಲರ ಕಚೇರಿ ಮತ್ತು ನಿವಾಸ: ಉದ್ಯಾನಕ್ಕೆ ಹೊಂದಿಕೊಂಡಿರುವ 178 ವರ್ಷಗಳ ಹಳೆಯದಾದ ಕಟ್ಟಡದ ನೆಲಮಹಡಿಯಲ್ಲಿ ರಾಜ್ಯಪಾಲರ ಕಚೇರಿ ಹಾಗೂ ಮೊದಲ ಮಹಡಿಯಲ್ಲಿ ನಿವಾಸವಿದೆ. ಇದರ ಊಟದ ಕೊಠಡಿಗೆ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗಿದೆ. ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ ಬಂದಾಗ ಇಲ್ಲಿಯೇ ಊಟ ಮಾಡುತ್ತಾರೆ. ಹುಲಿ, ಕಾಡುಕೋಣಗಳ ನೈಜ ಮುಖಗಳನ್ನು ಇಲ್ಲಿ ಕಾಣಬಹುದು.  ದರ್ಬಾರ್‌ ಕೋಣೆಯೂ (ಅತಿಥಿಗಳು ಬಂದಾಗ ರಾಜ್ಯಪಾಲರು ಭೇಟಿಯಾಗುವ ಸ್ಥಳ) ಈ ನಿವಾಸದಲ್ಲಿದೆ. ಇದುವರೆಗಿನ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು ಹಾಗೂ ರಾಜ್ಯಪಾಲರ ಭಾವಚಿತ್ರಗಳು ಇಲ್ಲಿವೆ. ರಾಜರ ಆಸ್ಥಾನದಲ್ಲಿರುವಂಥ ಆಸಗಳನ್ನೂ ಇಲ್ಲಿ ನೋಡಲು ಸಿಗುತ್ತವೆ. 

ನಿವಾಸದದ ಕೊಠಡಿಯೊಂದನ್ನು ರಾಷ್ಟ್ರಪತಿಯವರ ವಾಸಕ್ಕೆ ಮೀಸಲಿರಿಸಲಾಗಿದೆ. ಸದ್ಯಕ್ಕೆ ಅಲ್ಲಿ ಪ್ರವೇಶ ನಿರ್ಬಂಧಿಸಲಾಗಿದೆ.

* ಬ್ಯಾಂಕ್ವೆಟ್‌ ಹಾಲ್‌: ದರ್ಬಾರ್‌ ಕೊಠಡಿ ಪಕ್ಕದಲ್ಲೇ ಬ್ಯಾಂಕ್ವೆಟ್ ಹಾಲ್‌ ಇದೆ. ಅತಿಥಿಗಳು ಬಂದಾಗ ಏನಾದರೂ ಕಾರ್ಯಕ್ರಮಗಳು ಇದ್ದರೆ ಇಲ್ಲಿಯೇ ನಡೆಸಲಾಗುತ್ತದೆ. ಸಾರ್ವಜನಿಕರ ಪ್ರವೇಶದ ಹಿನ್ನೆಲೆಯಲ್ಲಿ ಸದ್ಯ ಹಾಲ್‌ನಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 30ಕ್ಕೂ ಹೆಚ್ಚು ಮಂದಿ ಏಕಕಾಲದಲ್ಲಿ ಚಿತ್ರ ವೀಕ್ಷಿಸಲು ಆಸನಗಳಿವೆ.

ನಿವಾಸದ ಪ್ರತಿಯೊಂದು ಜಾಗದಲ್ಲೂ ಕಲಾ ಕುಸರಿಗಳು, ಭಾರತೀಯ ವಿವಿಧ ಕಲಾಶಾಲೆಗಳ ಬಣ್ಣಗಳ ಚಿತ್ರಗಳು, ಪಾಶ್ಚಿಮಾತ್ಯ ಕಲಾ ವಸ್ತುಗಳು ಕಾಣಸಿಗುತ್ತವೆ. 

ವಿಶೇಷ ಸೂಚನೆ: ಯಾರಾದರೂ ಗಣ್ಯ ವ್ಯಕ್ತಿಗಳು ರಾಜಭವನಕ್ಕೆ ಭೇಟಿ ನೀಡಿದರೆ, ಆ ಸಮಯದಲ್ಲಿ ಸಾರ್ವಜನಿಕರ ಪ್ರವೇಶವನ್ನು ಭದ್ರತಾ ಸಿಬ್ಬಂದಿ ನಿರ್ಬಂಧಿಸಲಿದ್ದಾರೆ.

ಉತ್ತಮ ಸ್ಪಂದನೆ ಸಿಕ್ಕರೆ ಅವಧಿ ವಿಸ್ತರಣೆ:  ‘ರಾಜಭವನ ಹೇಗಿದೆ ಎಂಬ ಕುತೂಹಲ ಜನರಲ್ಲಿದೆ. ಅದೇ ಕಾರಣಕ್ಕಾಗಿ ಸಾರ್ವಜನಿಕರಿಗೆ ಪ್ರವೇಶ ನೀಡಲಾಗುತ್ತಿದೆ. ಸಾರ್ವಜನಿಕರು, ತಮ್ಮ ಮಕ್ಕಳು ಹಾಗೂ ಕುಟುಂಬ ಸಮೇತರಾಗಿ ಬಂದು ರಾಜಭವನವನ್ನು ಕಣ್ತುಂಬಿಕೊಳ್ಳಬಹುದು. ಇದು ರಾಜ್ಯದ ಜನತೆಗೆ ನನ್ನ ಆತ್ಮೀಯ ಆಹ್ವಾನ’ ಎಂದು ರಾಜ್ಯಪಾಲರಾದ ವಜುಭಾಯಿ ವಾಲಾ ಹೇಳಿದರು.

‘ಪ್ರತಿಯೊಬ್ಬರ ಇಚ್ಛೆಯನ್ನು ಈಡೇರಿಸಲು ನಾವು ಪ್ರಯತ್ನಿಸಲಿದ್ದೇವೆ. ಉತ್ತಮ ಸ್ಪಂದನೆ ಸಿಕ್ಕರೆ, ಪ್ರವೇಶದ ಕಾಲಾವಧಿಯನ್ನು ವಿಸ್ತರಣೆ ಮಾಡಲಿದ್ದೇವೆ’ ಎಂದರು.

ಬರಹ ಇಷ್ಟವಾಯಿತೆ?

 • 11

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !